ಮೇಕೆದಾಟು ಹೋರಾಟಕ್ಕೆ ಜಯಸಿಗಲಿದೆ: ರಮೇಶ್ ಗೌಡ ವಿಶ್ವಾಸ

| Published : Feb 20 2025, 12:48 AM IST

ಸಾರಾಂಶ

ಕನ್ನಡದ ಅಸ್ಮಿತೆಗಾಗಿ ಮಾಡುವ ಹೋರಾಟಗಳಿಗೆ ಒಂದಲ್ಲಾ ಒಂದು ದಿನ ಜಯ ಸಿಕ್ಕೇ ಸಿಗುತ್ತದೆ. ಮೇಕೆದಾಟು ಅಣೆಕಟ್ಟೆ ನಿರ್ಮಾಣದ ವೇದಿಕೆ ಹೋರಾಟಕ್ಕೂ ಗೆಲುವು ಸಿಗುತ್ತದೆ ಎಂದು ಕಕಜ ವೇದಿಕೆ ರಾಜ್ಯಾಧ್ಯಕ್ಷ ರಮೇಶ್‌ಗೌಡ ವಿಶ್ವಾಸ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಚನ್ನಪಟ್ಟಣ

ಕನ್ನಡದ ಅಸ್ಮಿತೆಗಾಗಿ ಮಾಡುವ ಹೋರಾಟಗಳಿಗೆ ಒಂದಲ್ಲಾ ಒಂದು ದಿನ ಜಯ ಸಿಕ್ಕೇ ಸಿಗುತ್ತದೆ. ಮೇಕೆದಾಟು ಅಣೆಕಟ್ಟೆ ನಿರ್ಮಾಣದ ವೇದಿಕೆ ಹೋರಾಟಕ್ಕೂ ಗೆಲುವು ಸಿಗುತ್ತದೆ ಎಂದು ಕಕಜ ವೇದಿಕೆ ರಾಜ್ಯಾಧ್ಯಕ್ಷ ರಮೇಶ್‌ಗೌಡ ವಿಶ್ವಾಸ ವ್ಯಕ್ತಪಡಿಸಿದರು.

ಕಾವೇರಿ ನದಿ ನೀರಿನ ಹಂಚಿಕೆಯಲ್ಲಿ ಸಂಕಷ್ಟ ಸೂತ್ರ ರಚಿಸುವ ಜೊತೆಗೆ ಮೇಕೆದಾಟು ಯೋಜನೆಗೆ ಅಡಿಗಲ್ಲು ಹಾಕುವಂತೆ ಹಾಗೂ ಸತ್ತೇಗಾಲ ಯೋಜನೆಯನ್ನು ಶೀಘ್ರವಾಗಿ ಮುಕ್ತಾಯ ಮಾಡುವಂತೆ ಆಗ್ರಹಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ರಾಜ್ಯಾಧ್ಯಕ್ಷರಾದ ರಮೇಶ್‌ಗೌಡರ ನೇತೃತ್ವದಲ್ಲಿ ನಡೆಸುತ್ತಿರುವ ಪ್ರತಿದಿನ ಒಂದು ತಾಸು ಪ್ರತಿಭಟನೆ ೫೦೦ನೇ ದಿನ ಪೂರೈಸಿದ ಹಿನ್ನೆಲೆಯಲ್ಲಿ ಅವರು ೫೦೦ ಸಸಿಗಳ ವಿತರಣೆ ಮಾಡಿ, ಪುಸ್ತಕಗಳನ್ನು ವಿತರಿಸಿ, ಗಣ್ಯರಿಗೆ ಸನ್ಮಾನಿಸಿ ಮಾತನಾಡಿದರು.

ನಾಡಿನ ನೆಲ, ಜಲ, ಭಾಷೆಯ ಅಸ್ಮಿತೆಯ ಉಳಿವಿಗಾಗಿ ಮಾಡುವ ಹೋರಾಟಗಳಿಗೆ ಒಂದಲ್ಲಾ ಒಂದು ದಿನ ಜಯ ಸಿಗುತ್ತದೆ ಎಂಬುದಕ್ಕೆ ಮದ್ದೂರಮ್ಮನ ಕೆರೆ ಹೋರಾಟವೇ ಸಾಕ್ಷಿಯಾಗಿದೆ. ನಮ್ಮ ಹೋರಾಟದ ಫಲವಾಗಿ ಮದ್ದೂರಮ್ಮನ ಕೆರೆಗೆ ನೀರು ಹರಿಯಿತು. ಇದೇ ನಿಟ್ಟಿನಲ್ಲಿ ಮೇಕೆದಾಟು ಅಣೆಕಟ್ಟೆ ನಿರ್ಮಾಣ ಮತ್ತು ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಸಂಕಷ್ಟ ಸೂತ್ರ ರಚಿಸುವಂತೆ ನಿರಂತರವಾಗಿ ಹೋರಾಟ ಮಾಡುತ್ತಾ ಬಂದಿದ್ದು, ಇದಕ್ಕೂ ಮುಂದೆ ಜಯ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜೆಡಿಎಸ್ ಮುಖಂಡ ಗೋವಿಂದಹಳ್ಳಿ ನಾಗರಾಜು ಮಾತನಾಡಿ, ಮೇಕೆದಾಟು ಯೋಜನೆಯ ಹೆಸರಲ್ಲಿ ಪಾದಯಾತ್ರೆ ಮಾಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಇಂದು ಮೇಕೆದಾಟು ಯೋಜನೆಯನ್ನು ಮರೆತಿದೆ. ಕಾಂಗ್ರೆಸ್‌ನವರು ಸಿಎಂ ಕುರ್ಚಿಗಾಗಿ ಕಿತ್ತಾಡುತ್ತಿದ್ದಾರೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಕೇಂದ್ರದಲ್ಲಿ ಮೇಕೆದಾಟು ಯೋಜನೆಯ ಬಗ್ಗೆ ಚರ್ಚೆ ಮಾಡಿದ್ದಾರೆ. ರಾಜ್ಯ ಸರ್ಕಾರ ಈ ಬಗ್ಗೆ ಸಹಕಾರ ನೀಡಿದರೆ ಮೇಕೆದಾಟು ಅಣೆಕಟ್ಟೆ ಆಗುತ್ತದೆ ಎಂದು ತಿಳಿಸಿದರು.

ನಗರಸಭೆ ಅಧ್ಯಕ್ಷ ವಾಸೀಲ್ ಅಲಿಖಾನ್ ಮಾತನಾಡಿ, ಕಾವೇರಿ ನದಿ ನೀರು ನಮ್ಮ ಹಕ್ಕು ಆದರೆ ಕಾವೇರಿ ನದಿ ನಮ್ಮಲ್ಲಿ ಹುಟ್ಟಿ ತಮಿಳುನಾಡಿಗೆ ಹೆಚ್ಚಿನ ಅನುಕೂಲ ಆಗುತ್ತಿರುವುದು ನಮ್ಮ ದುರಾದೃಷ್ಟ. ಮೇಕೆದಾಟು ಯೋಜನೆಗೆ ತಮಿಳುನಾಡು ಅಡ್ಡಿಯಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸಬೇಕು ಎಂದು ಒತ್ತಾಯಿಸಿದರು.

ಜ್ಞಾನ ಸರೋವರ ಕಾಲೇಜಿನ ಉಪನ್ಯಾಸಕ ಹೊಳಸಾಲಯ್ಯ, ಡಾ. ರಾಜ್ ಕಲಾಬಳಗದ ಅಧ್ಯಕ್ಷ ಎಲೇಕೇರಿ ಮಂಜುನಾಥ್, ಪರಿಸರ ಪ್ರೇಮಿ ಎಂ.ಎನ್.ಹೊಸಹಳ್ಳಿ ರವಿಕುಮಾರ್, ನಿವೃತ್ತ ಪ್ರಾಂಶುಪಾಲ ನಿಂಗೇಗೌಡರು (ಎನ್‌ಜಿ), ಮತ್ತೀಕೆರೆ ರಾಮಸ್ವಾಮಿ ಮಾತನಾಡಿದರು.

ವೇದಿಕೆ ಜಿಲ್ಲಾಧ್ಯಕ್ಷ ಬಿ.ಸಿ. ಯೋಗೇಶ್‌ಗೌಡ, ತಾಲೂಕು ಅಧ್ಯಕ್ಷ ಸತೀಶ್ ಬೈರಾಪಟ್ಟಣ, ಕನ್ನಡ ಸೇನೆಯ ರಾಜ್ಯ ಉಪಾಧ್ಯಕ್ಷ ಜಗದೀಶ್, ಕರವೇ (ಪ್ರವೀಣ ಶೆಟ್ಟಿ), ಜಿಲ್ಲಾಧ್ಯಕ್ಷ ರಾಜು, ಕರವೇ (ಸ್ವಾಭಿಮಾನಿ ಬಣ), ರಾಜ್ಯ ಉಸ್ತುವಾರಿ ಶಿವುಗೌಡ, ಜಿಲ್ಲಾಧ್ಯಕ್ಷ ಕಿರಣ್, ಅಂಬೇಡ್ಕರ್ ಸೇನೆಯ ಜಿಲ್ಲಾಧ್ಯಕ್ಷ ಕಿರಣ್‌ಸಾಗರ್, ಜಯಕರ್ನಾಟಕ ಜಿಲ್ಲಾಧ್ಯಕ್ಷ ರವಿಕುಮಾರ್, ತಾಲೂಕು ಉಪಾಧ್ಯಕ್ಷ ಚೇತನ್‌ಕುಮಾರ್, ಕಾರ್ಯದರ್ಶಿ ಪ್ರಸನ್ನ ಕುಮಾರ್, ತಾಲೂಕು ಅಧ್ಯಕ್ಷ ಗಂಗಾಧರ್, ಮಹಿಳಾ ಘಟಕದ ತಾಲೂಕು ಅಧ್ಯಕ್ಷೆ ಸುಧಾ, ತಾಪಂ ಮಾಜಿ ಸದಸ್ಯ ಮತ್ತೀಕೆರೆ ಹನುಮಂತಯ್ಯ, ಸಾಹಿತಿ ರಾಂಪುರ ವಿಜಯ್ ಇತರರು ಇದ್ದರು.