ಸಾರಾಂಶ
ಹೊಸದುರ್ಗ: ಕುರಿ, ಮೇಕೆ ಸಾಕಾಣಿಕೆದಾರರ ಹಿತಕಾಯಲು ಸರ್ಕಾರ ಬದ್ಧವಾಗಿದೆ ಎಂದು ಶಾಸಕ ಬಿಜಿ ಗೋವಿಂದಪ್ಪ ಹೇಳಿದರು.
ತಾಲೂಕಿನ ಸಾಣೇಹಳ್ಳಿ ಗ್ರಾಪಂ ವ್ಯಾಪ್ತಿಯ ನೀರಗುಂದ ಗ್ರಾಮದ ನಂದಿದುರ್ಗ ಮೇಕೆ ತಳಿ ಸಂವರ್ಧನಾ ಕೇಂದ್ರದ ಆವರಣದಲ್ಲಿ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಹಾಗೂ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತದಿಂದ ಏರ್ಪಡಿಸಿದ್ದ ನಂದಿದುರ್ಗ ಮೇಕೆ ತಳಿ ಸಂವರ್ಧನೆ ಕುರಿತು ಅರಿವು ಮೂಡಿಸುವ ಹಾಗೂ ವಲಸೆ ಕುರಿಗಾಹಿಗಳಿಗೆ ಗುರುತಿನ ಚೀಟಿ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಕುರಿ ಮತ್ತು ಮೇಕೆ ಸಾಕಾಣಿಕೆದಾರರ ಹಿತಕಾಯುವ ದೃಷ್ಟಿಯಿಂದ ಸರ್ಕಾರವು ಕುರಿ ಮತ್ತು ಮೇಕೆ ಮೃತಪಟ್ಟರೆ ಸಹಾಯಧನ ನೀಡುವುದರ ಮೂಲಕ ಸಾಕಾಣಿಕೆಗೆ ಉತ್ತೇಜನ ನೀಡಿದೆ ಎಂದರು.
ವಲಸೆ ಕುರಿಗಾರರ ಮೇಲೆ ಆಗುತ್ತಿದ್ದ ದೌರ್ಜನ್ಯ ತಪ್ಪಿಸಲು ಕಾಯ್ದೆ ತರಲಾಗಿದೆ ಹಾಗೆಯೇ ಅವರ ಮಕ್ಕಳ ಶೈಕ್ಷಣಿಕ ಜೀವನ ಸುಧಾರಿಸಲು ವಸತಿ ಶಾಲೆಗಳಲ್ಲಿ ನೇರ ನೇಮಕಾತಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು .ಮೇಕೆ ಮತ್ತು ಕುರಿ ಸಾಕಾಣಿಕೆಯಿಂದ ಜೀವನಮಟ್ಟ ಸುಧಾರಿಸುವುದರ ಜೊತೆಗೆ ಲಾಭಾಂಶದ ಕೃಷಿಯಾಗಿದೆ. ಆಧುನಿಕ ಜೀವನ ಶೈಲಿಯಲ್ಲಿ ಕುರಿ ಮತ್ತು ಮೇಕೆ ಸಾಕಾಣಿಕೆಯಲ್ಲಿ ಫಾರಂ ಮಾಡಿ ಸಾಕುವುದರಿಂದ ಹೆಚ್ಚಿನ ಲಾಭ ಗಳಿಸಬಹುದಾಗಿದ್ದು, ಈ ದೃಷ್ಟಿಯಿಂದ ನಂದಿದುರ್ಗ ತಳಿಯ ಮರಿಗಳ ಸಾಕಾಣಿಕೆ ಮಾಡಿ ತಳಿಯನ್ನು ಅಭಿವೃದ್ಧಿ ಪಡಿಸಬೇಕು ಹಾಗೂ ಇದಕ್ಕೆ ಪೂರಕವಾಗಿ ಇಲಾಖೆ ವೈದ್ಯರುಗಳು ಔಷಧಿ ಹಾಗೂ ವ್ಯಾಕ್ಸಿನ್‌ಗಳನ್ನು ಸಕಾಲಕ್ಕೆ ಒದಗಿಸಿ ಸಾಕಾಣಿಕೆದಾರರ ಹಿತಕಾಪಾಡಬೇಕು ಎಂದರು.
ಇದೆ ವೇಳೆ ವಲಸೆ ಕುರಿಗಾಹಿಗಳಿಗೆ ಗುರುತಿನ ಚೀಟಿಯನ್ನು ವಿತರಿಸಿದರು.ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷೆ ಪ್ರೇಮಾ ಬಸವರಾಜ್, ಪಶುಪಾಲನ ಉಪನಿರ್ದೇಶಕ ಡಾ.ಕುಮಾರ್, ಕುರಿ ಮತ್ತು ಹುಣ್ಣೆ ನಿಗಮದ ಉಪನಿರ್ದೇಶಕ ಡಾ.ತಿಪ್ಪೇಸ್ವಾಮಿ, ಚಿತ್ರದುರ್ಗ ಪಾಲಿಕ್ಲಿನಿಕ್ ಸಹಾಯಕ ನಿರ್ದೇಶಕ ಹರೀಶ್, ಹೊಸದುರ್ಗ ಸಹಾಯಕ ನಿರ್ದೇಶಕ ಶಿವಣ್ಣ, ಮುಖಂಡರಾದ ನೀರಗುಂದ ರಾಮಜ್ಜ, ಗ್ರಾಪಂ ಸದಸ್ಯರಾದ ಜಗದೀಶ್ ಪಾಟೀಲ್, ರಮೇಶ್, ಭೈರಪ್ಪ, ಪಿಡಿಒ ಸ್ವಾಮಿ ಹಾಗೂ ತಾಲೂಕಿನ ವಿವಿಧೆಡೆಯಿಂದ ಆಗಮಿಸಿದ್ದ ಕುರಿ ಮತ್ತು ಮೇಕೆ ಸಾಕಾಣಿಕೆದಾರರು, ರೈತರು, ಸಾಣೇಹಳ್ಳಿ ಪಂಚಾಯತಿ ವ್ಯಾಪ್ತಿಯ ಮುಖಂಡರು, ಗ್ರಾಮಸ್ಥರು ಹಾಗೂ ನೀರಗುಂದ ಗ್ರಾಮದ ಗ್ರಾಮಸ್ಥರು ಉಪಸ್ಥಿತರಿದ್ದರು.