- ಸಾಕ್ಷ್ಯ ಸಮೇತ ನಾನೂ ಗಂಟೆ ಹೊಡೆಯುವೆ: ಯಶವಂತ ರಾವ್ ಸವಾಲು
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ದಾವಣಗೆರೆ ದುಗ್ಗಮ್ಮನ ದೇವಸ್ಥಾನದಲ್ಲಿ ಏನೂ ಅಕ್ರಮ ನಡೆದಿಲ್ಲವೆಂದು ಸತ್ಯ ಹರಿಶ್ಚಂದ್ರನಂತೆ ಮಾಧ್ಯಮಗಳ ಮುಂದೆ ದೇವಸ್ಥಾನ ಟ್ರಸ್ಟಿಗಳು ಫೋಸ್ ಕೊಡುತ್ತಾರೆ. ಅದೇ ಮಾತನ್ನು ದುಗ್ಗಮ್ಮನ ಗುಡಿಯಲ್ಲಿ ಗಂಟೆ ಹೊಡೆದು ಹೇಳಲಿ, ನಾನೂ ಅಕ್ರಮಗಳ ದಾಖಲೆಗಳ ಸಮೇತವೇ ಗುಡಿಗೆ ಬಂದು ಗಂಟೆ ಹೊಡೆಯುತ್ತೇನೆ ಎಂದು ದೇವಿಯ ಭಕ್ತ, ಬಿಜೆಪಿ ಹಿರಿಯ ಮುಖಂಡ ಯಶವಂತ ರಾವ್ ಜಾಧವ್ ಸವಾಲು ಹಾಕಿದ್ದಾರೆ.ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದುಗ್ಗಮ್ಮನ ಗುಡಿಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ. ತಾವೆಲ್ಲರೂ ಪಾರದರ್ಶವಾಗಿ ಇದ್ದೇವೆಂದು ಹೇಳುವಂತಹ ಟ್ರಸ್ಟಿಗಳು, ಜು.12ರ ಬೆಳಗಿನ ಜಾವ 5 ಗಂಟೆಗೆ ದೇವಿ ಆಭರಣ ಕಳವಿನ ಆರೋಪಿಗಳಾದ ಆಕಾಶ್ ಹಾಗೂ ಲಾಂಚ್ ಎಂಬವರನ್ನು ದುರ್ಗಾಂಬಿಕಾ ಶಾಲೆಯಲ್ಲಿ ಕೂಡಿ ಹಾಕಿ ಹೊಡೆದಿದ್ದು ಏಕೆ ಎಂದು ಪ್ರಶ್ನಿಸಿದರು.
ದೇವಿ ಆಭರಣಗಳು ಕಳವಾದ ಬಗ್ಗೆ ತಕ್ಷಣವೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಬೇಕಾಗಿತ್ತು. ದುಗ್ಗಮ್ಮನ ದೇವಸ್ಥಾನವೇನು ಟ್ರಸ್ಟಿಗಳ ಮನೆಯ ಆಸ್ತಿಯಾ? ದೇವಸ್ಥಾನ ಸಮಿತಿ ದೂರಿನಲ್ಲಿ 200 ಗ್ರಾಂ ಚಿನ್ನಾಭರಣ ಕಳವಾದ ಬಗ್ಗೆ ದೂರಿದ್ದಾರೆ. ಆದರೆ, ಪ್ರತಿ ಆಭರಣಗಳ ಟಚ್, ತೂಕದ ಉಲ್ಲೇಖವೇ ಇಲ್ಲ ಏಕೆ? ದೂರು ದಾಖಲಿಸಿದ ಪೊಲೀಸರು ಆಭರಣಗಳನ್ನು ಹೇಗೆ ಜಪ್ತಿ ಮಾಡುತ್ತಾರೆ? ದುಗ್ಗಮ್ಮ ದೇವಸ್ಥಾನದ ಹಿಂದಿನ ಹಲವಾರು ಅಕ್ರಮಗಳ ಬಳಿ ನನ್ನ ಬಳಿ ದಾಖಲೆಗಳಿವೆ ಎಂದರು.
ಬಾಪೂಜಿ ವಿದ್ಯಾಸಂಸ್ಥೆಯಲ್ಲಿ ಉದ್ಯೋಗಿಯಾದ ವ್ಯಕ್ತಿ ದೇವಸ್ಥಾನ ಟ್ರಸ್ಟಿ ಆಗಬಾರದೆಂದು ನಾನೇನೂ ಹೇಳಿಲ್ಲ. ಆದರೆ, ತಾನು ನೌಕರಿ ಮಾಡುವ ಸಂಸ್ಥೆಯ ಮುಖ್ಯಸ್ಥ ದೇವಸ್ಥಾನದ ಅಧ್ಯಕ್ಷ ಎಸ್.ಎಸ್. ಮಲ್ಲಿಕಾರ್ಜುನ ಅವರಿಗೆ ಪ್ರಶ್ನಿಸಲು ಅಂತಹ ನೌಕರನಿಂದ ಸಾಧ್ಯವೇ ಅಂತಾ ಮಾತ್ರ ಕೇಳಿದ್ದೇನೆ. ತಮ್ಮ ವಿರುದ್ಧ ಪ್ರತಿಭಟನೆ ಮಾಡುವುದಾದರೆ ಹೊಂಡದ ಸರ್ಕಲ್‌ನಲ್ಲಿ ಜರ್ಮನ್ ಟೆಂಟ್‌ನ ಶಾಮಿಯಾನ ಹಾಕಿಸಿಕೊಡುತ್ತೇನೆ. ನಾನು ಕೇಳುವಂತಹ ಪ್ರಶ್ನೆಗಳಿಗೆ ಟ್ರಸ್ಟಿಗಳು ಉತ್ತರ ಕೊಡಲಿ ಎಂದರು.
ದುಗ್ಗಮ್ಮ ದೇವಸ್ಥಾನದಿಂದ ಮಳಿಗೆಗಳ ನಿರ್ಮಾಣದ ವಿಚಾರದಲ್ಲಿ ಆಗಿನ ಸಮಿತಿ ಅಧ್ಯಕ್ಷ, ಮಾಜಿ ಶಾಸಕ ಯಜಮಾನ್ ಮೋತಿ ವೀರಣ್ಣ, ಕಾರ್ಯದರ್ಶಿ ಕೊಟ್ರ ಬಸಪ್ಪ ರಾಜೀನಾಮೆಯನ್ನು ಪಡೆದಿದ್ದರು. ಈಗಲೂ ಟ್ರಸ್ಟಿಗಳಿಗೆ, ಅಧ್ಯಕ್ಷರಿಗೆ ಮರ್ಯಾದೆ ಇದ್ದರೆ ದೇವಸ್ಥಾನ ಸಮಿತಿ ಅಧ್ಯಕ್ಷ ಎಸ್.ಎಸ್. ಮಲ್ಲಿಕಾರ್ಜುನ ಸೇರಿದಂತೆ ಎಲ್ಲ ಟ್ರಸ್ಟಿಗಳೂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ. ಅನಂತರ ಜನರಿಂದ ಮತ್ತೆ ಆಯ್ಕೆಯಾಗಲಿ. ದೇವಸ್ಥಾನದಲ್ಲಿ ಆದ ಎಲ್ಲ ಅಕ್ರಮಗಳಿಗೂ ಟ್ರಸ್ಟ್ ಅಧ್ಯಕ್ಷ ಎಸ್.ಎಸ್. ಮಲ್ಲಿಕಾರ್ಜುನ ನೇರ ಹೊಣೆ ಎಂದು ಯಶವಂತ ರಾವ್ ಆರೋಪಿಸಿದರು.ಬಿಜೆಪಿ ಹಿರಿಯ ಮುಖಂಡರಾದ ಎಂ.ಹಾಲೇಶ, ಬಿ.ರಮೇಶ ನಾಯ್ಕ, ಗೋವಿಂದರಾಜು, ಟಿಂಕರ್ ಮಂಜಣ್ಣ, ಶಿವನಗೌಡ ಟಿ.ಪಾಟೀಲ, ಎರ್ರಿಸ್ವಾಮಿ ಇತರರು ಇದ್ದರು.
- - -(ಟಾಪ್ ಕೋಟ್)
ಅಯೋಧ್ಯೆಯ ಶ್ರೀರಾಮ ಮಂದಿರದ ಬಗ್ಗೆ ನಾವು ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸದೇ, ನಮ್ಮದೇ ಹಣದಲ್ಲಿ ಬೆಳ್ಳಿ ಇಟ್ಟಿಗೆ ನೀಡಿದ ಬಗ್ಗೆ ಎಸ್.ಎಸ್. ಮಲ್ಲಿಕಾರ್ಜುನ ಉಡಾಫೆಯಾಗಿ ಮಾತನಾಡಿದ್ದರು. ಬೆಳ್ಳಿ ಇಟ್ಟಿಗೆ ಸಮರ್ಪಿಸಿದ ದಾಖಲೆ ನೀಡಿದ್ದೇವೆ. ದುಗ್ಗಮ್ಮ ದೇವಸ್ಥಾನದ ಚಿನ್ನಾಭರಣಗಳ ದಾಖಲೆಗಳನ್ನು ಟ್ರಸ್ಟ್ ಅಧ್ಯಕ್ಷ ಎಸ್.ಎಸ್. ಮಲ್ಲಿಕಾರ್ಜುನ, ಟ್ರಸ್ಟಿಗಳು ಸಾರ್ವಜನಿಕರ ಮುಂದಿಟ್ಟು ಅಕ್ರಮಗಳ ಬಗ್ಗೆ ಉತ್ತರ ಕೊಡಲಿ.- ಯಶವಂತ ರಾವ್ ಜಾಧವ್, ಬಿಜೆಪಿ ಹಿರಿಯ ಮುಖಂಡ.
- - --3ಕೆಡಿವಿಜಿ5: ಬಿಜೆಪಿ ಮುಖಂಡ ಯಶವಂತ ರಾವ್ ಜಾಧವ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.