ಸಾರಾಂಶ
- ಎನ್.ಆರ್.ಪುರ ಸೀನಿಯರ್ ಚೇಂಬರ್ ಇಂಟರ್ ನ್ಯಾಶನಲ್ ಘಟಕದಿಂದ ಬಸ್ತಿಮಠ ಶಾಲಾ ಮಕ್ಕಳಿಗೆ ಶೈಕ್ಷಣಿಕ ಪರಿಕರ
ಕನ್ನಡ ಪ್ರಭ ವಾರ್ತೆ, ನರಸಿಂಹರಾಜಪುರಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎಂಬಂತೆ ಸಮಾಜ ನನಗೆ ನೀಡಿದ್ದನ್ನು ನಾನು ಸಮಾಜಕ್ಕೆ ಅರ್ಪಿಸುತ್ತಿದ್ದೇನೆ ಎಂದು ದಾನಿ ಹಾಗೂ ಉದ್ಯಮಿ ಡಿ.ರಮೇಶ್ ತಿಳಿಸಿದರು.
ಬುಧವಾರ ಬಸ್ತಿಮಠದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎನ್.ಆರ್.ಪುರ ಸೀನಿಯರ್ ಚೇಂಬರ್ ಇಂಟರ್ ನ್ಯಾಶನಲ್ ಘಟಕದ ಆಶ್ರಯದಲ್ಲಿ ಶಾಲಾ ಮಕ್ಕಳ ಶೈಕ್ಷಣಿಕ ಪರಿಕರ ಕಿಟ್ ವಿತರಿಸುವ ಸಮಾರಂಭದಲ್ಲಿ ಮಾತನಾಡಿ ದರು. ನಾನು ಪ್ರತಿ ವರ್ಷ 5 ಶಾಲೆಗಳ 50 ಮಕ್ಕಳಿಗೆ ಶೈಕ್ಷಣಿಕ ಪರಿಕರ ಕಿಟ್ ನೀಡುತ್ತಿದ್ದೇನೆ. ಶಾಲಾ ಮಕ್ಕಳಿಗೆ ಸಹಾಯ ನೀಡುವ ಅವಕಾಶ ಸಿಗುತ್ತಿದೆ. ಮುಂದಿನ ವರ್ಷಗಳಲ್ಲೂ ಇದೇ ರೀತಿ ಸಹಾಯ ಮಾಡುತ್ತೇನೆ ಎಂದರು.ಎನ್.ಆರ್.ಪುರ ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಘಟಕದ ಕಾರ್ಯದರ್ಶಿ ಪಿ.ಎಸ್.ವಿದ್ಯಾನಂದಕುಮಾರ್ ಮಾತನಾಡಿ, ಪ್ರತಿಯೊಬ್ಬರೂ ತ್ರಿಕರ್ಣ ಶುದ್ಧಿಯಿಂದ ಕೆಲಸ ಮಾಡಬೇಕು. ನಾವು ಅಂದು ಕೊಂಡದ್ದನ್ನು ಹೇಳಬೇಕು. ಹೇಳಿದ್ದನ್ನು ಶುದ್ಧ ಮನಸ್ಸಿನಿಂದ ಮಾಡಬೇಕು. ವಿದ್ಯಾರ್ಥಿಗಳು ಗುರುಗಳಿಗೆ, ಹಿರಿಯರಿಗೆ ಗೌರವ ನೀಡಬೇಕು. ವಿದ್ಯಾರ್ಥಿ ಗಳಿಗೆ ಟಿ.ವಿ ಹಾಗೂ ಮೊಬೈಲ್ ಗಳೇ ದೊಡ್ಡ ಶತ್ರುವಾಗಿದೆ. ವಿದ್ಯಾರ್ಥಿಗಳಿಗೆ ಜೀವನದಲ್ಲಿ ಸಾಧನೆ ಮಾಡಲು ಹಲವಾರು ಅವಕಾಶಗಳಿವೆ. ಸಾಧನೆ ಸಾಧಕರ ಸ್ವತ್ತೇ ಹೊರತು ಸೋಮಾರಿಗಳ ಸ್ವತ್ತಾಗುವುದಿಲ್ಲ. ದಾನಗಳಲ್ಲಿ ಸಿಗುವ ಸುಖ ಬೇರೆ ಯಾವುದರಿಂದಲೂ ಸಿಗುವುದಿಲ್ಲ. ಉದ್ಯಮಿ ಡಿ.ರಮೇಶ್ ಪ್ರತಿ ವರ್ಷ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪರಿಕರ ಕಿಟ್ ನೀಡುತ್ತಿರುವುದು ಸಂತೋಷದ ವಿಷಯ ಎಂದರು.
ಸಭೆ ಅಧ್ಯಕ್ಷತೆ ವಹಿಸಿದ್ದ ಎನ್.ಆರ್.ಪುರ ಸೀನಿಯರ್ ಇಂಟರ್ ನ್ಯಾಶನಲ್ ಘಟಕದ ಅಧ್ಯಕ್ಷ ನಾಗರಾಜ ಪುರಾಣಿಕ್ ಮಾತನಾಡಿ, ಬಸ್ತಿಮಠದ ಸರ್ಕಾರಿ ಶಾಲೆ ಮಕ್ಕಳು ಪ್ರತಿಭಾವಂತ ವಿದ್ಯಾರ್ಥಿಗಳಾಗಿದ್ದು ಪ್ರತಿಭಾ ಕಾರಂಜಿ, ಕ್ರೀಡಾ ಕೂಟದಲ್ಲೂ ಸಾಧನೆ ಮಾಡಿದ್ದಾರೆ. ಉದ್ಯಮಿ ಡಿ.ರಮೇಶ್ ನಮ್ಮ ಸಂಸ್ಥೆಯ ಮೂಲಕ ಮಕ್ಕಳಿಗೆ ಶೈಕ್ಷಣಿಕ ಕಿಟ್ ನೀಡುತ್ತಿರುವುದು ನಮ್ಮ ಸಂಸ್ಥೆಗೆ ಹೆಮ್ಮೆಯಾಗಿದೆ ಎಂದರು.10 ಶಾಲಾ ಮಕ್ಕಳಿಗೆ ಉದ್ಯಮಿ ಡಿ.ರಮೇಶ್ ನೀಡಿದ ಶೈಕ್ಷಣಿಕ ಪರಿಕರ ಕಿಟ್ ಗಳನ್ನು ಮಕ್ಕಳಿಗೆ ವಿತರಿಸಲಾಯಿತು. ಅತಿಥಿಗಳಾಗಿ ಬಸ್ತಿಮಠದ ಶಾಲಾ ಮುಖ್ಯೋಪಾಧ್ಯಾಯಿನಿ ನೇತ್ರಾವತಿ, ಎನ್.ಆರ್.ಪುರ ಸೀನಿಯರ್ ಇಂಟರ್ ನ್ಯಾಶನಲ್ ಘಟಕದ ಪದಾಧಿಕಾರಿಗಳಾದ ಎಸ್.ಎಸ್.ಜಗದೀಶ್, ಪಿ.ಪ್ರಭಾಕರ್, ಎಚ್.ಆರ್.ದಿನೇಶ್, ಎಚ್.ಬಿ.ರಘವೀರ್, ಲಕ್ಷ್ಮೀಶ, ಶಿವಕುಮಾರ್ ,ಕೆ.ಎಸ್.ರಾಜಕುಮಾರ್ ಇದ್ದರು. ಶಿಕ್ಷಕಿ ಪೆನೀನಾ ಕಾರ್ಯಕ್ರಮ ನಿರೂಪಿಸಿದರು.