ಕುಕ್ಕೆ ಸುಬ್ರಹ್ಮಣ್ಯ ದೇವರಿಗೆ ೭೫ ಲಕ್ಷ ರು. ಮೌಲ್ಯದ ಚಿನ್ನದ ಪ್ರಭಾವಳಿ ಸಮರ್ಪಣೆ

| Published : Feb 25 2024, 01:46 AM IST

ಕುಕ್ಕೆ ಸುಬ್ರಹ್ಮಣ್ಯ ದೇವರಿಗೆ ೭೫ ಲಕ್ಷ ರು. ಮೌಲ್ಯದ ಚಿನ್ನದ ಪ್ರಭಾವಳಿ ಸಮರ್ಪಣೆ
Share this Article
  • FB
  • TW
  • Linkdin
  • Email

ಸಾರಾಂಶ

ಚಿನ್ನದ ಪ್ರಭಾವಳಿಯನ್ನು ದೇವಳದ ಆಡಳಿತ ಕಚೇರಿಯಿಂದ ಮೆರವಣಿಗೆ ಮೂಲಕ ದೇವಳಕ್ಕೆ ತರಲಾಯಿತು. ಸೇವೆ ನೆರವೇರಿಸಿದ ದಾನಿಗಳಿಗೆ ದೇವಸ್ಥಾನದ ಆನೆ ಯಶಸ್ವಿಯು ಹೂಹಾರ ಹಾಕಿ ಆಶೀರ್ವದಿಸಿತು. ಬಳಿಕ ವಿವಿಧ ವೈದಿಕ ವಿದಿ ವಿಧಾನಗಳ ಮೂಲಕ ಸೇವಾಕತೃರಾದ ಎ.ಆರ್.ಮಹೇಶ್ ರೆಡ್ಡಿ ಮತ್ತು ರಾಧಿಕಾ ಮಹೇಶ್ ರೆಡ್ಡಿ ಪ್ರಭಾವಳಿಯನ್ನು ದೇವರಿಗೆ ಸಮರ್ಪಿಸಿದರು. ನಂತರ ಶ್ರೀ ಅರ್ಚಕರು ಶಾಲು ಹೊದಿಸಿ ಮಹಾಪ್ರಸಾದ ನೀಡಿದರು.

ಕನ್ನಡಪ್ರಭ ವಾರ್ತೆ ಸುಬ್ರಹ್ಮಣ್ಯ

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರಿಗೆ ದಾನಿಗಳಾದ ಹೈದರಾಬಾದ್‌ನ ಉದ್ಯಮಿ ಎ.ಆರ್. ಮಹೇಶ್ ರೆಡ್ಡಿ ಮತ್ತು ರಾಧಿಕಾ ಮಹೇಶ್ ರೆಡ್ಡಿ ಚಿನ್ನದ ಪ್ರಭಾವಳಿಯನ್ನು ಸೇವಾ ರೂಪದಲ್ಲಿ ಶನಿವಾರ ಸಮರ್ಪಿಸಿದರು. ಪ್ರಭಾವಳಿಯು ೩.ಕೆಜಿ ೪೦೦ಗ್ರಾಂ ತೂಕವಿದೆ. ಪ್ರಭಾವಳಿಯು ೧ ಕೆಜಿ.೨೦೦ ಗ್ರಾಂ ಚಿನ್ನ ಹಾಗೂ ೩ ಕೆಜಿ.೨೦೦ ಗ್ರಾಂ ಬೆಳ್ಳಿಯನ್ನು ಒಳಗೊಂಡಿದ್ದು ಒಟ್ಟು ೭೫ ಲಕ್ಷ ರುಪಾಯಿ ಮೌಲ್ಯದ್ದಾಗಿದೆ. ೫ ಲಕ್ಷ ಮೌಲ್ಯದ ಪುಷ್ಪಾಲಂಕಾರ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಬ್ರಹ್ಮಕಲಶಾಭಿಷೇಕವಾದ ಪುಣ್ಯದಿನವಾದ ಶನಿವಾರ ಮಹೇಶ್ ರೆಡ್ಡಿ ಅವರು ಚಿನ್ನದ ಪ್ರಭಾವಳಿಯನ್ನು ಸಮರ್ಪಿಸಿದರು. ಅಲ್ಲದೆ ಸುಮಾರು 5 ಲಕ್ಷ ರು. ಮೌಲ್ಯದ ಹೂವುಗಳಿಂದ ಶ್ರೀ ದೇವಳವನ್ನು ಅಲಂಕರಿಸಿ ಪುಷ್ಪಾಲಂಕಾರ ಸೇವೆಯನ್ನೂ ನೆರವೇರಿಸಿದರು. ಈ ಹಿಂದೆ ಇವರು ೪ ಪುಂಗನೂರು ತಳಿಯ ಗೋವುಗಳನ್ನು ದೇವಳಕ್ಕೆ ದಾನ ನೀಡಿದ್ದರು. ಅಲ್ಲದೆ ಭೋಜನ ಶಾಲೆಗೆ ಅಡುಗೆ ತಯಾರಿಸಲು ಬೇಕಾಗುವ ಪರಿಕರಗಳನ್ನು ನೀಡಿದ್ದರು. ಪ್ರಸಿದ್ಧ ಶಿಲ್ಪಿಗಳಿಂದ ರಚನೆ: ಈ ಚಿನ್ನದ ಪ್ರಭಾವಳಿಯನ್ನು ಪ್ರಸಿದ್ಧ ಶಿಲ್ಪಿ ಬೆಂಗಳೂರಿನ ಪದ್ಮಾಲಯ ಆರ್ಟ್ಸ್‌ನ ಅಲಗ್‌ರಾಜ್ ಸ್ಥಪತಿ ಅವರು ಸುಂದರವಾಗಿ ರಚಿಸಿದ್ದಾರೆ. ಶ್ರೀ ದೇವರ ಕಲಾಕೃತಿಯನ್ನು ಅಚ್ಚುಕಟ್ಟಾಗಿ ಶಿಲ್ಪಿಗಳು ಸ್ವರ್ಣದಲ್ಲಿ ಕೆತ್ತಿದ್ದಾರೆ. ಇವರು ಕುಕ್ಕೆ ಸೇರಿದಂತೆ ಪ್ರಸಿದ್ಧ ಪುಣ್ಯ ಕ್ಷೇತ್ರಗಳಾದ ಧರ್ಮಸ್ಥಳ, ಕೊಲ್ಲೂರು, ಶಿರಡಿ, ಬೆಂಗಳೂರಿನ ರಾಜರಾಜೇಶ್ವರಿ ದೇವಾಲಯಕ್ಕೆ ಚಿನ್ನದ ಕೆತ್ತನೆಯ ಕೆಲಸವನ್ನು ಮಾಡಿರುತ್ತಾರೆ. ಚಿನ್ನದ ಪ್ರಭಾವಳಿಯನ್ನು ದೇವಳದ ಆಡಳಿತ ಕಚೇರಿಯಿಂದ ಮೆರವಣಿಗೆ ಮೂಲಕ ದೇವಳಕ್ಕೆ ತರಲಾಯಿತು. ಸೇವೆ ನೆರವೇರಿಸಿದ ದಾನಿಗಳಿಗೆ ದೇವಸ್ಥಾನದ ಆನೆ ಯಶಸ್ವಿಯು ಹೂಹಾರ ಹಾಕಿ ಆಶೀರ್ವದಿಸಿತು. ಬಳಿಕ ವಿವಿಧ ವೈದಿಕ ವಿದಿ ವಿಧಾನಗಳ ಮೂಲಕ ಸೇವಾಕತೃರಾದ ಎ.ಆರ್.ಮಹೇಶ್ ರೆಡ್ಡಿ ಮತ್ತು ರಾಧಿಕಾ ಮಹೇಶ್ ರೆಡ್ಡಿ ಪ್ರಭಾವಳಿಯನ್ನು ದೇವರಿಗೆ ಸಮರ್ಪಿಸಿದರು. ನಂತರ ಶ್ರೀ ಅರ್ಚಕರು ಶಾಲು ಹೊದಿಸಿ ಮಹಾಪ್ರಸಾದ ನೀಡಿದರು.ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನರಾಮ ಎಸ್. ಸುಳ್ಳಿ, ದೇವಳದ ಕಾರ್ಯನಿರ್ವಹಣಾಧಿಕಾರಿ ಡಾ. ನಿಂಗಯ್ಯ, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪ್ರಶಾಂತ್ ಪಕ್ಕಲಾ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಪಿಜಿಎಸ್‌ಎನ್ ಪ್ರಸಾದ್, ಪ್ರಸನ್ನ ದರ್ಬೆ, ಮನೋಹರ ರೈ, ಶ್ರೀವತ್ಸ ಬೆಂಗಳೂರು, ಲೋಕೇಶ್ ಮುಂಡೋಕಜೆ, ಶೋಭಾ ಗಿರಿಧರ್, ವನಜಾ.ವಿ.ಭಟ್, ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯರಾದ ಸತೀಶ್ ಕೂಜುಕೊಡು,ಶಿಷ್ಠಾಚಾರ ವಿಭಾಗದ ಪ್ರಮೋದ್ ಕುಮಾರ್ ಎಸ್ ಸೇರಿದಂತೆ ಶ್ರೀ ದೇವಳದ ಸಿಬಂದಿಗಳು ಮತ್ತು ಭಕ್ತರು ಉಪಸ್ಥಿತರಿದ್ದರು.