ಸಾರಾಂಶ
ಎಡೆಬಿಡದೆ ಮಳೆ ಸುರಿಯುತ್ತಿದ್ದರೂ, ಮಳೆಯನ್ನು ಲೆಕ್ಕಸಿದೆ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕನ್ನಡಪ್ರಭ ವಾರ್ತೆ ಬೈಂದೂರು
ರಾಜ್ಯ ಕಾಂಗ್ರೆಸ್ ಸರ್ಕಾರ ಗ್ಯಾರಂಟಿಗಳ ಅನುಷ್ಠಾನದ ಹಿಂದೆ ಬಿದ್ದು ರಾಜ್ಯದ ಹಿತವನ್ನು ಮರೆತಿದೆ ಎಂದು ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಅವರು ರಾಜ್ಯ ಸರ್ಕಾರದ ವಿರುದ್ಧ ಕಿಡಿ ಕಾರಿದರು.ಅವರು ಶನಿವಾರ ಸರ್ಕಾರಿ ಬಸ್ ಅವ್ಯವಸ್ಥೆಯ ವಿರುದ್ಧ ಕುಂದಾಪುರದ ಶಾಸ್ತ್ರಿ ಸರ್ಕಲ್‌ನಲ್ಲಿ ಕುಂದಾಪುರ ಎಬಿವಿಪಿ ನೇತೃತ್ವದಲ್ಲಿ ಆಯೋಜನೆಗೊಂಡಿದ್ದ ಪ್ರತಿಭಟನೆಯಲ್ಲಿ ಭಾಗಿಯಾಗಿ ಮಾತನಾಡಿದರು.
ಕಾಂಗ್ರೆಸ್ ಆಡಳಿತದಲ್ಲಿ ಆಡಳಿತ ಯಂತ್ರ ಸಂಪೂರ್ಣ ಕುಸಿದಿದೆ. ವಿದ್ಯಾರ್ಥಿಗಳು, ಜನಸಾಮಾನ್ಯರು ಹೈರಾಣಾಗಿದ್ದಾರೆ. ವಿದ್ಯಾರ್ಥಿಗಳಿಗೆ ದಿನನಿತ್ಯ ಓಡಾಡಲು ಸರಿಯಾದ ಕನಿಷ್ಠ ಬಸ್ ವ್ಯವಸ್ಥೆಯನ್ನೂ ಕಲ್ಪಿಸುವಲ್ಲಿ ಸರ್ಕಾರ ಎಡವಿದೆ ಎಂದು ಟೀಕಿಸಿದರು.ವಿದ್ಯಾರ್ಥಿಗಳು ಏನೇ ದೂರು ತೆಗೆದುಕೊಂಡು ಬಂದರೂ, ಅಧಿಕಾರಿಗಳು ಅದಕ್ಕೆ ಸೂಕ್ತವಾಗಿ ಸ್ಪಂದಿಸಬೇಕು, ಅದನ್ನು ಬಿಟ್ಟು ವಿದ್ಯಾರ್ಥಿಗಳಿಗೆ ಗದರುವುದು, ಬೆದರಿಸುವುದು ಇತ್ಯಾದಿಗಳನ್ನು ಮಾಡಿದರೆ ನಾವು ಅದನ್ನು ಸಹಿಸುವುದಿಲ್ಲ ಎಂದು ಅಧಿಕಾರಿಗಳಿಗೆ ತೀವ್ರ ಎಚ್ಚರಿಕೆಯನ್ನೂ ನೀಡಿದರು.
ವಿದ್ಯಾರ್ಥಿಗಳು ಬೀದಿಗಿಳಿಯುವ ಸ್ಥಿತಿ ನಿರ್ಮಾಣವಾಗಿದೆ ಎಂದರೆ ಜಿಲ್ಲಾಡಳಿತ ಈ ಕೂಡಲೇ ಕಾರ್ಯಪ್ರವೃತ್ತವಾಗಿ ಸರ್ಕಾರಕ್ಕೆ ಸರ್ಕಾರಿ ಬಸ್ ದುರವಸ್ಥೆಯ ಬಗ್ಗೆ ಮಾಹಿತಿ ನೀಡಿ, ವಿದ್ಯಾರ್ಥಿಗಳಿಗೆ ಈಗ ಆಗುತ್ತಿರುವ ಅನಾನುಕೂಲವನ್ನು ಬಗೆಹರಿಸಬೇಕೆಂದು ಆಗ್ರಹಿಸಿದರು.ಎಡೆಬಿಡದೆ ಮಳೆ ಸುರಿಯುತ್ತಿದ್ದರೂ, ಮಳೆಯನ್ನು ಲೆಕ್ಕಸಿದೆ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.