ಜಾನುವಾರುಗಳಿಗೆ ಮೇವು ವಿತರಿಸಲು ಸರ್ಕಾರ ವಿಫಲ: ಎಂ.ಆರ್.ಕುಮಾರಸ್ವಾಮಿ

| Published : May 05 2024, 02:05 AM IST

ಜಾನುವಾರುಗಳಿಗೆ ಮೇವು ವಿತರಿಸಲು ಸರ್ಕಾರ ವಿಫಲ: ಎಂ.ಆರ್.ಕುಮಾರಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ಕರ್ನಾಟಕ ರಾಜ್ಯದಲ್ಲಿ 1 ಕೋಟಿ 15 ಲಕ್ಷ ಹಸು, ಎತ್ತು, ಎಮ್ಮೆ ಸೇರಿದಂತೆ ಹಲವು ಜಾನುವಾರುಗಳು ಹಾಗೂ 1ಕೋಟಿ 72 ಲಕ್ಷ ಕುರಿ, ಮೇಕೆ, ಹಂದಿಗಳಿವೆ. ಹಸು, ಎಮ್ಮೆ, ಎತ್ತುಗಳಿಗೆ ದಿನಕ್ಕೆ 6 ಕೆಜಿ ಒಣ ಮೇವಿನ ಅವಶ್ಯಕತೆ ಇದೆ. ಕುರಿ, ಮೇಕೆ, ಹಂದಿಗಳಿಗೆ ದಿನಕ್ಕೆ ಅರ್ಧ ಕೆಜಿಯಷ್ಟು ಮೇವಿನ ಅಗತ್ಯವಿದೆ.

ಕನ್ನಡಪ್ರಭ ವಾರ್ತೆ ಪಾಂಡವಪುರ

ಭೀಕರ ಬರಗಾಲ ಎದುರಾಗಿದ್ದರೂ ರಾಜ್ಯ ಸರ್ಕಾರ ಜಾನುವಾರುಗಳಿಗೆ ಸಮರ್ಪಕ ಮೇವು ವಿತರಿಸಲು ವಿಫಲವಾಗಿದೆ ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಎಂ.ಆರ್.ಕುಮಾರಸ್ವಾಮಿ ಆಕ್ರೋಶ ಹೊರಹಾಕಿದರು.

ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ರಾಜ್ಯದ 196 ತಾಲೂಕಿಗಳು ತೀವ್ರ ಬರಗಾಲ ಮತ್ತು 27 ತಾಲೂಕು ಸಾಧಾರಣ ಬರಕ್ಕೆ ಒಳಗಾಗಿವೆ ಎಂದು ಘೋಷಿಸಿದೆ. ಆದರೆ, ಜಾನುವಾರುಗಳು ಅಗತ್ಯ ಮೇವು ಪೂರೈಕೆ ಮಾಡುವುದರಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ದೂರಿದರು.

ರಾಜ್ಯದಲ್ಲಿ 1 ಕೋಟಿ 15 ಲಕ್ಷ ಹಸು, ಎತ್ತು, ಎಮ್ಮೆ ಸೇರಿದಂತೆ ಹಲವು ಜಾನುವಾರುಗಳು ಹಾಗೂ 1ಕೋಟಿ 72 ಲಕ್ಷ ಕುರಿ, ಮೇಕೆ, ಹಂದಿಗಳಿವೆ. ಹಸು, ಎಮ್ಮೆ, ಎತ್ತುಗಳಿಗೆ ದಿನಕ್ಕೆ 6 ಕೆಜಿ ಒಣ ಮೇವಿನ ಅವಶ್ಯಕತೆ ಇದೆ. ಕುರಿ, ಮೇಕೆ, ಹಂದಿಗಳಿಗೆ ದಿನಕ್ಕೆ ಅರ್ಧ ಕೆಜಿಯಷ್ಟು ಮೇವಿನ ಅಗತ್ಯವಿದೆ ಎಂದರು.

ಸರ್ಕಾರ ಹಸಿ ಮೇವು ಉತ್ಪಾದನೆಗಾಗಿ ರೈತರಿಗೆ ಮೇವು ಬೀಜಗಳ ವಿತರಣೆ ಮಾಡಿದ್ದೇವೆ ಎಂದು ಹೇಳುತ್ತಿದೆ. ಆದರೆ, ಈ ಕಾರ್‍ಯಕ್ರಮ ಅಷ್ಟೊಂದು ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಿಲ್ಲ. ಹಸಿ ಮೇವು ಬೆಳೆಯಲು ಗ್ರಾಮದಲ್ಲಿರುವ ಗೋಮಾಳ, ಸರ್ಕಾರ ಖಾಲಿ ಜಾಗಗಳು, ಕೆರೆಕಟ್ಟೆ, ನದಿ ದಡದಲ್ಲಿರುವ ಜಾಗಗಳನ್ನು ಗುರುತಿಸಿ ಹಸಿ ಮೇವು ಬೆಳೆಯಬೇಕಿತ್ತು. ಈ ಯೋಜನೆ ಅನುಷ್ಠಾನಗೊಳಿಸಲು ವಿಫಲವಾಗಿದೆ ಎಂದು ಹರಿಹಾಯ್ದರು.

ರಾಸುಗಳಿಗೆ ಮಿನಿಕಿಟ್‌ಗಳಲ್ಲಿ ಮೇವು ಬೀಜಗಳನ್ನು ವಿತರಣೆ ಮಾಡಬೇಕೆಂಬ ಮಾರ್ಗಸೂಚಿ ಇದೆ. ಇದನ್ನು ಪಾಲನೆ ಮಾಡುವಲ್ಲಿ ರಾಜ್ಯ ವಿಪತ್ತು ಪ್ರಕ್ರಿಯೆ ನಿಧಿ ಮತ್ತು ವಿವಿಧ ಇಲಾಖೆಗಳ ಸೂಚನೆ ಪಾಲಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದರು.

12.05 ಲಕ್ಷ ಕಿರು ಮೇವು ಕಿಟ್‌ಗಳನ್ನು ನೀರಾವರಿ ಪ್ರದೇಶಗಳಿಗೆ ನೀಡಲು ರಾಷ್ಟ್ರೀಯ ಮತ್ತು ರಾಜ್ಯ ಪ್ರತಿಕ್ರಿಯೆ ನಿಧಿ ಮಾರ್ಗಸೂಚಿ ತಿಳಿಸಿದ್ದರು. ರೈತರಿಗೆ ಕಿಟ್ ವಿತರಣೆ ತಾರತಮ್ಯ ತೋರುತ್ತಿದ್ದಾರೆ ಎಂದು ಆರೋಪಿಸಿದರು.

ಜಾನುವಾರುಗಳ ಆರೋಗ್ಯ ತಪಾಸಣೆ ಮಾಡಿ, ಕಸಾಯಿ ಖಾನೆಗಳಿಗೆ ಮಾರುವುದನ್ನು ತಪ್ಪಿಸಬೇಕಿತ್ತು. ಆದರೆ, ಈ ಕಾರ್‍ಯಕ್ರಮವನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿಲ್ಲ. ರಾಜ್ಯದ 713 ಹೋಬಳಿಗಳಲ್ಲಿ ಮೇವು ಬ್ಯಾಂಕುಗಳನ್ನು ಪ್ರಾರಂಭಿಸಬೇಕಿತ್ತು. ಎಲ್ಲೂ ಸ್ಥಾಪನೆ ಮಾಡಿಲ್ಲ ಎಂದರು.

ಜಾನುವಾರುಗಳಿಗೆ ಬರುವ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಚುಚ್ಚುಮದ್ದುಗಳು, ಪ್ರತಿ ಜೀವಕ ಔಷಧಗಳನ್ನು ರೈತರಿಗೆ ವಿತರಿಸಿಲ್ಲ. ಪೂರಕ ಪೋಷಣ ಔಷಧಿಗಳನ್ನು ವಿತರಣೆ ಮಾಡದೇ ಕಳಪೆ ಸಂತಾನೋತ್ಪತ್ತಿಯಾಗುತ್ತಿದ್ದು ಹಾಲು ಉತ್ಪಾದನೆ ಮತ್ತು ಜಾನುವಾರುಗಳ ಸಂತತಿ ಕ್ಷೀಣಿಸುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಹಗಲು ಮತ್ತು ರಾತ್ರಿ ಜಾನುವಾರುಗಳಿಗೆ ಮೇವು, ಆಹಾರ, ನೀರು, ವಸತಿ ಮತ್ತು ಆರೋಗ್ಯಕ್ಕಾಗಿ ಅಂದಾಜು 50 ಸಾವಿರ ರಾಸುಗಳ ಸಂಖ್ಯೆಗೆ ಶಿಬಿರ ಆರಂಭಿಸಬೇಕಿತ್ತು. ಸರ್ಕಾರ ಎಷ್ಟು ಶಿಬಿರವನ್ನು ಆಯೋಜಿಸಿದೆ ಎನ್ನುವುದನ್ನು ತಿಳಿಸಬೇಕು ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಕಡಬಪುಟ್ಟರಾಜು, ಕಣಿವೆಮಹೇಶ್, ಮಲ್ಲೇಶ್, ವದೆಸಮುದ್ರ ಸೋಮಶೇಖರ್ ಇದ್ದರು.