ಮಕ್ಕಳ ಆರೋಗ್ಯಕ್ಕೆ ಮೊದಲ ಆದ್ಯತೆ ಕೊಡಿ: ಅಕ್ರಂ ಷಾ

| Published : Jul 20 2025, 01:17 AM IST

ಸಾರಾಂಶ

ಜಿಲ್ಲೆಯ ಎಲ್ಲ ಶಾಲೆಗಳಲ್ಲಿ ಮಕ್ಕಳಿಗೆ ನೀಡುವ ಬಿಸಿಯೂಟ ಸೇರಿ ಶುಚಿ, ರುಚಿ, ಸ್ವಾಸ್ಥ್ಯದೊಂದಿಗೆ ಮಕ್ಕಳ ಆರೋಗ್ಯಕ್ಕೆ ಮೊದಲ ಆದ್ಯತೆ ನೀಡಬೇಕು.

ಅತಿಸಾರ ಭೇದಿ ನಿಯಂತ್ರಣ ಅಂತರ ಇಲಾಖೆ ಸಮನ್ವಯ ಸಮಿತಿ ಸಭೆಯಲ್ಲಿ ಜಿಪಂ ಸಿಇಒ

ಕನ್ನಡಪ್ರಭ ವಾರ್ತೆ ಹೊಸಪೇಟೆ

ಜಿಲ್ಲೆಯ ಎಲ್ಲ ಶಾಲೆಗಳಲ್ಲಿ ಮಕ್ಕಳಿಗೆ ನೀಡುವ ಬಿಸಿಯೂಟ ಸೇರಿ ಶುಚಿ, ರುಚಿ, ಸ್ವಾಸ್ಥ್ಯದೊಂದಿಗೆ ಮಕ್ಕಳ ಆರೋಗ್ಯಕ್ಕೆ ಮೊದಲ ಆದ್ಯತೆ ನೀಡಬೇಕು. ಇದಕ್ಕೆ ವಿವಿಧ ಇಲಾಖೆಗಳ ಅಧಿಕಾರಿಗಳ ಸಮನ್ವಯತೆ ಮುಖ್ಯ. ತಮ್ಮ ತಮ್ಮ ಜವಾಬ್ದಾರಿಗಳನ್ನು ಅರಿತು ಕರ್ತವ್ಯ ನಿರ್ವಹಿಸಬೇಕು ಎಂದು ಜಿಪಂ ಸಿಇಒ ನೋಂಗ್ಜಾಯ್ ಮಹಮ್ಮದ್ ಅಲಿ ಅಕ್ರಂ ಷಾ ಸೂಚಿಸಿದರು.

ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವಿಜಯ ವಿಠಲ ಸಭಾಂಗಣದಲ್ಲಿ ಏರ್ಪಡಿಸಿದ್ದ ಅತಿಸಾರ ಭೇದಿ ನಿಯಂತ್ರಣ ಅಂತರ ಇಲಾಖೆ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ತೀವ್ರ ಅತಿಸಾರದಿಂದ ಮಕ್ಕಳ ಮರಣವನ್ನು ಶೂನ್ಯಕ್ಕೆ ತರುವುದನ್ನು ಗುರಿಯಾಗಿಸಿ ತೀವ್ರ ಅತಿಸಾರ ಭೇದಿ ನಿಯಂತ್ರಣ ಪಾಕ್ಷಿಕ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಒಟ್ಟು 5 ತಾಲೂಕು ಸಾರ್ವಜನಿಕ ಆಸ್ಪತ್ರೆಗಳು, 7 ಸಮುದಾಯ ಆರೋಗ್ಯ ಕೇಂದ್ರಗಳು, 49 ಪ್ರಾಥಮಿಕ ಆರೋಗ್ಯ ಕೇಂದ್ರಗಳು, 5 ನಗರ ಆರೋಗ್ಯ ಕೇಂದ್ರಗಳು, 16 ನಮ್ಮ ಕ್ಲಿನಿಕ್‌ಗಳು, 44 ಖಾಸಗಿ ಆರೋಗ್ಯ ಸಂಸ್ಥೆಗಳು, ಒಟ್ಟು 450 ಕ್ಕೂ ಹೆಚ್ಚು ಓಆರ್‌ಎಸ್ ಮತ್ತು ಜಿಂಕ್ ಕಾರ್ನರ್‌ಗಳನ್ನು ಸ್ಥಾಪಿಸಲಾಗಿದೆ ಎಂದರು.

ಎಲ್ಲರೂ ಅತಿಸಾರ ಭೇದಿಯ ನಿಯಂತ್ರಣದ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಅಡುಗೆ ತಯಾರಿಸುವ ಮೊದಲು ಕೈಗಳನ್ನು ಸಾಬೂನಿಂದ ತೊಳೆಯಬೇಕು. ಕುಡಿಯುವ ನೀರನ್ನು ಶುದ್ದವಾದ ಪಾತ್ರೆಯಲ್ಲಿ ಶೇಖರಿಸುವುದು. ಮಕ್ಕಳು ಇರುವ ಸ್ಥಳವನ್ನು ಸ್ವಚ್ಛತೆಯಿಂದಿಡಬೇಕು. ಕೈಗಳನ್ನು ಆಗಾಗ್ಗೆ ಶುಚಿಗೊಳಿಸಬೇಕು. ಕಡ್ಡಾಯವಾಗಿ ಶೌಚಾಲಯನ್ನೇ ಬಳಸುವುದು. ಶಾಲಾ ಮಕ್ಕಳು ಕಡ್ಡಾಯವಾಗಿ ಪಾದರಕ್ಷೆಗಳನ್ನು ಬಳಸುವಂತೆ ಶಿಕ್ಷಕರು ತಿಳಿಸಬೇಕು. ಪಾದರಕ್ಷೆ ಬಳಸದೇ ಇದ್ದಲ್ಲಿ ಅದರಿಂದಾಗುವ ದುಷ್ಪರಿಣಾಮದ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸಬೇಕು. ಬೋರ್‌ವೆಲ್‌ನಿಂದ ಬರುವ ನೀರನ್ನು ಕುಡಿಯದೇ ಶುದ್ಧ ಕುಡಿಯುವ ನೀರಿನ ಘಟಕ ಅಥವಾ ಜೆಜೆಎಂನಿಂದ ಬರುವ ಶುದ್ದ ನೀರನ್ನು ಮಕ್ಕಳಿಗೆ ಕುಡಿಯವಂತೆ ಅರಿವು ಮೂಡಿಸಬೇಕು. ಬೋರ್‌ವೆಲ್ ಹಾಗೂ ಜೆಜೆಎಂ ನೀರಿನ ವ್ಯತ್ಯಾಸವನ್ನು ಶಾಲಾ ಪ್ರಾರ್ಥನೆಯ ವೇಳೆಯಲ್ಲಿ ಮಕ್ಕಳಿಗೆ ಜಾಗೃತಿ ಮೂಡಿಸಬೇಕು ಎಂದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಲ್‌.ಆರ್‌. ಶಂಕರ್ ನಾಯ್ಕ ಮಾತನಾಡಿ, ಅನಿಮೀಯಾ ಮುಕ್ತ ಪೌಷ್ಟಿಕ ಕರ್ನಾಟಕ ಕಾರ್ಯ ಯೋಜನೆಯನ್ನು ರಾಜ್ಯದಲ್ಲಿ ಜಾರಿಗೊಳಿಸಲಾಗಿದ್ದು, ಒಂದರಿಂದ 10ನೇ ತರಗತಿಯಲ್ಲಿ ದಾಖಲಾಗಿರುವ ಶಾಲಾ ಮಕ್ಕಳ ರಕ್ತಹೀನತೆಯನ್ನು ತಪಾಸಣೆ ಮಾಡಲಾಗುವುದು. ಈ ಕಾರ್ಯಕ್ರಮವನ್ನು ಜು. 1 ಆರಂಭಿಸಲಾಗಿದ್ದು, ಡಿ. 31ರವರಗೆ ನಡೆಸಲಾಗುತ್ತದೆ. ಜಿಲ್ಲೆಯಲ್ಲಿ ಆರ್‌ಬಿಎಸ್‌ಕೆ ತಂಡಗಳು ಶಾಲೆ ಮತ್ತು ಅಂಗನವಾಡಿಗೆ ಭೇಟಿ ನೀಡುವ ಸಮಯದಲ್ಲಿ ಶಿಕ್ಷಕರು, ವಿದ್ಯಾರ್ಥಿಗಳ ಶೇ.100ರಷ್ಟು ಹಾಜರಾತಿ ಇರುವಂತೆ ನೋಡಿಕೊಳ್ಳಬೇಕು. ಸಾಮೂಹಿಕ ತಪಾಸಣೆ ಮೂಲಕ ಮಕ್ಕಳಲ್ಲಿರುವ ರಕ್ತಹೀನತೆಯನ್ನು ಗುರುತಿಸಿ ಚಿಕಿತ್ಸೆ ನೀಡಲಾಗುವುದು ಎಂದರು.

ಶಾಲಾ ಮಕ್ಕಳು ಮತ್ತು ಹದಿಹರೆಯದವರನ್ನು ರಕ್ತಹೀನತೆಗಾಗಿ ತಪಾಸಣೆ ಮಾಡಿ ರಕ್ತದ ಪ್ರಮಾಣ ಹಿಮೋಗ್ಲೋಬಿನ್ ಕಡಿಮೆ ಇದ್ದಲ್ಲಿ ಮಕ್ಕಳಿಗೆ ರಕ್ತಹೀನತೆ ಇದೆ ಎಂದು ಗುರುತಿಸಿ ಚಿಕಿತ್ಸೆ ನೀಡಲಾಗುವುದು. ವಿದ್ಯಾರ್ಥಿಗಳಲ್ಲಿ ರಕ್ತಹೀನತೆ ಲಕ್ಷಣಗಳಾದ ತೀವ್ರ ಸುಸ್ತು, ನಿಶ್ಯಕ್ತಿ, ಉಸಿರಾಟದ ತೊಂದರೆ ಹಾಗೂ ಕಲಿಕೆಯಲ್ಲಿ ನಿರಾಸಕ್ತಿ, ಏಕಾಗ್ರತೆ ಕೊರತೆ ಕಂಡು ಬಂದರೆ ಕೂಡಲೇ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಮುಂದಾಗಬೇಕು. 10ರಿಂದ 19 ವಯಸ್ಸಿನವರಲ್ಲಿ ಕಂಡು ಬರುವ ರಕ್ತಹೀನತೆ ಸಮಸ್ಯೆಗೆ ಕಬ್ಬಿಣಾಂಶದ ಮಾತ್ರೆ ನೀಡಲಾಗುತ್ತದೆ. 6ರಿಂದ 10ನೇ ತರಗತಿಯಲ್ಲಿ ಓದುತ್ತಿರುವ ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ವಿದ್ಯಾರ್ಥಿಗಳಿಗೆ ಕಬ್ಬಿಣಾಂಶದ ಮಾತ್ರೆ ಹಾಗೂ ಪೋಲಿಕ್ ಆಮ್ಲದ ಮಾತ್ರೆಯನ್ನು ನೀಡಲಾಗುವುದು ಎಂದರು.

ಆರ್‌ಸಿಎಚ್‌ ಅಧಿಕಾರಿ ಡಾ. ಬಿ. ಜಂಬಯ್ಯ ಮಾತನಾಡಿದರು.

ಈ ವೇಳೆ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಷಣ್ಮುಖ ಗೌಡ, ಜಿಲ್ಲಾ ಮಲೇರಿಯಾ ನಿರ್ಮೂಲನಾಧಿಕಾರಿ ಡಾ. ಸತೀಶ್‌ ಚಂದ್ರ ಮತ್ತಿತರಿರದ್ದರು.