ಇಲ್ಲಿನ ಜಿ ಎಮ್ ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್‌ನಲ್ಲಿ ಶಿಕ್ಷಕರಿಗೆ ಚಟುವಟಿಕೆ ಹಾಗೂ ಸಾಮರ್ಥ್ಯ ಆಧಾರಿತ ಕಲಿಕೆಯ ಕುರಿತು ತರಬೇತಿ ನೀಡಲಾಯಿತು.

ಬ್ರಹ್ಮಾವರ: ಇಲ್ಲಿನ ಜಿ ಎಮ್ ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್‌ನಲ್ಲಿ ಶಿಕ್ಷಕರಿಗೆ ಚಟುವಟಿಕೆ ಹಾಗೂ ಸಾಮರ್ಥ್ಯ ಆಧಾರಿತ ಕಲಿಕೆಯ ಕುರಿತು ತರಬೇತಿ ನೀಡಲಾಯಿತು. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಪ್ರಕಾಶ್ಚಂದ್ರ ಶೆಟ್ಟಿ ಮಾತನಾಡಿ ಶಿಕ್ಷಣವೆಂದರೆ ಕೇವಲ ಪರೀಕ್ಷೆಯಲ್ಲಿ ಅಂಕಗಳಿಸುವುದಲ್ಲ. ನಿರ್ದಿಷ್ಟ ಜೀವನ ಕೌಶಲ್ಯ ಮತ್ತು ಸಾಮರ್ಥ್ಯಗಳಲ್ಲಿ ಪರಿಣಿತಿಯನ್ನು ಹೊಂದುವುದು. ಇದು ಚಟುವಟಿಕೆ ಆಧಾರಿತ ಬೋಧನೆಯಿಂದ ಸಾಧ್ಯ. ಹಾಗಾಗಿ ಕಾರ್ಯಾಗಾರದಲ್ಲಿ ಪಡೆದ ಅನುಭವವನ್ನು ಶಿಕ್ಷಕರು ಬೋಧನಾ ಪ್ರಕ್ರಿಯೆಯಲ್ಲಿ ಅಳವಡಿಸಿಕೊಳ್ಳಬೇಕೆಂದರು.

ಕಾರ್ಯಾಗಾರದ ಮುಖ್ಯ ಸಂಪನ್ಮೂಲ ವ್ಯಕ್ತಿ ಬೆಂಗಳೂರಿನ ಏಕ್ತಾ ಶಾಲೆಯ ಸ್ಥಾಪಕ ಪ್ರಾಂಶುಪಾಲೆ ಡಾ. ಹೇಮಲತಾ ಖತ್ರಿ ಶಿಕ್ಷಕರಿಗೆ ವಿನೂತನ ಚಟುವಟಿಕೆಗಳನ್ನು ನೀಡಿ ತರಬೇತಿ ನೀಡಿದರು. ಶಾಲಾ ಪ್ರಾಂಶುಪಾಲರಾದ ಜಾರ್ಜ್ ಕುರಿಯನ್ ಮಾತನಾಡಿ ಮಕ್ಕಳು ಇಂದು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕಠಿಣತೆಯನ್ನು ಎದುರಿಸುತ್ತಿದ್ದಾರೆ. ಮಕ್ಕಳಲ್ಲಿ ಕಂಠಪಾಠ ಮಾಡಿ ಉತ್ತರಿಸುವ ಬದಲು ಪ್ರಶ್ನೆಗಳನ್ನು ಅರ್ಥೈಸಿಕೊಂಡು ಉತ್ತರಿಸುವ ಕೌಶಲ್ಯಗಳನ್ನು ವೃದ್ಧಿಗೊಳಿಸಬೇಕೆಂದರು.ಕಾರ್ಯಾಗಾರದಲ್ಲಿ ಶಿಕ್ಷಕರು ಸಾಮರ್ಥ್ಯ ಹಾಗೂ ಚಟುವಟಿಕೆ ಆಧಾರಿತ ಕಲಿಕೆಯ ಉದ್ದೇಶ, ಶಿಕ್ಷಕರ ಪಾತ್ರ, ಅವರು ಎದುರಿಸುತ್ತಿರುವ ಸವಾಲುಗಳು, ಪಾಠ ಯೋಜನೆ, ಬೋಧನಾ ತಂತ್ರ, ಚಟುವಟಿಕೆ ಆಧಾರಿತ ಬೋಧನೆ, ಕೇಸ್ ಸ್ಟಡಿ, ಮೌಲ್ಯಮಾಪನದ ಕುರಿತು ಪ್ರಾತ್ಯಕ್ಷಿಕವಾಗಿ ತರಬೇತಿಯನ್ನು ಪಡೆದರು.