ನನಗೆ ವಿಷ ಕೊಡಿ : ಕೋರ್ಟಲ್ಲಿ ಅಂಗಲಾಚಿದ ನಟ ದರ್ಶನ್‌

| N/A | Published : Sep 10 2025, 02:04 AM IST / Updated: Sep 10 2025, 05:59 AM IST

renukaswamy murder case supreme court cancelled bail of actor darshan thoogudeepa
ನನಗೆ ವಿಷ ಕೊಡಿ : ಕೋರ್ಟಲ್ಲಿ ಅಂಗಲಾಚಿದ ನಟ ದರ್ಶನ್‌
Share this Article
  • FB
  • TW
  • Linkdin
  • Email

ಸಾರಾಂಶ

ಸೂರ್ಯನನ್ನು ನೋಡಿ ತಿಂಗಳು ಆಗಿದೆ, ಹೊರಗೆ ಓಡಾಡಲು ಬಿಡುತ್ತಿಲ್ಲ, ಕೋಣೆ ತುಂಬಾ ಕತ್ತಲು. ಇಲ್ಲೆಲ್ಲಾ ಫಂಗಸ್‌ ಬಂದಿದೆ. ಏನೇ ಕೇಳಿದರೂ ಕೋರ್ಟ್‌ನಿಂದ ಆದೇಶ ತೆಗೆದುಕೊಂಡು ಬನ್ನಿ ಎಂದು ಹೇಳುತ್ತಿದ್ದಾರೆ. ನನಗೊಬ್ಬನಿಗೆ ವಿಷ ಕೊಡಲು ಅಧಿಕಾರಿಗಳಿಗೆ ಆದೇಶಿಸಿ...

 ಬೆಂಗಳೂರು :  ಸೂರ್ಯನನ್ನು ನೋಡಿ ತಿಂಗಳು ಆಗಿದೆ, ಹೊರಗೆ ಓಡಾಡಲು ಬಿಡುತ್ತಿಲ್ಲ, ಕೋಣೆ ತುಂಬಾ ಕತ್ತಲು. ಇಲ್ಲೆಲ್ಲಾ ಫಂಗಸ್‌ ಬಂದಿದೆ. ಏನೇ ಕೇಳಿದರೂ ಕೋರ್ಟ್‌ನಿಂದ ಆದೇಶ ತೆಗೆದುಕೊಂಡು ಬನ್ನಿ ಎಂದು ಹೇಳುತ್ತಿದ್ದಾರೆ. ನನಗೊಬ್ಬನಿಗೆ ವಿಷ ಕೊಡಲು ಅಧಿಕಾರಿಗಳಿಗೆ ಆದೇಶಿಸಿ...

ಮಂಗಳವಾರದ ವಿಚಾರಣೆ ವೇಳೆ ಹಠಾತ್ತಾಗಿ ಕೈ ಮೇಲೆ ಮಾಡಿ ಮಾತನಾಡಲು ಅವಕಾಶ ಕೋರಿದ ರೇಣುಕಾಸ್ವಾಮಿ ಕೊಲೆ ಆರೋಪಿ ಹಾಗೂ ನಟ ದರ್ಶನ್‌ ನ್ಯಾಯಾಧೀಶರ ಮುಂದಿಟ್ಟ ದಯನೀಯ ಕೋರಿಕೆಯಿದು.

ರೇಣುಕಾಸ್ವಾಮಿ ಕೊಲೆ ಪ್ರಕರಣ ಮಂಗಳವಾರ ಬೆಳಗ್ಗೆ ನಗರದ 64ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಲಯದಲ್ಲಿ ವಿಚಾರಣೆಗೆ ಬಂದಿತ್ತು. ನಟ ದರ್ಶನ್‌ ಹಾಗೂ ಪ್ರಿಯತಮೆ ಪವಿತ್ರಾ ಗೌಡ ಸೇರಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಪ್ರಕರಣದ ಏಳು ಮಂದಿ ಆರೋಪಿಗಳು ವಿಡಿಯೋ ಕಾನ್ಫರೆನ್ಸ್‌ ಮೂಲಕ ಹಾಜರಾದರು. 13ನೇ ಆರೋಪಿ ದೀಪಕ್‌ ಹೊರತುಪಡಿಸಿ ಉಳಿದ 9 ಮಂದಿ ಆರೋಪಿಗಳು ವಿಚಾರಣೆಗೆ ಖುದ್ದು ಹಾಜರಾಗಿದ್ದರು. ವಿಚಾರಣೆಗೆ ಹಾಜರಾಗುವುದರಿಂದ ವಿನಾಯ್ತಿ ನೀಡಲು ಕೋರಿ ದೀಪಕ್‌ ಪರ ವಕೀಲರು ಅರ್ಜಿ ಸಲ್ಲಿಸಿದರು.

ಎಲ್ಲ ಆರೋಪಿಗಳ ಹಾಜರಾತಿಯನ್ನು ದಾಖಲಿಸಿಕೊಂಡ ನ್ಯಾಯಾಧೀಶ ಐ.ಪಿ.ನಾಯಕ್‌ ಅವರು, ಜೈಲಿನಲ್ಲಿರುವ ಆರೋಪಿಗಳ ನ್ಯಾಯಾಂಗ ಬಂಧನ ವಿಸ್ತರಿಸಿ ವಿಚಾರಣೆ ಮುಂದೂಡಿದರು.

ನನಗಷ್ಟೇ ವಿಷ ಕೊಡಿ;

ಈ ವೇಳೆ ವಿಡಿಯೋ ಕಾನ್ಫರೆನ್ಸ್‌ ಮೂಲಕ ಹಾಜರಿದ್ದ ದರ್ಶನ್‌ ಮುಂದೆ ಬಂದು, ‘ಸ್ವಾಮಿ ನಿಮ್ಮ ಬಳಿ ಒಂದು ಮನವಿ ಮಾಡಬೇಕಿದೆ’ ಎಂದು ಕೇಳಿದರು. ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಧೀಶರು, ಹುo... ಹೇಳಿ ಎಂದರು.

ಆಗ ದರ್ಶನ್‌, ಸ್ವಾಮಿ.. ನನಗೆ ವಿಷ ನೀಡಲು ಜೈಲು ಅಧಿಕಾರಿಗಳಿಗೆ ಆದೇಶ ಮಾಡಿ. ಇಲ್ಲಿ ಫಂಗಸ್‌ ಹೆಚ್ಚಾಗಿದೆ. ಕೋಣೆಯಲ್ಲಿ ಕೂಡಿ ಹಾಕಲಾಗಿದೆ. ಕೋಣೆಯಲ್ಲಿ ಸಂಪೂರ್ಣ ಕತ್ತಲು. ಸೂರ್ಯನನ್ನು (ಬಿಸಿಲು) ನೋಡಿ ಒಂದು ತಿಂಗಳೇ ಆಗಿದೆ. ಕೋಣೆಯಿಂದ ಹೊರಗೆ ಓಡಾಡಲು ಬಿಡುತ್ತಿಲ್ಲ. ಏನೇ ಕೇಳಿದರೂ ಕೋರ್ಟ್‌ನಿಂದ ಆದೇಶ ತೆಗೆದುಕೊಂಡು ಬನ್ನಿ ಎಂದು ಜೈಲು ಅಧಿಕಾರಿಗಳು ಹೇಳುತ್ತಿದ್ದಾರೆ. ಬೇರೆಯವರಿಗೆ (ಇತರೆ ಆರೋಪಿಗಳು) ಬೇಡ. ನನಗೊಬ್ಬನಿಗೆ ಮಾತ್ರ ವಿಷ ನೀಡಲು ಜೈಲು ಅಧಿಕಾರಿಗಳಿಗೆ ಆದೇಶ ಮಾಡಿ’ ಎಂದು ಬೇಸರದಲ್ಲಿ ಕೇಳಿಕೊಂಡರು.

ಆಗ ನ್ಯಾಯಾಧೀಶರು, ನ್ಯಾಯಾಲಯದ ಮುಂದೆ ಇಂತಹ ಮನವಿ ಮಾಡಬಾರದು. ಈ ಮನವಿ ಮೇಲೆ ನ್ಯಾಯಾಲಯ ಆದೇಶ ಮಾಡಲಾಗದು. ನ್ಯಾಯಾಲಯದ ಮುಂದಿರುವ ಅರ್ಜಿಗಳ ಕುರಿತು ಮಾತ್ರ ಆದೇಶ ನೀಡಲಾಗುವುದು. ಜೈಲು ಅಧಿಕಾರಿಗಳಿಗೆ ಯಾವ ಆದೇಶ ನೀಡಬೇಕೋ ಅದನ್ನು ನೀಡುತ್ತೇವೆ. ನೀವು ಮತ್ತು ಜೈಲಿನ ಅಧಿಕಾರಿಗಳು ಸಲ್ಲಿಸಿರುವ ಅರ್ಜಿಗಳ ಕುರಿತು ಮಧ್ಯಾಹ್ನ ಆದೇಶ ನೀಡಲಾಗುವುದು ಎಂದು ತಿಳಿಸಿದರು.

ಅದಕ್ಕೆ ದರ್ಶನ್‌, ‘ಸರಿ ಸ್ವಾಮಿ..’ ಎಂದು ಕೈ ಮುಗಿದು ವಿಡಿಯೋ ಕಾನ್ಫರೆನ್ಸ್‌ನಿಂದ ತೆರಳಿದರು.

ಪ್ರಕರಣ ಸಂಬಂಧ ಕಳೆದ ವರ್ಷ ಹೈಕೋರ್ಟ್‌ ನೀಡಿದ್ದ ಜಾಮೀನನ್ನು 2025ರ ಆ.14ರಂದು ಸುಪ್ರೀಂ ಕೋರ್ಟ್‌ ರದ್ದುಪಡಿಸಿದ ಹಿನ್ನೆಲೆಯಲ್ಲಿ ದರ್ಶನ್‌ ಮತ್ತೆ ಜೈಲು ಪಾಲಾಗಿದ್ದರು. ಇದಾದ ಕೆಲ ದಿನಗಳಲ್ಲಿಯೇ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ ದರ್ಶನ್‌, ತನಗೆ ಹಾಸಿಗೆ, ತಲೆದಿಂಬು, ಹೊದಿಕೆ ಸೇರಿ ಇತರೆ ಕನಿಷ್ಠ ಸೌಲಭ್ಯ ಕಲ್ಪಿಸಲು ಜೈಲಿನ ಅಧಿಕಾರಿಗಳಿಗೆ ಸೂಚಿಸಬೇಕು ಎಂದು ಕೋರಿದ್ದರು.

ಈ ಅರ್ಜಿ ಸೆ.3ರಂದು ವಿಚಾರಣೆಗೆ ಬಂದಿತ್ತು. ಈ ವೇಳೆ ದರ್ಶನ್‌ ಪರ ವಕೀಲರು, ‘ದರ್ಶನ್ ಬಲಗೈಗೆ ಶಸ್ತ್ರಚಿಕಿತ್ಸೆಯಾಗಿದೆ. ರಾಡ್‌ ಹಾಕಲಾಗಿದೆ. ಜೈಲಿನಲ್ಲಿ ಚಾಪೆ ಮೇಲೆ ಮಲಗುತ್ತಿರುವುದರಿಂದ ಚಳಿಯಿಂದ ಕೈನಲ್ಲಿ ನೋವು ಕಾಣಿಸಿಕೊಳ್ಳುತ್ತಿದೆ. ಒಂದು ಬೆರಳಂತು ಅಲುಗಾಡಿಸಲೂ ಆಗುತ್ತಿಲ್ಲ. ಬೆಚ್ಚಗಿನ ವಸ್ತುಗಳಿಂದ ಕೈ ಸಂಪೂರ್ಣವಾಗಿ ಮುಚ್ಚಿಕೊಳ್ಳಬೇಕಿದೆ’ ಎಂದು ನ್ಯಾಯಾಲಯದ ಗಮನಕ್ಕೆ ತಂದಿದ್ದರು.

ದರ್ಶನ್‌ ಬಳ್ಳಾರಿಜೈಲಿಗಿಲ್ಲ, ಪರಪ್ಪ ಆಗ್ರಹಾರ ವಾಸ 

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ ಎರಡನೇ ಆರೋಪಿ ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸಬೇಕೆಂಬ ಪರಪ್ಪನ ಅಗ್ರಹಾರ ಜೈಲು ಅಧಿಕಾರಿಗಳ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ. ಬಳ್ಳಾರಿಗೆ ವರ್ಗಾಯಿಸಲು ಸಕಾರಣವಿಲ್ಲ ಎಂದು ಹೇಳಿ ಕೋರ್ಟ್‌ ಅರ್ಜಿ ವಜಾಗೊಳಿಸಿದೆ. ಇದೇ ವೇಳೆ ಹಾಸಿಗೆ, ತಲೆದಿಂಬು, ಹೊದಿಕೆ ಸೇರಿ ಕನಿಷ್ಠ ಸೌಲಭ್ಯಕ್ಕೆ ಕೋರಿದ್ದ ದರ್ಶನ್‌ ಸಲ್ಲಿಸಿರುವ ಅರ್ಜಿಯನ್ನು ಕೋರ್ಟ್‌ ಪುರಸ್ಕರಿಸಿದೆ.

Read more Articles on