ಸಾರಾಂಶ
ಗಿಣಿಯಂಗ ಸಾಕಿದಂತಹ ನಮ್ಮ ಮಕ್ಕಳು ಇಂಥ ರಾಕ್ಷಸರು ಜೀವಂತ ಇರಾಕ ಬಿಡಂಗಿಲ್ಲ ಸಾಹೇಬ್ರ. ನಾನೂ ಮುಂದಿನ ಜನ್ಮದಾಗ ಹೆಣ್ಮಗಳಾಗಿ ಹುಟ್ಟಬಾರದು ಎಂದು ಆ ದ್ಯಾವ್ರಲ್ಲಿ ಬೇಡಿಕೊಳ್ಳತೇನಿ ನೋಡ್ರಿ... ಎಂದು ರೋದಿಸುತ್ತಿದ್ದಳು. ಇದನ್ನು ಕೇಳಿ ಸುತ್ತಮುತ್ತಲಿದ್ದವರ ಕರಳು ಚುರ್ರ ಎನ್ನುತ್ತಿತ್ತು.
ಹುಬ್ಬಳ್ಳಿ: ಮುಂದಿನ ಜನ್ಮ ಅಂಥ ಇದ್ದರೆ ನನ್ನ ಹೆಣ್ಮಗಳಾಗಿ ಹುಟ್ಟಿಸಬೇಡ ಅಂಥ ಆ ದ್ಯಾವ್ರಲ್ಲಿ ಬೇಡಿಕೊಳ್ತೇನೆ ನೋಡ್ರಿ..,
ತಂದೆ ತಾಯಿಗಳಾದ ನಾವು ಮಕ್ಕಳನ್ನು ಗಿಣಿಯಂಗ ಸಾಕತೇವಿ... ಆದ್ರ ಇಂಥ ರಾಕ್ಷಸರು ಅವರನ್ನು ಜೀವಂತ ಇರಲು ಬಿಡಂಗಿಲ್ಲರ್ರಿ ಸಾಹೇಬ್ರ.. ಹೀಂಗ ಆದ್ರ ಹ್ಯಾಂಗ್ರಿ. ಹೆಣ್ಮಕ್ಕಳು ಬದುಕಾಬಾರದೇನ್ರಿ.. ಇಂಥ ಕೃತ್ಯಕ್ಕೆಲ್ಲ ಶಿಕ್ಷೆ ಇಲ್ಲ ಏನ್ರಿ..!ಇದು ಮೃತಪಟ್ಟ ಬಾಲಕಿಯ ತಾಯಿ ಲತಾ ಪುರಿ ತನ್ನ ಕಂದಮ್ಮಳನ್ನು ನೆನೆದು ರೋದಿಸುತ್ತಿದ್ದ ದೃಶ್ಯ. ಬಿಹಾರ ಮೂಲದ ರಿತೇಶಕುಮಾರ ಕ್ರಾಂತಿ ಎಂಬ ಯುವಕ ಐದು ವರ್ಷದ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಆಕೆಯನ್ನು ಹತ್ಯೆಗೈದಿರುವುದು ಇಡೀ ನಗರದಲ್ಲೇ ಭಾರೀ ಆಕ್ರೋಶವನ್ನುಂಟು ಮಾಡಿತ್ತು.
ಅಶೋಕನಗರ ಪೊಲೀಸ್ ಠಾಣೆ, ಕೆಎಂಸಿಆರ್‌ಐ, ಚೆನ್ನಮ್ಮ ಸರ್ಕಲ್‌ಗಳಲ್ಲಿ ತೀವ್ರ ಪ್ರತಿಭಟನೆ ಮಾಡಲಾಗುತ್ತಿತ್ತು. ಕೆಎಂಸಿ ಆರ್‌ಐನಲ್ಲಿ ತಾಯಿ ಲತಾ ಕುರಿ ಅವರನ್ನು ಕಂಡು ಜನಪ್ರತಿನಿಧಿಗಳು ಸಾಂತ್ವನ ಹೇಳುತ್ತಿದ್ದರು. ಆಗ ಬರುತ್ತಿದ್ದ ಎಲ್ಲ ಜನಪ್ರತಿನಿಧಿಗಳ ಮುಂದೆ, ಹೆಣ್ಮಕ್ಕಳಾಗಿ ಹುಟ್ಟಬಾರದು. ಗಿಣಿಯಂಗ ಸಾಕಿದಂತಹ ನಮ್ಮ ಮಕ್ಕಳು ಇಂಥ ರಾಕ್ಷಸರು ಜೀವಂತ ಇರಾಕ ಬಿಡಂಗಿಲ್ಲ ಸಾಹೇಬ್ರ. ನಾನೂ ಮುಂದಿನ ಜನ್ಮದಾಗ ಹೆಣ್ಮಗಳಾಗಿ ಹುಟ್ಟಬಾರದು ಎಂದು ಆ ದ್ಯಾವ್ರಲ್ಲಿ ಬೇಡಿಕೊಳ್ಳತೇನಿ ನೋಡ್ರಿ... ಎಂದು ರೋದಿಸುತ್ತಿದ್ದಳು. ಇದನ್ನು ಕೇಳಿ ಸುತ್ತಮುತ್ತಲಿದ್ದವರ ಕರಳು ಚುರ್ರ ಎನ್ನುತ್ತಿತ್ತು. ಈ ದಂಪತಿಗೆ ಇಬ್ಬರೂ ಮಕ್ಕಳು ಹೆಣ್ಮಕ್ಕಳೇ. ಅದರಲ್ಲಿ ದೊಡ್ಡವಳು ವಿಕಲಚೇತನೆ. ಸ್ವತಂತ್ರವಾಗಿ ನಡೆದಾಡಲು ಬರಲ್ಲವಂತೆ. ಈಕೆಗೆ ಏಳೂವರೆ ವರ್ಷ. ಇನ್ನು ಎರಡನೆಯ ಮಗಳಿಗೆ ಐದು ವರ್ಷ. ಎರಡನೆಯ ಮಗಳೇ ಇದೀಗ ರಾಕ್ಷಸೀ ಕೃತ್ಯಕ್ಕೆ ಬಲಿಯಾಗಿದ್ದಾಳೆ.ತಾಯಿ ಲತಾ ಹುಬ್ಬಳ್ಳಿ ಮೂಲದವಳಾದರೆ, ತಂದೆ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನವನು. ಊರಲ್ಲಿ ಅಷ್ಟೊಂದು ಕೆಲಸ ಸಿಗಲ್ಲ. ಹುಬ್ಬಳ್ಳಿಯಲ್ಲಾದರೆ ಕೆಲಸಕ್ಕೆ ಕೊರತೆ ಇರಲ್ಲ ಎಂದುಕೊಂಡು ತಮ್ಮ ಮಕ್ಕಳೊಂದಿಗೆ ಕಳೆದ ಕೆಲ ವರ್ಷದಿಂದ ಬಂದು ನೆಲೆಸಿದ್ದಾರೆ.
ತಂದೆ ಪೇಂಟಿಂಗ್ ಕೆಲಸ ಮಾಡುತ್ತಿದ್ದರೆ, ತಾಯಿ ಮನೆ ಕೆಲಸ ಮಾಡುತ್ತಿದ್ದಳು. ಪ್ರತಿನಿತ್ಯ ತಾಯಿಯೊಂದಿಗೆ ಮಗಳು ಹೋಗುತ್ತಿದ್ದಳು. ಅದರಂತೆ ಇವತ್ತು ಬೆಳಗ್ಗೆ ಕೂಡ ಹೋಗಿದ್ದಳು. ಬಾಲಕಿ ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದರೆ, ತಾಯಿ ಮನೆಯ ಒಳಗೆ ಕೆಲಸ ಮಾಡುತ್ತಿದ್ದಳಂತೆ. ಇದೇ ವೇಳೆ ಆ ರಾಕ್ಷಸ ಅಪಹರಿಸಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಆಗ ಬಾಲಕಿ ಚೀರಾಡಿದ್ದರಿಂದ ಎಲ್ಲಿ ಸಿಕ್ಕು ಬೀಳುತ್ತೇನೆ ಎಂದುಕೊಂಡು ಕತ್ತು ಹಿಸುಕಿ ಕೊಂದೇ ಹಾಕಿದ್ದಾನೆ.ಆದರೆ ಹೆಣ್ಮಕ್ಕಳ ಈಗಿನ ಪರಿಸ್ಥಿತಿ ಬಗ್ಗೆ ಹೆಣ್ಮಕ್ಕಳಾಗಿ ಹುಟ್ಟಬಾರದ್ರಿ.. ಎಂದು ಹೇಳುತ್ತಿದ್ದರೆ ಸುತ್ತಲಿದ್ದವರ ಕಣ್ಣಂಚಲ್ಲೂ ನೀರು ಜಿನುಗುತ್ತಿದ್ದಿದ್ದು ಮಾತ್ರ ಸತ್ಯ.