ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು ಕಲ್ಪವೃಕ್ಷ ಎನಿಸಿಕೊಂಡಿರುವ ತೆಂಗಿನ ಮರಗಳ ಮೌಲ್ಯಗಳ ಬಗ್ಗೆ ನಾವು ಚೆನ್ನಾಗಿ ತಿಳಿದುಕೊಂಡಿಲ್ಲ. ತೆಂಗಿನ ಕಾಯಿಯಿಂದ ಹಲವು ಉಪ ಉತ್ಪನ್ನಗಳು ದೊರೆಯುತ್ತಿದೆ. ನಾವು ತೆಂಗಿನ ಮರಗಳನ್ನು ಐದು ವರ್ಷಗಳ ಕಾಲ ಪೋಷಿಸಿದರೆ ಅದರ ಫಲ ನಮಗೆ ದೊರೆಯುವುದು ಮಾತ್ರವಲ್ಲ, ಭವಿಷ್ಯದ ಪೀಳಿಗೆಗೂ ಮುಂದುವರಿಯುತ್ತದೆ ಎಂದು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನದ ಕಾವೂರು ಶಾಖಾ ಮಠದ ಡಾ.ಧರ್ಮಪಾಲನಾಥ ಸ್ವಾಮೀಜಿ ತಿಳಿಸಿದ್ದಾರೆ.
ನಗರದ ಮರೋಳಿಯಲ್ಲಿ ಗುರುವಾರ ದಕ್ಷಿಣ ಕನ್ನಡ ತೆಂಗು ರೈತ ಉತ್ಪಾದಕರ ಸಂಸ್ಥೆ( ಸೌತ್ ಕೆನರಾ ಕೊಕೊನಟ್ ಫಾರ್ಮರ್ಸ್ ಪ್ರೊಡ್ಯೂಸರ್ ಕಂಪೆನಿ ಲಿಮಿಟೆಡ್)ಯ ಪ್ರಾದೇಶಿಕ ಕಚೇರಿಯನ್ನು ಉದ್ಘಾಟಿಸಿದರು.ದುರದೃಷ್ಟವಶಾತ್ ತೆಂಗಿನ ಸಾಮಥ್ಯವನ್ನು ಗುರುತಿಸುವಲ್ಲಿ ಮತ್ತು ಪೋಷಿಸುವಲ್ಲಿ ನಮ್ಮಲ್ಲಿ ಮಾಹಿತಿಯ ಕೊರತೆ ಇದೆ. ತೆಂಗಿನ ಚಿಪ್ಪುಗಳನ್ನು ವಿವಿಧ ಉಪ ಉತ್ಪನ್ನಗಳಾಗಿ ಪರಿವರ್ತಿಸಬಹುದು ಮತ್ತು ಆದಾಯ ಮತ್ತು ಉದ್ಯೋಗಾವಕಾಶ ಗಳನ್ನು ಸೃಷ್ಟಿಸಲು ಸಾಧ್ಯವಿದೆ ಎಂದರು.
ಸಮಾರಂಭದಲ್ಲಿ ಸ್ವಾಮೀಜಿ ಹಾಗೂ ಇತರ ಗಣ್ಯರು ತೆಂಗಿನ ಎಣ್ಣೆ, ಕೊಬ್ಬರಿ ಒಣ ಚಟ್ನಿ ಸೇರಿದಂತೆ ತೆಂಗಿನ ಉತ್ಪನ್ನಗಳನ್ನು ಅನಾವರಣಗೊಳಿಸಿದರು.ಕಾರ್ಯಕ್ರಮದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಸೌತ್ ಕೆನರಾ ಕೊಕೊನಟ್ ಫಾರ್ಮರ್ಸ್ ಪ್ರೊಡ್ಯೂಸರ್ ಕಂಪೆನಿ ಲಿಮಿಟೆಡ್ ಸಿಇಒ ಚೇತನ್ ಅವರು ಭವಿಷ್ಯದ ಯೋಜನೆಗಳನ್ನು ವಿವರಿಸಿದರು, ಪುತ್ತೂರು ಶಾಖೆಯ ಮೇಲ್ವಿಚಾರಕಿ ನವ್ಯಶ್ರೀ ಸಂಸ್ಥೆಯ ಕಾರ್ಯಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು.ಕಾಸರಗೋಡು ಐಸಿಎಆರ್ - ಸಿಪಿಸಿಆರ್‌ಐ ನಿರ್ದೇಶಕ ಡಾ.ಹೆಬ್ಬಾರ್ ಕೆ.ಬಿ, ತೋಟಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ಎಚ್.ಆರ್.ನಾಯಕ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆಂಪೇಗೌಡ ಎಚ್, ಮರೋಳಿ ವಾರ್ಡ್ ಕಾರ್ಪೊರೇಟರ್ ಕೇಶವ ಮರೋಳಿ, ಮನಪಾ ವಿಪಕ್ಷ ನಾಯಕ ಪ್ರವೀಣ್ ಚಂದ್ರ ಆಳ್ವ, ದಕ್ಷಿಣ ಕನ್ನಡ ಜಿಲ್ಲಾ ನಬಾರ್ಡ್ ವ್ಯವಸ್ಥಾಪಕ ಸಂಗೀತಾ ಎಸ್.ಕರ್ತಾ ಮತ್ತಿತರರು ಇದ್ದರು.
ಸಂಸ್ಥೆಯ ಉಪಾಧ್ಯಕ್ಷ ಗಿರಿಧರ ಸ್ಕಂದ ಸ್ವಾಗತಿಸಿದರು. ಸುಳ್ಯ ಶಾಖೆಯ ಮೇಲ್ವೀಚಾರಕಿ ಅಪರ್ಣಾ ವಂದಿಸಿದರು, ಡಾ.ರಾಜೇಶ್ ನಿರೂಪಿಸಿದರು.