ಸತ್ತಾಗ ನಾವು ಏನೂ ತೆಗೆದುಕೊಂಡು ಹೋಗುವುದಿಲ್ಲ ಎನ್ನುವುದು ಶುದ್ಧ ಸುಳ್ಳು. ಒಳ್ಳೆಯದು ಮತ್ತು ಕೆಟ್ಟದ್ದನ್ನು ಒಯ್ಯುತ್ತೇವೆ

ಕೂಡ್ಲಿಗಿ: ನಮ್ಮನ್ನು ಸಂಕಷ್ಟದಿಂದ ಪಾರು ಮಾಡುವುದು ನಾವು ಮಾಡುವ ಒಳ್ಳೆಯ ಕೆಲಸ. ಅದು ನಮ್ಮನ್ನು ಸದಾ ಕಾಯುತ್ತವೆ ಎಂದು ಕೂಡ್ಲಿಗಿ ಪೊಲೀಸ್ ಠಾಣೆಯ ಹೆಡ್ ಕಾನ್ಸ್‌ಸ್ಟೇಬಲ್, ಲೇಖಕ ಸ್ವರೂಪ್ ಕೊಟ್ಟೂರು ಅಭಿಪ್ರಾಯಪಟ್ಟರು.

ಅವರು ಕೂಡ್ಲಿಗಿ ಸಮೀಪದ ಕೈವಲ್ಯಾಪುರ ಗ್ರಾಮದಲ್ಲಿ ಫಂಡರಾಪುರಕ್ಕೆ ಪಾದಯಾತ್ರೆ ಹೊರಟಿದ್ದ ಚಿತ್ರದುರ್ಗ ಜಿಲ್ಲೆಯ ಗೊಡಬನಹಾಳ್ ಪಾಂಡುರಂಗನ ದಿಂಡಿ ಉತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಇಂದಿನ ಎಲ್ಲ ಸಂಕಷ್ಟ, ಸಮಸ್ಯೆಗಳಿಗೆ ಮೂಲ‌ ಕಾರಣ ನಮ್ಮ ನಡೆ ನುಡಿಗಳು. ನಮ್ಮ‌ ನಡೆ ನುಡಿ ಶುದ್ಧ ಮತ್ತು ಪಾರದರ್ಶಕ ಆಗಿದ್ದರೆ ನಮ್ಮ ಜೀವನದಲ್ಲಿ ಭಾಗಶಃ ಯಶಸ್ಸು ಲಭಿಸಿದಂತೆ. ಸತ್ತಾಗ ನಾವು ಏನೂ ತೆಗೆದುಕೊಂಡು ಹೋಗುವುದಿಲ್ಲ ಎನ್ನುವುದು ಶುದ್ಧ ಸುಳ್ಳು. ಒಳ್ಳೆಯದು ಮತ್ತು ಕೆಟ್ಟದ್ದನ್ನು ಒಯ್ಯುತ್ತೇವೆ. ಹಾಗಾಗಿ ಸಂಪಾದಿಸುವುದಾದರೆ ಒಳ್ಳೆಯ ಕೆಲಸ ಮಾಡಿ ಪುಣ್ಯ ಸಂಪಾದಿಸಿ ಎಂದರು. ಸಂಪಾದನೆ ಮಾಡಬೇಕಿರುವುದು ಹಣವಲ್ಲ. ಮತ್ತೊಬ್ಬರ ಪ್ರೀತಿ, ವಿಶ್ವಾಸ, ನಂಬಿಕೆ. ಸಕಲ ಜೀವಿಗಳಿಗೆ ಒಳಿತನ್ನೇ ಮಾಡಬೇಕು. ಬಯಸಬೇಕು. ನಿಷ್ಕಾಮ ಭಕ್ತಿ, ಸತ್ಕರ್ಮಗಳಿಂದ ಜೀವನ ಸನ್ಮಾರ್ಗದಲ್ಲಿ ನಡೆಯುತ್ತದೆ. ದೇವರ ಅಭಯ ಪ್ರಾಪ್ತಿ ಆಗುತ್ತದೆ ಎಂದರು.

ಆಧ್ಯಾತ್ಮಿಕ ಸಾಧಕ ಶಿವಪುರ ನಾಗೇಂದ್ರಪ್ಪ ದಿಂಡಿಗೆ ಪ್ರಸಾದ ವ್ಯವಸ್ಥೆ ಮಾಡಿ, ಮಾತನಾಡಿ, ಆಧ್ಯಾತ್ಮಿಕ ಮಾರ್ಗ ಆಯ್ಕೆ ಮಾಡಿಕೊಂಡರೇ ಆನೇಕ ಸಂಕಷ್ಟ ಎದುರಾಗುತ್ತವೆ. ಅವು ನಮ್ಮನ್ನು ಪರೀಕ್ಷೆ ಮಾಡಲು ಹಾಗೇ ಗಟ್ಟಿಗೊಳಿಸಲು ಬರುತ್ತವೆ. ಕಷ್ಟಗಳನ್ನು ಕೊಡುವುದು ಹಾಗೇ ಕಳೆಯುವುದು ಭಂಗವತನೇ. ಆತನ ಮೇಲೆ ಭಾರ ಹಾಕಿ ಮುನ್ನಡೆಯಿರಿ. ದೇವರ ನಾಮ ಸ್ಮರಣೆಯೇ ನಮಗೆ ದೊಡ್ಡ ಶಕ್ತಿ ಎಂದರು.

ಈ ಸಂದರ್ಭದಲ್ಲಿ ಅನಂತ ಪದ್ಮನಾಭ ದೇಗುಲದ ಅರ್ಚಕ ಅನಂತಶಯನ, ಗೊಡಬನಾಳ್ ಬಸಣ್ಣ, ವೀರಪ್ಪ, ಪಾಪಣ್ಣ, ರಾಮಪ್ಪ, ಹೆಗ್ಡಾಳ್ ಬಸಣ್ಣ, ಆಶಾ ಸ್ವರೂಪ್, ಈಚಲಬೊಮ್ಮನಹಳ್ಳಿ ಮಹೇಂದ್ರ ಮುಂತಾದವರು ಇದ್ದರು.