ಮಳೆ, ಬೆಳೆ ದೇವರು ಶ್ರೀ ಪಾಡಿ ಇಗ್ಗುತ್ತಪ್ಪ ಕುಂಬ್ಯಾರ್‌ ಕಲಾಡ್ಚ ವಾರ್ಷಿಕೋತ್ಸವ ನಾಳೆ

| Published : Mar 22 2024, 01:01 AM IST

ಮಳೆ, ಬೆಳೆ ದೇವರು ಶ್ರೀ ಪಾಡಿ ಇಗ್ಗುತ್ತಪ್ಪ ಕುಂಬ್ಯಾರ್‌ ಕಲಾಡ್ಚ ವಾರ್ಷಿಕೋತ್ಸವ ನಾಳೆ
Share this Article
  • FB
  • TW
  • Linkdin
  • Email

ಸಾರಾಂಶ

ಸಕಾಲದಲ್ಲಿ ಮಳೆ ಆಗದಿದ್ದಾಗ ಶ್ರೀ ಪಾಡಿ ಇಗ್ಗುತ್ತಪ್ಪ ಭಕ್ತರು ಮಳೆಗಾಗಿ ಇಗ್ಗುತ್ತಪ್ಪನನ್ನು ಪ್ರಾರ್ಥಿಸುತ್ತಾರೆ. ಕಲ್ಲಾಡ್ಚ ಹಬ್ಬದ ಸಂದರ್ಭದಲ್ಲಿ ಸಾಮಾನ್ಯವಾಗಿ ಮಳೆಯಾಗುತ್ತದೆ. ಕಾಫಿ ಬೆಳೆಗಾರರು ಸಂತೋಷಗೊಳ್ಳುತ್ತಾರೆ. ಈ ಸಲ ಮಾ.೨೩ ಶನಿವಾರ ಹಬ್ಬ ಆಚರಣೆಯಾಗಲಿದೆ.

ದುಗ್ಗಳ ಸದಾನಂದ

ಕನ್ನಡಪ್ರಭ ವಾರ್ತೆ ನಾಪೋಕ್ಲು

ಕೊಡಗಿನ ಪ್ರಮುಖ ಆರಾಧನಾ ತಾಣ ಇಗ್ಗುತ್ತಪ್ಪ ದೇವಾಲಯ ಪ್ರಸಿದ್ಧಿ ಪಡೆದಿದೆ .ಇಲ್ಲಿನ ದೇವರು ಮಳೆ, ಬೆಳೆ ದೇವರು ಎಂದೇ ಖ್ಯಾತಿ ಹೊಂದಿದ್ದಾರೆ. ಶ್ರೀ ಇಗ್ಗುತಪ್ಪ ದೇವರ ಕುಂಬ್ಯಾರ್ ಕಲಾಡ್ಚ ವಾರ್ಷಿಕೋತ್ಸವ ಶನಿವಾರ ವಿಜೃಂಭಣೆಯಿಂದ ನಡೆಯಲಿದೆ .ಕೊಡವ ಭಾಷೆಯಲ್ಲಿ ಇಗ್ಗು ಅಂದರೆ ಅನ್ನ, ತಪ್ಪಾ ಅಂದರೆ ಕೊಡುವವ. ಹಾಗಾಗಿ ಇಗ್ಗುತ್ತಪ್ಪ ಎಂದರೆ ಅನ್ನ ಕೊಡುವ ದೇವರು ಎಂಬ ಅರ್ಥ ಸಿಗುತ್ತದೆ.ಸಕಾಲದಲ್ಲಿ ಮಳೆ ಆಗದಿದ್ದಾಗ ಭಕ್ತರು ಮಳೆಗಾಗಿ ಇಗ್ಗುತ್ತಪ್ಪನನ್ನು ಪ್ರಾರ್ಥಿಸುತ್ತಾರೆ. ಕಲ್ಲಾಡ್ಚ ಹಬ್ಬದ ಸಂದರ್ಭದಲ್ಲಿ ಸಾಮಾನ್ಯವಾಗಿ ಮಳೆಯಾಗುತ್ತದೆ. ಕಾಫಿ ಬೆಳೆಗಾರರು ಸಂತೋಷಗೊಳ್ಳುತ್ತಾರೆ. ಸಮೀಪದ ನೆಲಜಿಯ ಇಗ್ಗುತ್ತಪ್ಪ ದೇವಾಲಯದಲ್ಲಿ ಭಕ್ತರು ದೇವಾಲಯಕ್ಕೆ ಅಕ್ಕಿ, ಕಾಫಿ, ಕಾಳುಮೆಣಸನ್ನು ಹಬ್ಬದ ಸಂದರ್ಭದಲ್ಲಿ ಹರಕೆಯ ರೂಪದಲ್ಲಿ

ಒಪ್ಪಿಸುವುದು ವಾಡಿಕೆ.ಪೌರಾಣಿಕ ಹಿನ್ನೆಲೆ:

ಮಲ್ಮ ಬೆಟ್ಟ ಇಗ್ಗುತ್ತಪ್ಪನ ಮೂಲನೆಲೆ. ಪಾವಿತ್ರ್ಯತೆ ಮತ್ತು ದೈವ ನೆಲೆಯಾಗಿ ಖ್ಯಾತಿ ಪಡೆದಿದೆ. ಪಾಡಿ ಶ್ರೀ ಇಗ್ಗುತ್ತಪ್ಪ, ಪಾಲೂರಪ್ಪ (ಮಹಾಲಿಂಗೇಶ್ವರ) ತಿರುನೆಲ್ಲಿ ಪೆಮ್ಮಯ, ಬೆಂದ್ರುಕೋಲಪ್ಪ ಮತ್ತು ಪನ್ನಂಗಾಲತಮ್ಮೆ ದೇವಿ ಕೇರಳದಿಂದ ಬಂದು ಮೊದಲು ನೆಲೆಸಿದ ಪುಣ್ಯಸ್ಥಳ ಈ ಮಲ್ಮ ಬೆಟ್ಟ. ಇದನ್ನು ಇಗ್ಗುತ್ತಪ್ಪ ಬೆಟ್ಟವೆಂತಲೂ ಕರೆಯಲಾಗುತ್ತದೆ.ಪುರಾಣ ಕಥೆಯಂತೆ ಕೇರಳದಿಂದ ಬಂದ ನಾಲ್ಕು ಅಣ್ಣತಮ್ಮಂದಿಯರು ಮತ್ತು ತಂಗಿ ಮೊದಲು ಇಲ್ಲಿಗೆ ಬಂದರೆಂಬ ಪ್ರತೀತಿಯೂ ಇದೆ. ಕೇರಳ ರಾಜ್ಯದಿಂದ ಗುಹೆಯ ಮೂಲಕ ಬಂದರೆ ಬೆಟ್ಟದ ಇಳಿಜಾರಿನಲ್ಲಿ ಗುಹೆಯೊಂದಿದ್ದು, ಕೆಲವು ದೂರದವರೆಗೆ ಜನ ಸಂಚರಿಸಬಹುದಾಗಿದೆ. ಈ ಗುಹೆಯ ಮೂಲಕವೇ ಋಷಿಮುನಿಗಳು ಬಂದು ಈ ಸ್ಥಳದಲ್ಲಿ ಪೂಜೆ, ಧ್ಯಾನಗಳನ್ನು ಪೂರೈಸಿ ಮರಳುತ್ತಿದ್ದರೆಂದೂ ಹೇಳಲಾಗುತ್ತಿದೆ.

ಮಲ್ಮದಲ್ಲಿ ಬಂದು ನೆಲೆಸಿದ ದೇವಾನು ದೇವತೆಗಳು ಲೋಕ ಕಲ್ಯಾಣಕ್ಕಾಗಿ ಬೇರೆ ಬೇರೆ ಅಂದರೆ ಕಕ್ಕಬ್ಬೆ ಬಳಿಯ ಪಾಡಿ ಶ್ರೀ ಇಗ್ಗುತ್ತಪ್ಪ, ಯವಕಪಾಡಿಯ ಪನ್ನಂಗಾಲತಮ್ಮೆ, ನಾಪೋಕ್ಲು ಸಮೀಪದ ಪಾಲೂರಿನಲ್ಲಿ ಪಾಲೂರಪ್ಪ(ಮಹಾಲಿಂಗೇಶ್ವರ), ಕೇರಳ ರಾಜ್ಯದ ತಿರುನೆಲ್ಲಿಯಲ್ಲಿ ಪೆಮ್ಮಯ ಮತ್ತು ಅದರಾಚೆ ಬೆಂದ್ರುಕೋಲಪ್ಪ ನೆಲೆ ನಿಂತಿರುವುದು ಹಾಗೂ ಆ ದೇವಾಲಯಗಳಲ್ಲಿ ಪೂಜೆ ಪಡೆಯುತ್ತಿರುವುದು ಎಲ್ಲರಿಗೂ ತಿಳಿದಿದೆ.ಈ ಎಲ್ಲಾ ದೇವಾನು ದೇವತೆಗಳ ಪಾದ ಸ್ಪರ್ಶ ಈ ಪುಣ್ಯ ಭೂಮಿಯಲ್ಲಿ ಆಗಿದ್ದರೂ ಪಾಡಿ ಶ್ರೀ ಇಗ್ಗುತ್ತಪ್ಪ ದೇವರಬಲಿ ಮೂರ್ತಿಯನ್ನು ಮಾತ್ರ ವರ್ಷಕ್ಕೆ ಎರಡು ಬಾರಿ ಇಲ್ಲಿಗೆ ತಂದು ಪೂಜಾ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತಿದೆ.

ನೆಲಜಿ ಹಾಗೂ ಪೇರೂರು ಇಗ್ಗುತ್ತಪ್ಪ ದೇವಾಲಯಗಳ ತಕ್ಕ ಮುಖ್ಯಸ್ಥರು ಕೂಡ ಆ ಸಂದರ್ಭದಲ್ಲಿ ಇಲ್ಲಿಗೆ ಆಗಮಿಸಿ ದೇವತಾ ಕಾರ್ಯದಲ್ಲಿ ಪಾಲ್ಗೊಳ್ಳುತ್ತಾರೆ. ಹುತ್ತರಿ ಹಬ್ಬದ ಒಂದು ದಿನ ಮುಂಚಿತವಾಗಿ ಇಲ್ಲಿ ಮೊದಲ ಉತ್ಸವ ನಡೆಯುತ್ತದೆ. ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದ ತಕ್ಕ ಮುಖ್ಯಸ್ಥರು ಎತ್ತೇರಾಟ, ದೇವರ ಬಲಿ ಮೂರ್ತಿಯೊಂದಿಗೆ ಭಕ್ತಾದಿಗಳು ಆಗಮಿಸಿದರೆ, ನೆಲಜಿ ಹಾಗೂ ಪೇರೂರು ಇಗ್ಗುತ್ತಪ್ಪ ದೇವಾಲಯದಿಂದಲೂ ತಕ್ಕ ಮುಖ್ಯಸ್ಥರ ಎತ್ತೇರಾಟದ ಆಗಮನವಾಗುತ್ತದೆ. ನಂತರ ಮೂರು ದೇವಾಲಯಗಳ ತಕ್ಕ ಮುಖ್ಯಸ್ಥರೊಂದಿಗೆ ಇಲ್ಲಿ ಪೂಜಾ ವಿಧಿ ವಿಧಾನಗಳು

ನಡೆಯುತ್ತವೆ. ನಂತರದ ಕುಂಬ್ಯಾರು ಕಲ್ಯಾಡ್ಚ ಹಬ್ಬದಲ್ಲೂ ಇದೇ ಕಾರ್ಯಕ್ರಮಗಳಿರುತ್ತವೆ.

ಇಲ್ಲಿ ಇತರ ದೇವಾಲಯದಂತೆ ಗುಡಿ ಗೋಪುರಗಳಿಲ್ಲ. ಇಲ್ಲಿರುವುದು ಪುರಾತನದಲ್ಲಿ ಕಲ್ಲಿನಿಂದ ನಿರ್ಮಿಸಿದ ಆವರಣಗೋಡೆ. ಅದರ ಮಧ್ಯಭಾಗದಲ್ಲಿದೇವರ ಕಲ್ಲುಗಳು ಮಾತ್ರ. ಇದರ ಹಿಂಭಾಗದಲ್ಲಿ ದೇವರ ಬನವೊಂದಿದ್ದು, ಘೋರಾರಣ್ಯದಿಂದ ಭಯ ಭೀತಗೊಳಿಸುವಂತಿದೆ. ಅದರ ಬಳಿಯಲ್ಲಿಯೇ ಪುಟ್ಟದಾದ ಎರಡು ಕುಂಡಿಕೆಗಳಿದ್ದು, ಕೈಗೆಟುಕುವ ತಣ್ಣನೆಯ ನೀರು ಬೇಸಿಗೆಯಲ್ಲೂ ಕಂಡು ಬರುತ್ತಿರುವುದು ದೈವ ಕೃಪೆ ಎಂಬ ನಂಬಿಕೆ ಇದೆ. ಕಕ್ಕಬ್ಬೆ ಸಮೀಪದ ಪಾಡಿ ಶ್ರೀ ಇಗ್ಗುತ್ತಪ್ಪ ದೇವಳದಿಂದ ಸುಮಾರು ಮೂರು ಮೈಲಿ ದೂರದಲ್ಲಿರುವ ಈ ಮಲ್ಮ

ಬೆಟ್ಟ ಸಮುದ್ರ ಮಟ್ಟದಿಂದ ಸುಮಾರು ೧೫೦೦ ಅಡಿ ಎತ್ತರದಲ್ಲಿದೆ. ಮುಕ್ಕಾಲು ಭಾಗದವರೆಗೆ ಮಣ್ಣಿನ ರಸ್ತೆಯಲ್ಲಿ ಜೀಪಿನಲ್ಲಿ ಸಾಗಬಹುದಾದರೂ ಇಲ್ಲಿಗೆ ಕಾಲ್ನಡಿಗೆಯಲ್ಲಿ ಹೋಗುವುದು ಪದ್ಧತಿ. ವರ್ಷದಲ್ಲಿ ಐದು ದಿನ ಮಾತ್ರ ಭೇಟಿ: ಸುಂದರ ಪರಿಸರದ ಈ ಪ್ರವಿತ್ರ ಸ್ಥಳಕ್ಕೆ ಹುತ್ತರಿ, ಕಲ್ಯಾಡ್ಚ ಹಬ್ಬಕ್ಕೆ ಕಟ್ಟು ಹಾಕಲು ಮತ್ತು ಹಬ್ಬದ ದಿನ, ಹೊಸ ಅಕ್ಕಿ ನೈವೇದ್ಯ ಸಮರ್ಪಣೆ ದಿನ, ಕುಂಬ್ಯಾರು ಕಲ್ಯಾಡ್ಚ ಹಬ್ಬಕ್ಕೆ ಕಟ್ಟು ಹಾಕುವ ದಿನ ಮತ್ತು ಹಬ್ಬದಂದು ಒಟ್ಟು ಐದು ಬಾರಿ ದೇವಾಲಯದ ಅರ್ಚಕರು ಮತ್ತು ತಕ್ಕ ಮುಖ್ಯಸ್ಥರು ಭೇಟಿ ನೀಡುತ್ತಾರೆ. ಇತರ ದಿನಗಳಲ್ಲಿ ಗ್ರಾಮಸ್ತರಾಗಲಿ, ಪ್ರವಾಸಿಗರಾಗಲೀ ಇಂದಿಗೂ ಇಲ್ಲಿಗೆ ಭೇಟಿ ನೀಡುವುದಿಲ್ಲ ಎಂಬುದೇ ಈ ಸ್ಥಳದ ವಿಶೇಷತೆ.