ದೈಹಿಕ ಆರೋಗ್ಯ ಉತ್ತಮವಾಗಿದ್ದರೆ ಸ್ವಸ್ಥ ಸಮಾಜ: ಬಡ್ಡಿರ ನಳಿನಿ ಪೂವಯ್ಯ

| Published : Jan 02 2024, 02:15 AM IST

ಸಾರಾಂಶ

ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆ ವಾರ್ಷಿಕೋತ್ಸವ ನಡೆಯಿತು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ನಡೆಯಿತು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ನಾಪೋಕ್ಲು

ದೈಹಿಕ ಮತ್ತು ಮಾನಸಿಕ ಆರೋಗ್ಯ ಉತ್ತಮವಾಗಿದ್ದರೆ ಮಾತ್ರ ಸ್ವಸ್ಥ ಸಮಾಜ ನಿರ್ಮಾಣ ಆಗಲು ಸಾಧ್ಯ ಎಂದು ನಿವೃತ್ತ ಪ್ರಾಂಶುಪಾಲ ಬಡ್ಡಿರ ನಳಿನಿ ಪೂವಯ್ಯ ಹೇಳಿದರು.

ಇಲ್ಲಿನ ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆ ಆವರಣದಲ್ಲಿ ಆಯೋಜಿಸಲಾಗಿದ್ದ ಶಾಲೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಸೋಮವಾರ ಪಾಲ್ಗೊಂಡು ಕಾರ್ಯಕ್ರಮವನ್ನು ದೀಪ ಬೆಳಗಿಸುವುದರೊಂದಿಗೆ ಉದ್ಘಾಟಿಸಿ ಮಾತನಾಡಿದರು.

ಸತ್ಯ , ಪ್ರಾಮಾಣಿಕತೆ ಆತ್ಮವಿಶ್ವಾಸ ,ಮಾನವೀಯತೆ ಹೊಂದಿದ ಮಾನವನನ್ನಾಗಿ ರೂಪಿಸುವುದು ಶಿಕ್ಷಕರ ಜವಾಬ್ದಾರಿ. ಪ್ರತಿಯೊಂದು ಮಗುವಿನ ಬುದ್ಧಿವಂತಿಕೆ ಭಿನ್ನವಾಗಿರುತ್ತದೆ. ಪೋಷಕರು ಮಗುವನ್ನು ಇನ್ನೊಂದು ಮಗುವಿನೊಂದಿಗೆ ಹೋಲಿಸಬಾರದು ಮಗುವಿನಲ್ಲಿರುವ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಬೇಕು ಎಂದರು.

ವಾರ್ಷಿಕೋತ್ಸವ ಎಂದರೆ ವಿದ್ಯಾರ್ಥಿಗಳ ಪ್ರತಿಭೆಗಳಿಗೆ ಪ್ರೋತ್ಸಾಹ ಕೊಡುವ ದಿನ. ಕ್ರೀಡಾ ಪ್ರತಿಭೆ, ಸಾಂಸ್ಕೃತಿಕ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ದಿನವನ್ನು ವಾರ್ಷಿಕೋತ್ಸವ ಎಂದು ಆಚರಿಸುತ್ತೇವೆ. ಅಂತೆಯೇ ಹೊಸ ವರ್ಷ ಕೂಡ ಸಂಕಲ್ಪಗಳನ್ನು ಮಾಡುವಂತ ದಿನ. ಹೊಸ ವರ್ಷದ ಆಚರಣೆ ಕೇವಲ ಆಚರಣೆಯಲ್ಲಿ ಮುಗಿಯುವುದಿಲ್ಲ. ಹಿಂದಿನ ವರ್ಷಗಳ ಎಡರು ತೊಡರುಗಳನ್ನು ನೆನಪಿಸಿಕೊಂಡು ಹೊಸ ವರ್ಷದಲ್ಲಿ ಸಂಕಲ್ಪ ಮಾಡಿದಾಗ ಹೊಸ ವರ್ಷದ ಆಚರಣೆಗೆ ಒಂದು ಅರ್ಥ ಬರುತ್ತದೆ ಎಂದರು.

ಪರೀಕ್ಷೆಗಾಗಿ ಉತ್ತಮ ಸಿದ್ಧತೆಗಳನ್ನು ವಿದ್ಯಾರ್ಥಿಗಳು ಇಂದಿನಿಂದಲೇ ಸಿದ್ಧಪಡಿಸಿಕೊಳ್ಳಬೇಕು. ಜೀವನದಲ್ಲಿ ಗುರು ಹಿರಿಯರಿಗೆ ಗೌರವ ಕೊಡುವುದನ್ನು ಕಲಿಯಬೇಕು. ಪೋಷಕರು ತಮ್ಮ ಮಕ್ಕಳನ್ನು ಸಮಾಜಕ್ಕೆ ಉಪಯೋಗವಾಗುವಂತಹ ಪ್ರಜೆಯನ್ನಾಗಿ ಬೆಳೆಸಬೇಕು. ಚಾರಿತ್ರ್ಯವಂತ ಸಮಾಜವನ್ನು ನಿರ್ಮಿಸಲು ಮಗುವಿನಲ್ಲಿ ಕ್ರಿಯಾಶೀಲತೆ ಬೆಳೆಸಿಕೊಳ್ಳಬೇಕಾದ್ದು ಅವಶ್ಯಕವಾಗಿದೆ ಎಂದರು.

ಶಾಲೆಯ ಪ್ರಾಂಶುಪಾಲ ಬಿ.ಸಿ. ಗಪ್ಪಣ್ಣ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಮಡಿಕೇರಿಯ ಸಮಾಜ ಸೇವಕ ಹಿದಾಯತುಲ್ಲ (ಬ್ಲಡ್ ಬಯ್ಯ) ಹಾಗೂ ಕಾರ್ಯದರ್ಶಿ ಜಯ ಗಪ್ಪಣ್ಣ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭ ಸಮಾರಂಭದ ವೇದಿಕೆಯಲ್ಲಿದ್ದ ಗಣ್ಯರು ವಿವಿಧ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಶುಭ ಹಾರೈಸಿದರು. ಶಾಲ ವರದಿಯನ್ನು ಶಿಕ್ಷಕ ಪೊರ್ಕೋoಡ ಸುನಿಲ್ ವಾಚಿಸಿ ಶಿಕ್ಷಕಿ ತಂಗಮ್ಮ ಸ್ವಾಗತಿಸಿದರು. ಶಿಕ್ಷಕಿ ದಿವ್ಯ ಅತಿಥಿ ಪರಿಚಯ ಮಾಡಿ ಶಿಕ್ಷಕಿಯರಾದ ವಸಂತ ಲಕ್ಷ್ಮಿ ಮತ್ತು ದಮಯಂತಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ಕಿರಣ್ ಟಿ.ಬಿ. ವಂದಿಸಿದರು. ಬಳಿಕ ವಿವಿಧ ಆಕರ್ಷಕ ಉಡುಗೆ ತೊಡುಗೆ ಧರಿಸಿದ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮ ಜರಗಿ ಸಭಿಕರನ್ನು ರಂಜಿಸಿದರು.