ತಾಲೂಕು ಮಟ್ಟದ ಕಚೇರಿ ಕಟ್ಟಡ ಕೊರತೆ ಮಾಹಿತಿ ಕೊಡಿ: ಶಾಸಕ ಗವಿಯಪ್ಪ

| Published : Jun 20 2024, 01:03 AM IST

ತಾಲೂಕು ಮಟ್ಟದ ಕಚೇರಿ ಕಟ್ಟಡ ಕೊರತೆ ಮಾಹಿತಿ ಕೊಡಿ: ಶಾಸಕ ಗವಿಯಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯ ಸರ್ಕಾರದಿಂದ ತುರ್ತು ನಮಗೇನು ಬರಬೇಕಿದೆ?

ಹೊಸಪೇಟೆ: ಎಲ್ಲ ಇಲಾಖೆಗಳ ತಾಲೂಕು ಮಟ್ಟದ ಕಚೇರಿ ಕಟ್ಟಡಗಳ ಕೊರತೆ ಮತ್ತು ವಸತಿ ಗೃಹಗಳ ಕೊರತೆ ಹಾಗೂ ಸದ್ಯದ ಸ್ಥಿತಿಯ ಕುರಿತು ಅಧಿಕಾರಿಗಳು ಸವಿವರ ಮಾಹಿತಿ ಕೊಡಿ. ಸರ್ಕಾರದ ಮಟ್ಟದಲ್ಲಿ ಚರ್ಚೆ ಮಾಡಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಎಚ್.ಆರ್. ಗವಿಯಪ್ಪ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಒಳಾಂಗಣ ಕ್ರೀಡಾಣಗಣದ ಸಭಾಂಗಣದಲ್ಲಿ ಬುಧವಾರ ನಡೆದ ತಾಲೂಕು ಮಟ್ಟದ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದಿಂದ ತುರ್ತು ನಮಗೇನು ಬರಬೇಕಿದೆ? ಅದರ ಬಗ್ಗೆ ಮತ್ತು ಈ ವರ್ಷ ಎಷ್ಟು ಅನುದಾನ ಬೇಕು? ಯಾವ ಕೆಲಸ ಮಾಡಬೇಕು? ಎಂಬ ವಿವರ ಕೊಡಿ ಎಂದು ತಿಳಿಸಿದರು.

ಸಮಾಜ ಕಲ್ಯಾಣ ಇಲಾಖೆಯಲ್ಲಿ ಪದವಿ, ಟೆಕ್ನಿಕಲ್ ಹಾಸ್ಟೆಲ್‌ಗಳ ಅವಶ್ಯಕತೆ ಇದೆ. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿಲಯಗಳಲ್ಲಿ ಕಾಟು -ಬೆಡ್ ಸಮಸ್ಯೆ, ಕಚೇರಿ ಕಟ್ಟಡದ ಸಮಸ್ಯೆ, ಅಂಗನವಾಡಿ ಕೇಂದ್ರಗಳಿಗೆ ನಗರದಲ್ಲಿ 25 ಮತ್ತು ಗ್ರಾಮೀಣ ಭಾಗದಲ್ಲಿ 7ಕ್ಕೆ ಜಾಗದ ಅವಶ್ಯಕತೆ, ಕಚೇರಿ ಸಮಸ್ಯೆ, ಶಿಕ್ಷಣ ಇಲಾಖೆಯಲ್ಲಿ ಅತಿಥಿ ಶಿಕ್ಷಕರ ನೇಮಕಾತಿಗೆ ಅವಕಾಶ, ದುರಸ್ತಿ ಶಾಲಾ ಕಟ್ಟಡಗಳು ಬಹಳ ಇವೆ. ಈ ಬಗ್ಗೆ ಜಿಲ್ಲಾಧಿಕಾರಿ ಮತ್ತು ಜಿಪಂ ಸಿಇಒಗೆ ಮಾಹಿತಿ ನೀಡಲಾಗಿದೆ ಎಂದು ಆಯಾ ಇಲಾಖೆಗಳ ತಾಲೂಕು ಅಧಿಕಾರಿಗಳು ಮಾಹಿತಿ ನೀಡಿದರು.

ಸೋರುತ್ತಿರುವ ಶಾಲೆಗಳನ್ನು ಗುರುತಿಸಿ ಶೀಟ್ ಹಾಕಬೇಕು. ಅವಶ್ಯಕತೆ ಇರುವೆಡೆ ದುರಸ್ತಿ ಕೆಲಸ ಮಾಡಬೇಕು. ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ವಹಿಸಬಾರದು. ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಯತ್ತ ಕ್ರಮ ವಹಿಸಿ ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು. ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಖಾಸಗಿ ಶಾಲೆಗಳ ಹೆಚ್ಚಿನ ಶುಲ್ಕದ ಬಗ್ಗೆ ದೂರುಗಳಿದ್ದು ಕ್ರಮ ಕೈಗೊಳ್ಳಬೇಕು ಎಂದು ಶಾಸಕರು ಸೂಚಿಸಿದರು.

ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಕೆಲಸ ಮಾಡಿ. ಕಾಲುವೆಗಳು ಚರಂಡಿಗಳಾಗಿವೆ. ಹೊಸಪೇಟೆಯಿಂದ ಗಾದಿಗನೂರು ಹಾಗೂ ಹೊಸಪೇಟೆಯಿಂದ ಬುಕ್ಕಸಾಗರದವರೆಗೆ ಟಿಬಿ ಡ್ಯಾಂ ನಿಂದ ನೇರವಾಗಿ ಪೈಪ್‌ಲೈನ್ ಮಾಡಲು ಪ್ರಸ್ತಾವನೆ ಸಿದ್ಧಪಡಿಸಿ ಸಲ್ಲಿಸಿ ಎಂದು ಅಧಿಕಾರಿಗೆ ಸೂಚಿಸಿದರು.

ಗಾದಿಗನೂರು, ಭುವನಹಳ್ಳಿ, ಬುಕ್ಕಸಾಗರ ಭಾಗಗಳಲ್ಲಿ ಬಸ್ ಗಳ ಸಮಸ್ಯೆ ಇದೆ. ಬಸ್ ಗಳು ನಿಲ್ಲಿಸುವುದಿಲ್ಲ ಎಂಬ ದೂರಿದೆ ಎಂದು ತಹಸೀಲ್ದಾರ್ ವಿಶ್ವಜೀತ್ ಮೆಹತಾ ಗಮನಕ್ಕೆ ತಂದಾಗ, ಶಾಸಕರು ಶಾಲಾ ಮಕ್ಕಳಿಗೆ ಸಮಸ್ಯೆ ಬರದಂತೆ ಕ್ರಮ ವಹಿಸಲು ಕೆಕೆಆರ್‌ಟಿಸಿ ಸಿಬ್ಬಂದಿಗೆ ಸೂಚಿಸಿದರು.

ತಹಸೀಲ್ದಾರ್ ವಿಶ್ವಜೀತ್ ಮೆಹತಾ, ತಾಪಂ, ಇಒ ಹರೀಶ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.