ಗೋಣಿಕೊಪ್ಪ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ ಗೋಣಿಕೊಪ್ಪ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.

ಕನ್ನಡಪ್ರಭ ವಾರ್ತೆ ಗೋಣಿಕೊಪ್ಪ

ಗೋಣಿಕೊಪ್ಪ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ ಗೋಣಿಕೊಪ್ಪ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.

ಎಂಟು ಶಾಲೆಯ ವಿದ್ಯಾರ್ಥಿಗಳು ಭಾಗವಹಿಸುವ ಮೂಲಕ ತಮ್ಮ ಕಲಿಕೆಗಳನ್ನು ಪ್ರದರ್ಶಸಿ, ಬಹುಮಾನ ಪಡೆದುಕೊಂಡರು.ಬುನಾದಿ ಸಾಕ್ಷರತೆ ಮತ್ತು ಸಂಖ್ಯಾಜ್ಞಾನ ಕಲಿಕಾ ಹಬ್ಬಕ್ಕೆ ಶಾಲೆಯ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಜಗದೀಶ್‌ ಜೋಡುಬೀಟಿ ಅಧ್ಯಕ್ಷತೆಯಲ್ಲಿ ಗೋಣಿಕೊಪ್ಪ ಗ್ರಾಪಂ ಅಧ್ಯಕ್ಷ ಕುಲ್ಲಚಂಡ ಪ್ರಮೋದ್‌ ಗಣಪತಿ ಚಾಲನೆ ನೀಡಿದರು.ನಂತರ ಮಾತನಾಡಿದ ಗಣಪತಿ ಅವರು, ಮಕ್ಕಳ ಮುಕ್ತ ಕಲಿಕೆಯ ವಾತಾವರಣಕ್ಕೆಅನುಕೂಲಕರವಾಗಿ ಕಲಿಕಾ ಹಬ್ಬವನ್ನು ಸರಕಾರ ಜಾರಿಗೆ ತಂದಿದೆ. ಅದನ್ನು ಸಮರ್ಪಕವಾಗಿ ಮಕ್ಕಳೆಡೆಗೆ ತಲುಪಿಸುವ ವ್ಯವಸ್ಥೆಯನ್ನು ಸಂಭ್ರಮವಾಗಿಸುವ ಮೂಲಕ ಮಕ್ಕಳಲ್ಲಿ ಕಲಿಕೆಯ ಆಸಕ್ತಿಯನ್ನು ದ್ವಿಗುಣಗೊಳಿಸುವಲ್ಲಿ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ ಎಂದರು.ಕ್ಷೇತ್ರ ಶಿಕ್ಷಣಾಧಿಕಾರಿ ಆನಂದ್ ಮಾತನಾಡಿ, ಮಕ್ಕಳಲ್ಲಿ ಸೃಜನಶೀಲತೆಯನ್ನು ಹುಟ್ಟು ಹಾಕುವ ಸಲುವಾಗಿ ಕಲಿಕಾ ಹಬ್ಬಆಚರಣೆ ಮಾಡಲಾಗುತ್ತಿದೆ. ಮಕ್ಕಳಲ್ಲಿ ಅಡಗಿರುವ ಅಗಾಧ ಪ್ರತಿಭೆಗಳು ಈ ಕಾರಣ ಹೊರ ಬಂದು ಗುರುತಿಸಿಕೊಳ್ಳುವ ವೇದಿಕೆಯಾಗುತ್ತಿದೆ ಎಂದು ಹೇಳಿದರು.ಗ್ರಾಪಂ ಉಪಾಧ್ಯಕ್ಷೆ ಮಂಜುಳಾ ಮಾತನಾಡಿ, ಮಕ್ಕಳಲ್ಲಿ ಕಲಿಯುವ ಗುಣಗಳನ್ನು ಹೆಚ್ಚಿಸುವ ಪ್ರಯೋಗಾತ್ಮಕ ಕಾರ್‍ಯಕ್ರಮಗಳು ಸರ್ಕಾರದ ಚಿಂತನೆಯ ಯೋಜನೆಗಳಾಗಿವೆ. ಈ ಕಾರ್ಯಕ್ರಮಗಳನ್ನು ಶಿಕ್ಷಕರು ಮಕ್ಕಳಿಗೆ ತಲುಪಿಸುವ ಪ್ರಯತ್ನ ಸಹಸಮಯವಾಗಿದೆ ಎಂದು ಹೇಳಿದರು.ಗ್ರಾಪಂ ಸದಸ್ಯ ಬಿ.ಎನ್. ಪ್ರಕಾಶ್ ಮಾತನಾಡಿ, ಕಲಿಕಾ ಹಬ್ಬಗಳ ಕಾರ್ಯಕ್ರಮಗಳು ಮಕ್ಕಳಲ್ಲಿ ಕಲಿಯುವ ಉತ್ಸಾಹವನ್ನು ಪ್ರೇರೇಪಿಸುತ್ತವೆ. ಜತೆಗೆ ಮಕ್ಕಳಲ್ಲಿರುವ ಆಸಕ್ತಿ ಗ್ರಹಿಕೆಯ ಶಕ್ತಿಗಳನ್ನು ತಿಳಿದುಕೊಳ್ಳಲು ಸಹಕಾರಿಯಾಗುತ್ತದೆ ಎಂದು ಹೇಳಿದರು.ಗ್ರಾಪಂ ಸದಸ್ಯೆ ಕೊಂಣಿಯಂಡ ಬೋಜಮ್ಮ ಮಾತನಾಡಿ, ಸರ್ಕಾರಿ ಶಾಲೆಯಲ್ಲಿ ಕಲಿಯುವ ಮಕ್ಕಳ ಅದೃಷ್ಟ ಮಾದರಿಯಾಗಿದೆ. ಖಾಸಗಿ ಶಾಲೆಗಳಿರುವಂತೆ ಒಂದು ಭಾಷೆಗೆ ಸೀಮಿತವಾಗಿ ಕಲಿಕೆಯನ್ನು ಮುಂದುವರಿಸುವುದಿಲ್ಲ, ಈ ನಾಡಿನ ಭಾಷೆ, ಸಂಸ್ಕೃತಿಯ ಬಗ್ಗೆ ಸರ್ಕಾರಿ ಶಾಲೆಗಳಲ್ಲಿ ಹೆಚ್ಚು ಒತ್ತು ನೀಡಲಾಗುತ್ತಿದೆ ಎಂದು ಹೇಳಿದರು.

ಶಾಲೆಯ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ, ಜಗದೀಶ್‌ ಜೋಡಬೀಟಿ ಮಾತನಾಡಿದರು.ಸಮೂಹ ಸಂಪನ್ಮೂಲ ವ್ಯಕ್ತಿ ರಾಧಾ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಾಲೆಯ ಪ್ರಭಾರ ಮುಖ್ಯ ಶಿಕ್ಷಕ ಸತೀಶ್ ಬಿ.ಆರ್. ಸೇರಿದಂತೆ ಶಾಲೆಯ ಎಸ್‌ಡಿಎಂಸಿ ಸಮಿತಿ ಉಪಾಧ್ಯಕ್ಷೆ ದಿವ್ಯ, ವಿವಿಧ ಶಾಲೆಯ ಮುಖ್ಯ ಶಿಕ್ಷಕರು, ವಿದ್ಯಾರ್ಥಿಗಳು ಪೋಷಕರು, ಹಾಜರಿದ್ದರು.