ಅಪಾರ ರಾಜಕೀಯ ಅನುಭವ, ಆಡಳಿತ ಸಾಮರ್ಥ್ಯವುಳ್ಳ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್. ಮುನಿಯಪ್ಪ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಡಿಎಸ್‌ಎಸ್ ರಾಜ್ಯ ಸಂಚಾಲಕ ಎಂ.ಗುರುಮೂರ್ತಿ ಒತ್ತಾಯಿಸಿದರು.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಅಪಾರ ರಾಜಕೀಯ ಅನುಭವ, ಆಡಳಿತ ಸಾಮರ್ಥ್ಯವುಳ್ಳ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್. ಮುನಿಯಪ್ಪ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಡಿಎಸ್‌ಎಸ್ ರಾಜ್ಯ ಸಂಚಾಲಕ ಎಂ.ಗುರುಮೂರ್ತಿ ಒತ್ತಾಯಿಸಿದರು. ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಮಾದಿಗ ಸಮುದಾಯವು ಕರ್ನಾಟಕದ ಅತೀ ದೊಡ್ಡ ಪರಿಶಿಷ್ಟ ಸಮುದಾಯಗಳಲ್ಲಿ ಒಂದಾಗಿದೆ. ಸುಮಾರು ೫೦ ಲಕ್ಷ ಜನಸಂಖ್ಯೆ ಹೊಂದಿದೆ. ಆದರೆ ಈ ಸಮುದಾಯವು ಪರಿಶಿಷ್ಟ ಜಾತಿಗಳಲ್ಲಿಯೇ ಅತ್ಯಂತ ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದ ಸಮುದಾಯವಾಗಿದೆ. 2023ರ ವಿಧಾನಸಭಾ ಚುನಾವಣೆಯಲ್ಲಿ ಮಾದಿಗ ಸಮುದಾಯವು ಕಾಂಗ್ರೆಸ್ ಪಕ್ಷವನ್ನು ಬಲವಾಗಿ ಬೆಂಬಲಿಸಿತ್ತು. ನಮ್ಮ ಸಮುದಾಯದ ಹಿರಿಯ ನಾಯಕ ಕೆ.ಎಚ್.ಮುನಿಯಪ್ಪ ಅವರು ರಾಜ್ಯ ರಾಜಕೀಯಕ್ಕೆ ಬಂದಿದ್ದರಿಂದ ಸಮುದಾಯದಲ್ಲಿ ಹೊಸ ವಿಶ್ವಾಸ ಮತ್ತು ಉತ್ಸಾಹ ಮೂಡಿತು. ಇದರಿಂದ ಲಕ್ಷಾಂತರ ಮಾದಿಗ ಮತ್ತು ಹಿಂದುಳಿದ ವರ್ಗದ ಮತದಾರರು ಕಾಂಗ್ರೆಸ್ ಪಕ್ಷ ಪರ ನಿಂತರು ಎಂದು ತಿಳಿಸಿದರು.ಕೆ.ಎಚ್.ಮುನಿಯಪ್ಪ ಸುಮಾರು 5 ದಶಕಗಳಿಂದ ಕಾಂಗ್ರೆಸ್ ಪಕ್ಷಕ್ಕೆ ನಿಷ್ಠೆ, ಶಿಸ್ತು ಹಾಗೂ ಬದ್ಧತೆಯಿಂದ ಸೇವೆ ಸಲ್ಲಿಸಿದ್ದಾರೆ. ೭ ಬಾರಿ ಲೋಕಸಭಾ ಸದಸ್ಯರಾಗಿ ಸುಮಾರು 3 ದಶಕಗಳ ಕಾಲ ಸಂಸತ್ತಿನಲ್ಲಿ ಸೇವೆ ಸಲ್ಲಿಸಿದ್ದಾರೆ. ಜೊತೆಗೆ 10 ವರ್ಷಗಳ ಕಾಲ ಕೇಂದ್ರ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. ರಾಜ್ಯದ ಅತ್ಯಂತ ಹಿರಿಯ ಮತ್ತು ಅರ್ಹ ನಾಯಕರಲ್ಲಿ ಒಬ್ಬರಾಗಿದ್ದಾರೆ ಎಂದರು.
ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಉಪಮುಖ್ಯಮಂತ್ರಿ ಹುದ್ದೆಯನ್ನು ಬಲಗೈ ಸಮುದಾಯದ ನಾಯಕ ಡಾ.ಜಿ.ಪರಮೇಶ್ವರ್ ಅವರಿಗೆ ನೀಡಲಾಗಿತ್ತು. ಆದ್ದರಿಂದ ಎಡಗೈ ಮಾದಿಗ ಸಮುದಾಯಕ್ಕೂ ನ್ಯಾಯಯುತ ಪ್ರಾತಿನಿಧ್ಯ ನೀಡಬೇಕು. ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ಸಿಂಗ್ ಸುರ್ಜೆವಾಲಾ ಅವರು ಈ ಬಗ್ಗೆ ಗಮನಹರಿಸಬೇಕು ಎಂದು ಆಗ್ರಹಿಸಿದರು.ಕೆ.ಎಚ್.ಮುನಿಯಪ್ಪ ಅವರಿಗೆ ಉಪಮುಖ್ಯಮಂತ್ರಿ ಹುದ್ದೆಯೊಂದಿಗೆ ಪ್ರಬಲ ಖಾತೆಯನ್ನು ನೀಡಬೇಕು. ಮಾದಿಗ ಸಮುದಾಯದ ಇನ್ನೂ ಮೂರು ಶಾಸಕರಿಗೆ ಸಚಿವ ಸ್ಥಾನ ನೀಡುವ ಮೂಲಕ ಸಮುದಾಯಕ್ಕೆ ನ್ಯಾಯಸಮ್ಮತ ರಾಜಕೀಯ ಪ್ರಾತಿನಿಧ್ಯ ನೀಡಬೇಕೆಂದು ಒತ್ತಾಯಿಸಿದರು.
ಗೋಷ್ಠಿಯಲ್ಲಿ ಪ್ರಮುಖರಾದ ಶಿವಲಿಂಗಪ್ಪ, ಅಣ್ಣಪ್ಪ, ಶಿವಾಜಿ, ತೇಜ್‌ಕುಮಾರ್, ನೀಲಪ್ಪ ರಾಮನಗರ, ಬೊಮ್ಮನಕಟ್ಟೆ ಕೃಷ್ಣ, ಅತ್ತಿಗುಂದ ಕರಿಯಪ್ಪ, ಬಸವರಾಜ ಮಾರಳ್ಳಿ, ಜಗದೀಶ್ ಪುರಲೆ, ಅಣ್ಣಪ್ಪ ಇನ್ನಿತರರು ಹಾಜರಿದ್ದರು.