ಇಂದು ಮಡಿಕೇರಿಯಲ್ಲಿ ಜಾಗತಿಕ ಕೊಡವ ಸಮ್ಮೇಳನ

| Published : Dec 29 2023, 01:32 AM IST

ಸಾರಾಂಶ

ಫೀಲ್ಡ್‌ ಮಾ.ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ಜಾಗತಿಕ ಕೊಡವ ಸಮ್ಮೇಳನಕ್ಕೆ ಭರದ ಸಿದ್ಧತೆ ನಡೆದಿದ್ದು, ಇಂದು ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದೆ. ಎರಡು ದಿನ ನಡೆಯುವ ಕಾರ್ಯಕ್ರಮದಲ್ಲಿ ಸುಮಾರು 20 ಸಾವಿರ ಜನ ಭಾಗವಹಿಸುವ ನಿರೀಕ್ಷೆ ಇದೆ.

ಕನ್ನಡಪ್ರಭ ವಾರ್ತೆ ಮಡಿಕೇರಿಕನೆಕ್ಟಿಂಗ್‌ ಕೊಡವಾಸ್‌ ಟ್ರಸ್ಟ್‌ ಆಯೋಜಿತ ‘ಗ್ಲೋಬಲ್ ಕೊಡವ ಸಮ್ಮಿಟ್’ ಜಾಗತಿಕ ಕೊಡವ ಸಮ್ಮೇಳನ ನಗರದ ಫೀಲ್ಡ್‌ ಮಾ.ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ಡಿ.29ರಿಂದ ಎರಡು ದಿನಗಳ ಕಾಲ ನಡೆಯಲಿದ್ದು, ಈ ಐತಿಹಾಸಿಕ ಕ್ಷಣಕ್ಕೆ ಮಡಿಕೇರಿ ನಗರ ಸಜ್ಜುಗೊಂಡಿದೆ.ಕಾರ್ಯಕ್ರಮಕ್ಕಾಗಿ ಭರದ ಸಿದ್ದತೆ ನಡೆದಿದ್ದು, ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ಬೃಹತ್‌ ವೇದಿಕೆ, ಸ್ಟಾಲ್‌ಗಳು, ಐನ್‌ಮನೆ ಮಾದರಿ, ಮ್ಯೂಸಿಯಂ ಅನ್ನು ನಿರ್ಮಿಸಲಾಗಿದೆ.ಈ ಐತಿಹಾಸಿಕ ಜಾಗತಿಕ ಕೊಡವ ಸಮ್ಮೇಳನಕ್ಕೆ ರಾಜ್ಯ ಹಾಗೂ ಹೊರರಾಜ್ಯಗಳಲ್ಲಿ ನೆಲೆಸಿರುವ ಕೊಡವರಲ್ಲದೇ ಅಮೆರಿಕ, ದುಬೈ, ಇಂಗ್ಲೆಂಡ್ ಸೇರಿದಂತೆ ವಿದೇಶಗಳಲ್ಲಿ ನೆಲೆಸಿರುವ ಹಲವು ಕೊಡವರು ಆಗಮಿಸಲಿದ್ದಾರೆ. 2 ದಿನಗಳ ಸಮ್ಮೇಳನದಲ್ಲಿ 20 ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಳ್ಳಲಿದ್ದಾರೆ ಎಂದು ನಿರೀಕ್ಷಿಸಲಾಗಿದ್ದು, ಕಾರ್ಯಕ್ರಮಕ್ಕಾಗಿ 60-40 ಅಡಿ ವಿಸ್ತೀರ್ಣದ ಬೃಹತ್‌ ವೇದಿಕೆ ಸಿದ್ಧಗೊಳಿಸಲಾಗಿದೆ. ಇದೇ ವೇದಿಕೆಯಲ್ಲಿ 2 ದಿನ ವಿವಿಧ ಕಾರ್ಯಕ್ರಮಗಳು ನಡೆಯಲಿದ್ದು, ವೇದಿಕೆ ಮುಂಭಾಗದಲ್ಲಿ 5000 ಮಂದಿ ಕುಳಿತು ಕಾರ್ಯಕ್ರಮ ವೀಕ್ಷಿಸಲು ಬೃಹತ್‌ ಪೆಂಡಾಲ್‌ ವ್ಯವಸ್ಥೆ ಮಾಡಲಾಗಿದೆ.ವೇದಿಕೆಯ ಎರಡೂ ಬದಿಗಳಲ್ಲಿ ಒಟ್ಟು 55 ಸ್ಟಾಲ್‌ಗಳಿರಲಿದ್ದು, ಅಲ್ಲಿ ಫುಡ್‌ ಮತ್ತು ಶಾಪಿಂಗ್‌ ಜೋನ್‌ಗೆ ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ ಎಲ್ಲ 55 ಸ್ಟಾಲ್‌ಗಳೂ ಬುಕ್‌ ಆಗಿವೆ. ವೇದಿಕೆಯ ಎದುರಲ್ಲಿ ಕೊಡವ ಸಂಸ್ಕೃತಿ ಬಿಂಬಿಸುವ ಪುರಾತನ ವಸ್ತುಗಳ ವಸ್ತುಪ್ರದರ್ಶನಕ್ಕೆ ಸಿದ್ಧತೆ ನಡೆದಿದೆ. ಪಕ್ಕದಲ್ಲೇ ಐನ್‌ಮನೆ ಮಾದರಿ ನಿರ್ಮಾಣ ಮಾಡಲಾಗುತ್ತಿದ್ದು, ಐನ್‌ಮನೆ ಒಳಗೂ ವೀಕ್ಷಣೆಗೆ ಅವಕಾಶವಿರಲಿದೆ.ಮೆರವಣಿಗೆಯಲ್ಲಿ 400 ಕ್ಕೂ ಅಧಿಕ ಕುಟುಂಬಗಳು ಭಾಗಿ:ಶುಕ್ರವಾರ ಬೆಳಗ್ಗೆ 9.15ಕ್ಕೆ ಮೆರವಣಿಗೆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ದೊರಕಲಿದ್ದು, ಮಡಿಕೇರಿಯ ಖಾಸಗಿ ಬಸ್‌ ನಿಲ್ದಾಣದಿಂದ ಎಫ್‌ಎಂಸಿ ಕಾಲೇಜು ಮೈದಾನದ ವರೆಗೆ ವಿವಿಧ ಕೊಡವ ಕುಟುಂಬಗಳ ಪ್ರತಿನಿಧಿಗಳು ತಮ್ಮ ಕುಟುಂಬದ ಬಾವುಟವನ್ನು ಹಿಡಿದು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ.ಈಗಾಗಲೇ ಕಾರ್ಯಕ್ರಮದ ಆಯೋಜಕರಾದ ಕನೆಕ್ಟಿಂಗ್‌ ಕೊಡವಾಸ್‌ ಟ್ರಸ್ಟ್‌ನಿಂದ ಎಲ್ಲಾ 1016 ಕೊಡವ ಕುಟುಂಬಗಳಿಗೂ ಅಹ್ವಾನ ನೀಡಲಾಗಿದ್ದು, ಬಹುತೇಕ ಕುಟುಂಬಗಳ ಪ್ರತಿನಿಧಿಗಳು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಕೊಡವ ಕೌಟುಂಬಿಕ ಹಾಕಿ ಉತ್ಸವದಲ್ಲಿ ಪಾಲ್ಗೊಳ್ಳುವ ಎಲ್ಲಾ ಕುಟುಂಬಗಳೂ ಸೇರಿದಂತೆ 400 ಕ್ಕೂ ಹೆಚ್ಚು ಕುಟುಂಬಗಳ ಪ್ರತಿನಿಧಿಗಳು ಮೆರವಣಿಗೆಯಲ್ಲಿ ತಮ್ಮ ಕುಟುಂಬವನ್ನು ಪ್ರತಿನಿಧಿಸಲಿದ್ದಾರೆ ಎಂದು ಆಯೋಜಕರು ತಿಳಿಸಿದ್ದಾರೆ.ಇಂದಿನ ಕಾರ್ಯಕ್ರಮಗಳು:ಇಂದು ಬೆಳಗ್ಗೆ 9.15 ಕ್ಕೆ ಖಾಸಗಿ ಬಸ್‌ ನಿಲ್ದಾಣದಿಂದ ಸಾಂಸ್ಕೃತಿಕ ಮೆರವಣಿಗೆ ನಡೆಯಲಿದೆ. ಬಳಿಕ ಉದ್ಘಾಟನೆ, ಗಣ್ಯರಿಗೆ ಸನ್ಮಾನ, ಆಧ್ಯಾತ್ಮಿಕ ವಿಜ್ಞಾನಿ ಬೊಪ್ಪಂಡ ರಶ್ಮಿ ಅಯ್ಯಪ್ಪ ಅವರಿಂದ ಆರೋಗ್ಯ ರಕ್ಷಣೆ ಮತ್ತು ಸುಧಾರಣೆ ಸಮಾವೇಶ , ಡಾ.ಚೆಪ್ಪುಡಿರ ಜಿ ಕುಶಾಲಪ್ಪ ಅವರ ನೇತೃತ್ವದಲ್ಲಿ ಕೊಡವರ ಆಸ್ತಿ ಮಾರಾಟ ಮತ್ತು ಕೃಷಿ ಸಮಾವೇಶ, ದೇಶ ತಕ್ಕರೊಂದಿಗೆ ಚರ್ಚಾಕೂಟ, ವ್ಯಾಪಾರ ಸಮಾವೇಶ, ಸಾಂಸ್ಕೃತಿಕ ಕಾರ್ಯಕ್ರಮ, ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ನಡೆಯಲಿದೆ.ನಾಳಿನ ಕಾರ್ಯಕ್ರಮಗಳುಬೆಳಗ್ಗೆ 9 ರಿಂದ ಸಾಂಸ್ಕೃತಿಕ ಸ್ಪರ್ಧೆ, ಸಾಂಸ್ಕೃತಿಕ ಸಮಾವೇಶ, ಸಾಧಕರಿಗೆ ಸನ್ಮಾನ, ಕ್ರೀಡಾ ಸಮಾವೇಶ, ಔದ್ಯೋಗಿಕ ಸಮಾವೇಶ, ನಾಗರಿಕ ಮತ್ತು ರಕ್ಷಣಾ ಸೇವೆಯ ಸಮಾವೇಶ, ಕೊಡವ ಸಮಾಜಗಳ ಅಧ್ಯಕ್ಷರೊಂದಿಗೆ ಚರ್ಚೆ, ಕೋವಿ(ಗನ್‌)ಸಮಾವೇಶ, ಸನ್ಮಾನ ಸಮಾರಂಭ, ರಾತ್ರಿ 8.30 ರಿಂದ ಡಿ.ಜೆ ನೈಟ್‌ ಮೂಲಕ ಕಾರ್ಯಕ್ರಮ ಕೊನೆಗೊಳ್ಳಲಿದೆ. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಎಲ್ಲಾ ಕೊಡವ ಕುಟುಂಬಗಳಿಗೂ ಆಹ್ವಾನ ನೀಡಲಾಗಿದ್ದು, ಇಂದಿನ ಮೆರವಣಿಗೆಯಲ್ಲಿ 400ಕ್ಕೂ ಅಧಿಕ ಕುಟುಂಬಗಳ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ.ಸಮ್ಮೇಳನದಲ್ಲಿ ಒಟ್ಟು 20 ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಳ್ಳಲಿದ್ದು, ಕೊಡವರ ಸಂಪೂರ್ಣ ಇತಿಹಾಸ, ಕಲೆ, ಸಂಗೀತ, ಸಾಹಿತ್ಯ, ಸಂಸ್ಕೃತಿಯನ್ನು ಬಿಂಬಿಸುವ ಮತ್ತು ಚರ್ಚಿಸುವ ಅತಿದೊಡ್ಡ ಕಾರ್ಯಕ್ರಮವಾಗಿರಲಿದೆ ಎಂದು ಕನೆಕ್ಟಿಂಗ್‌ ಕೊಡವಾಸ್‌ ಟ್ರಸ್ಟ್‌ ಅಧ್ಯಕ್ಷ ನಿರನ್‌ ನಾಚಪ್ಪ ತಿಳಿಸಿದ್ದಾರೆ.ಪಾರ್ಕಿಂಗ್ ವ್ಯವಸ್ಥೆ::ಕಾರ್ಯಕ್ರಮದಲ್ಲಿ ಕೊಡವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದ್ದು, ಸಂತ ಜೋಸೆಫರ ಶಾಲೆ ಹಾಗೂ ಐಟಿಐ ಕಾಲೇಜಿನ ಸಮೀಪ ವಾಹನ ನಿಲುಕಡೆಗೆ ಸ್ಥಳ ಗುರುತಿಸಲಾಗಿದ್ದು, ಆಮಿಸುವ ಎಲ್ಲರಿಗೂ ನಿಗಧಿತ ಸ್ಥಳದಿಂದಲೇ ಉಚಿತ ಬಸ್‌ ವ್ಯವಸ್ಥೆ ಕಲ್ಪಿಸಲಾಗಿದೆ. ಸಮ್ಮೇಳನಕ್ಕಾಗಿ ನಗರದಲ್ಲಿ ಹೆಚ್ಚಿನ ಜನ ಸೇರುವ ಸಾಧ್ಯತೆ ಇರುವ ಹಿನ್ನೆಲೆ ಪೊಲೀಸ್ ಇಲಾಖೆ ಕೂಡ ಸೂಕ್ತ ಬಂದೋಬಸ್ತ್ ಒದಗಿಸಲು ಸಜ್ಜಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ