ಸಾರಾಂಶ
ಕನ್ನಡ ಪ್ರಭ ವಾರ್ತೆ ತಿಪಟೂರು
ಮಗುವಿನ ಆರೋಗ್ಯ ಸುಧಾರಣೆಗೆ ತಾಯಿಯ ಎದೆ ಹಾಲು ಅತ್ಯಂತ ಶ್ರೇಷ್ಠಕರವಾಗಿದ್ದು ಮಗುವಿಗೆ ಎದೆಹಾಲು ನೀಡುವುದರಿಂದ ತಾಯಿಯ ಸೌಂದರ್ಯ ಮಾಸುತ್ತದೆ ಎಂಬ ಮೂಢನಂಬಿಕೆಯಿಂದ ತಾಯಂದಿರು ಹೊರಬರಬೇಕೆಂದು ತಾಲೂಕಿನ ಕೊನೇಹಳ್ಳಿಯ ಆಯುಷ್ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಸುಮನಾ ತಿಳಿಸಿದರು.ತಾಲೂಕಿನ ಕೊನೇಹಳ್ಳಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಹಾಗೂ ಆಯುಷ್ ಆಸ್ಪತ್ರೆ ಕೊನೇಹಳ್ಳಿ ಇವರ ಸಂಯುಕ್ತಾಶ್ರಯದಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿಶ್ವಸ್ತನ್ಯಪಾನ ಸಪ್ತಾಹ ಆಚರಿಸಲಾಗುವುದು. ಪ್ರತಿ ತಾಯಿಯು ಮಗುವಿಗೆ ಎದೆಹಾಲನ್ನು ನೀಡುವುದರಿಂದ ತನ್ನ ಸೌಂದರ್ಯಕ್ಕೆ ಯಾವುದೇ ಧಕ್ಕೆ ಬರುವುದಿಲ್ಲ. ತಾಯಿಗೆ ಹೆಚ್ಚಿನ ಆರೋಗ್ಯ ಲಾಭಗಳಿದ್ದು ಮಗು ಮತ್ತು ತಾಯಿಯ ಬಾಂಧವ್ಯ ವೃದ್ಧಿಯಾಗಲಿದೆ.ಶತಾವರಿ ಬೇರು, ಸಬ್ಬಸಿಗೆ, ಹನಗನೆ ಸೊಪ್ಪು, ಒಂದಲಗ ಸೊಪ್ಪು, ದೇಸಿ ಹಸುವಿನ ಹಾಲು ಮತ್ತು ತುಪ್ಪ, ಬೆಲ್ಲ, ಶುಂಠಿ ಮತ್ತು ಜೀರಿಗೆಯ ಸೇವನೆಯಿಂದ ಹಾಲು ಹೆಚ್ಚಾಗಿ ತಾಯಿಯ ಹಾಗೂ ಮಗುವಿನ ಆರೋಗ್ಯ ಪೌಷ್ಠಿಕತೆ ಹೆಚ್ಚಲಿದೆ ಎಂದರು. ಆರ್ಥಿಕ ಸಾಕ್ಷರತಾ ಕೇಂದ್ರದ ಹಿರಿಯ ಸಮಾಲೋಚಕಿ ಪಿ.ರೇಖಾ ಮಾತನಾಡಿ ರಕ್ತದಾನ ಹೇಗೆ ಶ್ರೇಷ್ಠವೊ ಅದೇ ರೀತಿ ಎದೆ ಹಾಲು ಕೂಡ ಶ್ರೇಷ್ಠ. ಅದೆಷ್ಟೊ ನವಜಾತ ಶಿಶುಗಳಿಗೆ ಶೇಖರಿಸಿರುವ ಎದೆ ಹಾಲೇ ಮೊದಲ ಪಾನೀಯಗಳೆಂದು ಎದೆಹಾಲು ಬ್ಯಾಂಕ್ ಸ್ಥಾಪನೆಯಾಗಿದ್ದು, ತಾಯಂದಿರು ಈ ಸಮಾಜಮುಖಿ ಕಾರ್ಯಕ್ರಮದಲ್ಲಿ ಭಾಗಿಯಾಗುವಂತೆ ಕರೆಕೊಟ್ಟರು.ಬ್ಯಾಕ್ಟಿರಿಯಾಗಳಿಂದ ಮುಕ್ತಿ: ಕೆವಿಕೆ ಕೇಂದ್ರದ ಗೃಹವಿಜ್ಞಾನಿ ಡಾ. ಸಿಂಧು ಮಾತನಾಡಿ ಮಗುವಿಗೆ ಒಂದು ವರ್ಷದವರೆಗೂ ಎದೆಹಾಲು ಕುಡಿಸಬೇಕು. ಇದರಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗಿರುತ್ತದೆ. ಇದರಿಂದ ತಾಯಂದಿರು ಸ್ತನ ಕ್ಯಾನ್ಸರ್ ನಂತಹ ರೋಗಗಳಿಗೆ ತುತ್ತಾಗುವುದಿಲ್ಲ. ಸ್ತನ್ಯಪಾನವು ಮಗುವನ್ನು ಬ್ಯಾಕ್ಟೀರಿಯಾ, ವೈರಸ್‌ಗಳಿಂದ ಹರಡುವ ಕಾಯಿಲೆಗಳಿಂದ ಕಾಪಾಡುತ್ತದೆ ಎಂದರು. ಪಶು ವಿಜ್ಞಾನಿ ಡಾ. ಶಿವಪ್ಪನಾಯಕ ಮಾತನಾಡಿ ತಾಯಿ ಮಗುವಿನ ಸಂಬಂಧ ಗರ್ಭದಲ್ಲಿ ಶುರುವಾಗಿ ಮಗು ಜನಿಸಿದ ನಂತರ ಸ್ತನ್ಯಪಾನದೊಂದಿಗೆ ಮುಂದುವರಿಯುತ್ತದೆ. ನಾಗರೀಕತೆ ಬೆಳೆದಂತೆ ಮಹಿಳೆಯರ ಕಾರ್ಯಕ್ಷೇತ್ರದಲ್ಲಿ ಬದಲಾವಣೆಯಾಗಿ, ತಾಯಿ ಮಗುವಿನ ಸಂಬಂಧದಲ್ಲಿ ಬದಲಾವಣೆಯಿಂದ ತಾಯಿ ಮಗುವಿನ ಸಂಬಂಧದ ಮೇಲೆ ಪರಿಣಾಮವಾಗುತ್ತದೆ. ಇದರಿಂದ ತಾಯಂದಿರು ಎಚ್ಚೆತ್ತು ಕನಿಷ್ಠ ಒಂದು ವರ್ಷ ಮಗುವಿಗೆ ಸ್ತನ್ಯಪಾನ ಮಾಡಿಸಬೇಕು ಎಂದರು. ಬುದ್ಧಿ ಬೆಳವಣಿಗೆಗೆ ಅವಶ್ಯ: ಕೃಷಿ ವಿಸ್ತರಣಾ ವಿಜ್ಞಾನಿಯಾದ ಡಾ. ದರ್ಶನ್ ಮಾತನಾಡಿ ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಎದೆ ಹಾಲು ಕುಡಿಯುವ ಶಿಶುಗಳ ಬುದ್ದಿವಂತಿಕೆ ಮತ್ತು ಆರೋಗ್ಯ ಉತ್ತಮವಾಗಿರುತ್ತದೆ. ಎದೆ ಹಾಲು ಕುಡಿಯುವ ಮಕ್ಕಳಿಗೆ ಹೋಲಿಸಿದರೆ ಎದೆ ಹಾಲು ಸೇವಿಸುವ ಮಕ್ಕಳ ಅತಿ ತೂಕ, ಬೊಜ್ಜು ಮತ್ತು ಡಯಾಬಿಟಿಸ್‌ಗಳಿಂದ ಬಳಲುವ ಸಾಧ್ಯತೆ ಕಡಿಮೆ ಎಂದರು. ಸಿಡಿಪಿಓ ಕಚೇರಿಯ ಮೇಲ್ವಿಚಾರಕರಾದ ಪ್ರೇಮ ಮಾತನಾಡಿ ಸ್ತನ್ಯಪಾನ ಬೆಂಬಲಿಸುವುದರೊಂದಿಗೆ ಅಂತರವನ್ನು ಕಡಿತಗೊಳಿಸೊಣ ಎಂಬ ಘೋಷವಾಕ್ಯದೊಂದಿಗೆ ಆಚರಿಸಲಾಗುತ್ತಿದೆ. ಪರಿಶುದ್ದವಾಗಿ ಸಿಗುವ ಆಹಾರವೆಂದು ಕರಿಸಿಕೊಳ್ಳುವುದೆಂದರೆ ಅದು ತಾಯಿಯ ಎದೆ ಹಾಲು ಮಾತ್ರ. ವಿಶ್ವ ಆರೋಗ್ಯ ಸಂಸ್ಥೆ ತಾಯಂದಿರಿಗೆ ಮತ್ತು ಮಕ್ಕಳಿಗೆ ಸ್ತನ್ಯಪಾನ ಮೌಲ್ಯದ ಮಹತ್ವ ನೀಡುತ್ತದೆ ಎಂದು ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದ ಕೇಂದ್ರದ ಮುಖ್ಯಸ್ಥ ಡಾ. ವಿ. ಗೋವಿಂದಗೌಡ ಮಾತನಾಡಿ ವಿಶ್ವ ಸ್ತನ್ಯಪಾನ ಸಪ್ತಾಹವು ಸ್ತನ್ಯಪಾನದ ಬಗ್ಗೆ ಅರಿವು ಮೂಡಿಸುವುದರ ಜೊತೆಗೆ ಮಹಿಳೆಯರಿಗೆ ತಮ್ಮ ಶಿಶುಗಳಿಗೆ ನಿರ್ದಿಷ್ಟ ಅವಧಿಯವರೆಗೆ ಹಾಲುಣಿಸಲು ಪ್ರೋತ್ಸಾಹಿಸುತ್ತಿದೆ ಎಂದರು. ಈ ಸಂದರ್ಭದಲ್ಲಿ ಗರ್ಭಿಣಿಯರಿಗೆ ಹಾಗೂ ಬಾಣಂತಿಯರಿಗೆ ಆರೋಗ್ಯ ಕಿಟ್ ವಿತರಿಸಲಾಯಿತು ಹಾಗೂ ಅಂಗನವಾಡಿ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮದ ಮೂಲಕ ವಿಶ್ವಸ್ತನ್ಯಪಾನದ ಅರಿವು ಮೂಡಿಸಲಾಯಿತು. ಕಾರ್ಯಕ್ರಮದಲ್ಲಿ ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಗರ್ಭಿಣಿಯರು, ರೈತ ಮಹಿಳೆಯರು ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಶ್ರೀಶೈಲ ನಿರೂಪಿಸಿ, ಡಾ. ತಸ್ಮಿಯಾ ಕೌಸರ್ ವಂದಿಸಿದರು.