ಕೋಡಿಬಿದ್ದ ಗಾಳಿಹಳ್ಳಿ ಕೆರೆ: ರಹೀಂಸಾಬ್‌ ಲೇಔಟ್, ತೋಟಗಳು ಜಲಾವೃತ

| Published : Aug 09 2024, 12:35 AM IST

ಕೋಡಿಬಿದ್ದ ಗಾಳಿಹಳ್ಳಿ ಕೆರೆ: ರಹೀಂಸಾಬ್‌ ಲೇಔಟ್, ತೋಟಗಳು ಜಲಾವೃತ
Share this Article
  • FB
  • TW
  • Linkdin
  • Email

ಸಾರಾಂಶ

ಬೀರೂರು, ತಾಲೂಕಿನ ಜೀವನಾಡಿ ಮದಗದಕೆರೆ ಕೋಡಿ ಬಿದ್ದ ಹಿನ್ನಲೆಯಲ್ಲಿ ಇದರ ಸರಣಿ ಕೆರೆಗಳಲ್ಲಿ ಒಂದಾದ ಗಾಳಿಹಳ್ಳಿ ಕೆರೆ ಬುಧವಾರ ಸಂಜೆ ಕೋಡಿ ಬಿದ್ದು, ಪಟ್ಟಣ ಸಮೀಪದ ರಹೀಂ ಸಾಬ್ ಲೇಔಟ್ ಸೇರಿದಂತೆ ನೂರಾರು ಎಕರೆ ಪ್ರದೇಶದ ರೈತರ ಕೃಷಿ ಭೂಮಿ ಜಲಾವೃತವಾಗಿ ಜನರು ಬದುಕು ಬೀದಿಗೆ ಬರುವಂತಾಗಿದೆ.

- ಅಜ್ಜಂಪುರ, ಬೀರೂರು ಸಂಪರ್ಕಕ್ಕೆ ಬದಲಿ ಮಾರ್ಗ: ತಹಸೀಲ್ದಾರ್ ಪೂರ್ಣಿಮಾ ಪರಿಶೀಲನೆಕನ್ನಡಪ್ರಭ ವಾರ್ತೆ,ಬೀರೂರು.ತಾಲೂಕಿನ ಜೀವನಾಡಿ ಮದಗದಕೆರೆ ಕೋಡಿ ಬಿದ್ದ ಹಿನ್ನಲೆಯಲ್ಲಿ ಇದರ ಸರಣಿ ಕೆರೆಗಳಲ್ಲಿ ಒಂದಾದ ಗಾಳಿಹಳ್ಳಿ ಕೆರೆ ಬುಧವಾರ ಸಂಜೆ ಕೋಡಿ ಬಿದ್ದು, ಪಟ್ಟಣ ಸಮೀಪದ ರಹೀಂ ಸಾಬ್ ಲೇಔಟ್ ಸೇರಿದಂತೆ ನೂರಾರು ಎಕರೆ ಪ್ರದೇಶದ ರೈತರ ಕೃಷಿ ಭೂಮಿ ಜಲಾವೃತವಾಗಿ ಜನರು ಬದುಕು ಬೀದಿಗೆ ಬರುವಂತಾಗಿದೆ.ಕಳೆದ 2015ರಲ್ಲಿ ಹುಲ್ಲೇಹಳ್ಳಿ ಗ್ರಾಪಂನ ರಹೀಂಸಾಬ್ ಬಡಾವಣೆ 16 ಎಕರೆಗಳಲ್ಲಿ ಸರ್ಕಾರದ ನಿಯಮಾನುಸಾರ ನಿರ್ಮಾಣವಾಗಿದ್ದು 320ಕ್ಕೂ ಹೆಚ್ಚು ನಿವೇಶನಗಳಲ್ಲಿ 120ರಿಂದ150ಕ್ಕೂ ಹೆಚ್ಚು ಮನೆಗಳನ್ನು ನಿರ್ಮಾಣವಾಗಿವೆ. ಈ ಬಡಾವಣೆ ಹಾಗೂ ಸುತ್ತಮುತ್ತಲ ರೈತರ ಜಮೀನುಗಳಿಗೆ ಹೊಂದಿಕೊಂಡಂತೆ ಗಾಳಿಹಳ್ಳಿ ಕೆರೆ ಇದ್ದು, ಕಳೆದ 2-3 ವರ್ಷಗಳಿಂದ ತಾಲೂಕಲ್ಲಿ ಸಮೃದ್ಧ ಮಳೆಯಾಗಿ ಗಾಳಿಹಳ್ಳಿ ಕೆರೆ ತುಂಬಿ ಕೋಡಿ ಬೀಳುವ ಸಂದರ್ಭದಲ್ಲಿ ಕೆರೆ ನೀರು ಈ ಬಡಾವಣೆ ಮತ್ತು ಜಮೀನಿಗೆ ಹರಿದು ರೈತರು ಮತ್ತು ಸಾರ್ವಜನಿಕರನ್ನು ನೆರೆ ಸಂಕಷ್ಟಕ್ಕೆ ತಳ್ಳುತ್ತಿದೆ.ನಿನ್ನೆ ಹರಿದ ನೀರಿನಿಂದ ಸುಮಾರು 50ರಿಂದ 60 ಎಕರೆ ಪ್ರದೇಶದ ಜಮೀನು ಜಲಾವೃತವಾದರೆ, ಇತ್ತ ಬೀರೂರು –ಅಜ್ಜಂಪುರ ರಾಜ್ಯ ಹೆದ್ದಾರಿಯಲ್ಲಿ ನೀರು ಹರಿಯಲು ಕಾಲುವೆ ಇಲ್ಲದೆ, ಬಡಾವಣೆ, ಜಮೀನು ಹಾಗೂ ರಸ್ತೆ ಮೇಲೆ 4 ಅಡಿ ನೀರು ಹರಿದು, ಜನರು ಹಾಗೂ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ವಾಹನ ಸವಾರರು ಸಂಚರಿಸದಂತೆ ಮಾಡಿದೆ. ಇದೇ ಬಡಾವಣೆಯ ಶಾರದ ವಿದ್ಯಾಶಾಲೆ ಹಾಗೂ ವಾಗ್ದೇವಿ ವಿದ್ಯಾ ಕೇಂದ್ರಗಳ ಮಕ್ಕಳನ್ನು ಶಾಲೆಗೆ ಕರೆದೊಯ್ಯಲು ಹರಸಾಹಸ ಪಡುವಂತಾಗಿದೆ.ಇದು ಬೀರೂರು ಪುರಸಭೆಗೆ ಸಂಬಂಧಿಸದಿದ್ದರು ಅಲ್ಲಿನ ಅಧಿಕಾರಿಗಳು ಜೆಸಿಬಿ, ಅಗ್ನಿಶಾಮಕ ದಳ ಸಿಬ್ಬಂದಿ ಸಹಕಾರದೊಂದಿಗೆ ನೀರನ್ನು ಚರಂಡಿಗಳಿಗೆ ಹರಿಸಲು ಮುಂದಾದರು. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಕಡೂರು ತಹಸೀಲ್ದಾರ್ ಪೂರ್ಣಿಮ ಹಾಗೂ ಕಾರ್ಯನಿರ್ವಹಣಾಧಿಕಾರಿ ಸಿ.ಆರ್. ಪ್ರವೀಣ್ ರಸ್ತೆಮೇಲೆ ಹರಿಯುತ್ತಿದ್ದ ನೀರಿನ ರಭಸ ಹಾಗೂ ವಾಹನ ಸಂಚಾರಕ್ಕೆ ಆದ ಅಡಚಣೆ ಬಗ್ಗೆ ಸ್ಥಳದಲ್ಲಿದ್ದ ರೈತರು ಹಾಗೂ ಸಾರ್ವಜನಿಕರಿಂದ ಮಾಹಿತಿ ಪಡೆದು ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆ ಶಾಶ್ವತವಾಗಿ ಪರಿಹಾರದ ಭರವಸೆ ನೀಡಿದರು.ಸ್ಥಳದಲ್ಲಿದ್ದ ರೈತ ಮೈಲಾರಪ್ಪ ಮಾತನಾಡಿ, ಕಳೆದೆರಡು ವರ್ಷಗಳಿಂದ ಈ ನೆರೆ ನಮಗೆ ತಪ್ಪಿದ್ದಲ್ಲ, ನಮ್ಮ ಜಮೀನು ಜಲಾವೃತಗೊಂಡು ಮುಂಗಾರು ಬೆಳೆ ಹಾಳಾಗಿದೆ ಇದಕ್ಕೆ ಪರಿಹಾರ ನೀಡುವಂತೆ ತಹಸೀಲ್ದಾರ್ ನ್ನು ಒತ್ತಾಯಿಸಿದರು.ಬಡಾವಣೆ ನಿವಾಸಿ ಮೊಹಮದ್ ಮಾತನಾಡಿ, ಇದು ನಿನ್ನೆ ಮೊನ್ನೆ ಸಮಸ್ಯೆಯಲ್ಲ, ಕಳೆದ 3ವರ್ಷಗಳಿಂದ ಈ ಬಡಾವಣೆ ಜನ ಈ ಅತಿವೃಷ್ಠಿ ಅನುಭವಿಸುತ್ತಿದ್ದಾರೆ. ನಾವು ಬೀರೂರು ಪಟ್ಟಣಕ್ಕೆ ಸಂಪರ್ಕಿಸದ ಹಾಗೇ ಈ ನೀರು ಹರಿಸುತ್ತಿದೆ. ಮಕ್ಕಳನ್ನು ಶಾಲೆಗೆ ಕಳುಹಿಸಿಲ್ಲ. ಹೀಗೆ ಸದಾ ಹರಿದರೇ ನಮ್ಮ ಮನೆಗಳ ಪಾಡೇನು? ಈ ಅವಾಂತರಕ್ಕೆ ಕಾರಣ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಪಂಚಾಯತ್ ರಾಜ್ ಇಲಾಖೆ ನಿರ್ಲಕ್ಷ, ಅವರು ಈ ರೀತಿ ನೀರು ಹರಿಯುತ್ತಿದೆ ಎಂದು ಹಲವಾರು ಬಾರಿ ಮನವಿ ನೀಡಿದರು ಕ್ಯಾರೆ ಎಂದಿಲ್ಲ. ಕೆರೆಯಿಂದ ನೀರು ಹರಿಯಲು ಕಾಲುವೆಯೇ ಬೇಕು ಆದಷ್ಟು ಬೇಗ ಮಾಡಿಸಿ ಸಮಸ್ಯೆಗೆ ಇತಿಶ್ರೀ ಹಾಡಿ ಎಂದು ತಾಲೂಕು ಕಾರ್ಯನಿರ್ವಾಹಣಾ ಅಧಿಕಾರಿ ಪ್ರವೀಣ್ ಗೆ ಮನವಿ ಮಾಡಿದರು.ಜಿ.ಪಿ.ನವೀನ್ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಈ ಬೈಪಾಸ್ ನಿರ್ಮಿಸುವಾಗ ಇಲ್ಲಿದ್ದ ಸಣ್ಣ ಚಾನಲ್ ಮುಚ್ಚಿ ಅವೈಜ್ಞಾನಿಕ ಕಾಮಗಾರಿ ನಡೆಸಿದ್ದಾರೆ. ಈ ಗಾಳಿಹಳ್ಳಿ ಕೆರೆ ಸಣ್ಣನೀರಾವರಿ ವ್ಯಾಪ್ತಿಗೆ ಬಾರದೆ ತಾಲೂಕು ಪಂಚಾಯತ್ ರಾಜ್ ಇಲಾಖೆಗೆ ಒಳಪಟ್ಟಿದೆ. ಹೆದ್ದಾರಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಾರ್ವಜನಿಕರು ಇಂದು ಸಮಸ್ಯೆ ಅನುಭವಿಸಬೇಕಾಗಿದೆ. ಇಲ್ಲಿ ಸಾವು ನೋವು ಸಂಭವಿಸಿದರೆ, ಹೆದ್ದಾರಿ ಇಲಾಖೆಯೆ ಹೊಣೆ. ಗಾಳಿಹಳ್ಳಿ ಕೆರೆಗೆ ತಡೆಗೋಡೆ, ಕೆರೆಯಿಂದ ಕರ‍್ಲ ಹಳ್ಳದ ವರೆಗೆ ಕಾಲುವೆ ನಿರ್ಮಿಸಿ ಹೈವೆ ಪಕ್ಕದಲ್ಲೇ ರಾಷ್ಟ್ರೀಯ ಹೆದ್ದಾರಿ ಜಾಗದಲ್ಲಿ ವೇದಾವತಿ ನದಿಗೆ ಸೇರಿಸಿದಾಗ ಮಾತ್ರ ಸಮಸ್ಯೆ ತಪ್ಪುತ್ತದೆ ಎಂದು ತಹಸೀಲ್ದಾರ್ ಗೆ ಮನವಿ ಮಾಡಿದರು.ಇದಕ್ಕೆ ಉತ್ತರಿಸಿದ ತಹಸೀಲ್ದಾರ್ ಪೂರ್ಣಿಮಾ, ಸದ್ಯ ಇಲ್ಲಿನ ಅಕ್ಕ-ಪಕ್ಕದ ಶಾಲೆಗಳಿಗೆ ನೀರು ತಗ್ಗುವ ವರೆಗೆ ರಜೆ ಘೋಷಿಸಿ, ನೆರೆ ಹಾವಳಿಗೆ ಸಿಲುಕಿದ ಜಮೀನುಗಳಿಗೆ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ವರದಿ ನೀಡಿದರೆ ಪರಿಹಾರ ನೀಡಲಾಗುವುದು. ಶೀಘ್ರದಲ್ಲೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಸಂಬಂಧಿತ ಅಧಿಕಾರಿಗಳ ಜತೆ ಚರ್ಚಿಸಿ, ಜಿಲ್ಲಾಧಿಕಾರಿಗಳ ಗಮನ ಸೆಳೆದು ಸಮಸ್ಯೆ ಬಗೆಹರಿಸಲಾಗುವುದು ಎಂದರು.ಶಾಸಕರು ಸ್ಥಳಕ್ಕೆ ಭೇಟಿ ನೀಡಿ ಗಾಳಿಹಳ್ಳಿ ಕೆರೆಯಿಂದ ಆಗುತ್ತಿರುವ ನೆರೆ ತಗ್ಗಿಸಿ ಶಾಶ್ವತ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ.ಈ ಸಂದರ್ಭದಲ್ಲಿ ಪಿಎಸೈ ಸಜಿತ್ ಕುಮಾರ್, ನಾಡಕಚೇರಿ ಕಂದಾಯ ಅಧಿಕಾರಿ ಶ್ರೀನಿವಾಸ್, ಪುರಸಭೆ ಮುಖ್ಯಾಧಿಕಾರಿ ಪ್ರಕಾಶ್, ಪುರಸಭೆ ಸದಸ್ಯ ಸಮಿಉಲ್ಲಾ ಸೇರಿದಂತೆ ಮತ್ತಿತರರು ಇದ್ದರು.8 ಬೀರೂರು 1ಗಾಳಿಹಳ್ಳಿ ಕೆರೆ ಕೋಡಿ ಬಿದ್ದ ಹಿನ್ನಲೆಯಲ್ಲಿ ಬೀರೂರಿನ ಅಜ್ಜಂಪುರ ರಸ್ತೆ ಪಕ್ಕದ ರಹೀಂಸಾಬ್ ಬಡಾವಣೆ ಮತ್ತು ಜಮೀನುಗಳು ಜಲಾವೃತವಾಗಿ ರಸ್ತೆ ಸಂಪರ್ಕ ಕಡಿತವಾಗಿರುವುದು.8 ಬೀರೂರು 2ಅತಿವೃಷ್ಠಿಯಾಗಿ ರಸ್ತೆ ಸಮಸ್ಯೆ ಎದುರಿಸುತ್ತಿದ್ದ ಸ್ಥಳಕ್ಕೆ ತಹಸೀಲ್ದಾರ್ ಪೂರ್ಣಿಮಾ ಮತ್ತು ತಾಲೂಕು ಕಾರ್ಯ ನಿರ್ವಹಣಾಕಾರಿ ಸಿ.ಆರ್.ಪ್ರವೀಣ್ ಭೇಟಿ ನೀಡಿ ಜನರ ಅಹವಾಲು ಸ್ವೀಕರಿಸಿದರು.