ಸಾರಾಂಶ
ಕನ್ನಡಪ್ರಭ ವಾರ್ತೆ ಸಿಂಧನೂರು
ತಾಲೂಕಿನ ಗೊರೇಬಾಳ ಗ್ರಾಮದ ಮಹಾದಾಸೋಹಿ ಶರಣಬಸವೇಶ್ವರರ 45ನೇ ಜಾತ್ರಾ ಮಹೋತ್ಸವ ನಿಮಿತ್ತ ಎ.1ರಿಂದ 4ರವರೆಗೆ ವಿಶೇಷ ಧಾರ್ಮಿಕ ಕಾರ್ಯಕ್ರಮ ನಡೆಯಲಿವೆ ಎಂದು ಆಡಿಯ ಹಂದಿಗುಂದ ಸಿದ್ದೇಶ್ವರಮಠದ ಶಿವಾನಂದ ಮಹಾಸ್ವಾಮಿ ತಿಳಿಸಿದರು.ತಾಲೂಕಿನ ಗೊರೇಬಾಳ ಗ್ರಾಮದ ಶರಣಬಸವೇಶ್ವರ ದೇವಸ್ಥಾನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾತ್ರೋತ್ಸವ ಅಂಗವಾಗಿ ಫೆ.12ರಿಂದ ಬಸವ ಪುರಾಣ ಪ್ರವಚನ ಆರಂಭಗೊಂಡಿದ್ದು, ಎ.1ರಂದು ಮಹಾಮಂಗಲ ಆಗಲಿದೆ. ಅಂದು ಸಂಜೆ 4.30ಗಂಟೆಗೆ ‘ತವರಿಗೆ ತೇರು’ ಕಾರ್ಯಕ್ರಮದಡಿ ಗ್ರಾಮದಿಂದ ಬೇರೆಡೆಗೆ ತೆರಳಿದ ಮಹಿಳೆಯರನ್ನು ಆಹ್ವಾನಿಸಿ ಉಡಿ ತುಂಬಲಾಗುವುದು. ಇದು ರಾಜ್ಯದಲ್ಲಿಯೇ ಪ್ರಪ್ರಥಮ ವಿಶಿಷ್ಟ ಕಾರ್ಯಕ್ರಮವಾಗಿದ್ದು, ಇದರಿಂದ ಮಹಿಳಾ ಸಮಾನತೆ ಮತ್ತು ಬೆಳವಣಿಗೆಗೆ ನಾಂದಿಯಾಗಲಿದೆ. ಮುಂಡರಗಿ ಅನ್ನದಾನೇಶ್ವರ ಸಂಸ್ಥಾನ ಮಠದ ಡಾ.ಅನ್ನದಾನ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಹಾವೇರಿ ಹುಕ್ಕೇರಿಮಠದ ಸದಾಶಿವ ಮಹಾಸ್ವಾಮೀಜಿ ನೇತೃತ್ವ ವಹಿಸುವರು. ಚಿಕ್ಕ ತೋಟ್ಟಲಕೇರಿ ಶಿವಲಿಂಗ ಮಹಾಸ್ವಾಮಿ ಅಧ್ಯಕ್ಷತೆ ವಹಿಸುವರು ಎಂದರು.
ಎ.2 ರಂದು ಕೃಷಿ ಗೋಷ್ಠಿ ನಡೆಯಲಿದ್ದು, ರೈತರು ಬದಕು-ಬವಣೆ ಕುರಿತು ಚರ್ಚಿಸಲಾಗುವುದು. ಗದಗ ತೋಂಟದಾರ್ಯ ಮಠದ ಡಾ.ತೋಂಟದ ಸಿದ್ದರಾಮ ಮಹಾಸ್ವಾಮಿ ಸಾನ್ನಿಧ್ಯ ವಹಿಸುವರು. ಇಲಕಲ್ ಚಿತ್ತರಗಿ ಸಂಸ್ಥಾನ ಮಠದ ಗುರುಮಹಾಂತ ಮಹಾಸ್ವಾಮಿ ನೇತೃತ್ವ ವಹಿಸುವರು. ಯದ್ದಲದೊಡ್ಡಿ ಸುವರ್ಣಗಿರಿ ವಿರಕ್ತಮಠದ ಮಹಾಲಿಂಗ ಮಹಾಸ್ವಾಮಿ ಅಧ್ಯಕ್ಷತೆ ವಹಿಸುವರು ಎಂದು ತಿಳಿಸಿದರು.ಎ.3 ರಂದು ವಳಬಳ್ಳಾರಿ ಚನ್ನಬಸವ ಶಿವಯೋಗಿಗಳ ಲಘು ರಥೋತ್ಸವ ತಾಯಂದಿಯರಿಂದ ನಡೆಯಲಿದೆ. ಕೊಪ್ಪಳ ಗವಿಮಠದ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿ ಹಾಗೂ ಶಿರಹಟ್ಟಿ ಫಕೀರೇಶ್ವರ ಮಠದ ಫಕೀರ ದಿಂಗಾಲೇಶ್ವರ ಮಹಾಸ್ವಾಮಿ ಸಾನ್ನಿಧ್ಯ ವಹಿಸುವರು. ಆಳಂದ, ನಂದವಾಡಿಗಿ, ಜಾಲವಾದಿ ಮಹಾಂತೇಶ್ವರ ಮಠದ ಮಹಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿ ನೇತೃತ್ವ ವಹಿಸುವರು ಎಂದು ಹೇಳಿದರು.
ಗ್ರಾಮಸ್ಥರು ಹಾಗೂ ದಾನಿಗಳಿಂದ ಸಂಗ್ರಹಿಸಿದ ₹1.5 ಕೋಟಿ ಹಣದಲ್ಲಿ ನೂತನ ಮಹಾರಥವನ್ನು ನಿರ್ಮಾಣ ಮಾಡಲಾಗಿದೆ. ಮಹಿಳೆಯರು ಸಂಗ್ರಹಿಸಿ ಕೊಟ್ಟ ₹30 ಲಕ್ಷ ಹಣದಲ್ಲಿ ರಥೋತ್ಸವಕ್ಕೆ ಕಳಸ ಮಾಡಿಸಲಾಗಿದೆ. ಏ.4 ರಂದು ವಳಬಳ್ಳಾರಿ ಮಠದ ಸಿದ್ದಲಿಂಗ ಮಹಾಸ್ವಾಮಿಗಳ ಹಸ್ತದಿಂದ ನೂತನ ಮಹಾರಥ ಲೋಕಾರ್ಪಣೆ ಹಾಗೂ ಶರಣಬಸವೇಶ್ವರರ ಮಹಾ ರಥೋತ್ಸವ ಅದ್ಧೂರಿಯಾಗಿ ನಡೆಯಲಿದೆ. ಹುಬ್ಬಳ್ಳಿ-ಹಾನಗಲ್ ಮೂರುಸಾವಿರ ಮಠದ ಗುರುಸಿದ್ದ ರಾಜಯೋಗಿಂದ್ರ ಮಹಾಸ್ವಾಮಿ ಹಾಗೂ ಹೊಸಪೇಟೆ, ಬಳ್ಳಾರಿ, ಹಾಲಕೇರಿ ಕೊಟ್ಟೂರುಸ್ವಾಮಿ ಸಂಸ್ಥಾನಮಠದ ಕೊಟ್ಟೂರು ಬಸವಲಿಂಗ ಮಹಾಸ್ವಾಮಿ ಸಾನ್ನಿಧ್ಯ ವಹಿಸುವರು. ಅಡವಿ ಅಮರೇಶ್ವರ ಸುವರ್ಣಗಿರಿ ವಿರಕ್ತಮಠದ ಶಾಂತಮಲ್ಲ ಮಹಾಸ್ವಾಮಿಗಳು ನೇತೃತ್ವ ವಹಿಸುವರು. ಸಂತೆಕೆಲ್ಲೂರು ಘನಮಠೇಶ್ವರ ಮಠದ ಗುರುಬಸವ ಮಹಾಸ್ವಾಮಿ ಅಧ್ಯಕ್ಷತೆ ವಹಿಸುವರು ಎಂದು ವಿವರಿಸಿದರು.ನಂತರ ವಳಬಳ್ಳಾರಿ ಸುವರ್ಣಗಿರಿ ವಿರಕ್ತಮಠದ ಸಿದ್ದಲಿಂಗ ಮಹಾಸ್ವಾಮಿ ಮಾತನಾಡಿ, 12ನೇ ಶತಮಾನದ ಬಸವಾದಿ ಶರಣರ ಕಾಯಕ, ದಾಸೋಹ ಪರಂಪರೆಯನ್ನು ವಳಬಳ್ಳಾರಿ ಮಠ ಹಾಗೂ ಗೊರೇಬಾಳ ಶರಣಬಸವೇಶ್ವರ ಮಠ ಮುಂದುವರೆಸಿಕೊಂಡು ಬಂದಿದೆ. ಎ.1ರಿಂದ 4ರವರೆಗೆ ನಡೆಯುವ ವಿಶೇಷ ಕಾರ್ಯಕ್ರಮಗಳಲ್ಲಿ ವಿವಿಧ ಮಠಗಳ ಶ್ರೀಗಳು, ರಾಜಕೀಯ ಪಕ್ಷಗಳ ಮುಖಂಡರು ಹಾಗೂ ಗಣ್ಯ ವ್ಯಕ್ತಿಗಳು ಭಾಗವಹಿಸಲಿದ್ದಾರೆ. ಸಕಲ ಭಕ್ತರಿಗೆ ನಿರಂತರ ದಾಸೋಹ ವ್ಯವಸ್ಥೆ ಇರುತ್ತದೆ. ವಿಶೇಷವಾಗಿ ಜಾತ್ರಾ ಮಹೋತ್ಸವ ನಿಮಿತ್ತ ಸಾರಿಗೆ ಮತ್ತು ವೈದ್ಯಕೀಯ ಸೌಲಭ್ಯ ಕಲ್ಪಿಸಲಾಗಿದೆ. ಆದ್ದರಿಂದ ಎಲ್ಲರೂ ಒಂದಾಗಿ ಜಾತ್ರೆಯನ್ನು ಅರ್ಥಪೂರ್ಣವಾಗಿ ಯಶಸ್ವಿಗೊಳಿಸಬೇಕು ಎಂದು ಹೇಳಿದರು.
ಸಂತೆಕೆಲ್ಲೂರು ಘನಮಠೇಶ್ವರ ಮಠದ ಗುರುಬಸವ ಮಹಾಸ್ವಾಮಿ, ವಳಬಳ್ಳಾರಿ ಸುವರ್ಣಗಿರಿ ವಿರಕ್ತಮಠದ ಬಸವಲಿಂಗ ಶಿವಾಚಾರ್ಯ, ಆಡಿಯ ಹಂದಿಗುಂದ ಸಿದ್ದೇಶ್ವರಮಠದ ಸಂಗಮೇಶ ದೇವರು ಹಾಗೂ ಗೊರೇಬಾಳ ಸೇರಿದಂತೆ ವಿವಿಧ ಗ್ರಾಮಗಳ ಮುಖಂಡರು ಇದ್ದರು.