ಸಾರಾಂಶ
ಪರಶಿವಮೂರ್ತಿ ದೋಟಿಹಾಳ
ಕುಷ್ಟಗಿ:ನಾಲ್ಕೈದು ದಿನಗಳಿಂದ ತಾಲೂಕಿನಾದ್ಯಂತ ಉತ್ತಮ ಮಳೆಯಾಗಿದ್ದು ಬಿತ್ತನೆ ಕಾರ್ಯ, ಹೊಲ ಹದಗೊಳಿಸುವ ಕಾರ್ಯ ಚುರುಕುಗೊಂಡಿವೆ.
ತಾಲೂಕಿನ ದೋಟಿಹಾಳ, ತಾವರಗೇರಾ, ಹನುಮಸಾಗರ, ಹನುಮನಾಳ, ಕೇಸೂರ, ಮುದೇನೂರ, ಬಿಜಕಲ್, ಶಿರಗುಂಪಿ, ಜುಮಲಾಪುರ, ಗೋತಗಿ, ಹೆಸರೂರ, ಟಕ್ಕಳಕಿ, ಮಣ್ಣ ಕಲಕೇರಿ, ಕವಲಬೋದುರ ಸೇರಿದಂತೆ ವಿವಿಧ ಗ್ರಾಮದಲ್ಲಿ ರೈತರು ಬಿತ್ತನೆ ಪ್ರಾರಂಭಿಸಿದ್ದಾರೆ.ಉತ್ಸಾಹ:ಕೃತಿಕ ಮಳೆ ಸುರಿಯುವ ಮೂಲಕ ರೈತರಲ್ಲಿ ಆಶಾವಾದ ಚಿಗುರಿಸಿದೆ. ಆಕಾಶದತ್ತ ಮುಖ ಮಾಡಿ ಕುಳಿತಿದ್ದ ನೇಗಿಲ ಯೋಗಿಗಳು ಮುಂಗಾರು ಪೂರ್ವ ಮಳೆ ಉತ್ತಮವಾಗಿ ಸುರಿಯುತ್ತಿರುವುದರಿಂದ ಬಿತ್ತನೆಗೆ ಭೂಮಿ ಹದಗೊಳಿಸಿ ಎಳ್ಳು, ಹೆಸರು, ಅಲಸಂದಿ, ಸೂರ್ಯಕಾಂತಿ, ತೊಗರಿ, ಮೆಕ್ಕೆಜೋಳ, ಸಜ್ಜಿ ಸೇರಿದಂತೆ ಇನ್ನಿತರ ಬೆಳೆ ಬಿತ್ತನೆಯಲ್ಲಿ ಉತ್ಸಾಹದಿಂದ ರೈತರು ಪಾಲ್ಗೊಂಡಿದ್ದಾರೆ.
ಟ್ರ್ಯಾಕ್ಟರ್, ಎತ್ತುಗಳಿಗೆ ಭಾರೀ ಬೇಡಿಕೆ:ಮುಂಗಾರು ಬಿತ್ತನೆ ಏಕಕಾಲಕ್ಕೆ ಶುರುವಾಗಿದ್ದರಿಂದ ಕೃಷಿ ಕೂಲಿಕಾರ್ಮಿಕರ ಕೊರತೆ ಎದುರಾಗಿದೆ. ಹೆಚ್ಚಿನ ಹಣ ನೀಡುತ್ತೇನೆ ಎಂದು ಕಾರ್ಮಿಕರು ಸಿಗದೆ ರೈತರು ಯಂತ್ರಗಳ ಮೊರೆ ಹೋಗಿದ್ದಾರೆ. ಹೀಗಾಗಿ ಟ್ರ್ಯಾಕ್ಟರ್‌ಗಳಿಗೆ ಭಾರೀ ಬೇಡಿಕೆ ಬಂದಿದೆ. ಸಣ್ಣ ಹಿಡುವಳಿದಾರರು ಬಿತ್ತನೆ ಎತ್ತುಗಳನ್ನು ಬಾಡಿಗೆ ಪಡೆಯುತ್ತಿರುವುದರಿಂದ ಅವುಗಳಿಗೆ ಡಿಮ್ಯಾಂಡ್ ಬಂದಿದೆ.
ಕೂರಿಗೆಗೆ ಸಿಂಗಾರ:ದೋಟಿಹಾಳ ಹಾಗೂ ಸುತ್ತಮುತ್ತಲೀನ ಕೆಲವು ಗ್ರಾಮಗಳಲ್ಲಿ ಕೂರಿಗೆಗೆ ಸೀರೆ ಉಡಿಸಿ, ಅಲಂಕರಿಸಿ, ಉಡಿ ತುಂಬುವಂತಹ ಆಚರಣೆ ಚಾಲ್ತಿಯಲ್ಲಿದೆ. ಈ ಸಂಪ್ರದಾಯವನ್ನು ಇಲ್ಲಿಯ ರೈತರು ಮುಂದುವರಿಸಿಕೊಂಡು ಬಂದಿದ್ದಾರೆ. ಬಿತ್ತನೆಗೆ ಸಿದ್ಧಗೊಳ್ಳುವ ಕೂರಿಗೆಗೆ ಸಿಂಗರಿಸುತ್ತಾರೆ. ಪೂಜೆ ಮಾಡಿದ ಕೂರಿಗೆಯನ್ನು ಪುರುಷರು ಹೆಗಲ ಮೇಲೆ ಹೊತ್ತು ಹೊಲಗಳ ಕಡೆ ಸಾಗುತ್ತಾರೆ. ಇವರ ಹಿಂದೆ ಮಹಿಳೆಯರು ಬಿತ್ತನೆ ಬೀಜ ತೆಗೆದುಕೊಂಡು ಹೋಗುವ ಸಂಪ್ರದಾಯವಿದೆ.
ಅಧಿಕೃತ ಅಂಗಡಿಯಲ್ಲೆ ಖರೀದಿಸಿ:ರೈತರು ಅಧಿಕೃತವಾಗಿ ಗೊಬ್ಬರ ಹಾಗೂ ಬಿತ್ತನೆ ಬೀಜವನ್ನು ಮಾರಾಟ ಮಾಡುತ್ತಿರುವ ಅಂಗಡಿಗಳಲ್ಲಿ ಮಾತ್ರ ಖರೀದಿಸಬೇಕು ಎಂದು ಕೃಷಿ ಇಲಾಖೆ ಅಧಿಕಾರಿಗಳು ರೈತರಿಗೆ ಸಲಹೆ ನೀಡಿದ್ದಾರೆ. ರಸಗೊಬ್ಬರ, ತೊಗರಿ, ಮೆಕ್ಕೆಜೋಳ, ಸಜ್ಜೆ, ಹೆಸರು ಬೀಜಗಳನ್ನು ರೈತ ಸಂಪರ್ಕ ಕೇಂದ್ರದಲ್ಲಿ ವಿತರಿಸಲಾಗುತ್ತಿದೆ.
ಕಳೆದ ವರ್ಷಕ್ಕಿಂತ ಈ ವರ್ಷ ಮುಂಗಾರು ಪೂರ್ವ ಮಳೆ ಉತ್ತಮವಾಗಿ ಸುರಿದ್ದರಿಂದ ಅನ್ನದಾತರ ಖುಷಿಯಿಂದ ಬಿತ್ತನೆಯಲ್ಲಿ ತೊಡಗಿದ್ದು ಉತ್ತಮ ಬೆಳೆ ಬೆಳೆಯುವ ನಿರೀಕ್ಷೆ ಹೊಂದಿದ್ದಾರೆ.ಕುಷ್ಟಗಿ ತಾಲೂಕಿನಲ್ಲಿ 80 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯ ಗುರಿ ಹೊಂದಲಾಗಿದೆ. ಬಿತ್ತನೆಗೆ ಬೇಕಾಗುವ ರಸಗೊಬ್ಬರ ಹಾಗೂ ಬಿತ್ತನೆಯ ಬೀಜ ದಾಸ್ತಾನು ಮಾಡಲಾಗಿದ್ದು ರೈತ ಸಂಪರ್ಕ ಕೇಂದ್ರಗಳಲ್ಲಿ ವಿತರಿಸಲಾಗುತ್ತಿದೆ.ನಾಗರಾಜ ಕಾತರಕಿ ಕೃಷಿ ಸಹಾಯಕ ನಿರ್ದೇಶಕರು ಕುಷ್ಟಗಿನಮ್ಮ ಭಾಗದಲ್ಲಿ ಉತ್ತಮ ಮಳೆಯಾಗಿದ್ದು ಮುಂಗಾರು ಹಂಗಾಮಿನಲ್ಲಿ ಅಲಸಂಧಿ ಹಾಗೂ ತೊಗರಿ ಬಿತ್ತನೆ ಮಾಡುತ್ತಿದ್ದೇವೆ.
ದ್ಯಾಮಣ್ಣ ಆಡೀನ್ ರೈತ.