ಕಾವೇರಿ ಮಾತೆಯ ಅನುಗ್ರಹ ಮೂಲಕ ಮೂಲ ಕಾವೇರಿ ತವರಿನಲ್ಲಿ ಉತ್ತಮ ಮಳೆ ಆಗಿರುವುದಾಗಿ ಸಚಿವ ಪಿಎಂ ನರೇಂದ್ರಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದರು.
ಕನ್ನಡಪ್ರಭ ವಾರ್ತೆ ಕುಶಾಲನಗರ
ಕಾವೇರಿ ಮಾತೆಯ ಅನುಗ್ರಹ ಮೂಲಕ ಮೂಲ ಕಾವೇರಿ ತವರಿನಲ್ಲಿ ಉತ್ತಮ ಮಳೆ ಆಗಿರುವುದಾಗಿ ಸಚಿವ ಪಿಎಂ ನರೇಂದ್ರಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದರು.ಶಾಸಕ ಮಂತರ್ ಗೌಡ ಅವರೊಂದಿಗೆ ಹಾರಂಗಿ ಜಲಾಶಯಕ್ಕೆ ಮತ್ತು ಹುದುಗೂರು ಗ್ರಾಮದ ವ್ಯಾಪ್ತಿಯಲ್ಲಿ ಕೃಷಿ ಚಟುವಟಿಕೆಗಳನ್ನು ವೀಕ್ಷಣೆ ಮಾಡಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಕ್ಷೇತ್ರ ಶಾಸಕ ಡಾ. ಮಂತರ್ ಗೌಡ ಮತ್ತು ಜಿಲ್ಲಾ ಧಿಕಾರಿಗಳು, ಅಣೆಕಟ್ಟು ಅಧಿಕಾರಿಗಳೊಂದಿಗೆ ಮಳೆ ಮತ್ತು ಬರ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಕಲೆ ಹಾಕಿದ ಸಚಿವರು, ಕಾವೇರಿ ಪಾತ್ರದ ಮಂಡ್ಯ ಜಿಲ್ಲೆಯವನಾದ ತನಗೆ ಕಾವೇರಿ ಜಲಾನಯನ ಪ್ರದೇಶದ ಸಂಪೂರ್ಣ ವಾಸ್ತವ ಪರಿಸ್ಥಿತಿಯ ಅರಿವಿದೆ ಎಂದರು.ಮೂಲ ಕಾವೇರಿಯಲ್ಲಿ ಮಳೆಗಾಲದಲ್ಲಿ ನದಿ ತುಂಬಿ ಹರಿದು ಈ ಭಾಗದ ಜನರು ಸಂಕಷ್ಟಕ್ಕೆ ಈಡಾಗುವುದರೊಂದಿಗೆ ರಾಜ್ಯ ಹಾಗೂ ನೆರೆ ರಾಜ್ಯಗಳ ಕೃಷಿಕರನ್ನು ಸಂತಸ ಪಡಿಸುತ್ತಿರುವ ಜಿಲ್ಲೆಯ ಜನತೆಯ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು.
ಬರ ಮತ್ತು ಪ್ರವಾಹ ಪೀಡಿತ ಪ್ರದೇಶಗಳ ವೀಕ್ಷಣೆ ನಡೆಸಿ ಸ್ಥಳೀಯ ಕ್ಷೇತ್ರ ಶಾಸಕರು ಹಾಗೂ ಜಿಲ್ಲಾಧಿಕಾರಿಗಳೊಂದಿಗೆ ಈ ಬಗ್ಗೆ ಚರ್ಚಿಸಲಾಗುವುದು ತದನಂತರ ಸಮಗ್ರ ಮಾಹಿತಿಯ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದರು.ಕಾವೇರಿಯ ಅನುಗ್ರಹದೊಂದಿಗೆ ಎರಡು ರಾಜ್ಯಗಳ ನೀರಿನ ವಿವಾದ ಕೊನೆಗೊಳ್ಳಲಿದೆ ಎಂದು ಆಶಾಭಾವನೆ ವ್ಯಕ್ತಪಡಿಸಿದ ಅವರು ಕಾವೇರಿ ಮುನಿಸಿದರೆ ನಾಡಿನ ಜನರಿಗೆ ಅನ್ನ ಆಹಾರಕ್ಕೆ ಆಪತ್ತು ಎದುರಾಗಲಿದೆ ಎಂದು ಅವರು ಹೇಳಿದರು.
ಈ ಹಿನ್ನೆಲೆಯಲ್ಲಿ ಎಲ್ಲರೂ ನಾಡಿನ ಕ್ಷೇಮಕ್ಕಾಗಿ ಕಾವೇರಿ ಮಾತೆಗೆ ಪ್ರಾರ್ಥನೆ ಸಲ್ಲಿಸಬೇಕಾಗಿದೆ ಎಂದು ಸಚಿವರು ತಿಳಿಸಿದರು.ಸಚಿವರು ಶಾಸಕ ಮಂತರ್ ಗೌಡ, ಜಿಲ್ಲಾಧಿಕಾರಿ ಸೋಮಶೇಖರ್ ಮತ್ತು ಹಾರಂಗಿ ಯೋಜನಾ ವೃತ್ತದ ಅಧೀಕ್ಷಕ ಅಭಿಯಂತರ ಸತೀಶ್ ಅವರಿಂದ ಮಳೆ ಹಾಗೂ ಬರಪೀಡಿತ ಪ್ರದೇಶಗಳ ಸಮಗ್ರ ಮಾಹಿತಿ ಕಲೆ ಹಾಕಿದರು.
ಕುಶಾಲನಗರ ಗಡಿ ಭಾಗದಲ್ಲಿ ಕ್ಷೇತ್ರ ಶಾಸಕ ಮಂತರ್ ಗೌಡ, ಹಾರಂಗಿ ಅಣೆಕಟ್ಟು ವಿಭಾಗದ ಕಾರ್ಯಪಾಲಕ ಅಭಿಯಂತರ ಮಹೇಶ್ ಸಹಾಯಕ ಕಾರ್ಯ ಪಾಲಕ ಅಭಿಯಂತರ ಪುಟ್ಟಸ್ವಾಮಿ, ಸೇರಿದಂತೆ ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷರಾದ ಧರ್ಮಜ ಉತ್ತಪ್ಪ, ತಾಲೂಕು ಸಮಿತಿಯ ಅಧ್ಯಕ್ಷರಾದ ವಿ ಪಿ ಶಶಿಧರ್, ಕುಶಾಲನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ಪ್ರಮುಖರಾದ ಕೆ ಪಿ ಚಂದ್ರಕಲಾ ಮಂಜುನಾಥ್ ಗುಂಡೂರಾವ್ ಪುಷ್ಪಲತಾ ಮತ್ತು ಸ್ಥಳೀಯ ಪ್ರಮುಖರು ಕಾರ್ಯಕರ್ತರು ಬರಮಾಡಿಕೊಂಡರು.ಸಚಿವ ಪಿ ಎಂ ನರೇಂದ್ರಸ್ವಾಮಿ ಮತ್ತು ಶಾಸಕ ಮಂತರ್ ಗೌಡ, ಜಿಲ್ಲಾಡಳಿತದ ಪರವಾಗಿ ಜಿಲ್ಲಾಧಿಕಾರಿ ಸೋಮಶೇಖರ್, ಜಿಲ್ಲಾ ಪಂಚಾಯಿತಿ ಸಿಇಒ ಆನಂದ ಪ್ರಕಾಶ್ ಮೀನಾ, ಅರಣ್ಯ ಇಲಾಖೆ ಮಡಿಕೇರಿ ವಿಭಾಗದ ಅಭಿಷೇಕ್, ತಾಲೂಕು ತಹಸೀಲ್ದಾರ್ ಕೃಷ್ಣಮೂರ್ತಿ, ಕುಶಾಲನಗರ ಪುರಸಭೆ ಮುಖ್ಯ ಅಧಿಕಾರಿ ಟಿ ಎಸ್ ಗಿರೀಶ್ ಜಿಲ್ಲಾಧಿಕಾರಿಗಳ ಕಚೇರಿಯ ಕಾರ್ಯಪಾಲಕ ಅಭಿಯಂತರ ಶ್ರೀನಿವಾಸ್ ಮತ್ತಿತರ ಅಧಿಕಾರಿಗಳು, ಪ್ರಮುಖರು ಬರಮಾಡಿಕೊಂಡರು.
ಗಡಿಭಾಗದಲ್ಲಿ ಕಾವೇರಿ ಪ್ರತಿಮೆಗೆ ಸಚಿವರು ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಪೂಜೆ ಸಲ್ಲಿಸಿದರು.