ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ಉಜಿರೆ ಎಸ್‌ಡಿಎಂ ಕಾಲೇಜಿನ ಎನ್‌ಎಸ್‌ಎಸ್ ಘಟಕದ ಸುವರ್ಣ ಮಹೋತ್ಸವದ ಅಂಗವಾಗಿ ಅಕ್ಟೋಬರ್ 5ರಂದು ‘ಸುವರ್ಣ ಸಮ್ಮಿಲನ- ಇದು ಸುವರ್ಣ ಹೆಜ್ಜೆಗಳ ಅವಲೋಕನ’ ಕಾರ್ಯಕ್ರಮ ಆಯೋಜಿಸಿದೆ ಎಂದು ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಎ. ಕುಮಾರ ಹೆಗ್ಡೆ ಹೇಳಿದರು.ಕಾಲೇಜಿನಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 50ನೇ ವರ್ಷ ತುಂಬುತ್ತಿರುವ ಈ ಸಂದರ್ಭ ಸುಮಾರು 750 ಅಧಿಕ ಹಿರಿಯ ಸ್ವಯಂಸೇವಕರು ಭಾಗವಹಿಸಲಿದ್ದು ಇಲ್ಲಿನ ಇಂದ್ರಪ್ರಸ್ಥ ಸಭಾಂಗಣದಲ್ಲಿ ನಡೆಯುವ ಈ ಸಮ್ಮೇಳನವನ್ನು ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಉದ್ಘಾಟಿಸಲಿರುವರು. ರಾಜ್ಯ ಎನ್ನೆಸ್ಸೆಸ್ ಯುವ ಸಬಲೀಕರಣ ಮತ್ತು ಕ್ರೀಡಾ ವಿಭಾಗದ ಅಧಿಕಾರಿ ಡಾ. ಪ್ರತಾಪ್ ಲಿಂಗಯ್ಯ, ಮಂಗಳೂರು ವಿವಿ ಎನ್ನೆಸ್ಸೆಸ್ ಸಂಯೋಜನಾಧಿಕಾರಿ ಶೇಷಪ್ಪ ಅಮೀನ್, ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್. ಭಾಗವಹಿಸಲಿದ್ದಾರೆ. ಪ್ರಾಂಶುಪಾಲ ಡಾ.ಬಿ.ಎ. ಕುಮಾರ ಹೆಗ್ಡೆ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಹೇಳಿದರು.
ಪ್ರಶಸ್ತಿ, ಸನ್ಮಾನ: ಸಮಾಜ ಸೇವೆಯಲ್ಲಿ ಗುರುತಿಸಿಕೊಂಡಿರುವ ಉಡುಪಿಯ ರವಿ ಕಟಪಾಡಿ ಹಾಗೂ ಉಜಿರೆಯ ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕ ಲಕ್ಷ್ಮೀಮೋಹನ್ ಅವರಿಗೆ ಸುವರ್ಣ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ರಾಷ್ಟ್ರ, ರಾಜ್ಯ, ವಿವಿ ಮಟ್ಟದಲ್ಲಿ ಪ್ರಶಸ್ತಿ ಸ್ವೀಕರಿಸಿದ ಹಿರಿಯ ಯೋಜನಾಧಿಕಾರಿಗಳು ಹಾಗೂ ಸ್ವಯಂ ಸೇವಕರಿಗೆ ಸನ್ಮಾನ, ಸಂವಾದ ಕಾರ್ಯಕ್ರಮ, ಕಾಲೇಜಿನ ಕಲಾವೈಭವ, ಹಿರಿಯ ಕಿರಿಯ ಸ್ವಯಂಸೇವಕರಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ರಾತ್ರಿ ಶಿಬಿರ ಜ್ಯೋತಿ, ಸಾಕ್ಷ್ಯಚಿತ್ರ, ವಸ್ತು ಪ್ರದರ್ಶನ, 50 ಗಿಡಗಳನ್ನು ನೆಡುವ ಕಾರ್ಯಕ್ರಮ, 24 ಯೋಜನಾಧಿಕಾರಿಗಳಿಗೆ ಗೌರವಾರ್ಪಣೆ ಇತ್ಯಾದಿ ಕಾರ್ಯಕ್ರಮಗಳು ನಡೆಯಲಿವೆ.ಕಾಲೇಜಿನ ಎನ್ನೆಸ್ಸೆಸ್ ಘಟಕಕ್ಕೆ 14 ಬಾರಿ ವಿವಿ ಮಟ್ಟದ ಪ್ರಶಸ್ತಿ, 10 ಬಾರಿ ರಾಜ್ಯಮಟ್ಟದ ಪ್ರಶಸ್ತಿ,10 ಬಾರಿ ಶ್ರೇಷ್ಠ ಯೋಜನಾಧಿಕಾರಿ ಪ್ರಶಸ್ತಿ, ಒಂದು ರಾಷ್ಟ್ರಮಟ್ಟದ ಪ್ರಶಸ್ತಿ ಸೇರಿ ಇದುವರೆಗೆ ಒಟ್ಟಿಗೆ 35 ಪ್ರಶಸ್ತಿಗಳು ಲಭಿಸಿವೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಯೋಜನಾಧಿಕಾರಿ ಡಾ. ಮಹೇಶ್ ಕುಮಾರ್, ಪ್ರೊ. ದೀಪಾ ಆರ್.ಪಿ., ವಿದ್ಯಾರ್ಥಿ ನಾಯಕರಾದ ರಾಮಕೃಷ್ಣ ಶರ್ಮ, ದೀಪ ನಿಕ್ಷೇಪ್ ಎನ್., ಸಿಂಚನ ಕಲ್ಲೂರಾಯ, ತ್ರಿಶೂಲ್, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಭಾಸ್ಕರ ಹೆಗಡೆ ಇದ್ದರು.ಎನ್‌ಎಸ್‌ಎಸ್ ಘಟಕದ ಸೇವಾ ಕಾರ್ಯಗಳುವಾರ್ಷಿಕ ಶಿಬಿರದ ಮೂಲಕ ಸುಮಾರು 40 ಶಾಲೆಗಳಲ್ಲಿ ಕೈತೋಟ ನಿರ್ಮಾಣ ಸ್ವಚ್ಛತಾ ಅಭಿಯಾನ ಹಾಗೂ ನಿರಂತರ ಚಟುವಟಿಕೆ ಭಾಗವಾಗಿ ಬೀದಿ ನಾಟಕ, ಆರೋಗ್ಯ ಶಿಬಿರ, ಜಾಗೃತಿ ಜಾಥಾ, ರಕ್ತದಾನ ಶಿಬಿ,ರ ಏಕದಿನ ಶಿಬಿರಗಳು, ಕೊರೋನಾ ಅವಧಿಯಲ್ಲಿ ಹಾಗೂ ನೆರೆಪೀಡಿತ ಸಂದರ್ಭದಲ್ಲಿ ಎನ್ನೆಸ್ಸೆಸ್ ವಿಭಾಗದ ಸ್ವಯಂಸೇವಕರು ವಿಶೇಷ ಸೇವೆ ಸಲ್ಲಿಸಿದ್ದಾರೆ. ಪರಿಸರ ಸಂರಕ್ಷಣೆಗೆ ಆದ್ಯತೆ ನೀಡುತ್ತಿರುವ ಘಟಕ ಗದ್ದೆ ನಾಟಿ, ಭಕ್ತಕಟಾವಿನಲ್ಲೂ ಕ್ಷೇತ್ರವನ್ನು ವಿಸ್ತರಿಸಿಕೊಂಡಿದೆ. ದತ್ತು ಶಾಲೆ ಯೋಜನೆಯಲ್ಲಿ ಈ ಬಾರಿ ಮುಗುಳಿ ಶಾಲೆಯನ್ನು ದತ್ತು ಪಡೆಯಲು ನಿರ್ಧರಿಸಲಾಗಿದೆ.