ಮತದಾನ ಮೂಲಕ ದೇಶದ ರಕ್ಷಣೆಗೆ ಮುಂದಾಗಿ: ಗೋಪಾಲಕೃಷ್ಣ

| Published : Mar 29 2024, 12:49 AM IST

ಮತದಾನ ಮೂಲಕ ದೇಶದ ರಕ್ಷಣೆಗೆ ಮುಂದಾಗಿ: ಗೋಪಾಲಕೃಷ್ಣ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರಿನಲ್ಲಿ ಗುರುವಾರ ನಡೆದ ಮತದಾನ ಜಾಗೃತಿ ಜಾಥಾಕ್ಕೆ ಜಿಪಂ ಸಿಇಓ ಡಾ.ಗೋಪಾಲಕೃಷ್ಣ ಅವರು ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು ಕಳೆದ ವಿಧಾನಸಭಾ ಹಾಗೂ ಲೋಕಸಭಾ ಚುನಾವಣೆಗಳಲ್ಲಿ ಜಿಲ್ಲೆಯಲ್ಲಿ ಅತಿ ಕಡಿಮೆ ಮತದಾನವಾಗಿದ್ದು, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಪ್ರತಿಯೊಬ್ಬರು ಕಡ್ಡಾಯ ಮತದಾನ ಮಾಡುವ ಮೂಲಕ ದೇಶದ ರಕ್ಷಣೆಗೆ ಮುಂದಾಗಬೇಕೆಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಸ್ವೀಪ್ ಅಧ್ಯಕ್ಷ ಡಾ. ಬಿ. ಗೋಪಾಲಕೃಷ್ಣ ಅವರು ಕರೆ ನೀಡಿದರು. ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ ಹಾಗೂ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಸ್ವೀಪ್ ಸಮಿತಿ, ತಾಲೂಕು ಪಂಚಾಯಿತಿ ಸಹಯೋಗದಲ್ಲಿ ಗುರುವಾರ ಏರ್ಪಡಿಸಲಾಗಿದ್ದ ಮತದಾನ ಜಾಗೃತಿ ಕಾರ್ಯಕ್ರಮದ ನನ್ನ ಮತ ನನ್ನ ಹಕ್ಕು ಜಾಥಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಎನ್.ಆರ್ ಪುರ, ಕೊಪ್ಪದಲ್ಲಿ ರಂಗೋಲಿ ಸ್ಪರ್ಧೆ, ಮಾನವ ಸರಪಳಿ, ಬೈಕ್‌ ಜಾಥ ಮುಂತಾದ ಹಲವು ಕಾರ್ಯಕ್ರಮಗಳ ಮೂಲಕ ಮತದಾನ ಜಾಗೃತಿ ಕಾರ್ಯ ಕ್ರಮ ನಡೆಸಲಾಗಿದೆ. ಜಿಲ್ಲೆಯ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಹಾಗೂ 2019 ಲೋಕಸಭಾ ಚುನಾವಣೆಯಲ್ಲಿ ಅತಿ ಕಡಿಮೆ ಮತದಾನವಾಗಿದ್ದು, ಈ ಬಾರಿ ಇದಕ್ಕಿಂತ ಚುನಾವಣಾ ಆಯೋಗದ ಆದೇಶದಂತೆ ಶೇ.5 ರಷ್ಟು ಹೆಚ್ಚು ಮಾಡಲು ಗುರಿ ಹೊಂದಲಾಗಿದೆ ಎಂದರು. ನಗರದಲ್ಲಿ ಮತಗಟ್ಟೆಗೆ ಬಂದು ಮತದಾನ ಮಾಡಿರುವವರ ಸಂಖ್ಯೆ ಕಡಿಮೆ ಇದ್ದು ವಲಸೆ ಹೋಗಿರಬಹುದು, ಮುಂತಾದ ಹಲವಾರು ಕಾರಣಗಳಿಂದ ಮತದಾನ ಕುಂಠಿತವಾಗಿದೆ. ನಮ್ಮ ಎಲ್ಲಾ ಸಿಬ್ಬಂದಿ ವರ್ಗ ತಂಡಗಳು ಸರ್ಕಾರಿ ನೌಕರರು ಮತಗಟ್ಟೆವಾರು ಶೇ.10 ರಷ್ಟು ಮತದಾನ ಕಡಿಮೆ ಆಗಿದೆ ಆ ಮತಗಟ್ಟೆ ವ್ಯಾಪ್ತಿಯಲ್ಲಿ ಮತದಾನ ಜಾಗೃತಿ ನಡೆಸಲಾಗುತ್ತಿದೆ ಎಂದು ಹೇಳಿದರು. ವೃದ್ಧಾಶ್ರಮದಲ್ಲಿ ಹಾಗೂ ಯುವಕರಲ್ಲಿ ಮತದಾನದ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ನಗರದ ಎಂ.ಜಿ. ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಹಬ್ಬದ ರೀತಿ ಮತದಾನ ಚುನಾವಣಾ ಹಬ್ಬವನ್ನಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ವಿವರಿಸಿದರು. ದೇಶೀ ಕ್ರೀಡೆ, ವಿವಿಧ ಬಗೆಯ ತಿಂಡಿ ತಿನಿಸುಗಳು ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಮತದಾನ ಜಾಗೃತಿಯನ್ನು ಮುಂದಿನ ವಾರದಿಂದ ರಸ್ತೆಗಳಲ್ಲಿ ಆಯೋಜಿಸಲಾಗುವುದು ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು 15 ಪ್ರಶ್ನೆಗಳಿಗೆ ನಡೆಸಲಾಗುವುದು ಈ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಅಡ್ವೆಂಚರ್‌ಗೆ ಆಯ್ಕೆ ಮಾಡಲು ನಿರ್ಧರಿಸಲಾಗಿದೆ ಎಂದರು. ಈ ಸಂದರ್ಭದಲ್ಲಿ ತಾ.ಪಂ. ಕಾರ್ಯನಿರ್ವಾಹಕಅಧಿಕಾರಿ ಪೂರ್ಣಿಮ, ಸಹಾಯಕ ನಿರ್ದೇಶಕರಾದ ಜಯಸಿಂಹ, ಪರಮೇಶ್, ದಿವಾಕರ್ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು, ಸಿಬ್ಬಂದಿ ಮತ್ತು ತಾಲ್ಲೂಕು ವ್ಯಾಪ್ತಿಯ ಸ್ವಸಹಾಯ ಸಂಘದ ಮಹಿಳೆಯರು ಈ ಮತದಾನ ಜಾಗೃತಿ ಜಾಥಾದಲ್ಲಿ ಭಾಗವಹಿಸಿದ್ದರು.