ಸಾರಾಂಶ
- ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿ ದಾವಣಗೆರೆ ಸಿವಿಕ್ ಫೋರಂ ಒತ್ತಾಯ । ತಹಸೀಲ್ದಾರ್ ಕಚೇರಿಯಿಂದಲೇ ಅಭಿಯಾನ: ಡಿಸಿ ಭರವಸೆ - - - ಕನ್ನಡಪ್ರಭ ವಾರ್ತೆ ದಾವಣಗೆರೆ
ನೈರ್ಮಲ್ಯ ವಂಚಿತ, ರೋಗಗ್ರಸ್ಥ ಕಟ್ಟಡವಾಗಿರುವ ದಾವಣಗೆರೆ ತಾಲೂಕು ಕಚೇರಿ ತಾರಸಿ ಮೇಲೆ ಪಾಚಿಗಟ್ಟಿದೆ. ಗಿಡ- ಮರಗಳೂ ಬೆಳೆದಿವೆ. ಸೂಕ್ತ ನಿರ್ವಹಣೆ ಹಾಗೂ ಸ್ವಚ್ಛತೆ ಕೊರತೆಯಿಂದ ಕಟ್ಟಡ ಹಾಳಾಗುತ್ತಿದೆ. ಈ ಹಿನ್ನೆಲೆ ಕಟ್ಟಡವನ್ನು ಸಂರಕ್ಷಣೆ ಮಾಡುವಂತೆ ಒತ್ತಾಯಿಸಿ ದಾವಣಗೆರೆ ಸಿವಿಕ್ ಫೋರಂ ಜಿಲ್ಲಾಡಳಿತಕ್ಕೆ ಆಗ್ರಹಿಸಿದೆ.ನಗರದ ಡಿಸಿ ಕಚೇರಿಯಲ್ಲಿ ಸೋಮವಾರ ಜಿಲ್ಲಾಧಿಕಾರಿ ಅವರನ್ನು ಫೋರಂ ಅಧ್ಯಕ್ಷ ಮಲ್ಲಿಕಾರ್ಜುನ ಕಬ್ಬೂರು, ಪ್ರಧಾನ ಕಾರ್ಯದರ್ಶಿ ಎಂ.ವೈ.ಸತೀಶ, ಸಂಘಟನಾ ಕಾರ್ಯದರ್ಶಿ, ವಕೀಲ ವೀರನಗೌಡ ಪಾಟೀಲ, ವಕೀಲರ ಸಂಘ ಅಧ್ಯಕ್ಷ ಎಲ್.ಎಚ್. ಅರುಣಕುಮಾರ, ಫೋರಂ ಸಂಘಟನಾ ಸಂಚಾಲಕರಾದ ವಿಶ್ವನಾಥ ಮಂಡ್ಲೂರು, ಯಲೋದಹಳ್ಳಿ ಕಾಳೇಶ, ಪಿ.ಎಸ್.ಲೋಕೇಶ ಅವರನ್ನು ಒಳಗೊಂಡ ನಿಯೋಗ ಭೇಟಿಯಾಗಿ, ತಹಸೀಲ್ದಾರ್ ಕಟ್ಟಡ ಕಚೇರಿಗೆ ಕಾಯಕಲ್ಪ ನೀಡುವಂತೆ ಮನವಿ ಅರ್ಪಿಸಿತು.
ಮಲ್ಲಿಕಾರ್ಜುನ ಕಬ್ಬೂರು ಮಾತನಾಡಿ, ಸರ್ಕಾರಿ ಕಚೇರಿಗಳು ಸಾರ್ವಜನಿಕರಿಗೆ ಮಾದರಿ ಆಗುವಂತಿರಬೇಕು. ಸಾರ್ವಜನಿಕ ಆಸ್ತಿ ಕಾಪಾಡುವುದು ಸರ್ಕಾರಿ ಅಧಿಕಾರಿ, ನೌಕರರ ಆದ್ಯ ಕರ್ತವ್ಯ. ಒಂದು ಕಚೇರಿ ನಿರ್ವಹಣಾ ಜವಾಬ್ದಾರಿ ಕಚೇರಿ ಮುಖ್ಯಸ್ಥನ ಮೇಲಿರುತ್ತದೆ. ಆದರೆ, ಕೆಎಸ್‌ಆರ್‌ಟಿಸಿ ಹೊಸ ಬಸ್ ನಿಲ್ದಾಣದ ಎದುರು, ಎಪಿಎಂಸಿ ಅಧೀನದ ರೈತ ಭವನದಲ್ಲಿರುವ ಈ ತಹಸೀಲ್ದಾರ್ ಕಚೇರಿ ಸ್ವಚ್ಛತೆ, ನಿರ್ವಹಣೆ ಕೊರತೆಯಿಂದ ಶಿಥಿಲವಾಗುತ್ತಿದೆ ಎಂದು ದೂರಿದರು.ದಾಖಲೆಗಳು ಹಾಳಾಗುವ ಅಪಾಯ:
ಜಾತಿ ಮತ್ತು ಆದಾಯ ಪ್ರಮಾಣಪತ್ರ, ಪಹಣಿ ದೋಷ ತಿದ್ದುಪಡಿ, ಖಾತೆ ಪೌತಿ ಸೇರಿದಂತೆ ಅನೇಕ ಸಮಸ್ಯೆ ಹೊತ್ತು ನಿತ್ಯ ಸಾವಿರಾರು ನಗರ ವಾಸಿಗಳು, ಗ್ರಾಮೀಣರು, ರೈತರು ಈ ಕಚೇರಿಗೆ ಬಂದು, ಹೋಗುತ್ತಾರೆ. ಅವರಿಗೆ ಕನಿಷ್ಠ ಶುದ್ಧ ಕುಡಿಯುವ ನೀರು, ಉತ್ತಮ ಶೌಚಾಲಯ ಸೌಲಭ್ಯವೇ ಇಲ್ಲವಾಗಿದೆ. ರೈತರು, ರೈತ ಮಹಿಳೆಯರು ಇವೆಲ್ಲದರ ಸಂಕಷ್ಟ ಅನುಭವಿಸುತ್ತಿದ್ದಾರೆ. ತಾಲೂಕಿನ ಲಕ್ಷಾಂತರ ರೈತರ ಜೀವನಾಡಿಯೂ ಆಗಿರುವ ತಹಸೀಲ್ದಾರ್ ಕಚೇರಿಯೇ ಅನೈರ್ಮಲ್ಯಕ್ಕೀಡಾಗಿ, ಅಧೋಗತಿ ತಲುಪಿದೆ. ಸ್ವಚ್ಛತೆ ಇಲ್ಲದೇ, ಕಟ್ಟಡದಲ್ಲಿ ಧೂಳು, ಜೇಡರ ಬಲ ಹರಡಿವೆ. ಎಲ್ಲೆಂದರಲ್ಲಿ ಧೂಳು ಮೆತ್ತಿಕೊಂಡು, ರೈತರಿಗೆ ಸಂಬಂಧಿಸಿದ ಅತ್ಯಮೂಲ್ಯ ಹಾಗೂ ಅಪರೂಪದ ದಾಖಲೆ ಹಾಳಾಗುವ ಅಪಾಯ ಇದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.ಕಟ್ಟಡದ ಮೇಲೆ ಮರಗಳಾಗುತ್ತಿರುವ ಗಿಡಗಳು:
ಈ ತಹಸೀಲ್ದಾರ್ ಕಚೇರಿ ಕಟ್ಟಡದ ಮೇಲೆ ಎಲ್ಲೆಂದರಲ್ಲಿ ಗಿಡಗಳು ಬೆಳೆದಿವೆ. ಕೆಲವು ಕಡೆ ಮರಗಳಂತಾಗಿವೆ. ಇಂತಹ ಗಿಡಗಳ ಬೇರುಗಳು ತಾರಸಿ ಮತ್ತು ಕಟ್ಟಡವನ್ನೇ ದುರ್ಬಲಗೊಳಿಸುತ್ತಿವೆ. ಸಾರ್ವಜನಿಕರ ತೆರಿಗೆ ಹಣದಲ್ಲಿ ಕಟ್ಟಿದ ಕಟ್ಟಡ ನಾಶವಾಗುವ ಅಪಾಯವಿದೆ. ತಾರಸಿ ಮೇಲೆ ಕಸ, ಮಣ್ಣು, ದೂಳು ತುಂಬಿದೆ. ಮಳೆನೀರು ಕೆಳಗೆ ಹರಿಯದೇ ತಾರಸಿಯಲ್ಲಿ ಅಲ್ಲಲ್ಲಿ ಸೋರಿಕೆಯಾಗುತ್ತಿದೆ. ಶೌಚಾಲಯ ಇದ್ದರೂ ಪಾಳುಬಿದ್ದಿದೆ. ಇಡೀ ಕಟ್ಟಡ ಜೇಡರ ಬಲೆಯಲ್ಲಿ ಬಂಧಿಯಾಗಿದೆ. ಎಲ್ಲೆಂದರಲ್ಲಿ ಅಡಕೆ ಎಲೆ ತಂಬಾಕು, ಗುಟ್ಕಾ ಹಾಕಿಕೊಂಡವರು ಮೂಲೆ ಮೂಲೆಗಳಲ್ಲಿ ಉಗುಳಿದ್ದಾರೆ. ಶೌಚಾಲಯ ಇಲ್ಲದೇ ಎಲ್ಲೆಂದರಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಇನ್ನೊಂದು ವಾರದಲ್ಲಿ ತಹಸೀಲ್ದಾರ್ ಕಚೇರಿ ಕಟ್ಟಡ ಸ್ವಚ್ಛಗೊಳಿಸಿ, ರಕ್ಷಣೆ ಮಾಡಬೇಕು ಎಂದು ಒತ್ತಾಯಿಸಿದರು.- - -
ಬಾಕ್ಸ್ * ತಾಲೂಕು ಕಚೇರಿಯಿಂದಲೆ ಅಭಿಯಾನ: ಡಿಸಿಸರ್ಕಾರಿ ಕಚೇರಿ ಕಟ್ಟಡಗಳ ಸ್ವಚ್ಛತೆ ಅಭಿಯಾನ ದಾವಣಗೆರೆ ತಹಸೀಲ್ದಾರ್ ಕಚೇರಿ ಕಟ್ಟಡದಿಂದಲೇ ಆರಂಭಿಸುತ್ತೇವೆ. ದಾವಣಗೆರೆ ಸಿವಿಕ್ ಫೋರಂ ಕಾಳಜಿ ಇತರರಿಗೂ ಪ್ರೇರಣೆಯಾಗಿದೆ. ಜಿಲ್ಲೆಯ ಸರ್ಕಾರಿ ಕಚೇರಿ ಕಟ್ಟಡಗಳ ಸ್ವಚ್ಛತಾ ಅಭಿಯಾನ ನಾವು, ನೀವು ಒಟ್ಟಾಗಿ ಮಾಡೋಣ. ನಾನು ಕೂಡ ಕಸಬರಿಕೆ ಹಿಡಿದು, ಸ್ವಚ್ಚತೆಗೆ ನಿಲ್ಲುವೆ. ಹಲವು ಸರ್ಕಾರಿ ಕಚೇರಿಗಳು ಧೂಳು ಹಿಡಿದಿವೆ. ನಿಮ್ಮ ಸಂಸ್ಥೆ ಈಗ ಧ್ವನಿ ಎತ್ತಿರುವುದನ್ನು ಸ್ವಾಗತಿಸುತ್ತೇನೆ. ಶೀಘ್ರ ಸ್ವಚ್ಛತಾ ಅಭಿಯಾನ ಆರಂಭಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಹೇಳಿದರು.- - -
ಕೋಟ್ ರೈತರ ಹಿತದೃಷ್ಟಿಯಿಂದ ದಾವಣಗೆರೆ ತಹಸೀಲ್ದಾರ್ ಕಚೇರಿ ಕಟ್ಟಡದ ಸ್ವಚ್ಛತಾ ಕಾರ್ಯವನ್ನು ಸೆ.18ರ ಒಳಗಾಗಿ ಕೈಗೊಳ್ಳಬೇಕು. ಈ ಬಗ್ಗೆ ಕ್ರಮ ಕೈಗೊಳ್ಳದಿದ್ದರೆ ಸೆ.19ರಂದು ದಾವಣಗೆರೆ ಸಿವಿಕ್ ಫೋರಂನಿಂದಲೇ ಸ್ವಚ್ಛತಾ ಕಾರ್ಯ ಕೈಗೊಳ್ಳುತ್ತೇವೆ. ಇದೇ ಮನವಿ ಪತ್ರವನ್ನು ಸ್ವಚ್ಛತಾ ಕಾರ್ಯ ಕೈಗೊಳ್ಳಲು ಅನುಮತಿ ಕೋರಿದ ಪತ್ರವೆಂದು ಪರಿಗಣಿಸಿ, ಸ್ವಚ್ಛತಾ ಕಾರ್ಯಕ್ಕೆ ಅವಕಾಶ ಮಾಡಿಕೊಡಬೇಕು - ಮಲ್ಲಿಕಾರ್ಜುನ ಕಬ್ಬೂರು, ಅಧ್ಯಕ್ಷ, ದಾವಣಗೆರೆ ಸಿವಿಕ್ ಫೋರಂ- - - * ಬೇಡಿಕೆಗಳೇನೇನು? - ತಾರಸಿ ಮೇಲಿನ ಗಿಡಗಳು, ಮರಗಳನ್ನು ಕಡಿದು, ನೀರು ನಿಲ್ಲದಂತೆ ನೋಡಿಕೊಳ್ಳಬೇಕು - ರೈಲ್ವೆ ನಿಲ್ದಾಣದ ಬಳಿ ಹೊಸ ಕಟ್ಟಡಕ್ಕೆ ತಹಸೀಲ್ದಾರ್ ಕಚೇರಿ, ಭೂ ಮಾಪನ ಇಲಾಖೆ ಕಚೇರಿ ಸ್ಥಳಾಂತರಿಸಬೇಕು - ಹೊಸ ಕಟ್ಟಡದ ಪಕ್ಕದ ಜೈಲನ್ನು ನಗರದ ಹೊರವಲಯಕ್ಕೆ ಸ್ಥಳಾಂತರಿಸಿ, ಅಲ್ಲಿ ಉಪ ನೋಂದಣಿ ಕಚೇರಿ ಸ್ಥಳಾಂತರ ಮಾಡಬೇಕು- ತಹಸೀಲ್ದಾರ್ ಕಚೇರಿ, ಭೂ ಮಾಪನ ಇಲಾಖೆ, ಉಪ ನೋಂದಣಾಧಿಕಾರಿ ಕಚೇರಿಗಳು ಒಟ್ಟಿಗೆ ಇದ್ದರೆ ರೈತರಿಗೆ ದೊಡ್ಡ ಅನುಕೂಲ ಮಾಡಿಕೊಟ್ಟಂತಾಗುತ್ತದೆ - ಜಿಲ್ಲೆಯಲ್ಲಿ ಬಹುತೇಕ ಸರ್ಕಾರಿ ಕಚೇರಿಗಳ ಸ್ಥಿತಿ ಇದೇ ರೀತಿಯಿದ್ದು, ಕಟ್ಟಡಗಳ ದುರಸ್ತಿಗೆ ಆದೇಶ ಹೊರಡಿಸಬೇಕು
- - - -9ಕೆಡಿವಿಜಿ1:ದಾವಣಗೆರೆಯಲ್ಲಿ ತಹಸೀಲ್ದಾರ್ ಕಚೇರಿ ಕಟ್ಟಡ ಸ್ವಚ್ಛತೆಗೆ ಆಗ್ರಹಿಸಿ, ದಾವಣಗೆರೆ ಸಿವಿಕ್ ಫೋರಂನಿಂದ ಜಿಲ್ಲಾಧಿಕಾರಿಗೆ ಅವರಿಗೆ ಮನವಿ ಸಲ್ಲಿಸಲಾಯಿತು.