ಸರ್ಕಾರಿ ನೌಕರರು, ಧನಿಕರ ಸೊತ್ತಾಗುತ್ತಿರುವ ಇ-ರಿಕ್ಷಾ!

| Published : Oct 20 2024, 01:59 AM IST / Updated: Oct 20 2024, 02:00 AM IST

ಸಾರಾಂಶ

ಕೇಂದ್ರ ಮೋಟಾರು ವಾಹನ ಕಾಯ್ದೆಯಲ್ಲಿ ಬ್ಯಾಟರಿ ಚಾಲಿತ ಆಟೋಗಳಿಗೆ ಯಾವುದೇ ನಿರ್ಬಂಧ ಇಲ್ಲದಿರುವುದರಿಂದ ರಸ್ತೆಗಿಳಿಯುತ್ತಿರುವ ಇ-ಆಟೊಗಳಿಗೂ, ಸಾಮಾನ್ಯ ಆಟೋಗಳಿಗೂ ನಡುವೆ ವೈಷಮ್ಯ ಆರಂಭವಾಗಿದೆ. ಈಗಾಗಲೇ ರಾಜ್ಯಾದ್ಯಂತ ಹಲವೆಡೆ ಆಟೋ ಚಾಲಕರ ಪ್ರತಿಭಟನೆ ಆರಂಭಗೊಂಡಿದ್ದು, ದಿನೇ ದಿನೇ ಪರಿಸ್ಥಿತಿ ಗಂಭೀರವಾಗುತ್ತಿದೆ.

ಸಂದೀಪ್‌ ವಾಗ್ಲೆ

ಕನ್ನಡಪ್ರಭ ವಾರ್ತೆ ಮಂಗಳೂರು

ರಿಕ್ಷಾ ಚಾಲಕರೆಂದರೆ ದುಡಿಯುವ ವರ್ಗ. ರಾಜ್ಯಾದ್ಯಂತ ದಶಕಗಳಿಂದ ಲಕ್ಷಾಂತರ ಕುಟುಂಬಗಳು ರಿಕ್ಷಾವನ್ನೇ ನಂಬಿ ಜೀವನ ಸಾಗಿಸುತ್ತಿವೆ. ಆದರೆ ಬ್ಯಾಟರಿ ರಿಕ್ಷಾಗಳ ಉತ್ಪಾದನೆ ಆರಂಭವಾದ ಬಳಿಕ ಸರ್ಕಾರಿ ಅಧಿಕಾರಿಗಳು, ಪಿಂಚಣಿ ಪಡೆಯುವ ನಿವೃತ್ತರು, ಬಸ್ಸು- ಹೊಟೇಲ್‌ ಮಾಲೀಕರು ಹೀಗೆ ಹಣವಂತರೇ ಹೆಚ್ಚಾಗಿ ಬ್ಯಾಟರಿ ರಿಕ್ಷಾಗಳನ್ನು ಕೊಂಡು ಉಪ-ಆದಾಯ ಶುರು ಮಾಡಿದ್ದಾರೆ! ಕೇಂದ್ರ ಮೋಟಾರು ವಾಹನ ಕಾಯ್ದೆಯ ಸೆಕ್ಷನ್‌ 66(1)ರ ಪ್ರಕಾರ ಬ್ಯಾಟರಿ ಚಾಲಿತ ಆಟೊಗಳು ಯಾವುದೇ ಪರ್ಮಿಟ್‌ ಇಲ್ಲದೆ ಓಡಾಟ ನಡೆಸಬಹುದು. ಪರ್ಮಿಟ್‌ ಇಲ್ಲದೆ ಬಾಡಿಗೆಗೆ ಓಡಿಸಲು ಕೂಡ ಕಾನೂನಿನಲ್ಲಿ ನಿರ್ಬಂಧವಿಲ್ಲ. ಇದರ ದುರುಪಯೋಗ ಮಾಡಿಕೊಂಡ ಸ್ಥಿತಿವಂತರು ಇ-ಆಟೊಗಳನ್ನು ಕೊಳ್ಳಲು ಮುಗಿಬಿದ್ದಿದ್ದಾರೆ. ಆಟೊ ಕೊಂಡು, ಚಾಲಕರನ್ನು ನೇಮಿಸಿ ರಸ್ತೆಗಿಳಿಸುತ್ತಿದ್ದಾರೆ.

ರಿಕ್ಷಾಗಳ ಸಂಖ್ಯೆ ದಿಢೀರನೆ ಹೆಚ್ಚಾಗಿದ್ದರಿಂದ ದಶಕಗಳಿಂದ ದುಡಿಯುತ್ತಿರುವ ಸಾಮಾನ್ಯ ರಿಕ್ಷಾ ಚಾಲಕರ ಜೀವನ ಮೂರಾಬಟ್ಟೆಯಾಗಿದೆ. ರಾಜ್ಯದ ಲಕ್ಷಾಂತರ ಕುಟುಂಬಗಳು ಇದರಿಂದ ಕಷ್ಟಪಡುವಂತಾಗಿದೆ.

ಧನಿಕರ ಆಟ, ಬಡವರಿಗೆ ಸಂಕಟ: ಪ್ರಸ್ತುತ ಮಂಗಳೂರು ನಗರವೊಂದರಲ್ಲಿ 7 ಸಾವಿರ ಗ್ಯಾಸ್‌/ ಸಿಎನ್‌ಜಿ/ ಪೆಟ್ರೋಲ್‌ ಚಾಲಿತ ಆಟೋಗಳಿದ್ದರೆ, ಇ-ರಿಕ್ಷಾಗಳೇ ಒಂದೂವರೆ ಸಾವಿರದಷ್ಟಿವೆ. ಕಳೆದೊಂದು ವರ್ಷದಲ್ಲಿ ಇ-ಆಟೊ ಕೊಳ್ಳುವವರ ಸಂಖ್ಯೆ ಭಾರೀ ಹೆಚ್ಚಾಗಿದೆ. ಹೆಚ್ಚಾಗಿ ಬ್ಯಾಂಕ್‌ ಅಧಿಕಾರಿಗಳು, ಸಿಬ್ಬಂದಿ, ಸರ್ಕಾರಿ ನೌಕರರು ಈ ವ್ಯವಹಾರ ಶುರು ಮಾಡಿಕೊಂಡಿದ್ದಾರೆ. ಬಸ್ಸು ಮಾಲೀಕರೊಬ್ಬರು ಇತ್ತೀಚೆಗಷ್ಟೇ ಐದಾರು ರಿಕ್ಷಾಗಳನ್ನು ಕೊಂಡು ಮೂರು ಲಕ್ಷ ರು. ಸಬ್ಸಿಡಿಯನ್ನೂ ಬಾಚಿಕೊಂಡಿದ್ದಾರೆ. ಇನ್ನು ದೊಡ್ಡ ಹೊಟೇಲ್‌ ಮಾಲೀಕರು, ವಾಣಿಜ್ಯ ಉದ್ದಿಮೆಗಳನ್ನು ನಡೆಸುವವರು ಕೂಡ ಕೊಳ್ಳತೊಡಗಿದ್ದಾರೆ. ಇ-ಆಟೊಗಳ ನಿಜವಾದ ಪ್ರಯೋಜನ ನಿಜವಾದ ರಿಕ್ಷಾ ಚಾಲಕರಿಗೆ ಸಿಗಬೇಕಿತ್ತು. ಆದರೆ ಶ್ರೀಮಂತರ ಪಾಲಾಗುತ್ತಿದೆ ಎಂದು ದ.ಕ. ಜಿಲ್ಲಾ ರಿಕ್ಷಾ ಚಾಲಕ ಮಾಲೀಕರ ಒಕ್ಕೂಟದ ಅಧ್ಯಕ್ಷ ಅಶೋಕ್‌ ಶೆಟ್ಟಿ ಬೋಳಾರ್‌ ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.

ಖರ್ಚು ಕಳೆದು 200 ರು. ಕೂಡ ಸಿಗಲ್ಲ: ‘ಈ ಹಿಂದೆ ರಿಕ್ಷಾ ಚಾಲಕರು ದಿನಕ್ಕೆ ಏನಿಲ್ಲವೆಂದರೂ 1 ಸಾವಿರ ರು. ದುಡಿಯುತ್ತಿದ್ದರು. ಇ-ಆಟೊಗಳು ದೊಡ್ಡ ಮಟ್ಟದಲ್ಲಿ ರಸ್ತೆಗಿಳಿಯಲು ಆರಂಭವಾದ ಬಳಿಕ ರಿಕ್ಷಾ ಚಾಲಕರು 500 ರು. ದುಡಿಮೆ ಮಾಡುವುದೇ ಕಷ್ಟವಾಗಿದೆ. ಅದರಲ್ಲಿ ಇಂಧನ ಇತ್ಯಾದಿ ಖರ್ಚು ಕಳೆದು ಉಳಿಯುವುದು ಕೇವಲ 200 ರುಪಾಯಿ. ಇದರಲ್ಲಿ ಮನೆ ನಡೆಸುವುದು ಹೇಗೆ? ಇ-ಆಟೊಗಳಿಂದಾಗಿ ರಿಕ್ಷಾ ಚಾಲಕರ ಸ್ಥಿತಿ ತೀರ ಚಿಂತಾಜನಕ ಸ್ಥಿತಿಗೆ ತಲುಪಿದೆ’ ಎಂದು ಮಂಗಳೂರಿನ ಆಟೊ ಚಾಲಕ ಉಮೇಶ್‌ ಎಂಬವರು ಅಳಲು ತೋಡಿಕೊಂಡರು.

ಇ-ಆಟೊಗಳಿಗೂ ಆದಾಯವಿಲ್ಲ: ಸ್ವಂತವಾಗಿ ಆಟೋ ಚಾಲನೆ ಮಾಡುವವರು ಅಲ್ಪಸ್ವಲ್ಪ ಆದಾಯ ಪಡೆಯಬಹುದು. ಆದರೆ ಅರ್ಧಕ್ಕರ್ಧ ಮಂದಿ ರಿಕ್ಷಾ ಮಾಲೀಕರಲ್ಲ. ಗ್ಯಾಸ್‌/ ಪೆಟ್ರೋಲ್‌ ಚಾಲಿತ ರಿಕ್ಷಾ ಚಾಲಕರು ದಿನಕ್ಕೆ 350 ರು.ಗಳನ್ನು ಮಾಲೀಕರಿಗೆ ನೀಡಬೇಕು. ಬ್ಯಾಟರಿ ರಿಕ್ಷಾವಾದರೆ 400 ರು. ನೀಡಬೇಕು. ಬ್ಯಾಟರಿ ರಿಕ್ಷಾಗಳು ಬಂದ ಬಳಿಕ ಸಾಮಾನ್ಯ ರಿಕ್ಷಾಗಳಿಗೂ ದುಡಿಮೆ ಕಡಿಮೆಯಾದದ್ದು ಮಾತ್ರವಲ್ಲ, ಸ್ವತಃ ಇ-ಆಟೊಗಳಿಗೂ ಆದಾಯ ಇಲ್ಲವಾಗಿದೆ. ಪರಿಸ್ಥಿತಿ ಹೀಗಿದ್ದರೂ ಹಣವಂತರು ದೊಡ್ಡ ಸಂಖ್ಯೆಯಲ್ಲಿ ಇ-ಆಟೊ ಕೊಳ್ಳಲು ಮುಗಿಬಿದ್ದಿದ್ದಾರೆ. ಹೀಗೇ ಮುಂದುವರಿದರೆ ರಿಕ್ಷಾ ಚಾಲಕರ ಬದುಕು ಸಂಪೂರ್ಣವಾಗಿ ಬೀದಿಗೆ ಬರಲಿದೆ ಎಂದು ಆಟೊದಲ್ಲಿ ಚಾಲಕರಾಗಿ ದುಡಿಯುತ್ತಿರುವ ಮಹೇಶ್‌ ಹೇಳುತ್ತಾರೆ.

ಹೆಚ್ಚಾದ ಗೊಂದಲ: ಕೇಂದ್ರ ಮೋಟಾರು ವಾಹನ ಕಾಯ್ದೆಯಲ್ಲಿ ಬ್ಯಾಟರಿ ಚಾಲಿತ ಆಟೋಗಳಿಗೆ ಯಾವುದೇ ನಿರ್ಬಂಧ ಇಲ್ಲದಿರುವುದರಿಂದ ರಸ್ತೆಗಿಳಿಯುತ್ತಿರುವ ಇ-ಆಟೊಗಳಿಗೂ, ಸಾಮಾನ್ಯ ಆಟೋಗಳಿಗೂ ನಡುವೆ ವೈಷಮ್ಯ ಆರಂಭವಾಗಿದೆ. ಈಗಾಗಲೇ ರಾಜ್ಯಾದ್ಯಂತ ಹಲವೆಡೆ ಆಟೋ ಚಾಲಕರ ಪ್ರತಿಭಟನೆ ಆರಂಭಗೊಂಡಿದ್ದು, ದಿನೇ ದಿನೇ ಪರಿಸ್ಥಿತಿ ಗಂಭೀರವಾಗುತ್ತಿದೆ. ಇದೆಲ್ಲದಕ್ಕೂ ಪರಿಹಾರವಾಗಿ ಕೇಂದ್ರ ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ತಂದು ಇ-ಆಟೋಗಳಿಗೆ ಪರ್ಮಿಟ್‌ ನೀಡುವ ಪದ್ಧತಿ ಆರಂಭಿಸಬೇಕು. ಆರ್‌ಟಿಒ ಅಧೀನಕ್ಕೆ ಅವುಗಳನ್ನು ತರಬೇಕು. ತಮಿಳುನಾಡಿನಲ್ಲಿ ಇದು ಜಾರಿಯಾಗುತ್ತಿದೆ ಎನ್ನುತ್ತಾರೆ ಅಶೋಕ್‌ ಶೆಟ್ಟಿ ಬೋಳಾರ್‌.

ಇ-ಆಟೊಗಳಿಗೆ ಮಾತ್ರವಲ್ಲ, ಯಾವುದೇ ಇ-ವಾಹನಗಳಿಗೂ ಪರ್ಮಿಟ್‌ ನಿರ್ಬಂಧ ಕಾನೂನಿನಲ್ಲೇ ಇಲ್ಲ. ಸದ್ಯಕ್ಕೆ ರಿಕ್ಷಾ ಚಾಲಕರು ಧ್ವನಿ ಎತ್ತಿದ್ದಾರೆ. ಮುಂದೆ ಇತರ ವಾಹನ ಚಾಲಕರು ಕೂಡ ಧ್ವನಿ ಎತ್ತುವ ದಿನಗಳು ಬರಲಿವೆ.ಮಾಲೀಕರು ಯಾರು, ಸರ್ವೇ ಮಾಡಿ

ಶ್ರೀಮಂತರು ಹೂಡಿಕೆ ಮಾಡುತ್ತಿರುವುದೇ ಇ-ಆಟೋಗಳು ದೊಡ್ಡ ಸಂಖ್ಯೆಯಲ್ಲಿ ರಸ್ತೆಗಿಳಿಯಲು ಮುಖ್ಯ ಕಾರಣ. ಯಾರೆಲ್ಲ ರಿಕ್ಷಾ ಕೊಂಡು ಬಾಡಿಗೆಗೆ ಬಿಡುತ್ತಿದ್ದಾರೆ ಎನ್ನುವುದನ್ನು ತಿಳಿದುಕೊಳ್ಳಲು ಸರ್ಕಾರದಿಂದ ಸರ್ವೇ ಮಾಡಬೇಕು. ನಿಜವಾಗಿಯೂ ರಿಕ್ಷಾದಲ್ಲಿ ದುಡಿಯುವವರು ಎಷ್ಟು ಮಂದಿ ಎನ್ನುವ ಅಂಕಿ ಅಂಶ ಸಿಗುತ್ತದೆ. ಆಗ ಪೂರಕ ನಿಯಮಗಳನ್ನು ರೂಪಿಸಲು ಸಹಕಾರಿಯಾಗಲಿದೆ ಎಂದು ಒಕ್ಕೂಟದ ಅಧ್ಯಕ್ಷ ಅಶೋಕ್‌ ಶೆಟ್ಟಿ ಬೋಳಾರ್‌ ಹೇಳುತ್ತಾರೆ.