ಸಾರಾಂಶ
ದೆಹಲಿಯಲ್ಲಿ ಕೇಂದ್ರ ತೋಟಗಾರಿಕೆ ಇಲಾಖೆಯ ವ್ಯವಸ್ಥಾಪಕ ನಿರ್ದೇಶಕ ರಾಕೇಶ್ ರಂಜನ್ ಅವರನ್ನು ಭೇಟಿ ಮಾಡಿದ ಸಂಸದ ಕರಡಿ ಸಂಗಣ್ಣ, ರಾಷ್ಟ್ರೀಯ ತೋಟಗಾರಿಕಾ ಮಂಡಳಿಯು ದೇಶದಾದ್ಯಂತ ತೋಟಗಾರಿಕೆ ಕ್ಲಸ್ಟರ್ ಅಭಿವೃದ್ಧಿ ಕಾರ್ಯಕ್ರಮ ಅನುಷ್ಠಾನಗೊಳಿಸುತ್ತಿದೆ.
ತೋಟಗಾರಿಕೆ ಇಲಾಖೆಯ ವ್ಯವಸ್ಥಾಪಕ ನಿರ್ದೇಶಕರ ಭೇಟಿ ನೀಡಿದ ಸಂಸದ ಸಂಗಣ್ಣ
ಕನ್ನಡಪ್ರಭವಾರ್ತೆ ಕೊಪ್ಪಳಚಿತ್ರದುರ್ಗದಲ್ಲಿ ನಿರ್ಮಿಸುವ ತೋಟಗಾರಿಕೆ ಕ್ಲಸ್ಟರ್ ವ್ಯಾಪ್ತಿಗೆ ಕೊಪ್ಪಳ ಜಿಲ್ಲೆ ಸೇರಿಸಬೇಕು ಹಾಗೂ ಜಿಲ್ಲೆಯಲ್ಲಿ ದಾಳಿಂಬೆ ಬೆಳೆಯುವ ರೈತರಿಗೆ ಸಿಡಿಪಿ ಕಾರ್ಯಕ್ರಮದಡಿ ಪ್ರೋತ್ಸಾಹಧನ ನೀಡಬೇಕು ಎಂದು ಸಂಸದ ಸಂಗಣ್ಣ ಕರಡಿ ಕೇಂದ್ರ ತೋಟಗಾರಿಕೆ ಇಲಾಖೆಯ ವ್ಯವಸ್ಥಾಪಕ ನಿರ್ದೇಶಕ ರಾಕೇಶ್ ರಂಜನ್ ಅವರಿಗೆ ಮನವಿ ಸಲ್ಲಿಸಿದ್ದಾರೆ.
ದೆಹಲಿಯಲ್ಲಿ ಕೇಂದ್ರ ತೋಟಗಾರಿಕೆ ಇಲಾಖೆಯ ವ್ಯವಸ್ಥಾಪಕ ನಿರ್ದೇಶಕ ರಾಕೇಶ್ ರಂಜನ್ ಅವರನ್ನು ಭೇಟಿ ಮಾಡಿದ ಸಂಸದ ಕರಡಿ ಸಂಗಣ್ಣ, ರಾಷ್ಟ್ರೀಯ ತೋಟಗಾರಿಕಾ ಮಂಡಳಿಯು ದೇಶದಾದ್ಯಂತ ತೋಟಗಾರಿಕೆ ಕ್ಲಸ್ಟರ್ ಅಭಿವೃದ್ಧಿ ಕಾರ್ಯಕ್ರಮ ಅನುಷ್ಠಾನಗೊಳಿಸುತ್ತಿದೆ.ಯೋಜನೆಯ ಭಾಗವಾಗಿ ಚಿತ್ರದುರ್ಗ ಜಿಲ್ಲೆಯಲ್ಲಿ ಕ್ಲಸ್ಟರ್ ನಿರ್ಮಾಣ ಅಂತಿಮಗೊಳಿಸಲಾಗಿದೆ ಎಂದರು.ಈ ನಿಟ್ಟಿನಲ್ಲಿ ದಾಳಿಂಬೆ ರಫ್ತುದಾರರು ಹಾಗೂ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದೇನೆ.ಚರ್ಚೆಯ ಸಂದರ್ಭದಲ್ಲಿ ಕೊಪ್ಪಳ ಜಿಲ್ಲೆಯಲ್ಲಿ 5 ಸಾವಿರಕ್ಕೂ ಹೆಚ್ಚು ಹೆಕ್ಟೇರ್ ದಾಳಿಂಬೆ ಬೆಳೆ ಬೆಳೆಯಲಾಗುತ್ತಿದೆ. ಜಿಲ್ಲೆಯಲ್ಲಿ ಸರಿಯಾದ ಮಾರುಕಟ್ಟೆ, ಮೂಲಸೌಕರ್ಯಗಳ ಕೊರತೆ ಎದುರಿಸಲಾಗುತ್ತಿದೆ. ಗುಣಮಟ್ಟದ ದಾಳಿಂಬೆ ಬೆಳೆದ ರೈತರಿಗೆ ಸೂಕ್ತ ಮಾರುಕಟ್ಟೆ ಕಲ್ಪಿಸಬೇಕಿದೆ ಎಂದು ತಿಳಿಸಿದರು.
ಚಿತ್ರದುರ್ಗದಲ್ಲಿ ನಿರ್ಮಾಣವಾಗುವ ಕ್ಲಷ್ಟರ್ ಗೆ ಕೊಪ್ಪಳ ಜಿಲ್ಲೆ ಸೇರಿಸಿಲ್ಲ. ಇಲ್ಲಿನ ರೈತರು ಸಿಡಿಪಿ ಕಾರ್ಯಕ್ರಮದ ಅಡಿಯಲ್ಲಿ ಪ್ರೋತ್ಸಾಹಧನ ಪಡೆಯಲು ಅರ್ಹರಲ್ಲ ಆದ್ದರಿಂದ ಕೊಪ್ಪಳ ಜಿಲ್ಲೆಯ ದಾಳಿಂಬೆ ರೈತ ಸಮುದಾಯದವರಿಗೆ ಸಿಡಿಪಿ ಕಾರ್ಯಕ್ರಮದಡಿ ಪ್ರೋತ್ಸಾಹಧನ ಪಡೆಯಲು, ಕೊಪ್ಪಳ ಜಿಲ್ಲೆಯನ್ನು ಕ್ಲಸ್ಟರ್ ವ್ಯಾಪ್ತಿ ಗೆ ಸೇರಿಸಲು ಪರಿಶೀಲನೆ ನಡೆಸಬೇಕು ಎಂದು ಮನವಿ ಮಾಡಿದ್ದಾರೆ.