ಸಾರಾಂಶ
ಯಲ್ಲಾಪುರ: ಆರ್ಥಿಕವಾಗಿ ಎಷ್ಟು ಸಬಲರಾಗಿದ್ದಾರೆ ಎನ್ನುವುದು ಕುಟುಂಭದ ಕೈಗನ್ನಡಿ ಅಲ್ಲ. ಬದಲಾಗಿ ಉತ್ತಮ ಸಂಸ್ಕಾರ ಕುಟುಂಬದ ವರ್ಣನೆ ಮಾಡುತ್ತದೆ. ಅಂತಹ ಆದರ್ಶ ಕುಂಟುಂಬ ನಿರ್ಮಾಣದಲ್ಲಿ ಮಹಿಳೆಯರ ಪಾತ್ರ ಮಹತ್ವದ್ದಾಗಿದೆ ಎಂದು ಶಾಸಕ ಶಿವರಾಮ ಹೆಬ್ಬಾರ್ ಹೇಳಿದರು.
ಪಟ್ಟಣದ ಅಡಕೆ ಭವನದಲ್ಲಿ ಯಲ್ಲಾಪುರ ಹಾಗೂ ಮುಂಡಗೋಡಿನ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಜ್ಞಾನವಿಕಾಸ ಕಾರ್ಯಕ್ರಮದಡಿ ಮಹಿಳಾ ವಿಚಾರ ಗೋಷ್ಠಿ, ಸನ್ಮಾನ, ವಿವಿಧ ಸ್ಪರ್ಧಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಒಂದು ಸಣ್ಣ ಸಂಸ್ಥೆಯಾಗಿ ಹುಟ್ಟಿದ ಧರ್ಮಸ್ಥಳ ಸಂಘ ಇಂದು 56 ಲಕ್ಷ ಸದಸ್ಯರನ್ನು ಹೊಂದಿದ್ದು, ಇದು ಯಾವುದೇ ಸರಕಾರ ಅಥವಾ ರಾಜಕೀಯ ಪಕ್ಷಗಳಿಂದ ಅಸಾಧ್ಯ. ಮಹಿಳೆಯರನ್ನು ಸ್ವಾವಂಬಿಗಳಾಗಿಸಿ, ಹಣದ ಸದ್ಭಳಕೆಯನ್ನು ಸಂಘಟನೆ ತೋರಿಸಿಕೊಡುತ್ತದೆ ಎಂದರು.
ಸಂಸ್ಕಾರ, ಸಂಸ್ಕೃತಿ ಉಳಿಸುವಲ್ಲಿ ಮಹಿಳೆಯರ ಪಾತ್ರದ ಕುರಿತು ಶಿರಸಿಯ ನಿವೃತ್ತ ಪ್ರಾಚಾರ್ಯೆ ಕೋಮಲಾ ಭಟ್ಟ ಉಪನ್ಯಾಸ ನೀಡಿ, ''''ನಮ್ಮ ಸಂಸ್ಕೃತಿಯನ್ನು ನಮ್ಮ ಮಕ್ಕಳ ವರೆಗೆ ಮುಟ್ಟಿಸುತ್ತಿದ್ದೇವೆಯೇ ಎಂಬುದನ್ನು ಮಹಿಳೆಯರು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದರು.ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹರಿಪ್ರಕಶ ಕೊಣೆಮನೆ ಮಾತನಾಡಿ, ದುಡಿದು ಸ್ವಾವಲಂಭಿಗಳಾಗಿ ಸಾಲ ತಿರಿಸುತ್ತೇವೆ ಎಂಬ ಆತ್ಮವಿಶ್ವಾಸವನ್ನು ಕಲಿಸುತ್ತಿರುವ ಧರ್ಮಸ್ಥಳ ಸಂಘ ಮಹಿಳಾ ಕಲ್ಯಾಣದ ಮೂಲಕ ಸಮಾಜದ ಕಲ್ಯಾಣ ಮಾಡುತ್ತಿದೆ'''' ಎಂದರು.
ಸಂಘದ ಜಿಲ್ಲಾ ನಿರ್ದೇಶಕ ಎ. ಬಾಬು ನಾಯ್ಕ, ಜನಜಾಗೃತಿ ವೇದಿಕೆಯ ಜಿಲ್ಲಾ ಸದಸ್ಯ ಡಾ. ರವಿ ಭಟ್ಟ ಬರಗದ್ದೆ, ರಾಷ್ಟ್ರ ಪ್ರಶಸ್ತಿ ವಿಜೇತ ಪ್ರಗತಿಪರ ರೈತ ಬಸವರಾಜ ನಡುವಿನಮನಿ ಮಾತನಾಡಿದರು.ಸ್ವ ಉದ್ಯೋಗದ ಮೂಲಕ ಸ್ವಾವಲಂಭಿಗಳಾಗಿ ಬೆಳೆದ ಮಾದರಿ ಮಹಿಳೆಯರಾದ ಗಿರಿಜಾ ಗುರುಪ್ರಸಾದ, ಶಕುಂತಲಾ ಛಲವಾದಿ, ಜಾಹ್ನವಿ ಕುಣಬಿ, ಕಮಲಾ ಪೂಜಾರಿ, ಇಂದಿರಾ ರಾಮಚಂದ್ರ, ಅಕ್ಷತಾ ಕುಸುಗಲ್ ಅವರನ್ನು ಸನ್ಮಾನಿಸಲಾಯಿತು. ಸನ್ಮಾನಿತರ ಪರವಾಗಿ ಗಿರಿಜಾ ಗುರುಪ್ರಸಾದ ಅನಿಸಿಕೆ ಹಂಚಿಕೊಂಡರು. ಜನಜಾಗೃತಿ ವೇದಿಕೆಯ ಡಿ.ಎನ್. ಗಾಂವ್ಕರ್ ವೇದಿಕೆಯಲ್ಲಿದ್ದರು. ಪಪಂ ಅಧ್ಯಕ್ಷೆ ನರ್ಮದಾ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದ ಅಂಗವಾಗಿ ಪುಷ್ಪಗುಚ್ಚ, ಆರತಿ ತಟ್ಟೆ, ಕುಣಿತ ಭಜನೆ, ಸಾಂಸ್ಕೃತಿಕ ಸ್ಪರ್ಧೆಗಳು, ಸ್ವ ಉದ್ಯೋಗ ಮಳಿಗೆಗಳ ಪದರ್ಶನ ನಡೆಯಿತು.
ಪ್ರೇಮಾ ಸಂಗಡಿಗರು ಪ್ರಾರ್ಥಿಸಿದರು, ರಾಜೀವಿ ಎಸ್.ಪಿ. ವರದಿ ವಾಚಿಸಿದರು, ಯೋಜನಾಧಿಕಾರಿ ಹನುಮಂತ ನಾಯ್ಕ ಸ್ವಾಗತಿಸಿದರು. ನಾಗರತ್ನ ಟಿ. ನಿರೂಪಿಸಿದರು.