ನಿಖರ ದತ್ತಾಂಶ ಸಂಗ್ರಹಿಸಿಯೇ ಒಳಮೀಸಲಾತಿ ನೀಡಿ

| Published : Oct 24 2024, 12:44 AM IST

ಸಾರಾಂಶ

ಒಳ ವರ್ಗೀಕರಣ ಮಾಡಬೇಕೆಂದರೆ ವೈಜ್ಞಾನಿಕ ಅಧ್ಯಯನ ಆದಾರದ ಮೇಲೆ ಸಂಗ್ರಹಿಸಿದ ನಿಖರ ದತ್ತಾಂಶವೇ ಮಾನದಂಡ ಆಗಬೇಕು ಎಂದು ಸುಪ್ರೀಂ ಕೋರ್ಟ್ ಆ.1ರ ತೀರ್ಪಿನಲ್ಲಿ ಹೇಳಿದೆ. ರಾಜ್ಯ ಸರ್ಕಾರವೂ ಈಚಿನ ದತ್ತಾಂಶ ಸಂಗ್ರಹಿಸಿಯೇ ಒಳಮೀಸಲಾತಿ ವರ್ಗೀಕರಣ ಮಾಡಲಿ ಎಂದು ಬಂಜಾರ ಸಮಾಜದ ಹಿರಿಯ ಮುಖಂಡ, ವಕೀಲ ರಾಘವೇಂದ್ರ ನಾಯ್ಕ ದಾವಣಗೆರೆಯಲ್ಲಿ ಹೇಳಿದ್ದಾರೆ.

- ಸರ್ಕಾರಗಳು ಪರಿಶಿಷ್ಟ ಜಾತಿಗಳ ಒಳವರ್ಗೀಕರಣ ಅಧಿಕಾರ ಸಂವಿಧಾತ್ಮಕವಾಗಿಯೇ ನಿರ್ವಹಿಸಲಿ: ರಾ‍ಘವೇಂದ್ರ ನಾಯ್ಕ ಹೇಳಿಕೆ - - - ಕನ್ನಡಪ್ರಭ ವಾರ್ತೆ ದಾವಣಗೆರೆ

ಒಳ ವರ್ಗೀಕರಣ ಮಾಡಬೇಕೆಂದರೆ ವೈಜ್ಞಾನಿಕ ಅಧ್ಯಯನ ಆದಾರದ ಮೇಲೆ ಸಂಗ್ರಹಿಸಿದ ನಿಖರ ದತ್ತಾಂಶವೇ ಮಾನದಂಡ ಆಗಬೇಕು ಎಂದು ಸುಪ್ರೀಂ ಕೋರ್ಟ್ ಆ.1ರ ತೀರ್ಪಿನಲ್ಲಿ ಹೇಳಿದೆ. ರಾಜ್ಯ ಸರ್ಕಾರವೂ ಈಚಿನ ದತ್ತಾಂಶ ಸಂಗ್ರಹಿಸಿಯೇ ಒಳಮೀಸಲಾತಿ ವರ್ಗೀಕರಣ ಮಾಡಲಿ ಎಂದು ಬಂಜಾರ ಸಮಾಜದ ಹಿರಿಯ ಮುಖಂಡ, ವಕೀಲ ರಾಘವೇಂದ್ರ ನಾಯ್ಕ ಹೇಳಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಪ್ರೀಂ ಕೋರ್ಟ್‌ನ ಐವರು ನ್ಯಾಯಮೂರ್ತಿಗಳ ಪೂರ್ಣಪೀಠವು ಹಿಂದೆ ಪರಿಶಿಷ್ಟ ಜಾತಿಗಳಲ್ಲಿ ಒಳ ವರ್ಗೀಕರಣ ಮಾಡಿ, ಒಳ ಮೀಸಲಾತಿ ಕಲ್ಪಿಸುವುದು ಕಾನೂನುಬಾಹಿರ ಎಂದಿತ್ತು. ಆದರೆ, ಆ.1ರಂದು ಸುಪ್ರೀಂ ಕೋರ್ಟ್ ತನ್ನ ಹಿಂದಿನ ತೀರ್ಪನ್ನು ರದ್ದುಪಡಿಸಿ, ಒಳ ವರ್ಗೀಕರಣಕ್ಕೆ ಅವಕಾಶ ಇದೆ, ಅದು ಸಮಾನತೆಯ ತತ್ವಕ್ಕೆ ವಿರುದ್ಧವಾಗಿಲ್ಲ ಎಂದಷ್ಟೇ ಹೇಳಿದೆ ಹೊರತು, ಒಳವರ್ಗೀಕರಣ ಮಾಡಲೇಬೇಕೆಂದು ಹೇಳಿಲ್ಲ ಎಂದರು.

ಪರಿಶಿಷ್ಟ ಜಾತಿಗಳಲ್ಲಿ ಒಳ ವರ್ಗೀಕರಣಕ್ಕೆ ರಾಜ್ಯ ಸರ್ಕಾರಗಳಿಗೆ ನೀಡಲಾಗಿರುವ ಅಧಿಕಾರವನ್ನು ಸರ್ಕಾರಗಳು ಸಂವಿಧಾತ್ಮಕವಾಗಿಯೇ ನಿರ್ವಹಿಸಲಿ. ಒಳಮೀಸಲು ಕಲ್ಪಿಸಲು ಮಾನದಂಡವಾಗಿ ಬಳಸುವ ದತ್ತಾಂಶದಲ್ಲಿ ಸಣ್ಣ ಪ್ರಮಾಣದ ಲೋಪವಿದ್ದರೂ ರಾಜ್ಯ ಸರ್ಕಾರಗಳು ಮಾಡುವ ಇಂತಹ ವರ್ಗೀಕರಣ ಪ್ರಕ್ರಿಯೆ ನ್ಯಾಯಾಲಯ ಪರಾಮರ್ಶೆಗೆ ಒಳಪಡಬೇಕಾಗುತ್ತದೆ. ನಿಖರ ದತ್ತಾಂಶದ ಆಧಾರದಲ್ಲೇ ಒಳಮೀಸಲಾತಿ ಜಾರಿಗೆ ಸರ್ಕಾರಗಳು ಮುಂದಾಗಬೇಕಿದೆ ಎಂದು ಹೇಳಿದರು.

ಅಲ್ಲದೇ, ಪರಿಶಿಷ್ಟ ಜಾತಿ ಪಟ್ಟಿಯ ಯಾವುದೇ ಒಂದು ಜಾತಿ ಮೀಸಲಾತಿ ಸೌಲಭ್ಯ ಪಡೆಯುವುದರಲ್ಲಿ ಎಷ್ಟು ಪ್ರಮಾಣದಲ್ಲಿ ಹಿಂದುಳಿದಿದೆ, ಅದಕ್ಕೆ ಕಾರಣವಾದ ಅಂಶಗಳ್ಯಾವುವು, ಆ ಉಪ ಜಾತಿಯ ಜನಸಂಖ್ಯೆ ಪ್ರಮಾಣ ಎಷ್ಟಿದೆ, ಶೈಕ್ಷಣಿಕ ಮಟ್ಟ ಎಷ್ಟು ಪ್ರಮಾಣದಲ್ಲಿದೆ, ಸರ್ಕಾರಿ ಉದ್ಯೋಗ ಪಡೆದವರ ಸಂಖ್ಯೆ ಎಷ್ಟು, ಆರ್ಥಿಕ ಸ್ಥಿತಿಗತಿ, ರಾಜಕೀಯ ಸ್ಥಾನಮಾನದ ನಿಖರ ಅಂಕಿ ಅಂಶಗಳು ಸೇರಿದಂತೆ ಹಲವಾರು ಪ್ರಶ್ನೆಗಳಿಗೆ ಕರಾರುವಕ್ಕಾಗಿ ನೀಡುವ ಉತ್ತರವೇ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪಿನಲ್ಲಿ ಸ್ಪಷ್ಟವಾಗಿದೆ ಎಂದು ರಾಘವೇಂದ್ರ ನಾಯ್ಕ ತಿಳಿಸಿದರು.

ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿ, ಕಾಂತರಾಜು ಆಯೋಗ ನೀಡಿದ ಹಿಂದುಳಿದ ವರ್ಗಗಳ ಜಾತಿವಾರು ಜನಗಣತಿ ವರದಿ ಆಧರಿಸಿ, ಈ ವರದಿ ದತ್ತಾಂಶವನ್ನೇ ಬಳಸಿ, ಒಳ ಮೀಸಲಾತಿ ಜಾರಿಗೊಳಿಸಬೇಕೆಂಬ ಒತ್ತಡ ಕೇಳಿಬರುತ್ತಿದೆ. ಆದರೆ, ಈ ವರದಿಯ ದತ್ತಾಂಶ ಮತ್ತು ಅಂಕಿ ಅಂಶ ಈಚಿನ ದತ್ತಾಂಶಗಳಲ್ಲ. ಸದಾಶಿವ ಆಯೋಗ ನೇಮಕವಾಗಿ 17 ವರ್ಷವಾಗಿದೆ. ಕಾಂತರಾಜು ಆಯೋಗದ ಅಂಕಿ ಅಂಶ 9 ವರ್ಷ ಹಳೆಯದು. ಈ ಎರಡೂ ಆಯೋಗದ ವರದಿಗಳ ಸಾಚಾತನ ಬಗ್ಗೆ ವರದಿ ಸಲ್ಲಿಕೆಯಾದ ಸಂದರ್ಭ ಅನುಮಾನ ಮತ್ತು ಅಪಸ್ವರಗಳು ವ್ಯಾಪಕವಾಗಿ ಮೂಡಿ ಬಂದಿವೆ. ನ್ಯಾ.ಸದಾಶಿವ ಆಯೋಗದ ವರದಿ ಅಪ್ರಸ್ತುತ ಎಂದು ನಿರ್ಣಯಿಸಿರುವ ರಾಜ್ಯ ಸರ್ಕಾರ ತಕ್ಷಣ ಅದನ್ನು ಮುಕ್ತಾಯಗೊಳಿಸಿರುವುದಾಗಿ ಕೇಂದ್ರ ಸರ್ಕಾರಕ್ಕೆ ತಿಳಿಸಿದೆ ಎಂದು ಮಾಹಿತಿ ನೀಡಿದರು.

ಸರ್ಕಾರ ಎಲ್ಲ ಸಮುದಾಯದ ಪ್ರತಿನಿಧಿಗಳನ್ನು ಒಳಗೊಂಡ ಹೊಸ ಆಯೋಗ ರಚಿಸಿ, ವಸ್ತುನಷ್ಟ ಅಧ್ಯಯನಕ್ಕೆ ಮುಂದಾಗಬೇಕು. ಸೋದರ ಸಮುದಾಯಗಳಲ್ಲಿ ಯಾವುದೇ ಸಂಘರ್ಷ ಉಂಟಾಗದಂತೆ ಎಚ್ಚರ ವಹಿಸಬೇಕು. ಯಾವುದೇ ಒಂದು ಗುಂಪಿನ ಒತ್ತಡಕ್ಕೆ ಮಣಿದು, ತರಾತುರಿಯಲ್ಲಿ ಆತುರದ ನಿರ್ಣಯ ಕೈಗೊಳ್ಳಬಾರದು. ಸೋದರ ಸಮುದಾಯಗಳ ಮುಖಂಡರು ಇದಕ್ಕೆ ಸಹಕರಿಸಿದರೆ, ನಾವೂ ಸ್ವಾಗತಿಸುತ್ತೇವೆ

ಸಮಾಜದ ಮುಖಂಡರಾದ ಹನುಮಂತ ನಾಯ್ಕ, ಚಂದ್ರ ನಾಯ್ಕ, ಹುಲಿಕಟ್ಟೆ ಎಲ್.ಕೊಟ್ರೇಶ ನಾಯ್ಕ, ಪಾಲಿಕೆ ಸದಸ್ಯರಾದ ಆರ್.ಎಲ್.ಶಿವಪ್ರಕಾಶ, ಮಂಜಾನಾಯ್ಕ ಇತರರು ಇದ್ದರು.

- - - ಕೋಟ್‌

ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಗೃಹ ಸಚಿವರು ಒಳ ಮೀಸಲಾತಿ ವಿಚಾರ ಗಂಭೀರವಾಗಿ ಪರಿಗಣಿಸಿ, ಯಾವುದೇ ಸಮುದಾಯಕ್ಕೆ ಅನಾನುಕೂಲ ಆಗದಂತೆ ನೋಡಿಕೊಳ್ಳಬೇಕು. ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ಬಂಜಾರ ಸಮುದಾಯದ ತೀವ್ರ ಪ್ರತಿರೋಧ ಎದುರಿಸಬೇಕಾಗುತ್ತದೆ

- ರಾಘವೇಂದ್ರ ನಾಯ್ಕ, ಹಿರಿಯ ಮುಖಂಡ, ಬಂಜಾರ ಸಮಾಜ

- - - -23ಕೆಡಿವಿಜಿ6:

ದಾವಣಗೆರೆಯಲ್ಲಿ ಬುಧವಾರ ಬಂಜಾರ ಸಮಾಜದ ಹಿರಿಯ ಮುಖಂಡ, ವಕೀಲ ರಾಘವೇಂದ್ರ ನಾಯ್ಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.