ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಪ್ರಸಕ್ತ ವರ್ಷ ಮುಂಗಾರು ಮಳೆಗಳಾದ ರೋಹಿಣಿ, ಆರಿದ್ರಾ, ಪುಷ್ಯ, ಹಿಂಗಾರು ಮಳೆಗಳಲ್ಲಿ ಮಗಿ, ಉತ್ತರಿ, ಸ್ವಾತಿ ಮಳೆಗಳು ಸಂಪೂರ್ಣ ಸುರಿಯಲಿವೆ ಎಂಬುವುದು ಮುರನಾಳ ಶ್ರೀ ಮಳೆರಾಜೇಂದ್ರಸ್ವಾಮಿ ಮಠದ ವಾಣಿಯಾಗಿದೆ.ಈ ಭಾಗದ ಕೃಷಿಕರ ಮಠವೆಂದೇ ಖ್ಯಾತಿ ಪಡೆದಿರುವ ಮುರನಾಳ ಮಳೆರಾಜೇಂದ್ರಸ್ವಾಮಿ ಮಠದ ಜಾತ್ರಾ ಮಹೋತ್ಸವ ನಿಮಿತ್ತ ಸೋಮವಾರ ರಾತ್ರಿ ನಡೆದ ಕಡುಬಿನ ಕಾಳಗ (ಮಳೆ ಬೆಳೆ ಸೂಚನೆ)ದಲ್ಲಿ ಮಳೆಯ ಸೂಚನೆ ದೊರೆತಿದೆ.
ಈ ವರ್ಷದ ಮುಂಗಾರಿನಲ್ಲಿ ರೋಹಿಣಿ, ಆರಿದ್ರಾ, ಪುಷ್ಯಾ ಸಂಪೂರ್ಣ, ಮೃಗಶಿರಾ ಉತ್ತಮ, ಪುನರ್ವಸು ಸಾಧಾರಣ, ಹಿಂಗಾರಿನಲ್ಲಿ ಮಗಿ ಉತ್ತರಿ, ಸ್ವಾತಿ ಸಂಪೂರ್ಣ, ಹುಬ್ಬಿ ಉತ್ತಮ, ಚಿತ್ತಿ ಸಾಧಾರಣ ಮಳೆ ಸುರಿಸಲಿವೆ ಎಂಬುವುದಾಗಿ ಶ್ರೀಮಠದ ಸೂಚನೆ ದೊರೆಯಿತು ಎಂದು ಶ್ರಿ ಮಠದ ಮಠಾಧೀಶ ಮೌನೇಶ್ವರ ಸ್ವಾಮೀಜಿ ನೆರೆದ ಭಕ್ತರಿಗೆ ತಿಳಿಸಿದರು. ಮಳೆ-ಬೆಳೆ ಕುರಿತಂತೆ ಮಠದ ಸೂಚನೆ ಪಡೆದ ರೈತರು ಪ್ರಸಕ್ತ ವರ್ಷದ ಸಾಧಕ-ಬಾಧಕಗಳ ಬಗ್ಗೆ ತಮ್ಮ ತಮ್ಮಲ್ಲಿಯೇ ವಿಚಾರ ವಿನಿಮಯ ಮಾಡಿಕೊಂಡರು.ಮಳೆ ಸೂಚನೆ (ಕಡುಬಿನ ಕಾಳಗ)ದ ವೈಶಿಷ್ಟ್ಯ:
ಕಡುಬಿನ ಕಾಳಗದ ಮುಂಚೆ ನಡೆದ ಮಳೆರಾಜೇಂದ್ರ ಸ್ವಾಮಿಗಳ ಮೂರ್ತಿ ಹೊತ್ತ ಪಲ್ಲಕ್ಕಿ ಮೆರವಣಿಗೆಯಲ್ಲಿ ಗ್ರಾಮದ ಸಾವಿರಾರು ಮಹಿಳೆಯರು ಆರತಿ ಹಾಗೂ ಪಂಚ ಬಿಂದಿಗೆಯೊಂದಿಗೆ ಪಾಲ್ಗೊಂಡಿದ್ದರು.ಗಂಗೆಯ ಪುಜೆಗಾಗಿ ನಿರ್ಮಿಸಿರಿರುವ ಹೊಂಡದವರೆಗೆ ಮೆರವಣಿಗೆಯಲ್ಲಿ ಸಾಗಿದ ಗ್ರಾಮಸ್ಥರು ಗಂಗೆಗೆ ಪೂಜೆ ಸಲ್ಲಿಸಿದ ಬಳಿಕ ಪಂಚ ಬಿಂದಿಗೆಗಳಲ್ಲಿ ಗಂಗೆ ತುಂಬಿದರು. ಪ್ರತಿ ಬಿಂದಿಗೆಯ ಮೇಲೆ ಎರಡೆರಡು ಮಳೆಗಳ ಹೆಸರನ್ನು ನಮೂದಿಸಿದ್ದರು. ಪಂಚ ಬಿಂದಿಗೆ ಹೊತ್ತು ನಂತರ ಗಂಗಾ ಹೊಂಡದಿಂದ ಪುನಃ ಮೆರವಣಿಗೆಯಲ್ಲಿ ರಥೋತ್ಸವ ಸ್ಥಳಕ್ಕೆ ಬರುತ್ತಾ ರಥೋತ್ಸವ ಪ್ರದಕ್ಷಿಣೆ ಹಾಕಿ ಪಂಚಬಿಂದಿಗೆ ಪೂಜೆ ಸಲ್ಲಿಸಿ ತರುವಾಯ ಮಳೆ-ಬೆಳೆ ಸೂಚನೆ ನೀಡಲಾಯಿತು. ಮಳೆಗಳ ಹೆಸರನ್ನು ಹೊಂದಿರುವ ಬಿಂದಿಗೆಗಳ ಬಸಿಯುವಿಕೆ (ಸೋರಿಕೆ) ಆಧಾರದ ಮೇಲೆ ಮಳೆ, ಬೆಳೆ ಸೂಚನೆ ಹೊರಬೀಳುತ್ತದೆ. ಸೋರಿಕೆ ಪ್ರಮಾಣದ ಮೇಲೆಯೇ ಯಾವ ಮಳೆ ಹೆಚ್ಚು ಸುರಿಯುತ್ತದೆ, ಯಾವುದು ಕಡಿಮೆ ಆಗುತ್ತದೆ ಎಂಬುವುದರ ಭವಿಷ್ಯ ನುಡಿಯಲಾಗುತ್ತದೆ. ಮಳೆರಾಜೇಂದ್ರಸ್ವಾಮಿ ಮಠದ ವಾಣಿಯ ವಿಶಿಷ್ಟ ಪರಂಪರೆ ಹೊಂದಿದ್ದು, ಮಠದ ಕಡುಬಿನ ಕಾಳಗಕ್ಕೆ ರೈತ ಸಮುದಾಯ ಕುತೂಹಲದಿಂದ ಕಾಯುತ್ತಿರುತ್ತಾರೆ. ಸೋಮವಾರ ರಾತ್ರಿ ಸಂಭ್ರಮದಿಂದ ನಡೆದ ಕಡುಬಿನ ಕಾಳಗದಲ್ಲಿ ಮಠಾಧೀಶರಾದ ಮೌನೇಶ್ವರ ಶ್ರೀಗಳು, ಅಡವೇಶ ಶಾಸ್ತ್ರೀ, ಗ್ರಾಮದ ಮುಖಂಡರಾದ ಹುಚ್ಚಪ್ಪ ಶಿರೂರ, ಶ್ರೀಶೈಲ ಬಾಳಿಕಾಯಿ, ಸಿದ್ದಪ್ಪ ಮುಚಖಂಡಿ, ಸಿದ್ದಪ್ಪ ಬಂಗಿ, ಅಶೋಕ ಪತ್ತಾರ, ಶೇಖಪ್ಪ ಗಣಿ, ವಿವೇಕಾನಂದ ಗೂಗಿಹಾಳ, ಮುರುಗೇಶ ದೊಡಮನಿ, ರಾಚಪ್ಪ ದೊಡಮನಿ, ಪ್ರಕಾಶ ದೊಡಮನಿ, ಗಂಗಪ್ಪ ಓಬಳಿ, ರಂಗಪ್ಪ ರೊಳ್ಳಿ, ಈರಪ್ಪ ಶಿರೂರ, ಮಳಿಯಪ್ಪ ಕುಂಬಾರ, ರುಕ್ಮಣ್ಣ ಪತ್ತಾರ ಹಾಗೂ ಅರ್ಚಕರಾದ ಸಂಜು ಪತ್ತಾರ, ಮಂಜು ಪತ್ತಾರ, ರಾಘು ಪತ್ತಾರ, ಕಲ್ಲಪ್ಪ ಕಂಬಾರ, ಸಕರಪ್ಪ ಕಂಬಾರ, ಈರಪ್ಪ ಬಡಿಗೇರ, ಭೀಮಪ್ಪ ಗಲಗಲಿ, ಹನುಮಂತ ಪತ್ತಾರ, ಮೌನೇಶ ಬಡಿಗೇರ, ಸಿದ್ದಪ್ಪ ತೆಗ್ಗಿ, ಅಪ್ಪಣ್ಣ ತೆಗ್ಗಿ, ಪ್ರಕಾಶ ಬಿಸಾಳಿ, ಮಳಿಯಪ್ಪ ಬಿಸಾಳಿ, ಬಸು ಜೈನಾಪುರ, ಮಲ್ಲಪ್ಪ ಗೋರವರ, ಮಳಿಯಪ್ಪ ದಾಸರ ಸೇರಿದಂತೆ ಗ್ರಾಮದ ಹಿರಿಯರು, ಯುವಕರು, ಮಹಿಳೆಯರು ಭಾಗವಹಿಸಿದ್ದರು.