ಸಾರಾಂಶ
ಕನ್ನಡಪ್ರಭ ವಾರ್ತೆ ಮಳವಳ್ಳಿ
ಪರಿಸರ ಉಳಿದರೆ ಮಾತ್ರ ಮನುಷ್ಯ ನೆಮ್ಮದಿಯಿಂದ ಬದುಕಲು ಸಾಧ್ಯ. ಪ್ರತಿಯೊಬ್ಬರು ಗಿಡಬೆಳೆಸಿ ಪರಿಸರ ಉಳಿಸಬೇಕು ಎಂದು ಭಾರತ ವಿಸ್ತಾರ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ, ಶಿಕ್ಷಣ ತಜ್ಞ ಡಾ.ರಾಘವೇಂದ್ರ ಶ್ಯಾಮಲೀಲಾ ಕರೆ ನೀಡಿದರು.ತಾಲೂಕಿನ ಕೂನನಕೊಪ್ಪಲು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರೋಟರಿ ಅಂತಾರಾಷ್ಟ್ರೀಯ ಜಿಲ್ಲೆ 3191 ಹಾಗೂ 3192ರ ಸಂಯುಕ್ತ ಆಶ್ರಯದಲ್ಲಿ ಲಕ್ಷ ಕಲ್ಪವೃಕ್ಷ ಯೋಜನೆಯಡಿಯಲ್ಲಿ ಗ್ರಾಮದ ರೈತರಿಗೆ ಹಾಗೂ ವಿದ್ಯಾರ್ಥಿಗಳಿಗೆ ತೆಂಗಿನ ಸಸಿಗಳನ್ನು ವಿತರಿಸಿ ಮಾತನಾಡಿದರು.
ಅತಿವೃಷ್ಟಿ, ಅನಾವೃಷ್ಟಿಗೆ ಪರಿಸರದಲ್ಲಿಯೇ ಆಗುತ್ತಿರುವ ಬದಲಾವಣೆ ಕಾರಣ. ಅರಣ್ಯ ನಾಶ ಮಾಡುತ್ತಿರುವ ಪರಿಣಾಮ ಸಕಾಲದಲ್ಲಿ ಮಳೆಯಾಗುತ್ತಿಲ್ಲ. ಮಳೆ ಬಂದರೇ ಎಲ್ಲವನ್ನು ಕೊಚ್ಚಿಕೊಂಡು ಹೋಗಿ ಜನರು ಸಂಕಷ್ಟಪಡುವಂತಾಗಿದೆ. ಶುದ್ಧ ಆಮ್ಲಜನಕವಿಲ್ಲದೇ ಕೃತಕ ಅಮ್ಲಜನಕ ಬಳಸಿಕೊಳ್ಳುವಂತಹ ಪರಿಸ್ಥಿತಿಯಲ್ಲಿ ನಾವು ಬದುಕುತ್ತಿದ್ದೇವೆ ಎಂದು ಆತಂಕ ವ್ಯಕ್ತಪಡಿಸಿದರು.ಹಳ್ಳಿಯ ಆತ್ಮ ನಿರ್ಭರತೆ ಪ್ರತೀಕವಾದ ಶಾಲೆ ಅಭಿವೃದ್ಧಿಯಲ್ಲಿ ರೋಟರಿ ಭಾರತ ವಿಸ್ತಾರ ಸಂಸ್ಥೆ ನಿರಂತರವಾಗಿ ಶ್ರಮಿಸುತ್ತಿದೆ. ಸಂಸ್ಥಾಪಕ ಕಾರ್ಯದರ್ಶಿ ರೊ.ನಾಗರಾಜು ಮಾದೇಗೌಡರವರು ಸಮಾಜಕ್ಕೆ ಹಲವಾರು ಕೊಡುಗೆಯನ್ನು ನೀಡಿದ್ದಾರೆಂದು ಪ್ರಶಂಸೆ ವ್ಯಕ್ತಪಡಿಸಿದರು.
ಶಾಲೆಯಿಲ್ಲದ ಗ್ರಾಮ ಸ್ಮಶಾನಕ್ಕೆ ಸಮ. ಪ್ರತಿಯೊಬ್ಬರು ವಿದ್ಯೆ ಕಲಿತು ದೇಶಕ್ಕೆ ಉತ್ತಮ ಕೊಡುಗೆ ನೀಡಬೇಕು, ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಸಂಸ್ಕೃತಿ, ಸಂಸ್ಕಾರ ಹಾಗೂ ಮಾನವೀಯತೆ ಬೆಳೆಸಿಕೊಳ್ಳಬೇಕು. ಗ್ರಾಮದ ಶಾಲೆ ಅಭಿವೃದ್ಧಿಗೆ ಹಲವು ಕೊಡುಗೆ ನೀಡಲಾಗುವುದೆಂದು ಭರವಸೆ ನೀಡಿದರು.ತಕ್ಷಣದಲ್ಲಿ ಸರ್ಕಾರಿ ಶಾಲೆಗೆ ಅತಿ ಶೀಘ್ರದಲ್ಲೇ ಒಂದು ಪ್ರೊಜೆಕ್ಟರನ್ನು ದಾನವಾಗಿ ನೀಡುವುದಾಗಿ ರೋ. ಪಳನಿ ಲೋಗನಾದನ್ ಭರವಸೆ ನೀಡಿದರು. ಈ ವೇಳೆ ರೋಟರಿ ಬೆಂಗಳೂರು ಮಿಡ್ ಟೌನ್ ಸಂಸ್ಥೆ ಅಧ್ಯಕ್ಷ ಪಳನಿ ಲೋಗನಾದನ್, ರೋಟರಿ ಬೆಂಗಳೂರು ನಾಗರಭಾವಿ ಅಧ್ಯಕ್ಷ ರೊ.ಗೋವರ್ಧನ ಶೆಟ್ಟಿ, ರೋಟರಿ ರೇಷ್ಮೆ ನಾಡು ರಾಮನಗರದ ಅಧ್ಯಕ್ಷ ಶ್ರೀಧರ್, ರೋಟರಿ ಜಿಲ್ಲಾ ಕೃಷಿ ಸಮಿತಿ ಅಧ್ಯಕ್ಷ ಶ್ರೀನಿವಾಸ ವೆಂಕಟಾಚಲ, ರೋಟರಿ ಸಂಸ್ಥೆಗಳ ಸದಸ್ಯರಾದ ಸರ್ವಶ್ರೀ ನಾಗರಾಜ ಶೃಂಗೇರಿ, ವೇಣುಗೋಪಾಲ ಗೌಡ, ಚಿದಾನಂದ, ಕುಮಾರ ರಾಜು, ಗೌತಮ್ ಚಂದ್, ಶ್ರೇಯಸ್ ಹಾಗೂ ರೊ.ಸುಚಿತ್ರ, ಮುಖ್ಯ ಶಿಕ್ಷಕ ಸುಧಾಕರ್ ಸೇರಿದಂತೆ ಇತರರು ಇದ್ದರು.