ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆ ಕೃಷಿ ಚಟುವಟಿಕೆ ಚುರುಕುಗೊಂಡಿದ್ದು, ಭತ್ತ ನಾಟಿ ಕಾರ್ಯ ತೀವ್ರ ಭರದಿಂದ ಸಾಗಿದೆ.
ತಾಲೂಕಿನಲ್ಲಿ ಸುಮಾರು ೧೫,೦೦೦ ಹೆಕ್ಟೇರ್ ಬಿತ್ತನೆ ಪ್ರದೇಶ
ಭತ್ತ ನಾಟಿ ಪೂರ್ಣಗೊಂಡರೆ ಶೇ. ೧೦೦ರಷ್ಟು ಬಿತ್ತನೆಸಂತೋಷ ದೈವಜ್ಞಕನ್ನಡಪ್ರಭ ವಾರ್ತೆ ಮುಂಡಗೋಡ
ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆ ಕೃಷಿ ಚಟುವಟಿಕೆ ಚುರುಕುಗೊಂಡಿದ್ದು, ಭತ್ತ ನಾಟಿ ಕಾರ್ಯ ತೀವ್ರ ಭರದಿಂದ ಸಾಗಿದೆ.ಭತ್ತ ಪ್ರಧಾನ ಪ್ರದೇಶವಾಗಿರುವ ಮುಂಡಗೋಡ ತಾಲೂಕಿನಲ್ಲಿ ಶೇ. ೬೦ರಷ್ಟು ಭೂಮಿಯಲ್ಲಿ ಭತ್ತವನ್ನೇ ಬೆಳೆಯಲಾಗುತ್ತದೆ. ತಾಲೂಕಿನಲ್ಲಿ ಯಾವುದೇ ನೀರಾವರಿ ಯೋಜನೆ ಇಲ್ಲದಿರುವುದರಿಂದ ಇಲ್ಲಿಯ ಬಹುತೇಕ ರೈತರು ಮಳೆಯಾಶ್ರಯಿಸಿಯೇ ವ್ಯವಸಾಯ ಮಾಡುತ್ತಾರೆ.
ತಾಲೂಕಿನಲ್ಲಿ ಸುಮಾರು ೧೫,೦೦೦ ಹೆಕ್ಟೇರ್ ಬಿತ್ತನೆ ಪ್ರದೇಶವಿದ್ದು, ಅದರಲ್ಲಿ ೬೦೦೦ ಹೆಕ್ಟೇರ್‌ಗೂ ಅಧಿಕ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತದೆ. ಕೂರ್ಗೆ ಭತ್ತದ ಗದ್ದೆಗಳಲ್ಲಿ ನೀರು ಆವರಿಸಿದ್ದು, ಹರಗೊಡತ ಹೊಡೆಯಲಾಗಿದೆ. ಈ ಉತ್ತಮ ಮಳೆಯಾದ ಪರಿಣಾಮ ನಾಟಿ ಭತ್ತ ಬಿತ್ತನೆ ಕೂಡ ನಡೆಯುತ್ತಿದೆ. ಸುಮಾರು ೨೦೦೦ ಹೆಕ್ಟೇರ್ ಪ್ರದೇಶದಲ್ಲಿ ಗೋವಿನ ಜೋಳ, ಸುಮಾರು ೧೫೦೦ ಹೆಕ್ಟೇರ್‌ನಲ್ಲಿ ಕಬ್ಬು ನಾಟಿ ಹಾಗೂ ಸೋಯಾಬಿನ್ ಮುಂತಾದ ಬೆಳೆಗಳನ್ನು ಕೂಡ ಸ್ಪಲ್ಪ ಪ್ರಮಾಣದಲ್ಲಿ ಬಿತ್ತನೆ ಮಾಡಲಾಗಿದ್ದು, ಭತ್ತ ನಾಟಿ ಪೂರ್ಣಗೊಂಡರೆ ಶೇ. ೧೦೦ರಷ್ಟು ಬಿತ್ತನೆಯಾದಂತಾಗಲಿದೆ.ಭರದಿಂದ ಸಾಗಿದ ಭತ್ತದ ನಾಟಿ ಕಾರ್ಯ:
ಉತ್ತಮ ಮಳೆಯಾಗಿದ್ದರಿಂದ ಬಹುತೇಕ ರೈತರು ಭತ್ತದ ಸಸಿ ಮಡಿಗಳನ್ನು ತಯಾರಿ ಮಾಡಿಕೊಂಡಿದ್ದು, ಗದ್ದೆಗಳಲ್ಲಿ ಭತ್ತದ ಸಸಿ ನೆಡುವ ಮೂಲಕ ನಾಟಿ ಕಾರ್ಯದಲ್ಲಿ ನಿರತರಾಗಿದ್ದಾರೆ. ಸುಮಾರು ೨೦೦೦ ಹೆಕ್ಟೇರ್‌ಗೂ ಅಧಿಕ ಪ್ರದೇಶದಲ್ಲಿ ಭತ್ತ ನಾಟಿ ಮಾಡಲಾಗುತ್ತಿದ್ದು, ಈಗಾಗಲೇ ಶೇ. ೮೦ರಷ್ಟು ನಾಟಿ ಕಾರ್ಯ ಪೂರ್ಣಗೊಂಡಿದೆ. ಇನ್ನುಳಿದ ಕಾರ್ಯ ಭರದಿಂದ ಸಾಗಿದ್ದು, ಕೆರೆ ಜಲಾಶಯದ ಕೆಳ ಭಾಗದಲ್ಲಿರುವ ಗದ್ದೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಭತ್ತ ನಾಟಿ ಕಾರ್ಯ ನಡೆಸಲಾಗುತ್ತಿದೆ. ಭತ್ತದ ಗದ್ದೆಗಳೀಗ ಹಸಿರಿನಿಂದ ಕಂಗೊಳಿಸುತ್ತಿದ್ದು, ಮುಂದಿನ ದಿನಗಳಲ್ಲಿ ಕೂಡ ಪ್ರಕೃತಿ ರೈತನ ಕೈಹಿಡಿದರೆ ಉತ್ತಮ ಭತ್ತದ ಬೆಳೆ ನಿರೀಕ್ಷಿಸಬಹುದು.ಗೋವಿನ ಜೋಳ ಬೆಳೆ ಹಾನಿ:
ನಿರಂತರ ಮಳೆಯಿಂದಾಗಿ ಗದ್ದೆಯಲ್ಲಿ ನೀರು ಸಂಗ್ರಹವಾಗಿ ತೇವಾಂಶ ಹೆಚ್ಚಿದ ಪರಿಣಾಮ ತಡವಾಗಿ ಬಿತ್ತನೆ ಮಾಡಲಾದ ಗೋವಿನ ಜೋಳ ಬೆಳೆಗೆ ಕೊಳೆ ರೋಗ ಕಾಣಿಸಿಕೊಂಡು ಬೆಳೆಯಲ್ಲಿ ಕುಂಟಿತವಾಗಿದ್ದು, ಗೋವಿನ ಜೋಳ ಬೆಳೆಗಾರರು ನಷ್ಟ ಅನುಭವಿಸಿದ್ದಾರೆ.ಮಳೆ ಕ್ಷೀಣ:
ಪ್ರಸಕ್ತ ಸಾಲಿನಲ್ಲಿ ಜ. ೧ರಿಂದ ಈ ವರೆಗೆ ತಾಲೂಕಿನಲ್ಲಿ ೬೮೮ ಮಿಲಿ ಮೀಟರ್ ಮಳೆಯಾಗಿದ್ದು, ವಾಡಿಕೆಯಂತೆ ೮೬೩ ಮಿಮೀ ಮಳೆಯಾಗಬೇಕಿತ್ತು. ಇದರಿಂದ ವಾಡಿಕೆಗಿಂತ ೧೭೫ ಮಿಮೀ ಮಳೆ ಕಡಿಮೆಯಾಗಿದೆ.