ಸಾರಾಂಶ
ಬಸವರಾಜ ಹಿರೇಮಠ
ಧಾರವಾಡ: ಆಧುನಿಕ ಬೇಸಾಯ ಪದ್ಧತಿಯಿಂದಾಗಿ ನದಿ ತೀರದ ಪ್ರದೇಶಕ್ಕೆ ಮಾತ್ರ ಸೀಮಿತವಾಗಿದ್ದ ಕಲ್ಲಗಂಡಿ ಹಣ್ಣು ಧಾರವಾಡದಂತಹ ಅರೆ ಮಲೆನಾಡಿಗೂ ಕೆಲವು ವರ್ಷಗಳಿಂದ ಪ್ರವೇಶ ಪಡೆದಿದೆ. ಆದರೆ, ಎಲ್ಲೆಡೆ ಕೆಂಪು ಬಣ್ಣದ ಸಾಂಪ್ರದಾಯಿಕ ತಳಿ ಪ್ರಚಲಿತವಿದ್ದರೆ, ಧಾರವಾಡದ ರೈತರೊಬ್ಬರು ಬಂಗಾರ ಬಣ್ಣದ ಅಂದರೆ, ಹಳದಿ ಬಣ್ಣದ ಕಲ್ಲಂಗಡಿ ಬೆಳೆದು ಗಮನ ಸೆಳೆದಿದ್ದಾರೆ.ಧಾರವಾಡದಿಂದ ಸುಮಾರು 14 ಕಿ.ಮೀ. ದೂರದ ಕುರುಬಗಟ್ಟಿಯ ಮೈಲಾರ ಗುಡ್ಡಪ್ಪನವರ ತಮ್ಮ ಒಂದು ಎಕರೆ ಪ್ರದೇಶದಲ್ಲಿ ಹಳದಿ ಬಣ್ಣದ ಕಲ್ಲಗಂಡಿಯನ್ನು ಯಶಸ್ವಿಯಾಗಿ ಬೆಳೆದಿದ್ದಾರೆ. 70 ದಿನಗಳ ಕಾಲಾವಧಿಯ ತಳಿ ಇದಾಗಿದ್ದು, ತೋಟಗಾರಿಕೆ, ಕೃಷಿ ಇಲಾಖೆ ಸಹಕಾರದೊಂದಿಗೆ ಹನಿ ನೀರಾವರಿ ಪದ್ಧತಿ ಮೂಲಕ ಹೊಸ ಬೇಸಾಯ ಪದ್ಧತಿಯಲ್ಲಿ ಎಕರೆಗೆ 10-15 ಕ್ವಿಂಟಲ್ ಕಲ್ಲಂಗಡಿ ಇಳುವರಿಯ ನಿರೀಕ್ಷೆ ಹೊಂದಲಾಗಿದೆ.
ಹೊಸ ಚಿಂತನೆಯಿಂದ ಬೆಳೆದೆಪದವಿ ಮುಗಿದ ನಂತರ ನೌಕರಿಗೆ ಹೋಗು ಎಂದು ಅಪ್ಪ ಹೇಳಿದರೂ ಮೂಲ ವೃತ್ತಿ ಕೃಷಿ ನನ್ನ ಆಕರ್ಷಿಸಿತು. ಇಡೀ ಧಾರವಾಡ ಸುತ್ತಲೂ ಕುರುಬಗಟ್ಟಿ ಹೂವು ಬೆಳೆಯಲು ಪ್ರಸಿದ್ಧಿ. ಹೊಸ ಚಿಂತನೆ ಮಾಡುತ್ತಿದ್ದ ನಾನು, ಮೂರು ವರ್ಷಗಳಿಂದ ಕೆಂಪು ಕಲ್ಲಂಗಡಿ ಬೆಳೆದೆ. ತದನಂತರ ಹಳದಿ ಬಣ್ಣದ ಕಲ್ಲಗಂಡಿ ಬಗ್ಗೆ ಆಕರ್ಷಿತಗೊಂಡು ಪ್ರಾಯೋಗಿಕವಾಗಿ ಒಂದು ಎಕರೆ ಬೆಳೆದಿದ್ದೇನೆ ಎಂದು ರೈತ ಮೈಲಾರ ಗುಡ್ಡಪ್ಪನವರ ''''ಕನ್ನಡಪ್ರಭ''''ದೊಂದಿಗೆ ಮಾಹಿತಿ ಹಂಚಿಕೊಂಡರು.
ಹಳದಿ ಹಣ್ಣು ಕೆಜಿಗೆ ₹30ನಮ್ಮೂರಿನ ಮಣ್ಣು, ಹವಾಮಾನಕ್ಕೆ ಎರಡರಿಂದ-ಮೂರು ಕೆಜಿ ತೂಕದ ಹಣ್ಣು ನಿರೀಕ್ಷೆ ಮಾಡಲಾಗಿತ್ತು. ಆದರೆ, ತೋಟಗಾರಿಕೆ, ಕೃಷಿ ವಿವಿ, ಇಲಾಖೆ ತಂತ್ರಜ್ಞಾನ, ಸಲಹೆ ಮೇರೆಗೆ ಐದರಿಂದ-ಆರೇಳು ಕೆಜಿ ತೂಕದ ವರೆಗೂ ಇಳುವರಿ ಬಂದಿದೆ. ಸಾಮಾನ್ಯ ಕಲ್ಲಂಗಡಿ ಕೆಜಿಗೆ ₹10 ಇದ್ದರೆ, ಹಳದಿ ಕಲ್ಲಂಗಡಿ ಕೆಜಿ ₹30 ವರೆಗೂ ಇದೆ. ರುಚಿ, ಬಣ್ಣ ಹಾಗೂ ಆರೋಗ್ಯಕರ ಅಂಶಗಳಿಂದ ಈ ಹಣ್ಣಿಗೆ ಹೆಚ್ಚಿನ ಬೆಲೆ ಇದೆ. ಎಕರೆಗೆ ಒಂದು ಲಕ್ಷ ವರೆಗೂ ವೆಚ್ಚವಾಗಿದ್ದು, ಕನಿಷ್ಠ ನಾಲ್ಕೂವರೆ ಲಕ್ಷ ಆದಾಯದ ನಿರೀಕ್ಷೆ ಹೊಂದಿದ್ದೇನೆ ಎಂದರು.
ಏನೆಲ್ಲ ಲಾಭ?ಲೈಕೋಪಿನ್ ಎಂಬ ಅಂಶ ಕಡಿಮೆ ಇರುವುದರಿಂದ ಕಲ್ಲಂಗಡಿ ಹಳದಿ ಬಣ್ಣಕ್ಕೆ ತಿರುಗುತ್ತದೆ. ಇದು ಕೆಂಪು ಹಣ್ಣಿಗಿಂತ ಸಿಹಿಯಾಗಿದ್ದು, ಜೇನಿನ ಸುವಾಸನೆ ಸಹ ಹೊಂದಿದೆ. ರೋಗ ನಿರೋಧಕ ಶಕ್ತಿ ಒದಗಿಸುವ ಎ ಮತ್ತು ಸಿ ವಿಟಮಿನ್ ಮಾತ್ರವಲ್ಲದೇ, ಕ್ಯಾನ್ಸರ್ ಮತ್ತು ಕಣ್ಣಿನ ಕಾಯಿಲೆಯಿಂದ ರಕ್ಷಿಸುವ ಬೀಟಾ-ಕ್ಯಾರೋಟಿನ್ ಅಂತಹ ಪ್ರತಿ ರಕ್ಷಣೆಯನ್ನು ದೇಹಕ್ಕೆ ಈ ಹಣ್ಣು ಒದಗಿಸುತ್ತದೆ. ಹೆಚ್ಚಿನ ನೀರಿನಂಶ ಹೊಂದಿರುವುದರಿಂದ ಬೇಸಿಗೆಯ ಬಿಸಿ ವಾತಾವರಣದಲ್ಲಿ ದೇಹವನ್ನು ತಂಪಾಗಿಡಲು ಈ ಹಣ್ಣು ಸಹಾಯಕಾರಿ ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಕೆ.ಸಿ. ಭದ್ರಣ್ಣವರ ಹಾಗೂ ಹಿರಿಯ ಸಹಾಯಕ ನಿರ್ದೇಶಕ ಇಮ್ತಿಯಾಜ್ ಹಳದಿ ಹಣ್ಣಿನ ಮಹತ್ವ ತಿಳಿಸಿದರು.
ಮಾರುಕಟ್ಟೆಗೆ ಸಿದ್ಧಈಗಾಗಲೇ ಹಳದಿ ಬಣ್ಣದ ಕಲ್ಲಂಗಡಿ ಮಾರುಕಟ್ಟೆ ಹೋಗಲು ಸಿದ್ಧವಾಗಿದ್ದು, ಎರಡ್ಮೂರು ದಿನಗಳಲ್ಲಿ ಧಾರವಾಡದಲ್ಲಿ ಲಭ್ಯವಾಗಲಿದೆ. ಬರೀ ಮೈಲಾರ ಮಾತ್ರವಲ್ಲದೇ ಸಮೀಪದ ಬಾಡದ ಕಲ್ಲನಗೌಡ ಪಾಟೀಲ ಅವರೂ ಇದೇ ಹಳದಿ ಬಣ್ಣದ ಕಲ್ಲಂಗಡಿ ಬೆಳೆದಿದ್ದು, ಕೆಲವೇ ದಿನಗಳಲ್ಲಿ ಅದೂ ಮಾರುಕಟ್ಟೆ ಪ್ರವೇಶಿಸಲಿದೆ. ಒಟ್ಟಾರೆ, ರೈತರು ಆಧುನಿಕ ಬೇಸಾಯ ಪದ್ಧತಿ ಮೂಲಕ ಹವಾಮಾನ ಮೀರಿಯೂ ಯಶಸ್ವಿ ಕೃಷಿಯತ್ತ ಸಾಗುತ್ತಿರುವುದು ಉತ್ತಮ ಬೆಳೆವಣಿಗೆಯೇ ಸರಿ. ಮೊದಲ ಬಾರಿ:
ರಾಜ್ಯದ ನದಿ ತೀರ ಸೇರಿದಂತೆ ಎಲ್ಲೆಡೆ ಸುಮಾರು ಐದು ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಕಲ್ಲಂಗಡಿ ಬೆಳೆಯಲಾಗುತ್ತಿದೆ. ಧಾರವಾಡ ಜಿಲ್ಲೆಯಲ್ಲೂ 87 ಹೆಕ್ಟೇರ್ ಪ್ರದೇಶದಲ್ಲಿ ಸಾಂಪ್ರದಾಯಿಕ ಕಲ್ಲಂಗಡಿ ಬೆಳೆಯುತ್ತಿದ್ದು, ಮೊದಲ ಬಾರಿಗೆ ಹಳದಿ ಬಣ್ಣದ ಕಲ್ಲಂಗಡಿ ಬೆಳೆದು ಕುರುಬಗಟ್ಟಿಯ ಮೈಲಾರ ಉಳಿದ ರೈತರಿಗೆ ಮಾದರಿಯಾಗಿದ್ದಾರೆ. ಇದೇ ರೀತಿ ಉಳಿದ ರೈತರು ಸಹ ತೋಟಗಾರಿಕೆ, ಕೃಷಿ ಸೇರಿದಂತೆ ಸರ್ಕಾರದ ಯೋಜನೆಗಳನ್ನು ಬಳಸಿಕೊಂಡು ಆಧುನಿಕ ಬೇಸಾಯ ಮಾಡಿ ಆರ್ಥಿಕವಾಗಿ ಮತ್ತಷ್ಟು ಸಬಲರಾಗಬೇಕು.- ದಿವ್ಯಪ್ರಭು, ಜಿಲ್ಲಾಧಿಕಾರಿಗಳು, ಧಾರವಾಡ