ಸಿದ್ದರಾಮಯ್ಯಗೆ ಬುದ್ಧಿ ಭ್ರಮಣೆ, ಮೆಡಿಕಲ್ ಟ್ರೀಟ್‌ಮೆಂಟ್ ಕೊಡಿಸಿ

| Published : Apr 28 2025, 12:51 AM IST

ಸಿದ್ದರಾಮಯ್ಯಗೆ ಬುದ್ಧಿ ಭ್ರಮಣೆ, ಮೆಡಿಕಲ್ ಟ್ರೀಟ್‌ಮೆಂಟ್ ಕೊಡಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ನಾಲ್ಕೈದು ದಿನಗಳಿಂದ ಪಾಕಿಸ್ತಾನ ವಿರುದ್ಧ ಭಾರತ ಸಮರ ಸಾರಲು ಸಿದ್ಧವಾಗಿದೆ. ಇದಕ್ಕೆ ಪಕ್ಷಾತೀತ ಬೆಂಬಲವು ಸಿಕ್ಕಿದೆ. ಆದರೆ, ಸಿದ್ದರಾಮಯ್ಯ ಯುದ್ಧ ಬೇಡ ಎನ್ನುತ್ತಿದ್ದಾರೆ. ಇವರಿಗೆ ಬುದ್ಧಿ ಸ್ಥಿರವಿಲ್ಲದಾಗಿದ್ದು, ಮೆಡಿಕಲ್‌ ಟ್ರೀಟ್‌ಮೆಂಟ್‌ ಕೊಡಿಸಿದರೆ ಸರಿಹೋಗುತ್ತದೆ.

ಗಂಗಾವತಿ:

ಪಹಲ್ಗಾಮ್‌ನಲ್ಲಿ ಉಗ್ರರರಿಂದ ನಡೆದ ಪ್ರವಾಸಿಗರ ಹತ್ಯೆ ಖಂಡಿಸಿ ಇಡೀ ದೇಶವೇ ಮರುಗಿದೆ. ಪಾಕಿಸ್ತಾನ ವಿರುದ್ಧ ಯುದ್ಧ ಮಾಡಿ ಬುದ್ಧಿ ಕಲಿಸಬೇಕೆಂಬ ಇಡೀ ದೇಶವೇ ಹೇಳುತ್ತಿದೆ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಪಾಕ್‌ ವಿರುದ್ಧ ಯುದ್ಧ ಬೇಡ ಎಂದು ಹೇಳುತ್ತಿರುವುದು ನಾಚಿಕೆಗೇಡಿನ ಸಂಗತಿ. ಅವರಿಗೆ ಮೆಡಿಕಲ್‌ ಟ್ರೀಟ್‌ಮೆಂಟ್‌ ಕೊಡಿಸಬೇಕಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ಮಾಜಿ ವಿಧಾನಪರಿಷತ್‌ ಸದಸ್ಯ ಎಚ್‌.ಆರ್‌. ಶ್ರೀನಾಥ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಲ್ಕೈದು ದಿನಗಳಿಂದ ಪಾಕಿಸ್ತಾನ ವಿರುದ್ಧ ಭಾರತ ಸಮರ ಸಾರಲು ಸಿದ್ಧವಾಗಿದೆ. ಇದಕ್ಕೆ ಪಕ್ಷಾತೀತ ಬೆಂಬಲವು ಸಿಕ್ಕಿದೆ. ಆದರೆ, ಸಿದ್ದರಾಮಯ್ಯ ಯುದ್ಧ ಬೇಡ ಎನ್ನುತ್ತಿದ್ದಾರೆ. ಇವರಿಗೆ ಬುದ್ಧಿ ಸ್ಥಿರವಿಲ್ಲದಾಗಿದ್ದು, ಮೆಡಿಕಲ್‌ ಟ್ರೀಟ್‌ಮೆಂಟ್‌ ಕೊಡಿಸಿದರೆ ಸರಿಹೋಗುತ್ತದೆ ಎಂದು ಹೇಳಿದ್ದಾರೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್‌ ಗಾಂಧಿ, ಡಿಸಿಎಂ ಡಿ.ಕೆ. ಶಿವಕುಮಾರ ಪ್ರಧಾನಿ ನರೇಂದ್ರ ಮೋದಿ ಕೈಗೊಳ್ಳುವ ನಿರ್ಧಾರ ಬೆಂಬಲಿಸಿದ್ದಾರೆ. ಇದು ಜಾತ್ಯತೀತ ಮತ್ತು ಪಕ್ಷಾತೀತ ನಿರ್ಣಯ. ಆದರೆ, ಮುಖ್ಯಮಂತ್ರಿಗಳು ಮಾತ್ರ ಪಾಕಿಸ್ತಾನದ ಮೇಲೆ ವ್ಯಾಮೋಹ ತೋರಿಸಿ ಓಲೈಕೆಗೆ ಮುಂದಾಗಿದ್ದಾರೆ ಎಂದು ಕಿಡಿಕಾರಿದರು.

ಕಾಂಗ್ರೆಸ್ ನಾಯಕರು ಯುದ್ಧಕ್ಕೆ ಬೆಂಬಲಿಸುವಾಗ ಮುಖ್ಯಮಂತ್ರಿ ಪಾಕಿಸ್ತಾನಕ್ಕೆ ಬೆಂಬಲಿಸಿರುವುದು ಮೂರ್ಖತನದ ಪರಮಾವಧಿ ಎಂದಿರುವ ಅವರು, ಮುಖ್ಯಮಂತ್ರಿ ಭಾರತದಲ್ಲಿರುವ ಮುಸ್ಲಿಂ ಸಮುದಾಯವನ್ನು ಪ್ರೀತಿಸಲಿ. ಆದರೆ, ಪಾಕಿಸ್ತಾನದವರ ಮೇಲೆ ವ್ಯಾಮೋಹ ಏಕೆ? ಎಂದು ಪ್ರಶ್ನಿಸಿದ್ದಾರೆ.

ದೇಶ ಸಂದಿಗ್ಧ ಪರಿಸ್ಥಿತಿಯಲ್ಲಿರುವಾಗ ನಾವು ಪಕ್ಷ, ಜಾತಿ, ಧರ್ಮ ನೋಡಬಾರದು. ದೇಶಕ್ಕೆ ಸಂಕಷ್ಟ ಸೃಷ್ಟಿಸುವ ಮತ್ತು ಹಿಂದೂಗಳನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನ ಬೆಂಬಲಿತ ಮುಸ್ಲಿಂ ಉಗ್ರಗಾಮಿಗಳು ಕಾಶ್ಮೀರದಲ್ಲಿ ಪೈಶಾಚಿಕ ಕೃತ್ಯ ನಡೆಸಿದ್ದಾರೆ. ಇದನ್ನು ಯಾರೂ ಸಹಿಸುವುದಿಲ್ಲ. ಪಾಕಿಸ್ತಾನ ಶತ್ರು ರಾಷ್ಟ್ರ ಎಂಬುದನ್ನು ಉಗ್ರರ ದಾಳಿಯಿಂದ ಮತ್ತೊಮ್ಮೆ ಸಾಬೀತಾಗಿದೆ ಎಂದರು.

ಓಲೈಕೆ ರಾಜಕಾರಣದಿಂದಾಗಿ ಹಿಂದೂಗಳು ಸಾವಿಗೀಡಾಗುತ್ತಿದ್ದಾರೆ. ಕಾಶ್ಮೀರದಲ್ಲಿ ಅಮಾಯಕ ಹಿಂದೂ ಪುರುಷರನ್ನು ಕುಟುಂಬಸ್ಥರ ಎದುರಲ್ಲೇ ಗುಂಡಿಕ್ಕಿ ಕೊಂದಿರುವುದನ್ನು ಸಹಿಸುವುದಿಲ್ಲ. ಉಗ್ರಗಾಮಿಗಳ ದುಷ್ಕೃತ್ಯಕ್ಕೆ ತಕ್ಕ ಪಾಠ ಕಲಿಸುವುದಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಮಾಡಿರುವ ಶಪಥಕ್ಕೆ ನಾವು ಸಂಪೂರ್ಣ ಬೆಂಬಲಿಸುತ್ತೇವೆ ಎಂದರು.