ಜಾತ್ರೆ ನಂತರ ಗೋಲ್ಡ್‌ ಪಾಸ್‌ ಅಕ್ರಮ ಬಹಿರಂಗ ಮಾಡುವೆ

| Published : Oct 21 2025, 01:00 AM IST

ಜಾತ್ರೆ ನಂತರ ಗೋಲ್ಡ್‌ ಪಾಸ್‌ ಅಕ್ರಮ ಬಹಿರಂಗ ಮಾಡುವೆ
Share this Article
  • FB
  • TW
  • Linkdin
  • Email

ಸಾರಾಂಶ

ದೇವಿ ದರ್ಶನ ವ್ಯವಸ್ಥೆ ಶಿಸ್ತಿನ ಮತ್ತು ಕ್ರಮಬದ್ಧ ರೀತಿಯಲ್ಲಿ ನಡೆದರೂ, ಪಾಸ್ ಹಂಚಿಕೆ ವಿಚಾರದಲ್ಲಿ ಗಂಭೀರ ಅಕ್ರಮಗಳು ನಡೆದಿವೆ ಎಂದು ದೂರಿದರು. ಹಿಂದಿನ ವರ್ಷಗಳಲ್ಲಿ ಬಳಸುತ್ತಿದ್ದ ವಿಐಪಿ ಹಾಗೂ ವಿಐಐಪಿ ಪಾಸ್ ವ್ಯವಸ್ಥೆಯನ್ನು ಈ ಬಾರಿ ರದ್ದುಮಾಡಿ "ಗೋಲ್ಡನ್ ಪಾಸ್ " ಎಂಬ ಹೊಸ ಕ್ರಮವನ್ನು ಪ್ರಯೋಗ ಮಾಡಲಾಗಿದೆ, ಇದಕ್ಕೆ ಆರಂಭದಲ್ಲಿ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದ್ದರೂ, ಈಗ ಅದೇ ವ್ಯವಸ್ಥೆ ವಿವಾದಕ್ಕೆ ಕಾರಣವಾಗಿದೆ ಎಂದು ಬಿಜೆಪಿ ಮುಖಂಡ ಜಿ. ದೇವರಾಜೇಗೌಡ ಹೇಳಿದರು.

ಕನ್ನಡಪ್ರಭ ವಾರ್ತೆ ಹಾಸನ

ಹಾಸನಾಂಬೆ ದೇವಿ ದರ್ಶನದ ಸಂದರ್ಭದಲ್ಲಿ ಗೋಲ್ಡ್ ಪಾಸ್ ಮುದ್ರಿಸಿ ದುರುಪಯೋಗವಾಗಿದ್ದು, ಜಾತ್ರೆ ಮುಗಿದ ಎರಡು ದಿನಗಳ ನಂತರ ಸತ್ಯಾಂಶವನ್ನು ಸಾಕ್ಷಿ ಸಮೇತವಾಗಿ ಹೊರಹಾಕಲಾಗುವುದು ಎಂದು ಬಿಜೆಪಿ ಮುಖಂಡ ಜಿ. ದೇವರಾಜೇಗೌಡ ಗಂಭೀರವಾಗಿ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿ, ವ್ಯವಸ್ಥೆಯ ಅನಿಯಮತೆ ಮತ್ತು ಜಿಲ್ಲಾಡಳಿತದ ನಿರ್ಲಕ್ಷ್ಯ ಕುರಿತು ಬಿಜೆಪಿ ಮುಖಂಡ ಜಿ. ದೇವರಾಜೇಗೌಡ ಅವರು ಭಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ದೇವಿ ದರ್ಶನ ವ್ಯವಸ್ಥೆ ಶಿಸ್ತಿನ ಮತ್ತು ಕ್ರಮಬದ್ಧ ರೀತಿಯಲ್ಲಿ ನಡೆದರೂ, ಪಾಸ್ ಹಂಚಿಕೆ ವಿಚಾರದಲ್ಲಿ ಗಂಭೀರ ಅಕ್ರಮಗಳು ನಡೆದಿವೆ ಎಂದು ದೂರಿದರು. ಹಿಂದಿನ ವರ್ಷಗಳಲ್ಲಿ ಬಳಸುತ್ತಿದ್ದ ವಿಐಪಿ ಹಾಗೂ ವಿಐಐಪಿ ಪಾಸ್ ವ್ಯವಸ್ಥೆಯನ್ನು ಈ ಬಾರಿ ರದ್ದುಮಾಡಿ "ಗೋಲ್ಡನ್ ಪಾಸ್ " ಎಂಬ ಹೊಸ ಕ್ರಮವನ್ನು ಪ್ರಯೋಗ ಮಾಡಲಾಗಿದೆ, ಇದಕ್ಕೆ ಆರಂಭದಲ್ಲಿ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದ್ದರೂ, ಈಗ ಅದೇ ವ್ಯವಸ್ಥೆ ವಿವಾದಕ್ಕೆ ಕಾರಣವಾಗಿದೆ. ಜಿಲ್ಲೆಯಲ್ಲಿ ಅತಿವೃಷ್ಟಿ, ಅನಾವೃಷ್ಟಿಯಿಂದ ನೂರಾರು ಹಳ್ಳಿಗಳು ಹಾನಿಗೊಳಗಾಗಿವೆ. ಆಡಳಿತ ಯಂತ್ರ ಸಂಪೂರ್ಣ ಕುಸಿದಿದೆ. ಆದರೆ ಈ ಎಲ್ಲ ಸಮಸ್ಯೆಗಳನ್ನು ಕಡೆಗಣಿಸಿ ಅಧಿಕಾರಿಗಳು ಹಾಸನಾಂಬೆ ಉತ್ಸವದಲ್ಲಿ ಪ್ರಸಿದ್ಧಿ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಜನರ ನೋವುಗಳ ಕಡೆಗೆ ಗಮನವಿಲ್ಲ ಎಂದು ಕಿಡಿಕಾರಿದರು. ಗೋಲ್ಡನ್ ಪಾಸ್ ಮುದ್ರಣೆ ಮತ್ತು ವಿತರಣೆ ಕುರಿತು ಗಂಭೀರ ಆರೋಪಗಳನ್ನು ಮಾಡಿ, ನನಗೆ ಜಿಲ್ಲಾಧಿಕಾರಿ ಕಚೇರಿಯ ಕೆಲ ನೌಕರರಿಂದ ಪಡೆದ ಅನೌಪಚಾರಿಕ ದಾಖಲೆಗಳ ಪ್ರಕಾರ ೨೦,೦೦೦ ಪಾಸ್‌ಗಳನ್ನು ಮುದ್ರಿಸಲಾಗಿದೆ. ಆದರೆ ಎಷ್ಟು ಪಾಸ್ ಮುದ್ರಿಸಲಾಗಿದೆ, ಯಾರಿಗೆ ನೀಡಲಾಗಿದೆ ಎಂಬ ಮಾಹಿತಿ ಜಿಲ್ಲಾಡಳಿತ ನೀಡುತ್ತಿಲ್ಲ. ನಾನು ಆರ್‌ಟಿಐ ಮೂಲಕ ಕೇಳಿದರೂ ಯಾವುದೇ ಉತ್ತರ ಸಿಕ್ಕಿಲ್ಲ ಎಂದರು.

ಈ ಪಾಸ್ ವಿತರಣೆಗಾಗಿ ಮುಜರಾಯಿ ತಹಸೀಲ್ದಾರ್ ಲತಾ ಮತ್ತು ಗ್ರೇಡ್-೨ ತಹಸೀಲ್ದಾರ್ ರಮೇಶ್ ಅವರನ್ನು ನೇಮಿಸಲಾಗಿದೆ. ಇವರಲ್ಲಿ ಒಬ್ಬರ ಕೈಯಲ್ಲಿ ೧೫,೦೦೦ ಪಾಸ್, ಮತ್ತೊಬ್ಬರ ಕೈಯಲ್ಲಿ ೩,೦೦೦ ಪಾಸ್ ನೀಡಲಾಗಿದೆ. ಒಂದೊಂದು ದಿನಕ್ಕೆ ವಿಭಿನ್ನ ಬಣ್ಣದ ಪಾಸ್ ನೀಡಲಾಗಿದೆ. ಅಕ್ಟೋಬರ್ ೧೫ರಂದು ಮುಖ್ಯಮಂತ್ರಿಗಳು ಹಾಸನ ಪ್ರವಾಸಿ ಮಂದಿರಕ್ಕೆ ಬಂದಾಗ ೩,೦೦೦ ಪಾಸ್‌ಗಳ ಒಂದು ಬಂಡಲ್ ಅವರಿಗೆ ನೀಡಲಾಗಿದೆ. ಅದು ಯಾರಿಗೆ ಹಂಚಲಾಗಿದೆ ಎಂಬುದರ ಕುರಿತು ಜಿಲ್ಲಾಧಿಕಾರಿಗಳು ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದರು. ಇನ್ನೂ ೨,೦೦೦ ಪಾಸ್‌ಗಳನ್ನು ಒಬ್ಬ ಸಚಿವರಿಗೆ ನೀಡಲಾಗಿದೆ ಎಂಬ ಮಾಹಿತಿ ಇದೆ. ಈ ಪಾಸ್ ಎಂಟ್ರಿ ಕುರಿತು ನಾನು ಪ್ರತಿಕ್ಷಣದ ವಿಡಿಯೋ ರೆಕಾರ್ಡ್ ತೆಗೆಸುತ್ತಿದ್ದೇನೆ. ದಾಖಲೆ ಸಹಿತ ಎಲ್ಲ ಸತ್ಯವನ್ನು ದೇವಿ ದರ್ಶನ ಮುಗಿದ ನಂತರ ಎರಡು ದಿನಗಳಲ್ಲಿ ಬಹಿರಂಗಪಡಿಸುತ್ತೇನೆ. ಈ ಪಾಸ್ ಹಗರಣಕ್ಕೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟ ನಡೆಸುತ್ತೇನೆ ಎಂದು ಎಚ್ಚರಿಕೆ ನೀಡಿದರು.ದೇವಾಲಯದಲ್ಲಿ ಪೂಜೆ ಮಾಡುವ ಪರಂಪರೆಯ ಗ್ರಾಮದೇವತೆ ವಂಶಸ್ಥರಿಗೆ ಹಾಗೂ ಸ್ಥಳೀಯ ಭಕ್ತರಿಗೆ ಅವಕಾಶ ನೀಡಿಲ್ಲ. ಪ್ರೋಟೋಕಾಲ್ ಪ್ರಕಾರ ಸ್ಥಳೀಯ ಶಾಸಕರಿಗೆ ನೀಡಬೇಕಾದ ಸ್ಥಾನಮಾನವೂ ನೀಡಿಲ್ಲ. ಈ ದುರ್ವ್ಯವಸ್ಥೆಗೆ ಸ್ಥಳೀಯ ಶಾಸಕರು ಮತ್ತು ಅಧಿಕಾರಿಗಳೇ ಕಾರಣ ಎಂದು ಕಿಡಿಕಾರಿದರು. ಹಾಸನಾಂಬೆ ಉತ್ಸವ ದೇವಿಯ ಭಕ್ತರ ಹಬ್ಬವಾಗಬೇಕು, ಅಧಿಕಾರಿಗಳ ಪ್ರದರ್ಶನ ವೇದಿಕೆ ಆಗಬಾರದು. ಈಗಲಾದರೂ ಎಚ್ಚೆತ್ತುಕೊಂಡು ಸ್ಥಳೀಯ ಭಕ್ತರಿಗೆ ಕೊನೆಯ ದಿನವಾದರೂ ದರ್ಶನದ ಅವಕಾಶ ನೀಡಬೇಕು. ತಹಸೀಲ್ದಾರರನ್ನು ಅವರ ಮೂಲ ಕರ್ತವ್ಯಕ್ಕೆ ಕಳುಹಿಸಿ, ದೇವಾಲಯದ ಗೌರವ ಕಾಪಾಡಬೇಕು ಎಂದು ಮನವಿ ಮಾಡಿದರು.