ಗೋವಾ ಅರಣ್ಯ ಸಿಬ್ಬಂದಿಯಿಂದ ಯುವಕರಿಗೆ ಥಳಿತ, ಹಣ ವಸೂಲಿ?

| Published : Jun 27 2024, 01:03 AM IST

ಸಾರಾಂಶ

ಜಲಪಾತ ವಿಕ್ಷಣೆಗೆಂದು ಹೋಗಿದ್ದ ಬೆಳಗಾವಿ ಮೂಲದ ಯುವಕರನ್ನು ಗೋವಾ ರಾಜ್ಯದ ಅರಣ್ಯ ಇಲಾಖೆ ಅಧಿಕಾರಿ ಹಾಗೂ ಸಿಬ್ಬಂದಿ ಮನಬಂದಂತೆ ಥಳಿಸಿ ಹಣ ಕಸಿದುಕೊಂಡು ಕಳಿಸಿರುವ ಆರೋಪ ಕೇಳಿ ಬಂದಿದೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ಜಲಪಾತ ವಿಕ್ಷಣೆಗೆಂದು ಹೋಗಿದ್ದ ಬೆಳಗಾವಿ ಮೂಲದ ಯುವಕರನ್ನು ಗೋವಾ ರಾಜ್ಯದ ಅರಣ್ಯ ಇಲಾಖೆ ಅಧಿಕಾರಿ ಹಾಗೂ ಸಿಬ್ಬಂದಿ ಮನಬಂದಂತೆ ಥಳಿಸಿ ಹಣ ಕಸಿದುಕೊಂಡು ಕಳಿಸಿರುವ ಆರೋಪ ಕೇಳಿ ಬಂದಿದೆ.

ಬೆಳಗಾವಿ ಮತ್ತು ಗೋವಾ ಗಡಿಯಲ್ಲಿರುವ ಖಾನಾಪೂರ ತಾಲೂಕಿನ ಕಣಕುಂಬಿ ಬಳಿಯ ಸೂರಲ್ ಜಲಪಾತ ಬಳಿ ಈ ಘಟನೆ ನಡೆದಿದೆ. ಹುಕ್ಕೇರಿ ತಾಲೂಕಿನ ಸಂಕೇಶ್ವರದ ಐವರು ಯುವಕರ ತಂಡವನ್ನು ಗೋವಾ ಅರಣ್ಯ ಅಧಿಕಾರಿಗಳು ತಡೆದು ಥಳಿಸಿದ್ದಾರೆ. ಬೆನ್ನು, ಕಾಲು ಕೈಗೆ ಬಾಸುಂಡೆ ಬರುವ ಹಾಗೆ ಥಳಿಸಿ ವಿಕೃತಿ ತೋರಿದ್ದಾರೆ. ಮಳೆಗಾಲ ಆರಂಭ ಆಗುತ್ತಿದ್ದಂತೆ ಕರ್ನಾಟಕದಿಂದ ಅತಿಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಇಲ್ಲಿಗೆ ತೆರಳುವುದು ಸಾಮಾನ್ಯ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಗೋವಾ ಅರಣ್ಯ ಇಲಾಖೆ ಸಿಬ್ಬಂದಿ ಪ್ರವಾಸಿಗರಿಂದ ಹೆಚ್ಚಿನ ಹಣ ವಸೂಲಿ ಮಾಡುವುದಲ್ಲದೆ, ಪ್ರಶ್ನಿಸಿದರೆ ದಬ್ಬಾಳಿಕೆ ನಡೆಸುವ ಜತೆಗೆ ಹಲ್ಲೆಯನ್ನು ಮಾಡುತ್ತಿರುವ ಆರೋಪ ಮೇಲಿಂದ ಮೇಲೆ ಕೇಳಿ ಬರುತ್ತಲೇ ಇದೆ. ಹಲ್ಲೆ ಮಾಡಿದ್ದಲ್ಲದೇ ಪರ್ಸ್‌ನಲ್ಲಿದ್ದ ಹಣವನ್ನೂ ಕಿತ್ತುಕೊಂಡಿದ್ದಾರೆ. 1 ಸಾವಿರ ಹಣವನ್ನು ಫೋನ್ ಪೇ ಮಾಡಿಸಿಕೊಂಡಿದ್ದು ಸೇರಿ ಒಟ್ಟು ₹ 9 ಸಾವಿರ ಹಣ ಕಿತ್ತುಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ದೌರ್ಜನ್ಯವನ್ನು ಸಾವಿರಾರು ಪ್ರವಾಸಿಗರು ಅನುಭವಿಸುತ್ತಿದ್ದು, ಯಾರೂ ದೂರು ನೀಡುತ್ತಿಲ್ಲ ಎಂದು ಹಲ್ಲೆಗೊಳಗಾದವರು ತಮಗಾದ ನೋವು ತೋಡಿಕೊಂಡಿದ್ದಾರೆ. ಈ ರೀತಿ ಹಲ್ಲೆಗೆ ಒಳಗಾದ ಯುವಕರು ವಿಡಿಯೋ ಮಾಡಿ ಕೂಡ ಹರಿಬಿಟ್ಟಿದ್ದು, ಇದು ಈಗ ವೈರಲ್‌ ಆಗಿದೆ.