ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ ಹಾವೇರಿಯಲ್ಲಿ ಪುತ್ರ ಕೆ.ಇ. ಕಾಂತೇಶ್‌ಗೆ ಟಿಕೆಟ್ ಸಿಗುವುದು ಖಚಿತ. ಸ್ವತಃ ಬಿ.ಎಸ್. ಯಡಿಯೂರಪ್ಪ ಅವರೇ ಕಾಂತೇಶ್‌ಗೆ ಟಿಕೆಟ್ ನೀಡುವುದು ಮಾತ್ರವಲ್ಲ, ಗೆಲ್ಲಿಸಿಕೊಂಡು ಬರುವ ಭರವಸೆ ನೀಡಿದ್ದಾರೆ. ಅವರು ಮಾತಿಗೆ ಎಂದೂ ತಪ್ಪುವರಲ್ಲ. ಹೀಗಾಗಿ, ಟಿಕೆಟ್ ವಿಚಾರದಲ್ಲಿ ಯಾವುದೇ ಆತಂಕ ಇಲ್ಲ ಎಂದು ಮಾಜಿ ಉಪ ಮುಖ್ಯಮಂತ್ರಿ, ಬಿಜೆಪಿ ನಾಯಕ ಕೆ. ಎಸ್. ಈಶ್ವರಪ್ಪ ಆತ್ಮವಿಶ್ವಾಸ ವ್ಯಕ್ತಪಡಿಸಿದರು.
"ಕನ್ನಡಪ್ರಭ "ದೊಂದಿಗೆ ಮಾತನಾಡಿದ ಅವರು, ನಾನು ಮತ್ತು ಕಾಂತೇಶ್ ಜೊತೆಗೂಡಿ ಯಡಿಯೂರಪ್ಪ ಅವರ ಮನೆಗೆ ಹೋದ ಸಂದರ್ಭದಲ್ಲಿ ಹಾವೇರಿಯಿಂದ ಕಾಂತೇಶ್‌ಗೆ ಟಿಕೆಟ್ ಕೊಡಿಸಿ, ಕ್ಷೇತ್ರದಲ್ಲಿ ಓಡಾಡಿ, ಗೆಲ್ಲಿಸಿಕೊಂಡು ಬರುವುದು ನನ್ನ ಜವಾಬ್ದಾರಿ ಎಂದು ಸ್ಪಷ್ಟ ಮಾತುಗಳಲ್ಲಿ ತಿಳಿಸಿದ್ದರು. ಅವರು ಎಂದಿಗೂ ಮಾತಿಗೆ ತಪ್ಪುವರಲ್ಲ. ಬದಲಾಗಿ ಮಾತನ್ನು ಉಳಿಸಿಕೊಳ್ಳುತ್ತಾರೆ. ಹೀಗಾಗಿ ಟಿಕೆಟ್ ತಪ್ಪುತ್ತದೆ ಎಂಬ ಮಾತೇ ಇಲ್ಲ ಎಂದರು.ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಕಾಂತೇಶ್ ಸಾಕಷ್ಟು ಕೆಲಸ ಮಾಡಿದ್ದಾನೆ. ಇಡೀ ಕ್ಷೇತ್ರದಲ್ಲಿ ಹಲವಾರು ಬಾರಿ ಓಡಾಡಿ ಪಕ್ಷ ಸಂಘಟನೆ ಮಾಡಿದ್ದಾನೆ. ಕ್ಷೇತ್ರದ ನಾಯಕರು, ಕಾರ್ಯಕರ್ತರು ಯುವಕನಾಗಿರುವ ಕಾಂತೇಶ್‌ನಂತಹ ವ್ಯಕ್ತಿ ಬೇಕು ಎಂದು ಹೇಳುತ್ತಿದ್ದಾರೆ. ಚುನಾವಣೆಯಯಲ್ಲಿ ನಿರೀಕ್ಷೆ ಮೀರಿ ಗೆಲ್ಲುವುದು ಗ್ಯಾರಂಟಿ ಎಂದು ಹೇಳಿದರು.ದೃಶ್ಯ ಮಾಧ್ಯಮದಲ್ಲಿ ಏನೇನೋ ಸುದ್ದಿಗಳು ಬಂದ ಬಳಿಕ ಅನೇಕ ನಾಯಕರು, ಬಹುತೇಕ ಹಿಂದುಳಿದ ವರ್ಗದ ಮಠಾಧೀಶರು ಕರೆ ಮಾಡಿ ನಾವು ಜೊತೆಗಿದ್ದೇವೆ ಎಂದು ಹೇಳಿದ್ದಾರೆ. ಮಾಧ್ಯಮಗಳ ಸುದ್ದಿಯಿಂದ ಆತಂಕಕ್ಕೆ ಒಳಗಾಗಿದ್ದಾರೆ. ಆದರೆ, ಇವೆಲ್ಲ ಸುಳ್ಳು ಸುದ್ದಿ ಎಂದು ನಾನು ಹೇಳಿದ್ದೇನೆ. ಟಿಕೆಟ್ ಖಚಿತ ಎಂದು ಕೂಡ ತಿಳಿಸಿದ್ದೇನೆ ಎಂದರು. ಅನೇಕ ಕೇಂದ್ರ ನಾಯಕರ ಭೇಟಿ:
ಈ ಮೊದಲು ನಾನು ಅನೇಕ ಕೇಂದ್ರ ನಾಯಕರನ್ನು ಭೇಟಿ ಮಾಡಿದ್ದೇನೆ. ಆಗೆಲ್ಲ ಅವರು ಟಿಕೆಟ್ ಕುರಿತು ಸ್ಪಷ್ಟ ಭರವಸೆ ನೀಡಿದ್ದಾರೆ. ವಿಜಯೇಂದ್ರ ಪಕ್ಷದ ರಾಜ್ಯಾಧ್ಯಕ್ಷರಾದ ವೇಳೆ ಭೇಟಿ ಮಾಡಿದ ಸಂದರ್ಭದಲ್ಲಿಯೂ ಅವರು ಕೂಡ ಟಿಕೆಟ್ ನೀಡುವುದರಲ್ಲಿ ಪಕ್ಷ ಸಹಮತ ಹೊಂದಿದೆ ಎಂದಿದ್ದರು. ಈ ಹಿಂದೆ ನಾನು ಕೇಂದ್ರ ನಾಯಕರ ಸೂಚನೆ ಅನ್ವಯ ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿದಾಗ ನನ್ನ ಪಕ್ಷನಿಷ್ಠೆಗೆ ಹಿರಿಯ ನಾಯಕರು ಮೆಚ್ಚುಗೆ ಸೂಚಿಸಿದ್ದರು. ಸ್ವತಃ ಪ್ರಧಾನಿ ನರೇಂದ್ರ ಮೋದಿ ಕರೆ ಮಾತನಾಡಿ ಅಭಿನಂದಿಸಿದರು. ಈ ಬಾರಿ ಟಿಕೆಟ್ ವಿಚಾರದಲ್ಲಿ ಸಂಘ ಪರಿವಾರದ ಜೊತೆಗೆ ಇವರೆಲ್ಲ ಸೇರಿ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಈಶ್ವರಪ್ಪ ಹೇಳಿದರು.ಟಿಕೆಟ್ ಸಿಗದಿದ್ದರೆ ಮುಂದಿನ ನಡೆ ಏನು ಎಂಬ ಪ್ರಶ್ನೆಗೆ ಆಗ ಉತ್ತರಿಸುತ್ತೇನೆ. ಟಿಕೆಟ್ ಸಿಗುತ್ತದೆ ಎಂಬ ಭರವಸೆ ಇರುವ ಹೊತ್ತಿನಲ್ಲಿ ಊಹಾಪೋಹದ ಮಾತುಗಳು ಯಾಕೆ ಎಂದು ಮರುಪ್ರಶ್ನಿಸಿದರು.
- - - -ಫೋಟೋ: ಕೆ.ಎಸ್. ಈಶ್ವರಪ್ಪ