ಮಹೇಶ ಛಬ್ಬಿ
ಗದಗ: ಮುಂಗಾರು ಪೂರ್ವ ಮಳೆ ವಾಡಿಕೆಯಂತೆ ಹದಭರಿತವಾಗಿ ಸುರಿದಿದ್ದು, ಜಿಲ್ಲಾದ್ಯಂತ ಕೃಷಿ ಚಟುವಟಿಕೆ ಬಿರುಸುಗೊಂಡಿದೆ. ರೈತಾಪಿ ವರ್ಗದಲ್ಲಿ ಉಲ್ಲಾಸ ಮೂಡಿಸಿದೆ.ಸತತ ಅತಿವೃಷ್ಟಿ, ಅನಾವೃಷ್ಟಿ, ಬೆಳೆ ದರ ಕುಸಿತದಿಂದ ರೈತರು ಆರ್ಥಿಕ ಸಂಕಷ್ಟ ಅನುಭವಿಸುತ್ತಿದ್ದು, ಪ್ರಸಕ್ತ ವರ್ಷವಾದರೂ ಉತ್ತಮ ಮಳೆ, ಬೆಳೆ ಬರುವ ಭರವಸೆಯೊಂದಿಗೆ ಮುಂಗಾರು ಬಿತ್ತನೆಗೆ ಸಕಲ ಸಿದ್ಧತೆ ನಡೆಸಿದ್ದಾರೆ. ಬಿತ್ತನೆ ಪೂರ್ವದಲ್ಲಿ ರೈತರು ಬೇಸಿಗೆಯಲ್ಲಿ ಹೊಲವನ್ನು ರೂಟರ್ ಹೊಡೆದು, ಹರಗಿ ಬಿಟಿ ಹತ್ತಿ ಕಟ್ಟಿಗೆ, ಮೆಕ್ಕೆಜೋಳದ ದಂಟು, ಮುಳ್ಳು ಕಂಟೆಗಳನ್ನು ಸ್ವಚ್ಛಗೊಳಿಸುತ್ತಿದ್ದಾರೆ. ರಂಟೆ (ನೇಗಿಲು) ಹೊಡೆದ ಹೊಲಗಳಲ್ಲಿ ಹೆಂಟೆಗಳು ಮಳೆಗೆ ಕರಗಿದ್ದು, ಬಿತ್ತನೆಗೆ ಟ್ರ್ಯಾಕ್ಟರ್, ಎತ್ತುಗಳ ಮೂಲಕ ಹೊಲವನ್ನು ಹದಗೊಳಿಸುವ ದೃಶ್ಯ ಎಲ್ಲೆಡೆ ಕಂಡುಬರುತ್ತಿದೆ.
ಬೀಜೋಪಚಾರ ಮಾಡಿ: ರೈತರು ಬಿತ್ತನೆಗೆ ಅವಸರ ಮಾಡದೇ, ಮಣ್ಣಿನಲ್ಲಿ ಸಂಪೂರ್ಣ ತೇವಾಂಶವಾದ ಆನಂತರ ಬಿತ್ತನೆ ಕೈಗೊಳ್ಳಿ, ಇಲ್ಲದೇ ಹೋದಲ್ಲಿ ಬಿತ್ತಿದ ಬೆಳೆಯು ಸರಿಯಾಗಿ ಮೊಳಕೆ ಬರಲು ಸಾಧ್ಯವಾಗದೇ, ಬೆಳವಣಿಗೆ ವೇಳೆಗೆ ತೇವಾಂಶ ಕೊರತೆ ಉಂಟಾಗುತ್ತದೆ. ಜಿಲ್ಲೆಯ ರೈತರು ಬಿತ್ತನೆ ಕೈಗೊಳ್ಳುವ ಮುನ್ನ ಕಡ್ಡಾಯವಾಗಿ ಜೈವಿಕ ಗೊಬ್ಬರಗಳಿಂದ ಬೀಜೋಪಚಾರ ಕೈಗೊಂಡು ಬಿತ್ತನೆ ಮಾಡಿ ಎಂದು ಕೃಷಿ ಇಲಾಖೆ ತಿಳಿಸಿದೆ.ಬಿತ್ತನೆ ಗುರಿ: ಪ್ರಸಕ್ತ ವರ್ಷ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿಗೆ ಒಟ್ಟು 3,13,719 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಮೆಕ್ಕೆಜೋಳ 1,55,463 ಹೆ., 1,17,000 ಹೆ. ಹೆಸರು, 14,485 ಹೆ. ಶೇಂಗಾ, 8,115 ಹೆ. ಸೂರ್ಯಕಾಂತಿ ಹಾಗೂ ಹತ್ತಿ 9,000 ಹೆಕ್ಟರ್ ಬಿತ್ತನೆ ಗುರಿ ಹೊಂದಿದೆ. ಹಾಗೆಯೇ ಜಿಲ್ಲೆಯ ರೈತರಿಗೆ ಬಿತ್ತನೆ ಬೀಜ ಹಾಗೂ ರಸಗೊಬ್ಬರದ ಕೊರತೆಯಾಗದಂತೆ ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನೀಕರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಕೃಷಿ ಇಲಾಖೆ ಮಾಹಿತಿ ನೀಡಿದೆ.
ಸಮರ್ಪಕ, ಬೀಜ, ಗೊಬ್ಬರ ಪೂರೈಕೆಗೆ ಆಗ್ರಹ: ಕಳೆದ ವರ್ಷ ಜಿಲ್ಲೆಯ ಹಲವು ಭಾಗಗಳಲ್ಲಿ ರೈತರು ರಸಗೊಬ್ಬರಕ್ಕಾಗಿ ಅಂಗಡಿಗಳ ಮುಂದೆ ಹಗಲು-ರಾತ್ರಿ ಸರದಿ ಸಾಲಿನಲ್ಲಿ ನಿಂತು ಪರದಾಡಿದ ಘಟನೆಗಳು ನಡೆದಿದ್ದವು. ಕೆಲವು ರಸಗೊಬ್ಬರ ವ್ಯಾಪಾರಸ್ಥರು ಯೂರಿಯಾ ಗೊಬ್ಬರದ ಕೃತಕ ಅಭಾವ ಸೃಷ್ಟಿಸಿ, ಕಾಳಸಂತೆ ನಡೆಸಿ, ರೈತರನ್ನು ಸಂಕಷ್ಟಕ್ಕೆ ದೂಡಿದ್ದರು. ಈ ಬಾರಿ ಅಂತಹ ಘಟನೆಗಳು ಮರುಕಳಿಸದಂತೆ ಜಿಲ್ಲಾಡಳಿತ ಹಾಗೂ ಕೃಷಿ ಇಲಾಖೆ ಕಟ್ಟುನಿಟ್ಟಿನ ಕ್ರಮ ವಹಿಸಿವಹಿಸಬೇಕು. ಹಾಗೆಯೇ ಒಂದು ಎಫ್‌ಐಡಿ ಖಾತೆಯ 1 ಎಕರೆ ಭೂಮಿಗೆ ಒಂದು ತಿಂಗಳಿಗೆ ಒಂದೇ ಯೂರಿಯಾ ಚೀಲ ಎಂಬ ನಿಯಮದಿಂದ ರೈತರಿಗೆ ಅನ್ಯಾಯವಾಗುತ್ತಿದ್ದು, ಈ ನಿಯಮವನ್ನು ಕೂಡಲೇ ರದ್ದುಪಡಿಸಿ ರೈತರ ಅವಶ್ಯಕತೆಗೆ ಅನುಗುಣವಾಗಿ ಗೊಬ್ಬರ, ಬೀಜ ವಿತರಣೆ ಮಾಡುವಂತೆ ರೈತರು ಆಗ್ರಹಿಸಿದ್ದಾರೆ.
ರಸಗೊಬ್ಬರ ಬೆಲೆ ಬಾರಿ ಪ್ರಮಾಣದಲ್ಲಿ ಏರಿಕೆಯಾಗಿದ್ದು, ರೈತರ ಕೈ ಸುಡುವಂತಾಗಿದೆ. ಅಂತಹುದರಲ್ಲಿ ಖಾಸಗಿ ಗೊಬ್ಬರದಂಗಡಿಗಳಲ್ಲಿ ಡಿಎಪಿ, ಯುರಿಯಾ ಗೊಬ್ಬರಕ್ಕೆ ಮಾರಾಟಗಾರರು ಲಿಂಕ್‌ಗಳನ್ನು ನೀಡುತ್ತಿದ್ದಾರೆ. ಕೃಷಿ ಇಲಾಖೆ ಅಧಿಕಾರಿಗಳು ಈ ಬಗ್ಗೆ ಪರಿಶೀಲಿಸಿ, ಯಾವುದೇ ಲಿಂಕ್ ನೀಡದೆ ಗೊಬ್ಬರ ಪೂರೈಸಲು ಕ್ರಮ ಕೈಗೊಳ್ಳಬೇಕು. ಹಾಗೆಯೇ ಕೃಷಿ ಇಲಾಖೆ ಬೀಜ, ಗೊಬ್ಬರ ಕೊರತೆಯಾಗದಂತೆ ಅವಶ್ಯಕತೆಗೆ ಅನುಗುಣವಾಗಿ ಪೂರೈಕೆ ಮಾಡಲು ಕ್ರಮ ವಹಿಸಬೇಕು ಎಂದು ರೈತರಾದ ಮಹಾಂತೇಶ ಗುಂಜಳ, ಮಹಾಂತೇಶ ಬಳ್ಳಾರಿ ಹೇಳುತ್ತಾರೆ.
ಸದ್ಯ ತೊಗರಿ, ಹೆಸರು ದಾಸ್ತಾನು ಇದ್ದು, ಸೋಮವಾರದಿಂದ ಬೀಜ ವಿತರಣೆ ಮಾಡಲು ಚಾಲನೆ ನೀಡಲಾಗುವುದು. ಮೆಕ್ಕೆಜೋಳ, ಶೇಂಗಾ ಬೀಜಗಳನ್ನು ಮುಂದಿನ ವಾರದೊಳಗೆ ತರಿಸಲಾಗುವುದು. ಬೀಜ, ಗೊಬ್ಬರ ಕೊರತೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಗದಗ ಕೃಷಿ ಸಹಾಯಕ ನಿರ್ದೇಶಕ ಮಲ್ಲಯ್ಯ ಕೊರವಣ್ಣವರ ಹೇಳಿದರು.