ಸಾರಾಂಶ
ಕನಕಗಿರಿ ತಾಲೂಕಿನ ಕರಡೋಣಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 2023-24ನೇ ಸಾಲಿನಲ್ಲಿ ಸರ್ವೇ ನಂ. 43 ಹಾಗೂ ಸರ್ವೇ 16, 17, 08, 64ರಲ್ಲಿ ಕೃಷಿ ಇಲಾಖೆಯಿಂದ ಹೊಲಗಳಲ್ಲಿ ಬದು ನಿರ್ಮಿಸುವ ಕಾಮಗಾರಿ ಕೈಗೊಳ್ಳಲಾಗಿತ್ತು. ಇದನ್ನು ಅರಿತ ವಂಚಕರು ರೈತರಾದ ಮೇಜಾನ್ ರಾಜಸಾಬ್, ಜಿಲಾನಿಸಾಬ್ ಅಬ್ದುಲ್ ಸಾಬ್, ರಜಾಕ್ ರಾಜಾಸಾಬ್ ಎನ್ನುವರ ಪಹಣಿ ಪಡೆದು ಇವರ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಕಾಮಗಾರಿ ಪೂರ್ಣಗೊಳಿಸಲಾಗಿದೆ.
ರಾಮಮೂರ್ತಿ ನವಲಿ
ಗಂಗಾವತಿ:ಕರಡೋಣಾ ಗ್ರಾಮದ ರೈತರಿಗೆ ತಿಳಿಯದಂತೆ ಅವರ ಜಮೀನಿನ ಪಹಣಿ ಪಡೆದು ನಕಲಿ ದಾಖಲೆ ಸೃಷ್ಟಿಸಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಬದು ನಿರ್ಮಿಸಲಾಗಿದೆ ಎಂದು ಲಕ್ಷಾಂತರ ರುಪಾಯಿ ಲಪಟಾಯಿಸಿರುವುದು ಬೆಳಕಿಗೆ ಬಂದಿದೆ. ಈ ಕುರಿತು ರೈತರು ಜಿಲ್ಲಾಧಿಕಾರಿ ಹಾಗೂ ಜಿಪಂ ಸಿಇಒಗೆ ದೂರು ನೀಡಿ ಸಮಗ್ರ ತನಿಖೆ ನಡೆಸಿ ನ್ಯಾಯ ಕೊಡಿಸುವಂತೆ ಒತ್ತಾಯಿಸಿದ್ದಾರೆ.
ಕನಕಗಿರಿ ತಾಲೂಕಿನ ಕರಡೋಣಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 2023-24ನೇ ಸಾಲಿನಲ್ಲಿ ಸರ್ವೇ ನಂ. 43 ಹಾಗೂ ಸರ್ವೇ 16, 17, 08, 64ರಲ್ಲಿ ಕೃಷಿ ಇಲಾಖೆಯಿಂದ ಹೊಲಗಳಲ್ಲಿ ಬದು ನಿರ್ಮಿಸುವ ಕಾಮಗಾರಿ ಕೈಗೊಳ್ಳಲಾಗಿತ್ತು. ಇದನ್ನು ಅರಿತ ವಂಚಕರು ರೈತರಾದ ಮೇಜಾನ್ ರಾಜಸಾಬ್, ಜಿಲಾನಿಸಾಬ್ ಅಬ್ದುಲ್ ಸಾಬ್, ರಜಾಕ್ ರಾಜಾಸಾಬ್ ಎನ್ನುವರ ಪಹಣಿ ಪಡೆದು ಇವರ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಕಾಮಗಾರಿ ಪೂರ್ಣಗೊಳಿಸಲಾಗಿದೆ ಎಂದು ₹ 3,35,908 ಹಣವನ್ನು ಬೇನಾಮಿ ಖಾತೆಗೆ ವರ್ಗಾಯಿಸಿಕೊಂಡಿದ್ದಾರೆ. ಅಲ್ಲದೇ ಇವರ ಜಮೀನಿನಲ್ಲಿ ಬದುವು ನಿರ್ಮಿಸಿರುವ ಕಾಮಗಾರಿಯ ನಕಲಿ ನಾಮಫಲಕ ಹಾಕಿ (11-02-2023) ಕಾಮಗಾರಿ ಪ್ರಾರಂಭಿಸಿರುವ ಫೋಟೋಗಳನ್ನು ಬಿಲ್‌ಗಳಿಗೆ ಲಗತ್ತಿಸಿದ್ದಾರೆ. ಆದರೆ, ವಾಸ್ತವ್ಯದಲ್ಲಿ ಬದು ನಿರ್ಮಿಸಿಯೇ ಇಲ್ಲ. ಈ ಜಮೀನಿನ ರೈತರಲ್ಲಿ ಉದ್ಯೋಗ ಖಾತ್ರಿಯ ಜಾಬ್ ಕಾರ್ಡ್‌ಗಳಿದ್ದರೂ ಸಹ ಇವರಿಗೆ ತಿಳಿಯದೆ ಹಾಗೇ ನಕಲಿ ಫಲಾನುಭವಿಗಳನ್ನು ಸೃಷ್ಟಿಸಿ ಹಣ ಕಬಳಿಸಲಾಗಿದೆ.ಯತ್ನಟ್ಟಿ, ಮಲ್ಲಾಪುರ, ಕರಡೋಣಾ, ಕಾಟಾಪುರ ಗ್ರಾಮಗಳ ರೈತರ ಸರ್ವೇ ನಂ. 81, 30, 10, 18, 23, 14, 15, 12, 28, 36ರ ಹೊಲಗಳಲ್ಲಿ ಬದು ನಿರ್ಮಿಸುವ ನೆಪದಲ್ಲಿ ₹ 4.78 ಲಕ್ಷ ಬೇರೆಯವರ ಖಾತೆಗೆ ಜಮಾವಾಗಿದೆ. ಇಲ್ಲಿಯು ಸಹ ಕಾಮಗಾರಿ ಪ್ರಾರಂಭಗೊಂಡಿರುವ ನಕಲಿ ನಾಮಫಲಕ ಹಾಕಿ ದಾಖಲೆ ಸೃಷ್ಷಿಸಿ ಕೃಷಿ ಇಲಾಖೆಗೆ ನೀಡಿ ಹಣ ಪಡೆದಿದ್ದಾರೆ.
ಮಲ್ಲಾಪುರ ಗ್ರಾಮದ ರೈತರ ಹೊಲಗಳಲ್ಲಿ ಬದುವು ನಿರ್ಮಾಣದ ನೆಪದಲ್ಲಿ ₹ 3.83 ಲಕ್ಷ ಕರಡೋಣಾ ಗ್ರಾಮದ ಮತ್ತೆ ನಾಲ್ಕು ಸರ್ವೇ ನಂಬರ್‌ಗಳ ರೈತರ ಹೊಲಗಳಲ್ಲಿ ನಕಲಿ ಕಾಮಗಾರಿ ನಾಮಫಲಕ ಹಾಕಿ ₹ 4,87,000 ಅನ್ಯರ ಖಾತೆಗೆ ವರ್ಗಾವಣೆ ಮಾಡಲಾಗಿದೆ. ಕರಡೋಣಾ, ನವಲಿ ಗ್ರಾಮ ಪಂಚಾಯಿತಿ ಸೇರಿದಂತೆ ಕನಕಗಿರಿಯ ಕೆಲ ಗ್ರಾಮ ಪಂಚಾಯಿತಿಗಳಲ್ಲಿ ಉದ್ಯೋಗ ಖಾತ್ರಿಯ ಯೋಜನೆಯಡಿಯಲ್ಲಿ ಕೃಷಿ ಇಲಾಖೆಗಳಿಂದ ಕೈಕೊಂಡ ಬದು ನಿರ್ಮಾಣದಲ್ಲಿ ಭಾರಿ ಭ್ರಷ್ಟಾಚಾರ ನಡೆದಿರುವುದರಿಂದ ಅರ್ಹ ಫಲಾನುಭವಿಗಳು ಅತಂತ್ರವಾಗಿದ್ದಾರೆ.ಜಿಲ್ಲಾಧಿಕಾರಿಗೆ ದೂರು:
ನರೇಗಾ ಯೋಜನೆಯಲ್ಲಿ ಹೊಲಗಳಿಗೆ ಬದು ನಿರ್ಮಿಸಿರುವ ನಕಲಿ ದಾಖಲೆ ಸೃಷ್ಟಿಸಿ ಹಣ ಕಬಳಿಸಿರುವ ಕುರಿತು ರೈತರು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪಂಚಾಯಿತಿ ಸಿಇಒಗೆ ಕೃಷಿ ಇಲಾಖೆ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಮತ್ತು ಎಂಜಿನಿಯರ್ ವಿರುದ್ಧ ದೂರು ನೀಡಿದ್ದಾರೆ. ಈ ಕುರಿತು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡು ನ್ಯಾಯ ಒದಗಿಸಬೇಕೆಂದು ರೈತರು ಒತ್ತಾಯಿಸಿದ್ದಾರೆ.ಕರಡೋಣಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಮ್ಮ ಹೊಲವಿದ್ದು ನಮಗೆ ಯಾವುದೇ ಮಾಹಿತಿ ನೀಡದೇ ಬೇರೊಬ್ಬರು ಪಹಣಿ ಪಡೆದು 9.29 ಎಕರೆ ಪ್ರದೇಶದಲ್ಲಿ ನಕಲಿ ಕಂದಕ ಬದುವು ನಿರ್ಮಿಸಿ, ನಾಮಫಲಕ ಹಾಕಿ ₹ 3,35,908 ಕಬಳಿಸಿದ್ದಾರೆ. ನಮ್ಮಲ್ಲಿ ಜಾಬ್ ಕಾರ್ಡ್‌ಗಳಿದ್ದರೂ ಸಹ ನಮಗೆ ವಂಚಿಸಿದ್ದಾರೆ. ಈ ಕುರಿತು ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಅಧಿಕಾರಿಗಳಿಗೆ ದೂರು ನೀಡಿದ್ದೇವೆ ಎಂದು ರೈತ ರಾಜಾಸಾಬ್ ಕರಡೋಣಿ ಹೇಳಿದರು.ಕರಡೋಣಾ ಸೇರಿದಂತೆ ಕೆಲ ಗ್ರಾಮಗಳಲ್ಲಿ ರೈತರ ಹೊಲದಲ್ಲಿ ಬದುವು ನಿರ್ಮಾಣ, ಕಂದಕ ನಿರ್ಮಿಸಿದ ಕಾಮಗಾರಿಗಳಲ್ಲಿ ನಡೆದ ಭ್ರಷ್ಟಾಚಾರ ನಮ್ಮ ಗಮನಕ್ಕೆ ಬಂದಿಲ್ಲ. ಒಂದು ವೇಳೆ ರೈತರು ದೂರು ನೀಡಿದರೆ ಸಂಬಂಧಿಸಿದರ ಮೇಲೆ ಕ್ರಮಕೈಗೊಳ್ಳಲಾಗುವುದು ಎಂದು ಗಂಗಾವತಿಯ ಕೃಷಿ ಇಲಾಖೆಯ ಎಡಿಎ ಸಂತೋಷ ಪಟ್ಟದಕಲ್ಲು ಹೇಳಿದರು.