ಸ್ವಚ್ಛತೆಗೆ ಆದ್ಯತೆ ನೀಡಿ: ಸಿಇಒ ಲವೀಶ್‌ ಸೂಚನೆ

| Published : Sep 19 2025, 01:00 AM IST

ಸಾರಾಂಶ

ತಾಲೂಕಿನ ಎಲ್ಹೇರಿ ಮತ್ತು ಚಿನ್ನಾಕಾರ ಗ್ರಾಮ ಪಂಚಾಯಿತಿಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಲವೀಶ್ ಒರಡಿಯಾ ಮತ್ತು ಜಿಲ್ಲಾ ಪಂಚಾಯಿತಿಯ ಯೋಜನಾ ನಿರ್ದೇಶಕ ಸಿ. ಬಿ. ದೇವರಮನಿ ಭೇಟಿ ನೀಡಿದರು.

ಕನ್ನಡಪ್ರಭ ವಾರ್ತೆ ಯಾದಗಿರಿ

ತಾಲೂಕಿನ ಎಲ್ಹೇರಿ ಮತ್ತು ಚಿನ್ನಾಕಾರ ಗ್ರಾಮ ಪಂಚಾಯಿತಿಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಲವೀಶ್ ಒರಡಿಯಾ ಮತ್ತು ಜಿಲ್ಲಾ ಪಂಚಾಯಿತಿಯ ಯೋಜನಾ ನಿರ್ದೇಶಕ ಸಿ. ಬಿ. ದೇವರಮನಿ ಭೇಟಿ ನೀಡಿದರು.

ಎಲ್ಹೇರಿ ಗ್ರಾಮದಲ್ಲಿ ಸಂಚರಿಸಿ ಇಂಗುಗುಂಡಿ ಕಾಮಗಾರಿಗಳು, ಶೌಚಾಲಯ, ಜೆಜೆಎಮ್ ಕಾಮಗಾರಿ, ಅಂಗನವಾಡಿ ಕೇಂದ್ರ ವೀಕ್ಷಿಸಿದರು. ಗ್ರಾಮದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲು ಪಿಡಿಓ ಅವರಿಗೆ ಸೂಚಿಸಿದರು. ನಂತರ 12ನೇ ಶತಮಾನದ ಪುರಾತನ ಎಲೆಕೇತೇಶ್ವರ ದೇವಾಲಯ ವೀಕ್ಷಿಸಿದರು. ಚಿನ್ನಕಾರ ಗ್ರಾಮ ಪಂಚಾಯತಿಗೆ ಭೇಟಿ ನೀಡಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳ ಜೊತೆಗೆ ಮಾತನಾಡಿ, ಪೌಷ್ಟಿಕ ಆಹಾರ, ಸಮವಸ್ತ್ರ, ಶೂ ಕೊಟ್ಟಿರುವ ಮಾಹಿತಿ ಪಡೆದರು.

ಪ್ರಗತಿಯಲ್ಲಿರುವ ಶಾಲಾ ಅಭಿವೃದ್ಧಿ ಕಾಮಗಾರಿಗಳಾದ ಬಾಲಕ, ಬಾಲಕಿಯರ ಪ್ರತ್ಯೇಕ ಶೌಚಾಲಯ, ಶಾಲಾ ಕಾಂಪೌಂಡ್ ಕಟ್ಟಡ ಕಾಮಗಾರಿ ವೀಕ್ಷಿಸಿದರು.

ಈ ಸಂದರ್ಭದಲ್ಲಿ ಗುರುಮಠಕಲ್ ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿಗಳಾದ ಅಂಬರೀಶ್ ಪಾಟೀಲ್, ಎಲ್ಹೇರಿ ಗ್ರಾಮ ಪಂಚಾಯಿತಿ ಪಿಡಿಓ ಶೋಭಾ ಪಾಟೀಲ್, ಚಿನ್ನಕಾರ ಗ್ರಾಮ ಪಂಚಾಯಿತಿ ಪಿಡಿಓ ಸೈಯ್ಯದ್ ಅಲಿ, ಟಿಎಇ, ಬಿ ಎಫ್ಟಿ, ಟಿಐಇಸಿ ಸೇರಿದಂತೆ ಗ್ರಾಮ ಪಂಚಾಯಿತಿಯ ಸದಸ್ಯರು ಸಿಬ್ಬಂದಿಗಳು ಇದ್ದರು.

ಗುರುಮಠಕಲ್‌: ಸ್ವಸ್ಥ ನಾರಿ, ಸಶಕ್ತ ಪರಿವಾರ ಕಾರ್ಯಕ್ರಮ

ಯಾದಗಿರಿ: ಭಾರತ ಸರ್ಕಾರದ ಬಹುಮುಖ್ಯವಾದ ಮತ್ತು ವಿಶೇಷವಾದ ಮಹಿಳೆಯರ ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಸ್ವಸ್ಥ ನಾರಿ ಸಶಕ್ತ ಪರಿವಾರ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಜ್ಯೋತಿ ಹೇಳಿದರು.

ಪ್ರಾಥಮಿಕ ಆರೋಗ್ಯ ಕೇಂದ್ರ, ಕಂದಕೂರಿನಲ್ಲಿ ಇಂದು ಹಮ್ಮಿಕೊಂಡಿರುವ ಸ್ವಸ್ಥ ನಾರಿ ಸಶಕ್ತ ಪರಿವಾರ ಅಭಿಯಾನದ ಉದ್ಘಾಟನೆ ಕಾರ್ಯಕ್ರಮ ಅಂಗವಾಗಿ ಮಾತನಾಡಿದ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಂಕರಮ್ಮ, ಈ ಅಭಿಯಾನವು ಮಹಿಳಾ ಸಂಕುಲಕ್ಕೆ ವರದಾನ ಆಗಿದೆ. ಸಾರ್ವಜನಿಕರು, ಮಹಿಳೆಯರು ಇದರ ಸದುಪಯೋಗ ಪಡೆಯಬೇಕು ಎಂದು ಹೇಳಿದರು.

ಆಡಳಿತ ವೈದ್ಯಾಧಿಕಾರಿಗಳಾದ ಡಾ. ದೀಪಿಕಾ ಮಾತನಾಡಿ, ಮಹಿಳೆಯರಿಗಾಗಿ ವೈದ್ಯಕೀಯ ಪರೀಕ್ಷೆಯನ್ನು ಈ ಅಭಿಯಾನದಲ್ಲಿ ಒದಗಿಸಲಾಗುತ್ತಿದೆ. ಪ್ರಮುಖವಾಗಿ ರಕ್ತಹೀನತೆ, ಸಕ್ಕರೆ ಕಾಯಿಲೆ ರಕ್ತದೊತ್ತಡ ಕ್ಷಯರೋಗ, ಕ್ಯಾನ್ಸರ್ ಅಪೌಷ್ಟಿಕತೆ, ಮುಂತಾದ ರೋಗಗಳ ತಪಾಸಣೆ ಮಾಡಲಾಗುವುದು ಮತ್ತು ಚಿಕಿತ್ಸೆ ಹಾಗೂ ಆಪ್ತ ಸಮಾಲೋಚನೆ ಮಾಡಲಾಗುವುದು ಎಂದು ಹೇಳಿದರು.

ಜೊತೆಗೆ, ಗರ್ಭಿಣಿ- ತಾಯಂದಿರ ಹದಿಹರೆಯದ ಹೆಣ್ಣು ಮಕ್ಕಳಲ್ಲಿ ಕಾಣಿಸಿಕೊಳ್ಳುವ ಋತುಸ್ರಾವ ಸಮಸ್ಯೆಗಳ ಬಗ್ಗೆ ಹಾಗೂ ಮುಟ್ಟಿನ ನೈರ್ಮಲ್ಯದ ಬಗ್ಗೆ ಆಪ್ತ ಸಮಾಲೋಚನೆಯನ್ನು ಹಮ್ಮಿಕೊಳ್ಳಲಾಗಿತ್ತು.

ಅಶೋಕಗೌಡ ಕಂದಕೂರ, ಗ್ರಾಮ ಪಂಚಾಯ್ತಿ ಸದಸ್ಯ ಶರೀಫುದ್ದೀನ್, ಚಂದ್ರಶೇಖರ್, ಮಾಣಿಕ್ಯಮ್ಮ ಹಾಗೂ ಆಸ್ಪತ್ರೆ ಎಲ್ಲ ಆರೋಗ್ಯ ಸಿಬ್ಬಂದಿಗಳು ಗ್ರಾಮದ ಗರ್ಭಿಣಿಯರು ತಾಯಂದಿರು ಹದಿಹರೆಯದ ಹೆಣ್ಣು ಮಕ್ಕಳು ಹಾಗೂ ಆಶಾ ಕಾರ್ಯಕರ್ತರು ಹಾಜರಿದ್ದರು.