ಜಾನಪದ, ಶಿಷ್ಟ ಪರಂಪರೆಯಲ್ಲಿ ಒಳ್ಳೆಯದನ್ನೇ ಹೆಕ್ಕಬೇಕು

| Published : Jan 20 2025, 01:30 AM IST

ಸಾರಾಂಶ

ದೇಶದಲ್ಲಿ ಮೌಢ್ಯ, ಅಂಧಶ್ರದ್ಧೆ ಜೊತೆಗೆ ಒಳ್ಳೆಯದೂ ಇದೆ. ಜಾನಪದ ಮತ್ತು ಶಿಷ್ಟ ಪರಂಪರೆಯಲ್ಲೂ ಒಳ್ಳೆಯದು, ಕೆಟ್ಟದ್ದೂ ಇರುತ್ತದೆ. ಅದರಲ್ಲಿ ಒಳ್ಳೆಯದನ್ನು ಮಾತ್ರ ಹೆಕ್ಕಿ ತೆಗೆಯುವ ಮನಸ್ಥಿತಿ ನಮ್ಮದಾಗಬೇಕು ಎಂದು ಹಿರಿಯ ವಿದ್ವಾಂಸ ಡಾ.ಕೃಷ್ಣಮೂರ್ತಿ ಹನೂರು ದಾವಣಗೆರೆಯಲ್ಲಿ ಹೇಳಿದ್ದಾರೆ.

- ಹಿರಿಯ ವಿದ್ವಾಂಸ ಡಾ.ಕೃಷ್ಣಮೂರ್ತಿ ಹನೂರು ಸಲಹೆ । ಡಾ.ಮಂಜಣ್ಣ ಮಲ್ಲಯ್ಯ ವಿರಚಿತ ಸಿರಿಯಜ್ಜಿ ಸಂಕಥನ ಪುಸ್ತಕ ಬಿಡುಗಡೆ

- - - ಕನ್ನಡಪ್ರಭ ವಾರ್ತೆ ದಾವಣಗೆರೆ

ದೇಶದಲ್ಲಿ ಮೌಢ್ಯ, ಅಂಧಶ್ರದ್ಧೆ ಜೊತೆಗೆ ಒಳ್ಳೆಯದೂ ಇದೆ. ಜಾನಪದ ಮತ್ತು ಶಿಷ್ಟ ಪರಂಪರೆಯಲ್ಲೂ ಒಳ್ಳೆಯದು, ಕೆಟ್ಟದ್ದೂ ಇರುತ್ತದೆ. ಅದರಲ್ಲಿ ಒಳ್ಳೆಯದನ್ನು ಮಾತ್ರ ಹೆಕ್ಕಿ ತೆಗೆಯುವ ಮನಸ್ಥಿತಿ ನಮ್ಮದಾಗಬೇಕು ಎಂದು ಹಿರಿಯ ವಿದ್ವಾಂಸ ಡಾ.ಕೃಷ್ಣಮೂರ್ತಿ ಹನೂರು ಹೇಳಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಭಾನುವಾರ ನಾಡೋಜ ಸಿರಿಯಜ್ಜಿ ಪ್ರತಿಷ್ಠಾನ-ಬೆಂಗಳೂರು, ದಾವಣಗೆರೆಯ ಮಾನವ ಬಂಧುತ್ವ ವೇದಿಕೆ, ಚಳ್ಳಕೆರೆಯ ಅಮಿತ ಪ್ರಕಾಶನದಿಂದ ಹಮ್ಮಿಕೊಂಡಿದ್ದ ಡಾ.ಮಂಜಣ್ಣ ಮಲ್ಲಯ್ಯ ವಿರಚಿತ ಸಿರಿಯಜ್ಜಿ ಸಂಕಥನ ಪುಸ್ತಕ ಲೋಕಾರ್ಪಣೆಗೊಳಿಸಿ, ಅವರು ಮಾತನಾಡಿದರು.

ಬೆಟ್ಟ-ಗುಡ್ಡ, ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಅಸಂಖ್ಯಾತ ಅನಕ್ಷರಸ್ಥರು ಆಧುನಿಕ ಮಾನವ ಜಗತ್ತೂ ನಾಚುವಂತೆ ಸರಳ ಜೀವನ ಕ್ರಮ, ಪ್ರೇಮ, ಆಹಾರ ಪದ್ಧತಿ, ಕಲೆ, ಸಂಸ್ಕೃತಿಯನ್ನು ತಮ್ಮ ಬದುಕಿನ ಭಾಗವಾಗಿಸಿಕೊಂಡಿದ್ದಾರೆ. ಅಂತಹವರ ಬದುಕಿನ ಚಿತ್ರಣದ ಬಗ್ಗೆ ಪ್ರಾಧ್ಯಾಪಕರು ಸಂಶೋಧನೆ, ಅಧ್ಯಯನ ನಡೆಸಿ, ವಿದ್ಯಾರ್ಥಿಗಳಿಗೆ ತಿಳಿಸುವ ಬಹು ದೊಡ್ಡದಾದ ಹೊಣೆಗಾರಿಕೆ ಹೊರಬೇಕು ಎಂದು ತಿಳಿಸಿದರು.

ಪ್ರಾಧ್ಯಾಪಕ ಡಾ.ಮಂಜಣ್ಣ ಮಲ್ಲಯ್ಯ ಬರೆದ ಸಿರಿಯಜ್ಜಿ ಸಂಕಥನದಲ್ಲಿ ಸಿರಿಯಜ್ಜಿಯು ಜನಪದ ಹಾಡುಗಳಿಂದಲೇ ಬುಡಕಟ್ಟು ಜನಾಂಗದಲ್ಲಿ ಗುರುತಿಸಿಕೊಂಡು, ಹೆಸರಾದವರು. ಸಿರಿಯಜ್ಜಿಯನ್ನು ಹತ್ತಿರದಿಂದ ನೋಡಿ, ಆಕೆಯ ಕಲೆ, ಬದುಕಿನ ಬಗ್ಗೆ ಸಾಕಷ್ಟು ಲೇಖನ ಬರೆದಿದ್ದೇನೆ. ಸಿರಿಯಲ್ಲಿ ಇಡೀ ಗೊಲ್ಲ ಸಮಾಜದ ಚಿತ್ರಣವನ್ನು ತನ್ನ ಜೀವನಕ್ರಮ, ಜನಪದ ಕಲೆಯಿಂದಲೇ ಕಟ್ಟಿಕೊಂಡಿರುವುದನ್ನು ನೋಡಿದರೆ, ಅನಕ್ಷರಸ್ಥ ಅಜ್ಜಿಯಲ್ಲಿ ಹುದುಗಿರುವ ಅಪಾರ ಪಾಂಡಿತ್ಯವನ್ನು ನಮ್ಮನ್ನು ನಿಬ್ಬೆರಗುಗೊಳಿಸುತ್ತದೆ ಎಂದು ಹೇಳಿದರು.

ಪುಸ್ತಕದ ಕುರಿತು ಹಂಪಿ ಕನ್ನಡ ವಿವಿ ಸಿಂಡಿಕೇಟ್ ಸದಸ್ಯ ಡಾ. ಎಸ್.ಎಂ. ಮುತ್ತಯ್ಯ ಮಾತನಾಡಿ, ಕನ್ನಡ ಸಾಹಿತ್ಯ ಸಂಸ್ಕೃತಿಯಲ್ಲಿ ಜನಪದ ಸಾಹಿತ್ಯ ಕಣ್ಣಿಗೆ ಬೀಳಲಿಲ್ಲ. ಅನಂತರ ಹಾ.ಮಾ.ನಾಯಕ್‌ ಅವರಂಥವರು ವಿದೇಶಕ್ಕೆ ತೆರಳಿದ್ದ ವೇಳೆ ಮಿಷನರಿಗಳು ಜನಪದ ಸಾಹಿತ್ಯ ದಾಖಲಿಸಿ, ಅದಕ್ಕೆ ಗೌರವ ಕೊಡುತ್ತಿರುವುದನ್ನು ಕಂಡರು. ನಂತರ ರಾಜ್ಯದಲ್ಲಿ ಜನಪದ ಸಾಹಿತ್ಯಕ್ಕೆ ಸ್ಥಾನ ನೀಡಲಾಯಿತು. ವಿ.ವಿ.ಗಳು ಜನಪದವನ್ನು ಪಠ್ಯವಾಗಿಟ್ಟಾಗ ಅದೊಂದು ಅರಕ್ಷರಸ್ಥರ ಸಾಹಿತ್ಯವೆಂಬ ಕಾರಣಕ್ಕೆ ಮುಂಚೆ ಆಕ್ಷೇಪಕ್ಕೊಳಗಾಗಿತ್ತು. ಕಾಲಕ್ರಮೇಣ ಜನಪದ ಸಾಹಿತ್ಯ ಎಲ್ಲರಿಗೂ ಸಹ್ಯವಾಯಿತು ಎಂದರು.

ಜನಪದ ಸಾಹಿತ್ಯವು ಮುಖ್ಯವಾಹಿನಿಯಲ್ಲಿ ಗುರುತಿಸಿಕೊಂಡ ಘಟ್ಟದಲ್ಲೇ ಮೊದರೆರೆಡು ಘಟ್ಟಗಳು ಬೆಳಕಿದೆ ಬಂದಿದ್ದು ದೊಡ್ಡ ಪ್ರಯಾಸವಾಗಿತ್ತು. ಜನಪದ ಗುರುತಿಸಿಕೊಳ್ಳಲು ಬಹುದೊಡ್ಡ ಕೊಡುಗೆಯನ್ನು ಇದು ನೀಡಿತು. ಡಾ.ಮಂಜಣ್ಣ ಬರೆದ ಸಿರಿಯಜ್ಜಿಯ ಸಂಕಥನ ಜನಪದವನ್ನು ವಿಸ್ತರಿಸಿಕೊಂಡ ಮೂರನೇ ಘಟ್ಟವೆಂದರೂ ಅತಿಶಯೋಕ್ತಿಯಲ್ಲ. ಬುಡಕಟ್ಟು ಜನಾಂಗದಲ್ಲಿ ಸಿರಿಯಜ್ಜಿಯಂತಹ ಅನೇಕ ಸಾಧಕರಿದ್ದು, ಅಂತಹವರ ಬಗ್ಗೆಯೂ ಬೆಳಕು ಚೆಲ್ಲಬೇಕಿದೆ ಎಂದು ತಿಳಿಸಿದರು.

ವಿಚಾರವಾದಿ, ಮಾನವ ಬಂಧುತ್ವ ವೇದಿಕೆಯ ಡಾ. ಎ.ಬಿ. ರಾಮಚಂದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ, ಹಿರಿಯ ಲೇಖಕ ಡಾ.ಮಲ್ಲಿಕಾರ್ಜುನ ಕಲಮರಹಳ್ಳಿ, ಡಾ. ಜಿ.ಕೆ.ಪ್ರೇಮ, ಲೇಖಕ ಡಾ. ಮಂಜಣ್ಣ ಮಲ್ಲಯ್ಯ, ಬಿ.ಶಾರದಮ್ಮ ಇತರರು ಇದ್ದರು. ಸಂಶೋಧಕ ಮಲ್ಲಯ್ಯ ಕಟ್ಟೇರ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಿರಿಯಜ್ಜಿಯ ಸಹವರ್ತಿ ಸಿರಿಯಮ್ಮ ಜಾನಪದ ಹಾಡುಗಳನ್ನು ಹಾಡಿದರು. ಮಲ್ಲಿಕಾರ್ಜುನ ತೂಲಹಳ್ಳಿ ಸ್ವಾಗತಿಸಿದರು. ಚೇತನ್‌ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಡಾ. ಪಿ.ಕೆ. ಇಂಗಲಗೊಂದಿ ವಂದಿಸಿದರು.

- - - ಕೋಟ್‌

ಬುಡಕಟ್ಟು ಜನಾಂಗದಲ್ಲಿ ಸಿರಿಯಜ್ಜಿಯಂತಹ ಹಲವಾರು ಸಾಧಕರು ಎಲೆಮರೆಯ ಕಾಯಿಯಂತೆ ಇದ್ದಾರೆ. ಅಂತಹವರ ಪ್ರತಿಭೆ, ಕಲೆಗಳು ಬೆಳಕಿಗೆ ಬಾರದೇ ಜಾನಪದ ಸೊರಗುತ್ತಿದೆ. ಆ ಜನರನ್ನು ಮತ್ತವರ ಕಲೆಯನ್ನು ಮುಖ್ಯವಾಹಿನಿಗೆ ತರಲು ಯುವಜನತೆಯೂ ಕೈಜೋಡಿಸಬೇಕು. ಪಿಎಚ್‌.ಡಿ ಮಾಡಿ, ಪ್ರಾಧ್ಯಾಪಕರಾದವರಿಗೂ ಇರದಷ್ಟು ಜ್ಞಾನಸಂಪತ್ತು ಸಿರಿಯಜ್ಜಿಯಂಥವರಲ್ಲಿ ಇರುವುದನ್ನು ಕಾಣಬಹುದು

- ಡಾ.ಕೃಷ್ಣಮೂರ್ತಿ ಹನೂರು, ಹಿರಿಯ ವಿದ್ವಾಂಸ

- - - -19ಕೆಡಿವಿಜಿ1:

ಡಾ.ಮಂಜಣ್ಣ ಮಲ್ಲಯ್ಯ ವಿರಚಿತ ಸಿರಿಯಜ್ಜಿ ಸಂಕಥನ ಪುಸ್ತಕವನ್ನು ಹಿರಿಯ ವಿದ್ವಾಂಸ ಡಾ.ಕೃಷ್ಣಮೂರ್ತಿ ಹನೂರು ಬಿಡುಗಡೆಗೊಳಿಸಿದರು.