ಗ್ರಾಮದ ಎರಡು ಎಕರೆ ಜಮೀನನ್ನು ಕೆಪಿಎಸ್ ಶಾಲೆಗಾಗಿ ಕಾಯ್ದಿರಿಸಲಾಗಿದೆ
ಹಗರಿಬೊಮ್ಮನಹಳ್ಳಿ: ಶತಮಾನೋತ್ಸವ ಆಚರಿಸುತ್ತಿರುವ ಬೆಣ್ಣಿಕಲ್ಲು ಗ್ರಾಮದ ಸರ್ಕಾರಿ ಶಾಲೆಯನ್ನು ಮೇಲ್ದರ್ಜೆಗೇರಿಸಲು ಶಾಸಕರ ಅನುದಾನದ ಇಂಗ್ಲೀಷ್ ಮಾಧ್ಯಮದಲ್ಲಿ ಎಲ್‌ಕೆಜಿಯಿಂದ ಪಿಯುಸಿವರೆಗಿನ ಕಲಿಕೆಗೆ ನೆರವಾಗುವ ಕೆಪಿಎಸ್ ಶಾಲೆ ಪ್ರಾರಂಭಿಸಲಾಗುತ್ತದೆ. ಈ ನಿಟ್ಟಿನಲ್ಲಿ ಗ್ರಾಮದ ಎರಡು ಎಕರೆ ಜಮೀನನ್ನು ಕೆಪಿಎಸ್ ಶಾಲೆಗಾಗಿ ಕಾಯ್ದಿರಿಸಲಾಗಿದೆ ಎಂದು ಶಾಸಕ ನೇಮರಾಜ ನಾಯ್ಕ ತಿಳಿಸಿದರು.
ತಾಲೂಕಿನ ಬೆಣ್ಣಿಕಲ್ಲು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಸಮಾರಂಭವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.ತಾಲೂಕಿನ ಕೋಗಳಿ ಮತ್ತು ಮೋರಗೇರಿಯಲ್ಲಿ ಈಗಾಗಲೇ ಕೆಪಿಎಸ್ ಶಾಲೆಗಳು ಕಾರ್ಯ ನಿರ್ವಹಿಸುತ್ತಿದ್ದು, ಈ ಸಾಲಿನಿಂದ ಮಾದೂರು, ವರದಾಪುರ, ರಾರಾಳು ತಾಂಡಾ ಮತ್ತು ಚಿಲಗೋಡು ಗ್ರಾಮಗಳಲ್ಲಿ ಮತ್ತು ಮುಂದಿನ ದಿನಗಳಲ್ಲಿ ಇನ್ನು ಹಲವು ಗ್ರಾಮಗಳಲ್ಲಿ ಬಡವರು, ರೈತರು ಮತ್ತು ಕೂಲಿ ಕಾರ್ಮಿಕರ ಮಕ್ಕಳಿಗಾಗಿಯೇ ಪ್ರಾಥಮಿಕ ಹಂತದ ಇಂಗ್ಲೀಷ್ ಕಲಿಕೆಗೆ ನೆರವಾಗಲು ಕೆಪಿಎಸ್ ಶಾಲೆಗಳನ್ನು ಪ್ರಾರಂಭಿಸಲಾಗುತ್ತದೆ ಎಂದು ಹರ್ಷ ವ್ಯಕ್ತಪಡಿಸಿದರು.
ಪೋಷಕರು ಖಾಸಗಿ ಶಾಲೆಗಳ ವ್ಯಾಮೋಹ ತೊರೆದು ಅಗತ್ಯ ಮೂಲಭೂತ ಸೌಲಭ್ಯಗಳನ್ನೊಳಗೊಂಡ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಬೇಕು ಎಂದು ಅವರು ಮನವಿ ಮಾಡಿದರು.ಸಮಾರಂಭದ ಸಾನ್ನಿಧ್ಯ ವಹಿಸಿದ್ದ ಕಡ್ಲಬಾಳು ಶಾಖಾ ಗವಿಮಠದ ಮರಿ ಶಾಂತವೀರ ಶ್ರೀಗಳು ಮತ್ತು ಹಂಪಸಾಗರ ನವಲಿ ಹಿರೇಮಠದ ರುದ್ರಮುನಿ ಶಿವಾಚಾರ್ಯ ಶ್ರೀಗಳು ಆಶೀರ್ವಚನ ನೀಡಿದರು.
ಬಿಇಒ ಎಂ.ಎಸ್. ಪ್ರಭಾಕರ್, ಕ್ಷೇತ್ರ ಸಮನ್ವಯಾಧಿಕಾರಿ ಮಲ್ಲಿಕಾರ್ಜುನ, ಗ್ರಾಪಂ ಮಾಜಿ ಅಧ್ಯಕ್ಷೆ ಲಕ್ಷ್ಮವ್ವ ಹೇಮಪ್ಪ, ಎಸ್‌ಡಿಎಂಸಿ ಅಧ್ಯಕ್ಷ ಗುರುಬಸವರಾಜ್, ಜೆಡಿಎಸ್ ಜಿಲ್ಲಾಧ್ಯಕ್ಷ ಬಾದಾಮಿ ಮೃತ್ಯುಂಜಯ, ತಾಲೂಕು ಅಧ್ಯಕ್ಷ ವೈ.ಮಲ್ಲಿಕಾರ್ಜುನ, ಮುಖಂಡರಾದ ಕನ್ನಿಹಳ್ಳಿ ಚಂದ್ರಶೇಖರ್, ಸಿ.ಎಚ್. ಸಿದ್ದರಾಜ್, ಎನ್.ಬಸವರಾಜ್, ತಾಪಂ ಮಾಜಿ ಸದಸ್ಯ ಬೆಣಕಲ್ ಪ್ರಕಾಶ್ ಇದ್ದರು.ಶಾಲಾ ವಾರ್ಷಿಕೋತ್ಸವ ಸಮಿತಿಯ ಅಧ್ಯಕ್ಷ ಹಾಗೂ ಮುಖ್ಯ ಗುರು ಕೆ.ಕೊಟ್ರೇಶಪ್ಪ, ಶಿಕ್ಷಕ ಲೋಕೇಶ್, ಶಾರದಾ ಮಂಜುನಾಥ್ ನಿರ್ವಹಿಸಿದರು.