ಸಾರಾಂಶ
ನಾಡಿನ ಪ್ರಸಿದ್ಧ ಗೋಪಾಲಸ್ವಾಮಿ ಬೆಟ್ಟ, ಪಟ್ಟಣದ ವಿಜಯನಾರಾಯಣಸ್ವಾಮಿ, ಕಬ್ಬಹಳ್ಳಿ ಹಾಗೂ ಕೊಡಸೋಗೆ ಚಲುವನಾರಾಯಣಸ್ವಾಮಿ, ಚಿಕ್ಕಾಟಿ ವೇಣು ಗೋಪಾಲಸ್ವಾಮಿ, ಕಮರಹಳ್ಳಿ ವೆಂಕಟರಮಣಸ್ವಾಮಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿಯ ಹಿನ್ನೆಲೆಯಲ್ಲಿ ಶುಕ್ರವಾರ ವಿಶೇಷ ಪೂಜೆ ನೆರವೇರಿತು.
ಗುಂಡ್ಲುಪೇಟೆ: ನಾಡಿನ ಪ್ರಸಿದ್ಧ ಗೋಪಾಲಸ್ವಾಮಿ ಬೆಟ್ಟ, ಪಟ್ಟಣದ ವಿಜಯನಾರಾಯಣಸ್ವಾಮಿ, ಕಬ್ಬಹಳ್ಳಿ ಹಾಗೂ ಕೊಡಸೋಗೆ ಚಲುವನಾರಾಯಣಸ್ವಾಮಿ, ಚಿಕ್ಕಾಟಿ ವೇಣು ಗೋಪಾಲಸ್ವಾಮಿ, ಕಮರಹಳ್ಳಿ ವೆಂಕಟರಮಣಸ್ವಾಮಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿಯ ಹಿನ್ನೆಲೆಯಲ್ಲಿ ಶುಕ್ರವಾರ ವಿಶೇಷ ಪೂಜೆ ನೆರವೇರಿತು.
ಶುಕ್ರವಾರ ಮುಂಜಾನೆ ಗೋಪಾಲನಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ನಂತರ ಭಕ್ತರು ಪೂಜೆ ಸಲ್ಲಿಸಿದರು. ವೈಕುಂಠ ಏಕಾದಶಿ ಅಂಗವಾಗಿ ಗೋಪಾಲಸ್ವಾಮಿ ಬೆಟ್ಟಕ್ಕೆ ನೂರಾರು ಭಕ್ತರು ಆಗಮಿಸಿ ಗೋಪಾಲನ ದರ್ಶನ ಪಡೆದರು. ವೈಕುಂಠ ಏಕಾದಶಿಯ ಶುಕ್ರವಾರದಂದು ದೇವರ ದರ್ಶನ ಪಡೆದರೆ ಸ್ವರ್ಗಕ್ಕೆ ತೆರಳುತ್ತಾರೆಂಬ ನಂಬಿಕೆ ಹಿನ್ನೆಲೆ ಭಕ್ತರ ದಂಡು ಹೆಚ್ಚಿತ್ತು.ವಿಷ್ಣು ಸಹಸ್ರನಾಮದ ಜೊತೆಗೆ ವಿಶೇಷ ಪೂಜೆ
ವಿಜಯ ನಾರಾಯಣ ಸ್ವಾಮಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ ಹಿನ್ನೆಲೆಯಲ್ಲಿ ವಿಷ್ಣು ಸಹಸ್ರ ನಾಮದ ಜೊತೆಗೆ ವಿಶೇಷ ಪೂಜೆ ನಡೆಯಿತು. ವೈಕುಂಠ ಏಕಾದಶಿ ಅಂಗವಾಗಿ ವಿಜಯ ನಾರಾಯಣಸ್ವಾಮಿ ದೇವಸ್ಥಾನದಲ್ಲಿ ಶುಕ್ರವಾರ ಮುಂಜಾನೆ ೫ ಗಂಟೆಯಲ್ಲಿ ವಿಜಯ ನಾರಾಯಣ ಸ್ವಾಮಿ ಮೂರ್ತಿಗೆ ಹಾಲು, ಮೊಸರು, ಎಳನೀರು, ಅರಿಶಿಣ, ಕುಂಕುಮ ಅಭಿಷೇಕ ಮಾಡಿದ ಬಳಿಕ ವಿವಿಧ ಬಗೆಯ ಹೂವುಗಳಿಂದ ಅಲಂಕಾರ ಮಾಡಲಾಯಿತು. ಶುಕ್ರವಾರ ಬೆಳಗ್ಗೆ ೭ ಗಂಟೆಗೆ ವಿಜಯ ನಾರಾಯಣ ಸ್ವಾಮಿ ಉತ್ಸವ ದೇವಸ್ಥಾನದ ಸುತ್ತಲೂ ಮೆರವಣಿಗೆ ನಡೆಸಿ ದೇವಸ್ಥಾನದ ಒಳಭಾಗದಲ್ಲಿ ರಚನೆ ಮಾಡಲಾಗಿದ್ದ ಸ್ವರ್ಗದ ಬಾಗಿಲು ಮೇಲೆ ಉತ್ಸವ ಮೂರ್ತಿ ಕೂರಿಸಿ ಕೆಳ ಭಾಗದಲ್ಲಿ ಭಕ್ತರು ನಡೆದು ದೇವರ ದರ್ಶನ ಪಡೆದರು. ಪಟ್ಟಣದ ವಿಜಯ ನಾರಾಯಣಸ್ವಾಮಿ ಭಕ್ತರು ನೂರಾರು ಸಂಖ್ಯೆಯಲ್ಲಿ ಆಗಮಿಸಿ ಸ್ವರ್ಗದ ಬಾಗಿಲು ಮೂಲಕ ದೇವರ ದರ್ಶನ ಮಾಡಿದರು. ದೇವಸ್ಥಾನಕ್ಕೆ ಭೇಟಿ ನೀಡಿದ ಭಕ್ತರಿಗೆ ದೇವಸ್ಥಾನದ ಲಾಡು ಪ್ರಸಾದ ಹಾಗೂ ಗುಗ್ಗರಿ ಪ್ರಸಾದ ರೂಪದಲ್ಲಿ ವಿತರಣೆ ಮಾಡಲಾಯಿತು.