ಸಾರಾಂಶ
ಕನ್ನಡಪ್ರಭ ವಾರ್ತೆ ಮೊಳಕಾಲ್ಮುರು
ಶಿಕ್ಷಕ ವೃತ್ತಿಯಂತ ಶ್ರೇಷ್ಠ ವೃತ್ತಿ ಜಗತ್ತಿನಲ್ಲಿ ಬೇರೆಯಲ್ಲಿಯೂ ಸಿಗದು. ಜ್ಞಾನದ ಹಸಿವನ್ನು ಇಂಗಿಸುವ ಶಕ್ತಿ ಇರುವ ಗುರುಗಳು, ತಮ್ಮ ಜವಾಬ್ದಾರಿ ಅರಿತು ಮಕ್ಕಳಿಗೆ ಗುಣ ಮಟ್ಟದ ಶಿಕ್ಷಣ ನೀಡುವ ಮೂಲಕ ತಾಲೂಕನ್ನು ಶೈಕ್ಷಣಿಕವಾಗಿ ಅಭಿವೃದ್ಧಿ ಗೊಳಿಸಬೇಕೆಂದು ಶಾಸಕ ಎನ್.ವೈ.ಗೋಪಾಲಕೃಷ್ಣ ಹೇಳಿದರು.ತಾಲೂಕಿನ ರಾಂಪುರ ಗ್ರಾಮದಲ್ಲಿ ಗುರುವಾರ ಸಾರ್ವಜನಿಕ ಶಿಕ್ಷಣ ಇಲಾಖೆ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸಹಯೋಗದಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಹಲವಾರು ಸಮಸ್ಯೆಗಳ ನಡುವೆ ಹಿಂದುಳಿದ ತಾಲೂಕನ್ನು ಶೈಕ್ಷಣಿಕವಾಗಿ ಅಭಿವೃದ್ಧಿ ಗೊಳಿಸುವಲ್ಲಿ ಶಿಕ್ಷಕರು ತಮ್ಮ ಕರ್ತವ್ಯ ಅರಿತು ಸೇವೆ ಸಲ್ಲಿಸುತ್ತಿದ್ದಾರೆ. ಅಜ್ಞಾನ ಮತ್ತು ಅಂಧಕಾರ ಅಳಿಸಿ ಮಾನವೀಯ ಮೌಲ್ಯವನ್ನು ಮಕ್ಕಳಿಗೆ ತಿಳಿಸಿ ಸಮಾಜದ ಮುಖ್ಯವಾಹಿನಿಗೆ ತರುವ ಶಿಕ್ಷಕರ ಸೇವೆ ಅವಿಸ್ಮರಣೀಯ. ಬರುವ ದಿನಗಳಲ್ಲಿ ನಿಮ್ಮಗಳ ಸೇವೆ ತಾಲೂಕಿಗೆ ಇನ್ನಷ್ಟು ಅಗತ್ಯವಾಗಿದೆ ಎಂದರು.
ಶಿಕ್ಷಕರಲ್ಲಿರುವ ಜ್ಞಾನದಿಂದ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಅಭಿವೃದ್ಧಿ ಸಾಧ್ಯ. ಶಿಕ್ಷಕರಿಗೆ ಸರ್ಕಾರದಿಂದ ಸಿಗುವಂತ ಸೌಲಭ್ಯ ಕಲ್ಪಿಸುವಲ್ಲಿ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ. ಬರದ ನಾಡಿನ ಜನತೆ ಕುಡಿಯವ ನೀರಿನ ಸಮಸ್ಯೆ ನೀಗಿಸಲು ತುಂಗಾಭದ್ರಾ ಹಿನ್ನೀರಿನ ಯೋಜನೆ ಕಾಮಗಾರಿ ಮುಕ್ತಾಯ ಹಂತಕ್ಕೆ ಬಂದಿದೆ. ಇನ್ನು ಕೆಲ ದಿನಗಳಲ್ಲಿ ತಾಲೂಕಿನ ಎಲ್ಲಾ ಗ್ರಾಮಗಳಿಗೆ ಕುಡಿಯುವ ನೀರು ಸಿಗಲಿದೆ. ಶಿಕ್ಷಕರು ತಮ್ಮ ಜವಾಬ್ದಾರಿ ಅರಿತು ಬದಲಾದ ಕಾಲ ಘಟ್ಟಕ್ಕೆ ತಕ್ಕಂತೆ ಮಕ್ಕಳಿಗೆ ಗುಣ ಮಟ್ಟದ ಶಿಕ್ಷಣ ನೀಡುವ ಮೂಲಕ ತಾಲೂಕನ್ನು ಇನ್ನಷ್ಟು ಶೈಕ್ಷಣಿಕವಾಗಿ ಅಬಿವೃದ್ಧಿ ಗೊಳಿಸಬೇಕು ಎಂದರು.ಕ್ಷೇತ್ರ ಶಿಕ್ಷಣಾಧಿಕಾರಿ ನಿರ್ಮಲಾದೇವಿ ಮಾತನಾಡಿ, ವಿದ್ಯಾರ್ಥಿಗಳನ್ನು ಪೋಷಿಸಿ ಶೈಕ್ಷಣಿಕ ಪ್ರಗತಿಗೆ ಮುಂದಾಗುತ್ತಿರುವ ಶಿಕ್ಷಕರು ಹಲವಾರು ಸಮಸ್ಯೆ ಎದುರಿಸುತ್ತಿದ್ದಾರೆ. ಹಲವು ಸವಾಲುಗಳಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದಾರೆ. ಸರ್ಕಾರ ಶಿಕ್ಷಕರಿಗೆ ಮತ್ತು ಶಾಲೆಗಳಿಗೆ ಅಗತ್ಯ ಮೂಲಭೂತ ಅವಶ್ಯಕತೆ ಪೂರೈಸುವಲ್ಲಿ ಸರ್ಕಾರಕ್ಕೆ ಒತ್ತಡ ತರಬೇಕು. ಶಿಕ್ಷಕರು ಕೂಡ ಸಿಕ್ಕಿರುವ ಅವಕಾಶ ಸದ್ಬಳಕೆ ಮಾಡಿಕೊಂಡು ತಾಲೂಕಿನ ಅಭಿವೃದ್ಧಿಗೆ ಶ್ರಮಿಸುವ ಮೂಲಕ ಉತ್ತಮ ಹೆಸರನ್ನು ಸಂಪಾದಿಸಿಕೊಳ್ಳುವಂತೆ ತಿಳಿಸಿದರು.
ಇದಕ್ಕೂ ಮುನ್ನಾ ಡಾ.ರಾಧಾಕೃಷ್ಣ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಿತು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಶಿಕ್ಷಕರು ಸಂಭ್ರಮದಿಂದ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಜನಪದ ವಾದ್ಯ, ಗೊಂಬೆ ಕುಣಿತ ಸೇರಿದಂತೆ ವಿವಿಧ ಕಲಾವಿದರು ಮೆರವಣಿಗೆಗೆ ಇಂಬು ನೀಡಿದರು. ಮೆರವಣಿಗೆಯುದ್ದಕ್ಕೂ ಶಾಸಕರು ಶಿಕ್ಷಕರೊಟ್ಟಿಗೆ ಹೆಜ್ಜೆ ಹಾಕಿದರು. ಅಲ್ಲದೆ ಕಳಸ ಹಿಡಿದ ಶಾಲಾ ಮಕ್ಕಳು ಮೆರವಣಿಗೆಯಲ್ಲಿ ನೋಡುಗರ ಗಮನ ಸೆಳೆದರು.ಈ ವೇಳೆ ತಹಸೀಲ್ದಾರ್ ಜಗದೀಶ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಾಗವೇಣಿ ರವಿಕುಮಾರ್, ಉಪಾಧ್ಯಕ್ಷೆ ಅನಿತಾ ಜಯಕುಮಾರ್, ತಾಲೂಕು ಪಂಚಾಯಿತಿ ಇಒ ಎಚ್.ಹನುಮಂತಪ್ಪ, ಪಶು ಇಲಾಖೆ ಎ.ಡಿ ಡಾ.ರಂಗಪ್ಪ, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಅಬ್ದುಲ್ ಸುಬಾನ್ ಸಾಬ್, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಡಿ.ಮಂಜುನಾಥ, ಕಸಾಪ ಅಧ್ಯಕ್ಷ ಜಿಂಕಾ ಶ್ರೀನಿವಾಸ್, ಬಿಆರ್‌ಸಿ ತಿಪ್ಪೇಸ್ವಾಮಿ, ತಾಲೂಕು ನೌಕರ ಸಂಘದ ಅಧ್ಯಕ್ಷ ಈರಣ್ಣ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಅಶೋಕ, ಉಪಾಧ್ಯಕ್ಷ ಒಂಕಾರಮ್ಮ, ಕಾರ್ಯದರ್ಶಿ ಪ್ರದೀಪ್ ಕುಮಾರ್, ಡಿ.ಎಸ್.ರಾಜಣ್ಣ, ಟಿ.ಎಂ.ಅಶೋಕ್, ಸುಜಾತ, ಲತಾ.ಜಿ ಬಿ.ಮಮತಾ, ಇಸಿಒ ಲೋಹಿತ್, ಮಂಜುನಾಥ್, ಇದ್ದರು.