ಗದಗ:

ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಸಾಹಿತ್ಯ ಪೋಷಣೆ ಒದಗಿಸುತ್ತದೆ. ಮಕ್ಕಳ ಮನೋ ವಿಕಾಸದ ಹಿನ್ನೆಲೆಯಲ್ಲಿ ಬಾಲ್ಯದಲ್ಲಿಯೇ ಸೂಕ್ತ ವಾತಾವರಣ ಕಲ್ಪಿಸುವುದು ಸರ್ಕಾರ ಹೊಣೆಯಾಗಿದ್ದು ಪಠ್ಯಪುಸ್ತಕದ ಓದಿನ ಜತೆಗೆ ಬೌದ್ಧಿಕ ಮತ್ತು ಭಾವನಾತ್ಮಕ ವಿಕಾಸಕ್ಕೆ ಒತ್ತು ಕೊಡುವ ಹಿನ್ನೆಲೆಯಲ್ಲಿ ಶಾಲೆ ಮತ್ತು ಮನೆಯ ಪರಿಸರ ನಿರ್ಮಾಣವಾಗಬೇಕು. ತಮ್ಮ ಜೀವಾನುಭವಗಳನ್ನು ಬರೆಯುವಂತೆ ಸಮುದಾಯ ಪ್ರೇರೇಪಿಸಬೇಕೆಂದು ಹಿರಿಯ ಮಕ್ಕಳ ಸಾಹಿತಿ ತಯಬಅಲಿ ಹೊಂಬಳ ತಿಳಿಸಿದರು.

ನಗರದ ವಿಜಯ ಲಲಿತಕಲಾ ಮಹಾವಿದ್ಯಾಲಯದಲ್ಲಿ ಶನಿವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಹಾಗೂ ಎಂ.ಎಸ್. ಹುಲ್ಲೂರ ಹೈಟೆಕ್ ಕೋಚಿಂಗ್ ಸೆಂಟರ್ ಸಹಯೋಗದಲ್ಲಿ ನಡೆದ ಎರಡು ದಿನಗಳ ಮಕ್ಕಳ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಮಾತನಾಡಿದರು.

ಗುಬ್ಬಚ್ಚಿಗೂಡು ಮಕ್ಕಳ ಪತ್ರಿಕೆ ಪ್ರಧಾನ ಸಂಪಾದಕ ಶಂಕರ ಹಲಗತ್ತಿ ಮಾತನಾಡಿ, ಸರ್ಕಾರ ಶಾಲೆಗಳನ್ನು ವೀಲಿನ ಮಾಡಿದರೆ ಆ ಗ್ರಾಮದ ಸಂಸ್ಕೃತಿಯನ್ನು ನಾಶ ಮಾಡಿದಂತಾಗುತ್ತದೆ. ಎಲ್ಲ ಮಾಧ್ಯಮಗಳಲ್ಲಿ ಕನ್ನಡವನ್ನು ಸೃಜನಶೀಲವಾಗಿ ಕಲಿಸುವ ವ್ಯವಸ್ಥೆಯನ್ನು ರೂಪಿಸಬೇಕು. ಮಕ್ಕಳ ಸೃಜನಶೀಲ ವ್ಯಕ್ತಿಗೆ ಅವಕಾಶಗಳನ್ನು ಹಿರಿಯರು ಕಲ್ಪಿಸುವುದು ಆದ್ಯ ಕರ್ತವ್ಯವಾಗಿದೆ. ಮಕ್ಕಳ ಮೇಲಿನ ಶೋಷಣೆ ತಡೆಯುವ ದಿಸೆಯಲ್ಲಿ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದರು.

ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆರ್.ಎಸ್. ಬುರಡಿ ಮಾತನಾಡಿ, ಬಿಡುವಿನ ವೇಳೆಯಲ್ಲಿ ಮಕ್ಕಳು ಬೇರೆ ರೀತಿಯಲ್ಲಿ ಜೀವನಾನುಭವವನ್ನು ಕಟ್ಟಿಕೊಳ್ಳುವ ನಿಟ್ಟಿನಲ್ಲಿ ಮಕ್ಕಳ ಸಾಹಿತ್ಯ ಸಮ್ಮೇಳನದ ಚಟುವಟಿಕೆಗಳು ಪೂರಕವಾಗಿವೆ ಎಂದರು.ಅಧ್ಯಕ್ಷತೆ ವಹಿಸಿದ್ದ ಕಸಾಪ ಜಿಲ್ಲಾಧ್ಯಕ್ಷ ವಿವೇಕಾನಂದಗೌಡ ಪಾಟೀಲ, ಅಂಕಗಳಿಕೆಯ ಓಟದಲ್ಲಿ ಮಕ್ಕಳು ತಮ್ಮ ಸುಂದರ ಬಾಲ್ಯ ಕಳೆದುಕೊಂಡಿದ್ದಾರೆ. ಸೃಜನಶೀಲ ಮನಸ್ಸಿಗೆ ಸೂಕ್ತ ವಾತಾವರಣ ಮತ್ತು ಚಟುವಟಿಕೆಗಳನ್ನು ನೀಡುವ ಮೂಲಕ ಅವರ ಪ್ರತಿಭೆಯ ಅನಾವರಣಕ್ಕೆ ಅವಕಾಶ ಕಲ್ಪಿಸುವುದು ತೀರಾ ಅಗತ್ಯ. ಈ ಹಿನ್ನೆಲೆಯಲ್ಲಿ ಸಮ್ಮೇಳನವನ್ನು ಮಕ್ಕಳಿಗೆ ಪ್ರಾಯೋಗಿಕ ರೀತಿಯಲ್ಲಿ ಸಂಘಟಿಸಲಾಗಿದೆ ಎಂದು ತಿಳಿಸಿದರು.ಈ ವೇಳೆ ಸಮ್ಮೇಳನದ ಸರ್ವಾಧ್ಯಕ್ಷರ ಬದುಕು ಮತ್ತು ಬರಹ ಸಾಧನೆಯನ್ನು ಡಾ. ನಿಂಗು ಸೊಲಗಿ ವಿವರಿಸಿದರು. ಗೌಡಪ್ಪ ಹುಲ್ಲೂರ ಮಾತನಾಡಿದರು.


ಈ ವೇಳೆ ಡಯಟ್ ಪ್ರಾಚಾರ್ಯ ಜಿ.ಎಂ. ಮುಂದಿನಮನಿ, ವಿಜಯ ಕಲಾ ಸಂಸ್ಥೆಯ ಅಶೋಕ ಅಕ್ಕಿ, ಪ್ರಾ. ಸಿ.ವಿ. ಬಡಿಗೇರ, ಸಾಹಿತಿ ಚಂದ್ರಶೇಖರ ವಸ್ತ್ರದ ಮೊದಲಾದವರು ಇದ್ದರು. ತನುಶ್ರೀ ಹಾಗೂ ಕೃಷ್ಣಪ್ರಿಯ ಬದಿ ನಾಡಗೀತೆ ಪ್ರಸ್ತುತಪಡಿಸಿದರು. ರಕ್ಷಿತಾ ಗಿಡ್ನಂದಿ ನಿರೂಪಿಸಿದರು. ಬಸವರಾಜ ನೆಲಜೇರಿ ಸ್ವಾಗತಿಸಿದರು. ಭಾಗ್ಯಶ್ರೀ ಹುರಕಡ್ಲಿ ವಂದಿಸಿದರು. ವೈಷ್ಣವಿ ರಾಠೋಡ ಅವರಿಂದ ನೃತ್ಯ, ಸರಸ್ವತಿ ಸಾಧನ ಕೇಂದ್ರದ ಮಕ್ಕಳಿಂದ ಗೀತಗಾಯನ ಜರುಗಿತು.ಬೆಳಗ್ಗೆ ಸಾಯಿಬಾಬಾ ಮಂದಿರದಿಂದ ವಿಜಯಕಲಾ ಮಹಾವಿದ್ಯಾಲಯದ ವರೆಗೆ ಭುವನೇಶ್ವರಿ ಮೆರವಣಿಗೆ ಅದ್ಧೂರಿಯಾಗಿ ಜರುಗಿತು. ಕಲಾ ತಂಡಗಳು ಹಾಗೂ ಸಾಹಿತಿಗಳು, ಮಕ್ಕಳು ಭಾಗವಹಿಸಿದ್ದರು.