ಯೋಗದಿಂದ ಸದೃಢ ಆರೋಗ್ಯ: ಓಂಕಾರೇಶ್ವರಿ ಮಾತಾಜಿ

| Published : Jun 22 2024, 12:53 AM IST

ಸಾರಾಂಶ

ಯಲಬುರ್ಗಾ ಪಟ್ಟಣದ ಸಾಯಿ ಪ್ಯಾಲೇಸ್ ಆವರಣದಲ್ಲಿ ಪತಂಜಲಿ ಯೋಗಾಸನ ತಾಲೂಕು ಸಮಿತಿ ವತಿಯಿಂದ ಶುಕ್ರವಾರ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಡೆಯಿತು,

ಕನ್ನಡಪ್ರಭ ವಾರ್ತೆ ಯಲಬುರ್ಗಾ

ಪ್ರತಿಯೊಬ್ಬರು ಯೋಗ ಮಾಡುವುದರಿಂದ ಸದೃಢ ಆರೋಗ್ಯ ಭಾಗ್ಯ ಪಡೆಯಲು ಸಾಧ್ಯ ಎಂದು ಕಪ್ಪತಗುಡ್ಡದ ಬಸವಬೆಟ್ಟದ ಯೋಗಗುರು ಮಾತೆ ಓಂಕಾರೇಶ್ವರಿ ಮಾತಾಜಿ ಹೇಳಿದರು.

ಪಟ್ಟಣದ ಸಾಯಿ ಪ್ಯಾಲೇಸ್ ಆವರಣದಲ್ಲಿ ಪತಂಜಲಿ ಯೋಗಾಸನ ತಾಲೂಕು ವತಿಯಿಂದ ಶುಕ್ರವಾರ ಆಯೋಜಿಸಿದ್ದ ಹತ್ತನೇಯ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಪುರುಷರು, ಮಹಿಳೆಯರು, ಶಾಲಾ, ಕಾಲೇಜು ವಿದ್ಯಾರ್ಥಿನಿಯರು, ವಯೋವೃಧ್ದರು ಸೇರಿ ಎಲ್ಲರೂ ಯೋಗಾಸನದಲ್ಲಿ ತೊಡಗಿಸಿಕೊಳ್ಳುವತ್ತ ಹೆಚ್ಚು ಗಮನಹರಿಸಬೇಕು ಎಂದರು.

ನ್ಯಾಯವಾದಿ ಬಿ.ಎಂ. ಶಿರೂರ ಹಾಗೂ ನ್ಯಾಯವಾದಿ ರಾಜಶೇಖರ ನಿಂಗೋಜಿ ಮಾತನಾಡಿ, ಹಿಂದಿನ ಕಾಲದ ಹಿರಿಯರು ಮಹಿಳೆಯರಿಗೆ ಕುಟ್ಟುವ-ಬೀಸುವ ಹವ್ಯಾಸವನ್ನು ಕಲಿಸಿ ಹೋಗಿದ್ದಾರೆ. ಇದರಿಂದ ಯೋಗದ ಕೆಲ ವಿಧಗಳು ಇದರಲ್ಲಿ ಅಡಕವಾಗಿವೆ. ಈ ನಿಟ್ಟಿನಲ್ಲಿ ಆಗಿನ ಕಾಲದ ವೃದ್ಧೆಯರು ಇಂದಿಗೂ ಸದೃಢವಾಗಿದ್ದಾರೆ. ಇದಕ್ಕೆ ಯೋಗವೇ ಕಾರಣವಾಗಿದೆ ಎಂದು ಹೇಳಿದರು.

ಪತಂಜಲಿ ಯೋಗಾಸನ ಸಮಿತಿ ತಾಲೂಕಾಧ್ಯಕ್ಷ ಸಂಗಣ್ಣ ಟೆಂಗಿನಕಾಯಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಳೆದ ೨೧ ದಿನಗಳಿಂದ ನಿರಂತರವಾಗಿ ನಮ್ಮಲ್ಲಿ ಯೋಗ ಹಮ್ಮಿಕೊಂಡಿದ್ದು, ಇದರಲ್ಲಿ ೧೦೦ಕ್ಕೊ ಹೆಚ್ಚು ಶಿರಾರ್ಥಿಗಳು ಪಾಲ್ಗೊಂಡಿದ್ದರು. ಹಲವು ಜನತೆ ಡಯಾಬಿಟಿಸ್, ಮಲಬದ್ಧತೆ, ಬೊಜ್ಜು ಸೇರಿದಂತೆ ಇತರ ಕಾಯಿಲೆಗಳ ಸಮಸ್ಯೆಗಳಿಂದ ಬಳಲುತ್ತಾರೆ. ಇಂತಹ ವ್ಯಕ್ತಿಗಳು ನಡೆಯುವ ಉಚಿತ ಯೋಗ ಶಿಬಿರಗಳಲ್ಲಿ ಪಾಲ್ಗೊಂಡು ಕ್ರಮೇಣವಾಗಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂದರು.

ಅತಿಥಿಗಳಾಗಿ ಡಾ. ಶೇಖರ ಭಜಂತ್ರಿ, ಡಾ. ನಂದಿತಾ ದಾನರೆಡ್ಡಿ, ಜ್ಯೋತಿ ಪಲ್ಲೇದ, ಅಮರಪ್ಪ ಕಲಬುರ್ಗಿ, ವೀರೇಶ ಟೆಂಗಿನಕಾಯಿ, ಬಸವರಾಜ ಗೊಂಡಗುರಿ, ಶಾರದಾ ಕೊಣ್ಣೂರ ಮತ್ತಿತರರು ಇದ್ದರು.