ಸುದ್ದಿಗೋಷ್ಠಿಯಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಬಿ.ಟಿ.ಜಗದೀಶ್ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೋಮವಾರ ವಿಸ್ತರಿಸಿರುವ ತಮ್ಮ ಸಂಪುಟದಲ್ಲಿ ಕುರುಬ ಸಮುದಾಯಕ್ಕೆ ಸೂಕ್ತ ಪ್ರಾತಿನಿಧ್ಯ ನೀಡಲಾಗಿಲ್ಲ. ಬಾಕಿ ಇರುವ ಒಂದು ಸ್ಥಾನವ ಹೊಸದುರ್ಗ ಶಾಸಕ ಬಿ.ಜಿ.ಗೋವಿಂದಪ್ಪ ಅವರಿಗೆ ನೀಡಬೇಕೆಂದು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಹಾಗೂ ಜಿಲ್ಲಾ ಕುರುಬರ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಟಿ.ಜಗದೀಶ್ ಆಗ್ರಹಿಸಿದ್ದಾರೆ.

ಇಲ್ಲಿನ ಪತ್ರಕರ್ತರ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಳ್ಳಕೆರೆ ಶಾಸಕ ರಘುಮೂರ್ತಿ ಅವರಿಗೆ ಅವಕಾಶ ಕಲ್ಪಿಸಿರುವುದ ಸ್ವಾಗತಿಸುತ್ತೇವೆ. ಅದೇ ರೀತಿ ಗೋವಿಂದಪ್ಪ ಅವರನ್ನು ಸಚಿವರನ್ನಾಗಿ ಮಾಡಬೇಕೆಂಬುದು ತಮ್ಮ ಆಗ್ರಹವೆಂದರು.

ಕುರುಬ ಸಮುದಾಯದ ಜನಸಂಖ್ಯೆಗೆ ಅನುಗುಣವಾಗಿ ಸರ್ಕಾರದಲ್ಲಿ ಸೂಕ್ತ ಪಾಲು ಹಾಗೂ ಪ್ರಾತಿನಿಧ್ಯ ಸಿಕ್ಕಿಲ್ಲ. ಸಂಪುಟ ವಿಸ್ತರಣೆಯ ಕೊನೆಯ ಕ್ಷಣದವರೆಗೂ ಗಾಯತ್ರಿ ಶಾಂತೇಗೌಡ ಅವರ ಹೆಸರು ಕೇಳಿಬಂದರೂ ಅವರಿಗೆ ಪ್ರಮಾಣವಚನ ಸ್ವೀಕರಿಸಲು ಅವಕಾಶ ಸಿಗಲಿಲ್ಲ. ಇದರಿಂದ ಇಡೀ ಕುರುಬ ಸಮುದಾಯಕ್ಕೆ ಅನ್ಯಾಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕ ಹಾಗೂ ಮಧ್ಯ ಕರ್ನಾಟಕ ಭಾಗಗಳಲ್ಲಿ ಕುರುಬ ಜನಾಂಗದ ಜನಸಂಖ್ಯೆ ಅತ್ಯಧಿಕವಾಗಿದ್ದು, ಈ ಭಾಗಗಳಿಗೆ ಹೆಚ್ಚಿನ ಆದ್ಯತೆ ದೊರೆಯಬೇಕಿತ್ತು. ನಾಲ್ಕು ಬಾರಿ ಹೊಸದುರ್ಗ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿ, ಆಡಳಿತ ಅನುಭವ ಹೊಂದಿರುವ ಹಾಗೂ ಕಾಗಿನೆಲೆ ಕನಕಗುರು ಪೀಠದ ಆಡಳಿತಾಧಿಕಾರಿಯಾಗಿ ಸೇವೆ ಸಲ್ಲಿಸಿರುವ ಹಿರಿಯ ರಾಜಕಾರಣಿ ಬಿ.ಜಿ.ಗೋವಿಂದಪ್ಪ ಅವರಿಗೆ ಸಚಿವ ಸಂಪುಟದಲ್ಲಿ ಉಳಿದಿರುವ ಸ್ಥಾನ ಕಲ್ಪಿಸಬೇಕು. ಬರುವ ದಿನಗಳಲ್ಲಿ ನಿಗಮ, ಮಂಡಳಿ ಹಾಗೂ ಪ್ರಾಧಿಕಾರಗಳ ಎರಡನೇ ಅವಧಿಯ ನೇಮಕಾತಿಯಲ್ಲಿಯೂ ಜನಸಂಖ್ಯೆಗೆ ಅನುಗುಣವಾಗಿ ಕುರುಬ ಸಮುದಾಯಕ್ಕೆ ಹೆಚ್ಚಿನ ಸ್ಥಾನಗಳನ್ನು ನೀಡಬೇಕು ಎಂದು ಆಗ್ರಹಿಸಿದರು.

ಕುರುನ ಸಂಘದ ಗೌರವಾಧ್ಯಕ್ಷ, ನಗರಸಭೆಯ ಮಾಜಿ ಅಧ್ಯಕ್ಷ ಎಚ್.ಮಂಜಪ್ಪ ಮಾತನಾಡಿ, ಜಿಲ್ಲಾ ಕುರುಬ ಸಮಾಜ ಗೋವಿಂದಪ್ಪ ಪರವಾಗಿ ನಿಂತಿದೆ. ಮುಂದಿನ ದಿನದಲ್ಲಿ ಸಚಿವ ಸ್ಥಾನ ಸಿಗಲಿದೆ ಎಂಬ ಆಶಾ ಭಾವನೆ ಇದೆ. ಈಗಿನ ಡಿ.ಕೆ.ಶಿವಕುಮಾರ್ ಸಚಿವ ಸಂಪುಟದಲ್ಲಿ ಲಿಂಗಾಯತ ಸಮುದಾಯ ದಿಂದ 7 ಜನ, ಒಕ್ಕಲಿಗರಿಂದ 6 ಎಸ್‌ಸಿ, ಎಸ್‌ಟಿಯಿಂದ 7 ಜನ ಹಾಗೂ ಮುಸ್ಲಿಂ ಸಮುದಾಯದಿಂದ 3 ಜನ ಸಚಿವರಾಗಿದ್ದಾರೆ. ರಾಜ್ಯದಲ್ಲಿ ಜನಸಂಖ್ಯೆಯಲ್ಲಿ ಮೂರಷ್ಟು ಇರುವ ಕುರುಬ ಸಮುದಾಯಕ್ಕೆ ಬರೀ 2 ಸಚಿವ ಸ್ಥಾನವನ್ನು ಮಾತ್ರ ನೀಡಲಾಗಿದೆ. ಅವರು ಸಹಾ ಮೈಸೂರು ಮಂಡ್ಯಕ್ಕೆ ಸೀಮಿತವಾಗಿದ್ದಾರೆ.ಮಧ್ಯ ಕರ್ನಾಟಕಕ್ಕೆ ನಮ್ಮ ಸಮುದಾಯದವರು ಯಾರು ಇಲ್ಲದಂತೆ ಆಗುತ್ತಿದೆ ಎಂದರು.

ಕುರುಬ ಸಂಘದ ಮಾಜಿ ಕಾರ್ಯದರ್ಶಿ ಮಲ್ಲಿಕಾರ್ಜನ್ ಮಾತನಾಡಿ, ಕುರುಬ ಸಮಾಜ ತಾಳ್ಮೆಯಿಂದ ಕಾಯುತ್ತಿದೆ. ನಮ್ಮ ಪಾಲಿನ ಸಚಿವ ಸ್ಥಾನವನ್ನು ನೀಡಲೇ ಬೇಕಿದೆ. ಇದರ ಬಗ್ಗೆ ಪಕ್ಷದ ಮುಖಂಡರ ಗಮನ ಸೆಳೆಯಲಾಗುವುದು. ಒಂದು ಸಲ ಶಾಸಕರಾದವರಿಗೆ ಮಂತ್ರಿ ಸ್ಥಾನವನ್ನು ನಿಡಲಾಗಿದೆ. 4 ಭಾರಿ ಶಾಸಕರಾದವರಿಗೆ ಏಕಿಲ್ಲವೆಂದು ಪ್ರಶ್ನಿಸಿದರು.

ಕುರುಬ ಸಂಘದ ಖಂಜಾಚಿ ಮೃತ್ಯುಂಜಯ, ನಿದೇಶಕರಾದ ಸುರೇಶ್, ಚಿತ್ರದುರ್ಗ ತಾಲೂಕು ಸಂಘದ ಕಾರ್ಯದರ್ಶಿ ರಾಜು, ಉಪಾಧ್ಯಕ್ಷ ಉಮೇಶ್, ಮುಖಂಡರಾದ ಓಂಕಾರಪ್ಪ, ಸಂಪತ್ ಕುಮಾರ್, ಮಾಳೇಶ್ ಇದ್ದರು.