ಹುಬ್ಬಳ್ಳಿ-ಧಾರವಾಡ ನೀರಿನ ಕರ ನಮಗೆ ಕೊಡಿ

| Published : Feb 13 2024, 12:46 AM IST

ಸಾರಾಂಶ

ಮಲಪ್ರಭಾ ಡ್ಯಾಂನಿಂದ ಸಂಗ್ರಹವಾಗುವ ನೀರಿನ ಕರವನ್ನು ಇಷ್ಟು ದಿನ ಎಷ್ಟು ಸಂಗ್ರಹಿಸಿದ್ದಾರೋ ಅದನ್ನು ರೈತರಿಗೆ ನೀಡಲಿ ಎಂದು ರೈತ ಸಂಘಟನೆಗಳು ಆಗ್ರಹಿಸಿವೆ.

ಹುಬ್ಬಳ್ಳಿ: ಮಹದಾಯಿ, ಕಳಸಾ- ಬಂಡೂರಿ ತಿರುವು ನಾಲಾ ಯೋಜನೆಗೆ ವನ್ಯಜೀವಿ ಮಂಡಳಿ ನಿರಾಕರಿಸಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಮಹದಾಯಿ ಹೋರಾಟಗಾರರು, ಇದೀಗ ಮಲಪ್ರಭಾ ಡ್ಯಾಮಿನಿಂದ ಹುಬ್ಬಳ್ಳಿ-ಧಾರವಾಡಕ್ಕೆ ಪೂರೈಕೆಯಾಗುವ ಕುಡಿವ ನೀರಿನ ಕರವನ್ನು ರೈತರಿಗೆ ಕೊಡಿ. ಮಹದಾಯಿ ನೀರು ಬಂದ ಬಳಿಕ ರೈತರಿಗೆ ಕರ ಕೊಡುವುದನ್ನು ನಿಲ್ಲಿಸಲಿ ಎಂಬ ಬೇಡಿಕೆಯನ್ನು ಮುಂದಿಟ್ಟಿದ್ದಾರೆ. ಈ ಸಂಬಂಧ ಹೈಕೋರ್ಟ್‌ ಮೊರೆ ಹೋಗಲು ಸಿದ್ಧತೆ ನಡೆಸಿದ್ದಾರೆ.

ಇಲ್ಲಿನ ಸರ್ಕ್ಯೂಟ್‌ ಹೌಸ್‌ನಲ್ಲಿ ಮಲಪ್ರಭಾ ಅಚ್ಚುಕಟ್ಟು ಪ್ರದೇಶಗಳ ರೈತರ ಸಭೆ ನಡೆಸಿರುವ ರೈತಸೇನಾ ಕರ್ನಾಟಕ, ಈ ಸಂಬಂಧ ತೀರ್ಮಾನ ಕೈಗೊಂಡಿದೆ. ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರೈತಸೇನಾದ ಅಧ್ಯಕ್ಷ ವೀರೇಶ ಸೊಬರದಮಠ, ಸವದತ್ತಿಯಲ್ಲಿ ಮಲಪ್ರಭಾ ನದಿಗೆ ಡ್ಯಾಮ್‌ ಕಟ್ಟಲಾಗಿದೆ. ಡ್ಯಾಮ್‌ ಕಟ್ಟುವಾಗ ಈ ನೀರನ್ನು ಬರೀ ಕೃಷಿಗೆ ಮಾತ್ರ ಬಳಸಲಾಗುತ್ತದೆ ಎಂದು ಡಿಪಿಆರ್‌ನಲ್ಲಿ ಸೇರಿಸಲಾಗಿದೆ ಎಂದರು.

ಆದರೆ, ಆಗಿನಿಂದಲೂ ಹುಬ್ಬಳ್ಳಿ-ಧಾರವಾಡಕ್ಕೆ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ಹಾಗಂತ ನಾವು ಹುಬ್ಬಳ್ಳಿ-ಧಾರವಾಡ ಜನರ ವಿರೋಧಿಗಳಲ್ಲ. ಇವು ನಮ್ಮ ನಗರಗಳೇ. ನಾವೇನು ಕುಡಿಯುವ ನೀರು ಪೂರೈಕೆಗೆ ವಿರೋಧಿಸುವುದಿಲ್ಲ. ಆದರೆ, ಇಲ್ಲಿ ಸಂಗ್ರಹವಾಗುವ ನೀರಿನ ಕರವನ್ನು ಇಷ್ಟು ದಿನ ಎಷ್ಟು ಸಂಗ್ರಹಿಸಿದ್ದಾರೋ ಅದನ್ನು ರೈತರಿಗೆ ನೀಡಲಿ ಎಂದು ಆಗ್ರಹಿಸಿದರು.

ಏಕೆಂದರೆ ಇಲ್ಲಿ ಕುಡಿಯುವುದಕ್ಕಾಗಿ ಪೂರೈಕೆ ಮಾಡುತ್ತಿರುವುದರಿಂದ ರೈತರ ಎರಡನೆಯ ಬೆಳೆಗಳಿಗೆ ನೀರು ಸಿಗುತ್ತಿಲ್ಲ. ಅದರಿಂದ ಎರಡನೆ ಬೆಳೆ ಪಡೆಯಲು ಸಾಧ್ಯವಾಗದೇ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ. ಆದಕಾರಣ ನೀರಿನ ಕರವನ್ನು ನಮಗೆ ಕೊಡಲಿ. ನಾವು ಅದರಿಂದ ನಷ್ಟ ಸರಿದೂಗಿಸಿಕೊಳ್ಳುತ್ತೇವೆ. ಜತೆಗೆ ಪರಿಸರ ರಕ್ಷಣೆ ಕುರಿತಂತೆಯೂ ಕೆಲವೊಂದಿಷ್ಟು ಕೆಲಸಗಳನ್ನು ಮಾಡುತ್ತೇವೆ ಎಂದು ನುಡಿದರು.

ಏಕೆ ಈ ಬೇಡಿಕೆ

ಹುಬ್ಬಳ್ಳಿ-ಧಾರವಾಡ ಸೇರಿದಂತೆ ಕೆಲ ಪಟ್ಟಣಗಳ ಕುಡಿಯುವುದಕ್ಕಾಗಿ ಮಹದಾಯಿಯಿಂದ 4 ಟಿಎಂಸಿ ನೀರು ಮಂಜೂರಾಗಿದೆ. ಆದರೆ, ವಿನಾಕಾರಣ ರಾಜಕಾರಣ ಮಾಡುತ್ತಾ ಯೋಜನೆ ಜಾರಿಯಾಗದಂತೆ ತಡೆಯುವ ಪ್ರಯತ್ನ ನಡೆಯುತ್ತಿದೆ. ವನ್ಯಜೀವಿ ವಿಷಯವಾಗಿ ಯಾವುದೇ ಸಮಸ್ಯೆಯಾಗದಿದ್ದರೂ, ಕೋರ್ಟ್‌ನಲ್ಲಿ ಈ ವಿಷಯವೇ ಇಲ್ಲದಿದ್ದರೂ ಅನುಮತಿ ಕೊಡುತ್ತಿಲ್ಲ ಎಂದರೆ ದೊಡ್ಡ ರಾಜಕಾರಣವೇ ಅಡಗಿದೆ. ಗೋವಾದ ಇಬ್ಬರು ಎಂಪಿ ಸ್ಥಾನಕ್ಕಾಗಿ ಈ ರೀತಿ ಮಾಡುತ್ತಿದ್ದಾರೆ. ಇಲ್ಲಿ 28 ಜನ ಎಂಪಿಗಳಿದ್ದಾರೆ ಎಂಬುದನ್ನು ಕೇಂದ್ರ ಸರ್ಕಾರ ಮರೆತಿದೆ ಎಂದು ಕಿಡಿಕಾರಿದರು.

ಅದಕ್ಕಾಗಿ ಮಹದಾಯಿ ನೀರು ತರಲಿ ಎಂಬುದನ್ನು ಆಗ್ರಹಿಸುವುದಕ್ಕಾಗಿ ಈ ಬೇಡಿಕೆಯನ್ನು ಮುಂದಿಟ್ಟಿದ್ದೇವೆ. ಇದಕ್ಕಾಗಿ ಹೈಕೋರ್ಟ್‌ಗೂ ಪಿಐಎಲ್‌ ಹಾಕುತ್ತೇವೆ. ಮಹದಾಯಿ ನೀರು ಬಂದರೆ ಇತ್ತ ಕೃಷಿಗೂ ಅನುಕೂಲ, ಅತ್ತ ಕುಡಿಯುವ ನೀರಿಗೂ ಸಮಸ್ಯೆ ಇರಲ್ಲ ಎಂದರು.

ಸಚಿವರ ಭೇಟಿ

ಈ ನಡುವೆ ವನ್ಯಜೀವಿ ಮಂಡಳಿ ನಿರಾಕರಿಸಿದ್ದಕ್ಕೆ ಅರಣ್ಯ ಸಚಿವ ಭೂಪೇಂದ್ರ ಅವರನ್ನು ಭೇಟಿಯಾಗಿ ಮನವರಿಕೆ ಮಾಡಿಕೊಡಲು ಯತ್ನಿಸುತ್ತೇವೆ. ಈ ಸಂಬಂಧ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಅವರೊಂದಿಗೂ ಚರ್ಚೆ ನಡೆಸಿದ್ದೇವೆ. ಅವರು ಇದೇ ತಿಂಗಳು 18 ಹಾಗೂ 19ರಂದು ದೆಹಲಿಗೆ ಹೋಗುವುದಾಗಿ ಹೇಳಿದ್ದಾರೆ. ಅಲ್ಲಿ ಭೂಪೇಂದ್ರ ಅವರ ಭೇಟಿಗೆ ಪ್ರಯತ್ನಿಸಲಿದ್ದಾರೆ. ಒಂದು ವೇಳೆ ಭೇಟಿಗೆ ಅವಕಾಶ ಸಿಕ್ಕರೆ ವನ್ಯಜೀವಿಗಳಿಗೆ ಈ ಯೋಜನೆಯಿಂದ ಸಮಸ್ಯೆಯಾಗಲ್ಲ. ಅನುಮತಿ ಕೊಡಿ ಎಂದು ಮನವರಿಕೆ ಮಾಡಿಕೊಡಲು ಯತ್ನಿಸುತ್ತೇವೆ ಎಂದರು.

ಸುದ್ದಿಗೋಷ್ಠಿಯಲ್ಲಿ ಬಿ.ಎಂ. ಹೊರಕೇರಿ ಅವರ ಪುತ್ರ ಶಿವಪ್ಪ ಹೊರಕೇರಿ, ಮಲ್ಲಪ್ಪ, ಶಿವಾನಂದ ಜವಳಿ, ಗಂಗಾಧರ, ಖಂಡೋಬಾ ಕಳಸಣ್ಣವರ, ಗುರುಶಾಂತಗೌಡ ಪಾಟೀಲ, ಎಸ್‌.ಬಿ. ಜೋಗಣ್ಣವರ, ಹೇಮಕ್ಕ ಗಾಳಿ ಸೇರಿದಂತೆ ಹಲವರಿದ್ದರು.

ಜಮೀನು ನಮಗೆ ನೀಡಲಿ

ನರಗುಂದದಲ್ಲಿ ನೀರಾವರಿ ಇಲಾಖೆಗೆ ಸೇರಿರುವ 4 ಎಕರೆ ಜಮೀನಿದೆ. ಅದರಲ್ಲಿ ಈಗಾಗಲೇ 2 ಎಕರೆ ಬೇರೆಯವರಿಗೆ ನೀಡಲಾಗಿದೆ. ಇನ್ನುಳಿದ ಎರಡು ಎಕರೆಯನ್ನು ರೈತರಿಗೆ ನೀಡಬೇಕು. ರೈತ ಸಮುದಾಯ ಭವನ ನಿರ್ಮಿಸಬೇಕು. ಅಲ್ಲಿ ಹುತಾತ್ಮರಾದ ರೈತರ ಪುತ್ಥಳಿಗಳನ್ನು ನಿರ್ಮಿಸಬೇಕು. ಈ ನಿಟ್ಟಿನಲ್ಲಿ ಈ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಬೇಕು ಎಂದು ರೈತ ಸೇನಾ ಕರ್ನಾಟಕದ ಅಧ್ಯಕ್ಷ ವೀರೇಶ ಸೊಬರದಮಠ ಆಗ್ರಹಿಸಿದರು.